ಕಠಿಣ ಕ್ರಮ ಅನಿವಾರ್ಯ: ಕಲಬೆರಿಕೆ ಅಹಾರದ ದುಷ್ಟಜಾಲ

ಕಠಿಣ ಕ್ರಮ ಅನಿವಾರ್ಯ: ಕಲಬೆರಿಕೆ ಅಹಾರದ ದುಷ್ಟಜಾಲ
Published on: 

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ನಾವು ಸೇವಿಸುವ ಆಹಾರ ಹಾಗೂ ಅನುಸರಿಸುತ್ತಿರುವ ಜೀವನಪದ್ಧತಿಯೇ ಕಾರಣ ಎಂದು ವೈದ್ಯರು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೆ, ಕಲಬೆರಕೆ ಆಹಾರ, ಕಳಪೆ ಆಹಾರ, ರಾಸಾಯನಿಕ ಆಹಾರ ಸೃಷ್ಟಿಸುತ್ತಿರುವ ಹಾನಿ ಅಷ್ಟಿಷ್ಟಲ್ಲ. ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಹಬ್ಬದ ದಿನಗಳಲ್ಲಿ ದೇಶಾದ್ಯಂತ ಕೈಗೊಂಡಿರುವ ಬೃಹತ್ ತಪಾಸಣಾ ಕಾರ್ಯಾಚರಣೆಯ ಫಲಿತಾಂಶ ಆಘಾತಕಾರಿಯಾಗಿದೆ.

ಸೆಪ್ಟೆಂಬರ್ 1ರಿಂದ ನವೆಂಬರ್ 5ರವರೆಗಿನ ಅವಧಿಯಲ್ಲಿ 56,431ಕ್ಕೂ ಹೆಚ್ಚು ಆಹಾರ ಕೇಂದ್ರಗಳು, ಕಾರ್ಖಾನೆಗಳು ಹಾಗೂ ಗೋದಾಮುಗಳ ಮೇಲೆ ದಾಳಿ ನಡೆಸಿ, 81.80 ಕೋಟಿ ರೂ. ಮೌಲ್ಯದ 3,280 ಟನ್​ಗಳಷ್ಟು ಕಳಪೆ, ಕಲಬೆರಕೆ ಹಾಗೂ ನಿಷೇಧಿತ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಇಷ್ಟು ಭಾರಿ ಪ್ರಮಾಣದ ಕಳಪೆ ವಸ್ತುಗಳು ಪತ್ತೆಯಾಗಿರುವುದು ನಮ್ಮ ಆಹಾರ ಮಾರುಕಟ್ಟೆಯಲ್ಲಿನ ನೈತಿಕ ಅಧಃಪತನಕ್ಕೆ ಕನ್ನಡಿ ಹಿಡಿದಿದೆ.

ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿ ಹಾಲು, ತುಪ್ಪ, ಬೆಣ್ಣೆ, ಪನ್ನೀರ್ ಹಾಗೂ ಸಿಹಿತಿಂಡಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ತೀವ್ರವಾಗಿ ಏರುತ್ತದೆ. ಈ ಬೇಡಿಕೆಯನ್ನೇ ದುರುಪಯೋಗಪಡಿಸಿಕೊಳ್ಳುವ ಲಾಭಕೋರ ವ್ಯಾಪಾರಿಗಳು ಜನರ ಆರೋಗ್ಯವನ್ನು ಒತ್ತೆ ಇಟ್ಟು ನಕಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಹರಿಬಿಡುತ್ತಾರೆ. ವಶಪಡಿಸಿಕೊಳ್ಳಲಾದ 3,279.57 ಟನ್ ಆಹಾರದಲ್ಲಿ ಹಾಲು, ತುಪ್ಪ, ಪನ್ನೀರ್ ಮತ್ತು ಸಿಹಿತಿಂಡಿಗಳೇ ಸಿಂಹಪಾಲು ಎನ್ನುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ಈ ಕಾರ್ಯಾಚರಣೆಯ ಭಾಗವಾಗಿ ಗಂಭೀರ ನಿಯಮ ಉಲ್ಲಂಘನೆ ಎಸಗಿದ 52 ಸಂಸ್ಥೆಗಳ ಪರವಾನಗಿ ರದ್ದುಪಡಿಸಿ, 1,133 ಪರವಾನಗಿಗಳನ್ನು ಅಮಾನತುಗೊಳಿಸಿರುವುದು ಹಾಗೂ 314 ಅಂಗಡಿ-ಮಳಿಗೆಗಳಿಗೆ ಬೀಗ ಜಡಿದಿರುವುದು ಸ್ವಾಗತಾರ್ಹ ಹೆಜ್ಜೆ. ಆದರೆ, ಇಂತಹ ಕಠಿಣ ಕ್ರಮಗಳು ಹಬ್ಬದ ಋತುವಿಗೆ ಸೀಮಿತವಾಗಬಾರದು. ಹಬ್ಬ ಮುಗಿದ ನಂತರ ತಪಾಸಣೆಗಳು ನಿಂತುಹೋದರೆ, ಅದೇ ಅಕ್ರಮ ವ್ಯಾಪಾರ ಜಾಲ ಮತ್ತೆ ಸಕ್ರಿಯವಾಗುತ್ತದೆ. ಆಹಾರ ಕಲಬೆರಕೆಯು ಕೇವಲ ವ್ಯಾಪಾರ ನಿಯಮಗಳ ಉಲ್ಲಂಘನೆಯಲ್ಲ. ಇದು ಲಕ್ಷಾಂತರ ಅಮಾಯಕರ ಜೀವಗಳ ಜತೆಗಿನ ಕ್ರೌರ್ಯ. ಇದನ್ನು ಜೀವಹಾನಿ ಯತ್ನಕ್ಕೆ ಸಮಾನವಾದ ಗಂಭೀರ ಅಪರಾಧವೆಂದು ಪರಿಗಣಿಸಬೇಕು.

ಆಹಾರ ಭದ್ರತೆಯನ್ನು ಕಾಗದದ ನಿಯಮಗಳಿಗೆ ಸೀಮಿತಗೊಳಿಸದೆ, ವರ್ಷಪೂರ್ತಿ ನಿರಂತರ ಹಾಗೂ ಅನಿರೀಕ್ಷಿತ ತಪಾಸಣೆಗಳು ನಡೆಯಬೇಕು. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಸುಸಜ್ಜಿತ, ತ್ವರಿತ ಫಲಿತಾಂಶ ನೀಡುವ ಸಂಚಾರಿ ಪ್ರಯೋಗಾಲಯಗಳನ್ನು ಹೆಚ್ಚಿಸಬೇಕು. ಪರವಾನಗಿ ಅಮಾನತು ಅಥವಾ ಸಣ್ಣಪುಟ್ಟ ದಂಡ ವಿಧಿಸುವುದರಿಂದ ಈ ಜಾಲವನ್ನು ಮಟ್ಟಹಾಕಲು ಸಾಧ್ಯವಿಲ್ಲ. ಜನರ ಆರೋಗ್ಯಕ್ಕೆ ಕುತ್ತು ತರುವವರಿಗೆ ಕಠಿಣ ಜೈಲು ಶಿಕ್ಷೆ ವಿಧಿಸುವಂತಹ ಕಾಯ್ದೆಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಸರ್ಕಾರ ಹಾಗೂ ಪ್ರಾಧಿಕಾರಗಳ ಕಠಿಣ ಕ್ರಮಗಳ ಜತೆಗೆ ಸಾರ್ವಜನಿಕರ ಜಾಗೃತಿಯೂ ಅತ್ಯಂತ ಮುಖ್ಯ. ಮಾರುಕಟ್ಟೆಯ ಸರಾಸರಿ ದರಕ್ಕಿಂತ ಅತಿ ಕಡಿಮೆ ಬೆಲೆಗೆ ಸಿಗುವ, ಅನಧಿಕೃತ ಮತ್ತು ಎಫ್ಎಸ್ಎಸ್ಎಐ ನೊಂದಣಿ ಗುರುತಿಲ್ಲದ ಆಹಾರ ಪದಾರ್ಥಗಳ ಖರೀದಿಯಿಂದ ದೂರವಿರಬೇಕು. ಅನುಮಾನಾಸ್ಪದ ಉತ್ಪನ್ನಗಳು ಕಂಡುಬಂದಲ್ಲಿ ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತರುವ ನಾಗರಿಕ ಪ್ರಜ್ಞೆ ಬೆಳೆಯಬೇಕು.