ಕಲ್ಲು ಅಂತ ಮಿಸ್​ ಆಗಿ ಕಾಲಿಟ್ರೆ ಪ್ರಾಣವೇ ಖತಂ! ನೀರಿನಲ್ಲಿ ಅಡಗಿರುವ ಅತ್ಯಂತ ವಿಷಕಾರಿ ಮೀನಿದು | Stone Fish

ಪ್ರಪಂಚದ ಅತ್ಯಂತ ವಿಷಕಾರಿ ಮೀನುಗಳಲ್ಲಿ ಒಂದು ಎನ್ನಲಾಗಿದೆ. ಇದರ ದೇಹದ ಬಣ್ಣ ಮತ್ತು ಆಕಾರವು ಸಮುದ್ರದ ಕಲ್ಲುಗಳು ಮತ್ತು ಹವಳದ ದಿಬ್ಬಗಳನ್ನು ಹೋಲುವಂತಿದ್ದು, ಹತ್ತಿರದಲ್ಲಿದ್ದರೂ ಇದನ್ನು ಗುರುತಿಸುವುದು ತೀರ ಕಷ್ಟಕರ ಎಂದು ವಿವರಿಸಲಾಗಿದೆ.
Stone Fish
ಕಲ್ಲು ಅಂತ ಮಿಸ್​ ಆಗಿ ಕಾಲಿಟ್ರೆ ಪ್ರಾಣವೇ ಖತಂ
Published on

Stone Fish: ಸಮುದ್ರದಾಳದಲ್ಲಿ ಮತ್ತು ಮೇಲ್ಭಾಗದಲ್ಲಿ ಒಂದಷ್ಟು ವಿಶೇಷ ಹಾಗೂ ವಿಭಿನ್ನ ಕಲ್ಲುಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಇವುಗಳ ವಿಚಿತ್ರ ಶೈಲಿ ಮತ್ತು ಬಣ್ಣಗಳಿಂದ ಆಕರ್ಷಿತಗೊಳ್ಳುವ ಮಂದಿ, ಅದನ್ನು ಮುಟ್ಟುವ ಅಥವಾ ಅದರ ಮೇಲೆ ಕಲ್ಲೆಂದು ಕಾಲಿಡುವುದೇ ಹೆಚ್ಚು. ಆದರೆ, ಇಲ್ಲೊಂದು ನೋಡಲು ಥೇಟ್​ ಕಲ್ಲಿನಂತೆ ಕಂಡರೂ ಅದೊಂದು ವಿಷಯಕಾರಿ ಮೀನು ಎಂಬ ಸತ್ಯ ತಿಳಿದರೆ ಖಂಡಿತ ನೀವು ಹುಬ್ಬೇರಿಸೋದು ಖಚಿತ.

ಅತ್ಯಂತ ವಿಷಕಾರಿ ಮೀನುಗಳಲ್ಲಿ ಒಂದು

ಮೇಲ್ನೋಟಕ್ಕೆ ಕಪ್ಪು ಬಣ್ಣದ ವಿಚಿತ್ರ ಕಲ್ಲಿನಂತೆ ಕಾಣುವ ಈ ಮೀನು, ಒಂದು ಅಪಾಯಕಾರಿ ಜೀವ ಬಲಿ ಪಡೆಯುವ ಮೀನು ಎಂದರೆ ನೀವು ನಂಬುತ್ತೀರಾ. ಅಸಲಿಗೆ ನಂಬಲೇಬೇಕು ಬಿಡಿ. 'ಸ್ಟೋನ್‌ ಫಿಶ್' (Stonefish) ಎಂದೇ ಕರೆಯಲ್ಪಡುವ ಈ ಮೀನು, ಪ್ರಪಂಚದ ಅತ್ಯಂತ ವಿಷಕಾರಿ ಮೀನುಗಳಲ್ಲಿ ಒಂದು ಎನ್ನಲಾಗಿದೆ. ಇದರ ದೇಹದ ಬಣ್ಣ ಮತ್ತು ಆಕಾರವು ಸಮುದ್ರದ ಕಲ್ಲುಗಳು ಮತ್ತು ಹವಳದ ದಿಬ್ಬಗಳನ್ನು ಹೋಲುವಂತಿದ್ದು, ಹತ್ತಿರದಲ್ಲಿದ್ದರೂ ಇದನ್ನು ಗುರುತಿಸುವುದು ತೀರ ಕಷ್ಟಕರ ಎಂದು ವಿವರಿಸಲಾಗಿದೆ.

Stonefish
'ಸ್ಟೋನ್‌ ಫಿಶ್'

ಸ್ಟೋನ್‌ ಫಿಶ್‌ಗಳು ಮುಖ್ಯವಾಗಿ ಆಸ್ಟ್ರೇಲಿಯಾ ಸೇರಿದಂತೆ ಉಷ್ಣವಲಯದ ಕಡಲಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವು ಹಿಂದೂ ಮಹಾಸಾಗರದಿಂದ ಪೆಸಿಫಿಕ್ ಮಹಾಸಾಗರದವರೆಗೆ, ರೆಡ್​ ಸಮುದ್ರ ಮತ್ತು ಆಸ್ಟ್ರೇಲಿಯಾದ 'ಗ್ರೇಟ್ ಬ್ಯಾರಿಯರ್ ರೀಫ್' ಬಳಿಯ ಜಲರಾಶಿಯಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಬಂಡೆಗಳು ಮತ್ತು ಹವಳದ ದಿಬ್ಬಗಳ ಬಳಿ ಸಮುದ್ರದ ತಳದಲ್ಲಿ ಯಾವುದೇ ಚಲನೆಯಿಲ್ಲದೆ ಸುಮ್ಮನೆ ಮಲಗಿರುವುದು ಇವುಗಳ ಮುಖ್ಯ ಲಕ್ಷಣ ಎಂಬುದು ಗಮನಾರ್ಹ.

ದೇಹದಲ್ಲಿ ಅಡಗಿವೆ ವಿಷಕಾರಿ ಮುಳ್ಳುಗಳು

ಸ್ಟೋನ್‌ಫಿಶ್‌ನ ಮುಖ್ಯ ರಕ್ಷಣಾ ಕವಚ ಎಂದರೆ ಅದರ ಹೊರಭಾಗದಲ್ಲಿರುವ ಚೂಪಾದ ಮುಳ್ಳುಗಳು. ತನಗೆ ಎದುರಾಳಿಯಿಂದ ಅಪಾಯವಿದೆ ಎಂದು ಭಾವಿಸಿದರೆ, ಈ ಮುಳ್ಳುಗಳ ಮೂಲಕ ವಿಷವನ್ನು ಚುಚ್ಚಬಲ್ಲ ಮೀನಿದು. ಈ ವಿಷವನ್ನು ಮುಖ್ಯವಾಗಿ ಆತ್ಮರಕ್ಷಣೆಗಾಗಿ ಬಳಸಿಕೊಳ್ಳುತ್ತದೆಯೇ ಹೊರತು ಬೇಟೆಯನ್ನು ಹಿಡಿಯುವ ಆಯುಧವಾಗಿ ಅಲ್ಲ. ಈ ಮೀನಿನ ದೇಹವು ಆಗಾಗ್ಗೆ ಪಾಚಿ ಮತ್ತು ಕಡಲ ಕಳೆಗಳಿಂದ (seaweed) ಮುಚ್ಚಿರುವಂತೆ ಕಾಣಿಸುತ್ತದೆ. ಇದರ ಬೂದು, ಹಸಿರು ಮತ್ತು ಕಂದು ಬಣ್ಣದ ದೇಹವು ಸಮುದ್ರದ ತಳದೊಂದಿಗೆ ಬೆರೆತುಹೋಗುತ್ತದೆ.

Also Read
ಖಾಸಗಿ ವಿಡಿಯೋ ಕರೆಯಿಂದ ಚಾಟಿಂಗ್​​ವರೆಗೆ 99,999 ರೂ. ರೇಟ್ ಫಿಕ್ಸ್ ಮಾಡಿದ ಕಿರಣ್​ ರಾಥೋಡ್! ಏನಿದು ಪ್ರೈವೇಟ್ ವರ್ಲ್ಡ್? Kiran Rathod
Stone Fish

ಹೀಗಾಗಿಯೇ, ಮನುಷ್ಯರಿಗೆ ಸ್ಟೋನ್‌ಫಿಶ್‌ ಮಾನವರ ಕಣ್ಣಿಗೆ ಅಷ್ಟು ಸುಲಭವಾಗಿ ಪತ್ತೆಯಾಗುವುದಿಲ್ಲ. ಇದರ ಚುಚ್ಚುವಿಕೆ ಉಂಟಾಗಲು ಒಂದು ಮುಖ್ಯ ಕಾರಣವೆಂದರೆ, ಆಕಸ್ಮಿಕವಾಗಿ ಅದರ ಮೇಲೆ ಕಾಲಿಡುವುದು. ಮುಳ್ಳಿನ ಚುಚ್ಚುವಿಕೆಯಿಂದ ವಿಪರೀತ ನೋವು, ಊತ ಮತ್ತು ಕೆಂಪಾಗುವಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದೇನಾದರೂ ತೀವ್ರ ಪರಿಣಾಮ ಬೀರಿದರೆ, ವಿಷವು ದೇಹದೊಳಗೆ ಚಲಿಸಿ, ಸ್ನಾಯು ಹಾಗೂ ಹೃದಯದ ಕಾರ್ಯಗಳಿಗೆ ಸಮಸ್ಯೆ ಉಂಟುಮಾಡಿ ಜೀವ ತೆಗೆದರೂ ಆಶ್ಚರ್ಯವಿಲ್ಲ. ಆದ್ದರಿಂದ, ಸ್ಟೋನ್‌ಫಿಶ್ ಚುಚ್ಚಿದೆ ಎಂದು ಅನುಮಾನವಿದ್ದರೆ ಅಥವಾ ಚುಚ್ಚಿದ್ದೇ ಆದರೆ, ತಕ್ಷಣವೇ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದು ಸೂಕ್ತ.

ಬೇಟೆಗೆ ಗಂಟೆಗಟ್ಟಲೆ ಕಾಯುವಿಕೆ​

ಸ್ಟೋನ್‌ಫಿಶ್‌ಗಳು ವೇಗವಾಗಿ ಈಜುವ ಪರಭಕ್ಷಕಗಳಲ್ಲ. ಬದಲಿಗೆ, ಇವು ಹೊಂಚು ಹಾಕಿ ಕುಳಿತು ಬೇಟೆಯನ್ನು ಹಿಡಿಯುವ ಸ್ವಭಾವದ ಮೀನು. ಇವು ತಮ್ಮ ಸುತ್ತಮುತ್ತಲಿನ ಪರಿಸರದೊಂದಿಗೆ ಸಂಪೂರ್ಣವಾಗಿ ಬೆರೆತುಹೋಗಿ, ಸಮುದ್ರದ ತಳದಲ್ಲಿ ಗಂಟೆಗಟ್ಟಲೆ ಅಲುಗಾಡದೆ ಮಲಗಿರಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಸಣ್ಣ ಮೀನುಗಳು ಅಥವಾ ಕಠಿಣ ಚರ್ಮಿ ಜೀವಿಗಳು (crustaceans) ಹತ್ತಿರ ಬಂದಾಗ, ಅವು ಇದ್ದಕ್ಕಿದ್ದಂತೆ ಬಾಯಿ ತೆರೆದು ಅವುಗಳನ್ನು ನುಂಗಿ ಹಾಕುತ್ತವೆ. ಬೇರೆ ಮೀನುಗಳು ಇವುಗಳ ಹತ್ತಿರ ಸುಳಿಯಲು ಹೆದರಿ ಹೆಣಗಾಡುತ್ತವೆ. ಅದೇ ಶಾರ್ಕ್​ನಂತಹ ದೈತ್ಯ ಮೀನುಗಳು ಅಗತ್ಯಬಿದ್ದರೆ ತಿನ್ನಲು ಹಿಂದೇಟು ಹಾಕುವುದಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net