ನನಗೆ ಎಪ್ಸ್ಟೀನ್ ಜೊತೆ ಸಂಬಂಧವಿಲ್ಲ: ನಾನು ಬಲಿಪಶುವಲ್ಲ, ಸುಳ್ಳು ಸುದ್ದಿ ಹರಡಬೇಡಿ; ವದಂತಿಗಳಿಗೆ ಮೆಲಾನಿಯಾ ಟ್ರಂಪ್ ಕಿಡಿ! Melania Trump on Jeffrey Epstein

ನಾನು ಯಾರದ್ದೂ ಬಲಿಪಶುವಲ್ಲ: ಮೆಲಾನಿಯಾ ಟ್ರಂಪ್​
ನಾನು ಯಾರದ್ದೂ ಬಲಿಪಶುವಲ್ಲ: ಮೆಲಾನಿಯಾ ಟ್ರಂಪ್​
Published on

ಪ್ರಮುಖ ಮುಖ್ಯಾಂಶಗಳು

  • ಜೆಫ್ರಿ ಎಪ್ಸ್ಟೀನ್ ಜೊತೆಗೆ ನನಗೆ ಯಾವುದೇ ಸಂಬಂಧವಿರಲಿಲ್ಲ
  • ನಾನು ಯಾರದ್ದೂ ಬಲಿಪಶುವಲ್ಲ: ಮೆಲಾನಿಯಾ ಟ್ರಂಪ್​
  • ವದಂತಿಗಳ ಬಗ್ಗೆ ಮೌನ ಮುರಿದ ಡೊನಾಲ್ಡ್​ ಟ್ರಂಪ್​ ಪತ್ನಿ
ವಾಷಿಂಗ್ಟನ್: ಅಮೆರಿಕದ ಮಾಜಿ ಪ್ರಥಮ ಮಹಿಳೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪತ್ನಿ ಮೆಲಾನಿಯಾ ಟ್ರಂಪ್ (Melania Trump on Jeffrey Epstein) ಮತ್ತು ಕಾಮಪ್ರಚೋದಕ ಹಗರಣಗಳ ಕಿಂಗ್ ಎನಿಸಿಕೊಂಡಿದ್ದ ಜೆಫ್ರಿ ಎಪ್ಸ್ಟೀನ್ ಜೊತೆಗೆ ಸಂಬಂಧವಿತ್ತು ಎಂಬ ವದಂತಿಗಳು ಹರಿದಾಡುತ್ತಿದ್ದವು. ಈ ವದಂತಿಗಳ ಬಗ್ಗೆ ಗುರುವಾರ ಶ್ವೇತಭವನದಿಂದಲೇ ಮಾತನಾಡಿದ ಮೆಲಾನಿಯಾ ಟ್ರಂಪ್ ಎಪ್ಸ್ಟೀನ್ ಮತ್ತು ತಮ್ಮ ಮೇಲೆ ಕೇಳಿ ಬರುತ್ತಿರುವ ಎಲ್ಲಾ ವದಂತಿಗಳನ್ನು ಸಾರಾ ಸಗಟಾಗಿ ತಳ್ಳಿಹಾಕಿದ್ದಾರೆ.

ನಾನು ಯಾರದ್ದೂ ಬಲಿಪಶುವಲ್ಲ: ಮೆಲಾನಿಯಾ

ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೆಲಾನಿಯಾ ಟ್ರಂಪ್ ಮತ್ತು ದಿವಂಗತ ಜೆಫ್ರಿ ಎಪ್ಸ್ಟೀನ್ ನಡುವೆ ಸಂಬಂಧವಿತ್ತು ಎಂಬ ಕೆಲವು ಫೋಟೋಗಳು ಮತ್ತು ವರದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಗುಡುಗಿದ ಮೆಲಾನಿಯಾ, ನಾನು ಎಪ್ಸ್ಟೀನ್ ಜೊತೆ ಎಂದಿಗೂ ಸ್ನೇಹ ಬೆಳೆಸಿಲ್ಲ. ಆತನ ಹಗರಣಗಳಲ್ಲಿ ನಾನು ಬಲಿಪಶುವೂ ಅಲ್ಲ. ಆನ್-ಲೈನ್‌ನಲ್ಲಿ ಹರಡುತ್ತಿರುವ ಈ ಸುಳ್ಳು ಸುದ್ದಿಗಳು ಈಗಲೇ ನಿಲ್ಲಬೇಕು ಎಂದು ಎಚ್ಚರಿಸಿದ್ದಾರೆ.
ಅಷ್ಟೇ ಅಲ್ಲ, ಡೊನಾಲ್ಡ್ ಟ್ರಂಪ್ ಅವರನ್ನು ನನಗೆ ಪರಿಚಯಿಸಿದ್ದೇ ಎಪ್ಸ್ಟೀನ್ ಎಂಬ ವಾದವನ್ನೂ ಅವರು ಸುಳ್ಳು ಎಂದಿದ್ದಾರೆ. 1998 ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ತಾವು ಟ್ರಂಪ್ ಅವರನ್ನು ಭೇಟಿಯಾಗಿದ್ದಾಗಿ ಅವರು ಹೇಳಿದ್ದಾರೆ. ಎಪ್ಸ್ಟೀನ್ ಸಹಚರೆ ಗಿಸ್ಲೇನ್ ಮ್ಯಾಕ್ಸ್‌ವೆಲ್ ಜೊತೆಯೂ ತನಗೆ ಯಾವುದೇ ನಂಟು ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಮೆರಿಕನ್ನರ ರಿಯಾಕ್ಷನ್​ ಹೇಗಿತ್ತು?

ಮೆಲಾನಿಯಾ ಅವರು ತನಗೇನು ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ, ಸಾಮಾಜಿಕ ಜಾಲತಾಣ ಎಕ್ಸ್​ (ಟ್ವಿಟರ್) ನಲ್ಲಿ ನೆಟ್ಟಿಗರು ಹಳೆಯ ಫೈಲ್‌ಗಳನ್ನು ಹೊರತೆಗೆಯಲು ಶುರು ಮಾಡಿದ್ದಾರೆ. ಇಂಟರ್ನೆಟ್ ಯಾವುದನ್ನೂ ಮರೆಯುವುದಿಲ್ಲ ಎಂಬ ಮಾತಿನಂತೆ, ಎಪ್ಸ್ಟೀನ್ ಮತ್ತು ಡೊನಾಲ್ಡ್ ಟ್ರಂಪ್ ಒಟ್ಟಿಗೆ ಇರುವ 2000ರ ದಶಕದ ಆರಂಭದ ಫೋಟೋಗಳು ಮತ್ತೆ ವೈರಲ್ ಆಗುತ್ತಿವೆ.
ಮಾರ್-ಎ-ಲಾಗೊ ಮತ್ತು ನ್ಯೂಯಾರ್ಕ್‌ನಲ್ಲಿ ನಡೆದ ಹೈ-ಪ್ರೊಫೈಲ್ ಪಾರ್ಟಿಗಳಲ್ಲಿ ಟ್ರಂಪ್ ಮತ್ತು ಎಪ್ಸ್ಟೀನ್ ಆತ್ಮೀಯರಾಗಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಮೆಲಾನಿಯಾ ಕೂಡ ಆ ಸಮಯದಲ್ಲಿ ಟ್ರಂಪ್ ಜೊತೆಗಿದ್ದರೂ, ಎಪ್ಸ್ಟೀನ್ ಜೊತೆ ಅವರು ನೇರವಾಗಿ ಮಾತುಕತೆ ನಡೆಸುತ್ತಿರುವ ಅಥವಾ ಯಾವುದೇ ತಪ್ಪು ಕೆಲಸಗಳಲ್ಲಿ ಭಾಗಿಯಾಗಿರುವ ಅಧಿಕೃತ ಪುರಾವೆಗಳು ಈವರೆಗೆ ಸಿಕ್ಕಿಲ್ಲ.

ಆ ಇಮೇಲ್‌ನ ರಹಸ್ಯವೇನು?

ಈ ಚರ್ಚೆಯ ನಡುವೆ 2002ರ ಒಂದು ಇಮೇಲ್ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಲವ್ ಯೂ ಮೆಲಾನಿಯಾ ಎಂದು ಸಹಿ ಮಾಡಲಾದ ಮತ್ತು ಗಿಸ್ಲೇನ್ ಮ್ಯಾಕ್ಸ್‌ವೆಲ್‌ಗೆ ಉದ್ದೇಶಿಸಿ ಬರೆಯಲಾದ ಈ ಇಮೇಲ್‌ನಲ್ಲಿ ಎಪ್ಸ್ಟೀನ್ ಬಗ್ಗೆ ಪ್ರಕಟವಾದ ಲೇಖನದ ಪ್ರಸ್ತಾಪವಿದೆ. ಆದರೂ, ಈ ಇಮೇಲ್ ಕೇವಲ ಸಭ್ಯ ಸಂವಹನವೋ ಅಥವಾ ಇವರ ನಡುವೆ ಆಳವಾದ ಸಂಬಂಧವಿತ್ತೋ ಎಂಬುದು ಇಂದಿಗೂ ನಿಗೂಢವಾಗಿದೆ. ಯಾವುದೇ ಕಾನೂನು ತನಿಖೆಯಲ್ಲಿ ಮೆಲಾನಿಯಾ ಅವರ ಹೆಸರು ಅಧಿಕೃತವಾಗಿ ದಾಖಲಾಗಿಲ್ಲ ಎಂಬುದು ಗಮನಾರ್ಹ.

ಸತ್ಯ ಯಾವುದು? ಸುಳ್ಳು ಯಾವುದು?

ಮೆಲಾನಿಯಾ ಟ್ರಂಪ್ ಅವರ ಪ್ರಕಾರ, ಇದೆಲ್ಲವೂ ಡಿಜಿಟಲ್ ಲೋಕದಲ್ಲಿ ಸೃಷ್ಟಿಸಲಾದ ನಕಲಿ ಚಿತ್ರಗಳು ಮತ್ತು ಹೇಳಿಕೆಗಳು. ಪರಿಶೀಲಿಸದ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ನಂಬಬಾರದು ಎಂದು ಅವರು ವಿನಂತಿಸಿದ್ದಾರೆ. ರಾಜಕೀಯ ವಿರೋಧಿಗಳು ತಮ್ಮ ಹೆಸರನ್ನು ಕೆಡಿಸಲು ಈ ಹಳೆಯ ವಿವಾದವನ್ನು ಕೆದಕುತ್ತಿದ್ದಾರೆ ಎಂಬುದು ಅವರ ವಾದವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net