‘ಭಾರತ ತೈಲ ಖರೀದಿ ನಿಲ್ಲಿಸಿದರೆ ರಷ್ಯಾ ಯುದ್ಧ ನಿಲ್ಲಿಸಲೇಬೇಕು!’: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿಕೆ ವೈರಲ್​! Volodymyr Zelenskyy

ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ಯುದ್ಧ ನಿಲ್ಲುತ್ತದೆ! ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ (Volodymyr Zelenskyy) ನೀಡಿರುವ ಹೊಸ ಹೇಳಿಕೆ ಹಾಗೂ ಅಮೆರಿಕದ ಸುಂಕದ ಬೆದರಿಕೆ ಕುರಿತ ಸಂಪೂರ್ಣ ಮಾಹಿತಿ
Ukrainian President Volodymyr Zelenskyy speaking about India Russia oil trade and war
ಭಾರತ-ರಷ್ಯಾ ತೈಲ ವ್ಯಾಪಾರ ಮತ್ತು ಯುದ್ಧದ ಬಗ್ಗೆ ಮಾತನಾಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
Published on

ಉಕ್ರೇನ್: ಕಳೆದ ನಾಲ್ಕು ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಈಗ ಈ ಸಂಘರ್ಷವು ಕೊನೆಹಂತಕ್ಕೆ ತಲುಪುತ್ತ ಹೆಚ್ಚೆಯಿಡುತ್ತಿದೆ. ಕೆಲ ದಿನಗಳ ಹಿಂದೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ತನ್ನ ಆರ್ಥಿಕತೆ ವೃದ್ಧಿಗಾಗಿ ಭಾರತದಂತಹ ದೇಶಗಳ ಮೇಲೆ ಅತಿಯಾಗಿ ಅವಲಂಬಿತವಾಗಿದೆ ಎಂದು ಹೇಳಿದ್ದು, ಆದೇಶಗಳು ರಷ್ಯಾದೊಂದಿಗಿನ ತೈಲ ವ್ಯಾಪಾರವನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಯುದ್ಧ ಕೊನೆಯಾಗುತ್ತದೆ ಎಂದಿದ್ದಾರೆ. ಪ್ರತಿಷ್ಠಿತ ಪತ್ರಿಕೆಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿ ಈ ಮಹತ್ವದ ಹೇಳಿಕೆ ನೀಡಿದ್ದು, ಇದು ಜಾಗತಿಕ ರಾಜಕಾರಣದಲ್ಲಿ ಹೊಸ ಚರ್ಚೆಗೆ ವೇದಿಕೆಯಾಗಿ ಮಾರ್ಪಟ್ಟಿದೆ.

ಝೆಲೆನ್ಸ್ಕಿ ಹೇಳಿದ್ದೇನು?

ರಷ್ಯಾದ ಆರ್ಥಿಕತೆ ಸಂಪೂರ್ಣವಾಗಿ ತೈಲದ ರಫ್ತಿನ ಮೇಲೆ ನಿಂತಿದೆ. ವಿಶೇಷವಾಗಿ ಭಾರತ, ಚೀನಾ ಮತ್ತು ಟರ್ಕಿ ದೇಶಗಳು ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಇಂಧನವನ್ನು ಖರೀದಿಸುತ್ತಿವೆ. ಈ ದೇಶಗಳು ರಷ್ಯಾದೊಂದಿಗಿನ ಇಂಧನ ವ್ಯಾಪಾರವನ್ನು ನಿಲ್ಲಿಸಿದರೆ, ಬೇರೆ ದಾರಿಯಿಲ್ಲದೆ ರಷ್ಯಾ ಯುದ್ಧವನ್ನು ನಿಲ್ಲಿಸಬೇಕಾಗುತ್ತದೆ ಎಂದು ಝೆಲೆನ್ಸ್ಕಿ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಭಾರತ, ಚೀನಾ ಮತ್ತು ಅಮೆರಿಕಗಳು ಒಂದೇ ವೇದಿಕೆಗೆ ಬಂದು ರಷ್ಯಾವನ್ನು ಯುದ್ಧದಿಂದ ಹಿಂದೆ ಸರಿಯುವಂತೆ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಮೆರಿಕದ ಹೊಸ ಅಸ್ತ್ರ ಮತ್ತು ಸುಂಕದ ಭೀತಿ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗಷ್ಟೇ ರಷ್ಯಾ ಮತ್ತು ಇರಾನ್ ಮೇಲಿನ ನಿರ್ಬಂಧಗಳ ಕಾಯ್ದೆಗೆ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಈ ಕಾಯ್ದೆಯು ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಶೇ. 100 ರಷ್ಟು ಭಾರಿ ಸುಂಕ ವಿಧಿಸುವ ಅಧಿಕಾರವನ್ನು ಅಮೆರಿಕದ ಅಧ್ಯಕ್ಷರಿಗೆ ನೀಡಿದೆ.

ಭಾರತ, ಚೀನಾ, ಸ್ಲೋವಾಕಿಯಾ, ಹಂಗೇರಿ ಮತ್ತು ಅಜೆರ್ಬೈಜಾನ್ ದೇಶಗಳು ರಷ್ಯಾದ ತೈಲದ ಪ್ರಮುಖ ಖರೀದಿದಾರರಾಗಿರುವುದರಿಂದ, ಟ್ರಂಪ್ ಆಡಳಿತ ಈ ಕಠಿಣ ಕ್ರಮ ಜರುಗಿಸುತ್ತದೆಯೇ ಎಂಬ ಕುತೂಹಲ ಮೂಡಿಸಿದೆ. ಒಂದು ವೇಳೆ ಟ್ರಂಪ್ ಈ ಅಧಿಕಾರವನ್ನು ಬಳಸಿಕೊಂಡರೆ, ರಷ್ಯಾದ ಮೇಲೆ ತೀವ್ರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂಬುದು ಉಕ್ರೇನ್ ಲೆಕ್ಕಾಚಾರವಾಗಿದೆ.

ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಅಧಿವೇಶನದ ಬಳಿಕ ಮಾತನಾಡಿದ ಝೆಲೆನ್ಸ್ಕಿ, ನಾವು ಈ ಯುದ್ಧವನ್ನು ಆದಷ್ಟು ಬೇಗ, ಮುಂಬರುವ ಚಳಿಗಾಲಕ್ಕೂ ಮುನ್ನವೇ ಕೊನೆಗೊಳಿಸಬೇಕಾಗಿದೆ. ಅಧ್ಯಕ್ಷ ಟ್ರಂಪ್ ಈ ನಿಟ್ಟಿನಲ್ಲಿ ನಮಗೆ ನೆರವಾಗುತ್ತಾರೆ ಎಂಬ ನಂಬಿಕೆಯಿದೆ ಎಂದು ತಿಳಿಸಿದ್ದಾರೆ.

Also Read
ಆಯುರ್ವೇದ ವಿಜ್ಞಾನ ಮತ್ತು ಸಂಶೋಧನಾ ಮಹಾವಿದ್ಯಾಲಯದಲ್ಲಿ ಅರ್ಥಪೂರ್ಣ "ಆಯುರ್ವೇದ ದಿನ" ಆಚರಣೆ Ayurveda Day
Ukrainian President Volodymyr Zelenskyy speaking about India Russia oil trade and war

ಭಾರತದ ನಿಲುವೇನು? ರಷ್ಯಾ ಹೇಳುವುದೇನು?

ರಷ್ಯಾದಿಂದ ಅತಿ ಹೆಚ್ಚು ಕಚ್ಚಾ ತೈಲ ಖರೀದಿಸುತ್ತಿರುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಒಟ್ಟು ತೈಲ ಆಮದಿನಲ್ಲಿ ಮೂರನೇ ಒಂದು ಭಾಗದಿಂದ ಅರ್ಧದಷ್ಟು ಪಾಲು ಮಾಸ್ಕೋದಿಂದಲೇ ಬರುತ್ತಿದೆ. ಆದರೆ, ಈ ವ್ಯಾಪಾರ ಸಂಬಂಧ ಅಮೆರಿಕಾದ ಅಸಮಾಧಾನಕ್ಕೆ ಕಾರಣವಾಗಿದೆ ಎಂದರೆ ಸುಳ್ಳಲ್ಲ.

ಆದರೆ, ಭಾರತ ತನ್ನ ನಿಲುವನ್ನು ಮೊದಲಿನಿಂದಲೂ ಸ್ಪಷ್ಟಪಡಿಸುತ್ತಾ ಬಂದಿದೆ. ದೇಶದ ಇಂಧನ ಭದ್ರತೆ ಮತ್ತು ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ತೈಲ ಆಮದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆಯೇ ಹೊರತು, ಬೇರೆ ದೇಶದ ಯುದ್ಧಕ್ಕೆ ಬೆಂಬಲಿಸಲು ಅಲ್ಲ ಎಂದು ಪದೇ ಪದೇ ಸ್ಪಷ್ಟಪಡಿಸಿದೆ.

ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಕೂಡ ಈ ಕುರಿತು ಮಾತನಾಡಿ, ಭಾರತ ತನ್ನ ಸ್ವಾವಲಂಬನೆ ಮತ್ತು ಅಭಿವೃದ್ಧಿಗಾಗಿ ರಷ್ಯಾದಿಂದ ತೈಲ ಖರೀದಿಸುತ್ತಿದೆಯೆ ವಿನಃ ಮಾಸ್ಕೋಗೆ ಸಹಾಯ ಮಾಡುವುದಕ್ಕಲ್ಲ. ಭಾರತದ ಇಂಧನ ಬೇಡಿಕೆಗಳನ್ನು ಪೂರೈಸಲು ನಾವು ಸಂಪೂರ್ಣ ಬದ್ಧರಾಗಿದ್ದೇವೆ, ಎಂದು ಅಮೆರಿಕದ ಬೆದರಿಕೆಗಳನ್ನು ತಳ್ಳಿಹಾಕಿದ್ದರು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net