ಅಬ್ಬಾ ಇಷ್ಟೊಂದು ತೆರಿಗೆನಾ? ತನ್ನ ಸಾವನ್ನೂ ಸೇರಿಸಿ ಜೀವನಪೂರ್ತಿ ತಾನು ಕಟ್ಟುವ ತೆರಿಗೆ ಲೆಕ್ಕ ಹಾಕಿದ ಮಸ್ಕ್​! Elon Musk

ವಿಶ್ವದ ನಂಬರ್​ 1 ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ ( Elon Musk )
ವಿಶ್ವದ ನಂಬರ್​ 1 ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ ( Elon Musk )
Published on

ಪ್ರಮುಖ ಮುಖ್ಯಾಂಶಗಳು

  • ತರಿಗೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎಲಾನ್​ ಮಸ್ಕ್​ ವಿಡಿಯೋ
  • ತೆರಿಗೆ ಲೆಕ್ಕ ಹಾಕಿ ತಮಾಷೆ ಮಾಡಿದ ವಿಶ್ವದ ನಂಬರ್​ 1 ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​
  • ಜೀವನದುದ್ದಕ್ಕೂ ಸುಮಾರು 500 ಬಿಲಿಯನ್​ ಡಾಲರ್​ಗಿಂತಲೂ ಹೆಚ್ಚಿನ ತೆರಿಗೆ ಕಟ್ತೀನಿ ಅಂದ್ರು ಮಸ್ಕ್​
Elon Musk : ತರಿಗೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಮ್ಮದೇ ವಿಡಿಯೋಗೆ ಬಹಳ ತಮಾಷೆಯಾಗಿ ಪ್ರತಿಕ್ರಿಯೆ ನೀಡಿರುವ ವಿಶ್ವದ ನಂಬರ್​ 1 ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​, ನನ್ನ ಸಾವನ್ನು ಒಳಗೊಂಡಂತೆ ಜೀವನದುದ್ದಕ್ಕೂ ಸುಮಾರು 500 ಬಿಲಿಯನ್​ ಡಾಲರ್​ಗಿಂತಲೂ ಹೆಚ್ಚಿನ ತೆರಿಗೆ ಕಟ್ಟುತ್ತೇನೆ ಎಂದು ಅಂದಾಜಿಸಿದ್ದಾರೆ.
ಥಾಮಸ್​​ ಸೋವೆಲ್​ ಕೋಟ್ಸ್​ ಹೆಸರಿನ ಎಕ್ಸ್​ ಖಾತೆಯಲ್ಲಿ ಎಲಾನ್​ ಮಸ್ಕ್​ ವೇದಿಕೆ ಒಂದರಲ್ಲಿ ಮಾತನಾಡಿರುವ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಮಸ್ಕ್​ ಅವರು ತೆರಿಗೆ ವಿಚಾರವಾಗಿ ಮಾತನಾಡಿದ್ದಾರೆ.

ಮಸ್ಕ್​ ಹೇಳಿದ್ದೇನು?

ನಾನು ಇತಿಹಾಸದಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟಿದ ವ್ಯಕ್ತಿ. ಈವರೆಗೆ ನಾನು 10 ಬಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ತೆರಿಗೆ ಕಟ್ಟಿದ್ದೇನೆ. ಈ ವಿಚಾರದಲ್ಲಿ ಅಮೆರಿಕದ ಆಂತರಿಕ ಕಂದಾಯ ಸೇವಾ ಇಲಾಖೆ ( IRS ) ನನಗೆ ಒಂದು ಟ್ರೋಫಿ ಕಳುಹಿಸಬಹುದೆಂದು ನಾನು ಭಾವಿಸಿದ್ದೆ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದರು. ಈ ವೇಳೆ ಅಲ್ಲಿದ್ದವರೆಲ್ಲ ನಗೆಗಡಲಲ್ಲಿ ತೇಲಿದರು.

ಜೀವನಪೂರ್ತಿ ತೆರಿಗೆ ಲೆಕ್ಕಾಚಾರ

ಇದೀಗ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಮಸ್ಕ್​, ನನ್ನ ಸಾವನ್ನು ಸೇರಿಸಿ, ನನ್ನ ಜೀವನಪೂರ್ತಿ 500 ಬಿಲಿಯನ್​ ಡಾಲರ್​ ತೆರಿಗೆ ಪಾವತಿಸುತ್ತೇನೆ ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ತಿಂಗಳು ಮಸ್ಕ್​ ಅವರ ವೈಯಕ್ತಿಕ ಸಂಪತ್ತು 852 ಬಿಲಿಯನ್​ ಡಾಲರ್​ಗೆ ಏರಿರುವ ಸಮಯದಲ್ಲಿ ಈ ಕಾಮೆಂಟ್​ ಮಾಡಿದ್ದಾರೆ.
ಮಸ್ಕ್​ ಹೇಳಿಕೆ ಪ್ರಕಾರ, 500 ಬಿಲಿಯನ್​ ಡಾಲರ್​ ತೆರಿಗೆಯು ಮರಣದ ನಂತರದ ತೆರಿಗೆಯನ್ನು ಸಹ ಒಳಗೊಂಡಿದೆ. ಅಂದರೆ ತನ್ನ ಆಸ್ತಿ/ಷೇರುಗಳ ಮೇಲೆ ಸಾಯುವಾಗ ಬರುವ ದೊಡ್ಡ ಮೊತ್ತದ ಎಸ್ಟೇಟ್ ತೆರಿಗೆಯನ್ನೂ ಮಸ್ಕ್​ ಲೆಕ್ಕಹಾಕಿದ್ದಾರೆ. ನಾನು ಇತಿಹಾಸದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟಿದ ಹಾಗೂ ಕಟ್ಟುವ ವ್ಯಕ್ತಿ ಎಂಬ ಹೆಮ್ಮೆಯ ಮಾತಿನ ಭಾಗವಾಗಿ ಮಸ್ಕ್​ ಈ ಹೇಳಿಕೆ ನೀಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net