ಇಸ್ರೇಲ್​​ ಸಂಸತ್ತಿನಲ್ಲಿ ನೆತನ್ಯಾಹುಗೆ ಶುರುವಾಯ್ತು ಸಂಕಷ್ಟ! ಅಧಿಕಾರಕ್ಕೆ ಕುತ್ತು ತರಲಿದೆಯೇ ಹೊಸ ರಾಜಕೀಯ ಸಮೀಕರಣ? Netanyahu

ಇಸ್ರೇಲ್‌ನ ದೀರ್ಘಕಾಲದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಹೊಸ ಸಂಸತ್ತಿನ ರಚನೆ ರಾಜಕೀಯ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಮಂಗಳವಾರದಿಂದ ಹೊಸ ಸಂಸತ್ತು (ಕ್ನೆಸೆಟ್) ಕಾರ್ಯಾರಂಭ ಮಾಡಲಿದ್ದು, ಈ ಬಾರಿ ನೆತನ್ಯಾಹು ಅವರ ಬಣಕ್ಕೆ ಬಹುಮತದ ಬೆಂಬಲ ಇಲ್ಲದಿರುವುದು ಅವರ ಪಾಲಿಗೆ ದೊಡ್ಡ ಸವಾಲಾಗಿದೆ.Netanyahu
ಇಸ್ರೇಲ್​​ ಸಂಸತ್ತಿನಲ್ಲಿ ನೆತನ್ಯಾಹುಗೆ ಶುರುವಾಯ್ತು ಸಂಕಷ್ಟ
ಇಸ್ರೇಲ್​​ ಸಂಸತ್ತಿನಲ್ಲಿ ನೆತನ್ಯಾಹುಗೆ ಶುರುವಾಯ್ತು ಸಂಕಷ್ಟWEB
Published on: 

ಜೆರುಸಲೇಂ: ಇಸ್ರೇಲ್‌ನ ದೀರ್ಘಕಾಲದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಹೊಸ ಸಂಸತ್ತಿನ ರಚನೆ ರಾಜಕೀಯ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಮಂಗಳವಾರದಿಂದ ಹೊಸ ಸಂಸತ್ತು (ಕ್ನೆಸೆಟ್) ಕಾರ್ಯಾರಂಭ ಮಾಡಲಿದ್ದು, ಈ ಬಾರಿ ನೆತನ್ಯಾಹು ಅವರ ಬಣಕ್ಕೆ ಬಹುಮತದ ಬೆಂಬಲ ಇಲ್ಲದಿರುವುದು ಅವರ ಪಾಲಿಗೆ ದೊಡ್ಡ ಸವಾಲಾಗಿದೆ.

ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ಅವರು ನೂತನ ಸರ್ಕಾರ ರಚಿಸಲು ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರಿಂದ ಭಾನುವಾರ ಅಧಿಕೃತ ಆಹ್ವಾನ ಪಡೆದಿದ್ದಾರೆ. ಆದರೆ ಐಸೆನ್‌ಕೋಟ್ ಮತ್ತು ನೆತನ್ಯಾಹು ಇಬ್ಬರ ಬಳಿಯೂ ಸರ್ಕಾರ ರಚಿಸಲು ಅಗತ್ಯವಾದ ಬಹುಮತ ಇಲ್ಲದ ಕಾರಣ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ. ಹೊಸ ಸರ್ಕಾರ ರಚನೆಯಾಗುವವರೆಗೂ ನೆತನ್ಯಾಹು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಸಂಸತ್ತಿನಲ್ಲಿ ನೆತನ್ಯಾಹು ಬಣಕ್ಕೆ ಹಿನ್ನಡೆ

ಇಸ್ರೇಲ್‌ನ 120 ಸದಸ್ಯ ಬಲದ ಸಂಸತ್ತಿನಲ್ಲಿ ನೆತನ್ಯಾಹು ನೇತೃತ್ವದ ಬಣದ ಸ್ಥಾನಗಳು 68ರಿಂದ 53ಕ್ಕೆ ಇಳಿದಿವೆ. ಐಸೆನ್‌ಕೋಟ್ ಅವರ ಪ್ರಮುಖ ವಿರೋಧ ಪಕ್ಷಗಳ ಒಕ್ಕೂಟ 48 ಸ್ಥಾನಗಳನ್ನು ಹೊಂದಿದೆ. ಇದರ ಜೊತೆಗೆ ನೆತನ್ಯಾಹು ಅವರ ಆಡಳಿತವನ್ನು ತೀವ್ರವಾಗಿ ವಿರೋಧಿಸುವ ಅರಬ್ ಸಮುದಾಯದ ಪಕ್ಷಗಳ 19 ಸದಸ್ಯರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಹೊಸ ಸಂಸತ್ತಿನಲ್ಲಿ ನೆತನ್ಯಾಹು ಅವರ ನಿರ್ಧಾರಗಳಿಗೆ ವಿರೋಧ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ಅಕ್ಟೋಬರ್ 7ರ ದಾಳಿಯ ತನಿಖೆಗೆ ಒತ್ತಾಯ

2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯನ್ನು ತಡೆಯುವಲ್ಲಿ ಇಸ್ರೇಲ್‌ನ ಭದ್ರತಾ ವ್ಯವಸ್ಥೆ ವಿಫಲವಾಗಿದ್ದೇಕೆ ಎಂಬುದರ ಕುರಿತು ಸ್ವತಂತ್ರ ತನಿಖೆ ನಡೆಸಬೇಕೆಂಬುದು ವಿರೋಧ ಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ. ಈ ದಾಳಿಯಲ್ಲಿ ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಭೀಕರ ದಿನವನ್ನು ಎದುರಿಸಿತ್ತು. ಈ ಘಟನೆ ಕುರಿತು ರಾಷ್ಟ್ರೀಯ ಸ್ವತಂತ್ರ ತನಿಖಾ ಆಯೋಗ ರಚಿಸುವುದನ್ನು ನೆತನ್ಯಾಹು ಸರ್ಕಾರ ಈ ಹಿಂದೆ ವಿರೋಧಿಸಿತ್ತು. ಆದರೆ ಹೊಸ ಸಂಸತ್ತು ಸರ್ಕಾರ ರಚನೆಯಾಗುವ ಮೊದಲೇ ವಿಶೇಷ ಸಮಿತಿ ರಚಿಸಿ ತನಿಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಕಠಿಣ ಕ್ರಮ ಅನಿವಾರ್ಯ: ಕಲಬೆರಿಕೆ ಅಹಾರದ ದುಷ್ಟಜಾಲ

ನೆತನ್ಯಾಹು ತಂದಿದ್ದ ವಿವಾದಾತ್ಮಕ ಕಾನೂನುಗಳಿಗೆ ಬ್ರೇಕ್?

ನೆತನ್ಯಾಹು ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ನ್ಯಾಯಾಂಗ ಸುಧಾರಣಾ ಕಾನೂನುಗಳನ್ನು ರದ್ದುಗೊಳಿಸುವ ಪ್ರಯತ್ನವೂ ಹೊಸ ಸಂಸತ್ತಿನಲ್ಲಿ ನಡೆಯಬಹುದು. ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ಸೀಮಿತಗೊಳಿಸುವುದು ಮತ್ತು ಅಟಾರ್ನಿ ಜನರಲ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಸೇರಿದಂತೆ ಹಲವು ಬದಲಾವಣೆಗಳು ಈ ಹಿಂದೆ ಭಾರಿ ವಿವಾದಕ್ಕೆ ಕಾರಣವಾಗಿದ್ದವು. ಇದಲ್ಲದೆ, ಅಲ್ಟ್ರಾ ಆರ್ಥೊಡಾಕ್ಸ್ ಯಹೂದಿಗಳಿಗೆ ಕಡ್ಡಾಯ ಸೇನಾ ಸೇವೆಯಿಂದ ನೀಡಲಾಗಿರುವ ವಿನಾಯಿತಿಗಳನ್ನು ಹಿಂಪಡೆಯುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಸೇನೆಯ ಮೇಲೆ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ವಿನಾಯಿತಿಗಳು ಇಸ್ರೇಲ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿವೆ.

ಸಂಸತ್ತಿನ ಸ್ಪೀಕರ್ ಆಯ್ಕೆಯಲ್ಲೂ ಸಂಘರ್ಷ

ಹೊಸ ಸಂಸತ್ತಿನ ಮೊದಲ ರಾಜಕೀಯ ಸಂಘರ್ಷ ಸ್ಪೀಕರ್ ಆಯ್ಕೆಯ ವಿಚಾರದಲ್ಲಿ ಎದುರಾಗುವ ಸಾಧ್ಯತೆಯಿದೆ. ಪ್ರಸ್ತುತ ಸ್ಪೀಕರ್ ಅಮೀರ್ ಓಹಾನಾ ಅವರು ನೆತನ್ಯಾಹು ಅವರ ಲಿಕುಡ್ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸುವ ಮೊದಲು ಸಂಸತ್ತಿನ ಸ್ಪೀಕರ್ ಆಯ್ಕೆ ನಡೆಯಬೇಕೇ ಅಥವಾ ಸರ್ಕಾರ ರಚನೆಯ ದಿನವೇ ನಡೆಯಬೇಕೇ ಎಂಬ ವಿಚಾರದಲ್ಲಿ ಈಗಾಗಲೇ ಭಿನ್ನಾಭಿಪ್ರಾಯ ಮೂಡಿದೆ.

ವಿರೋಧ ಪಕ್ಷದ ಪ್ರಮುಖ ನಾಯಕ ನಫ್ತಾಲಿ ಬೆನೆಟ್, ತಮ್ಮ ಬಣದ ಆದ್ಯತೆಗಳನ್ನು ತುರ್ತಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. 'ಸಾಧ್ಯವಾದಷ್ಟು ಬೇಗ ನಾವು ಕ್ನೆಸೆಟ್‌ನ ನಿಯಂತ್ರಣ ಪಡೆಯುತ್ತೇವೆ' ಎಂದು ಅವರು ಘೋಷಿಸಿದ್ದಾರೆ. ಹೊಸ ಸಂಸತ್ತಿನ ಬದಲಾದ ರಾಜಕೀಯ ಬಲಾಬಲವು ನೆತನ್ಯಾಹು ಅವರ ಮುಂದಿನ ಆಡಳಿತಕ್ಕೆ ದೊಡ್ಡ ಸವಾಲಾಗುವ ಸಾಧ್ಯತೆಯಿದೆ, (ಏಜೆನ್ಸೀಸ್​).