ಸೌದಿ ಅರೇಬಿಯಾ ಮೇಲೆ ಹೌತಿಗಳ ದಾಳಿ: ರಕ್ಷಣೆಗೆ ಮುಂದಾದ ಪಾಕ್-ಟರ್ಕಿ; ಮೆಕ್ಕಾ ರಕ್ಷಣೆಗೆ ಸಜ್ಜಾದ ಐತಿಹಾಸಿಕ ಮೈತ್ರಿ! Mecca Defence Alliance

ಸೌದಿ ಅರೇಬಿಯಾ ಮೇಲೆ ಹೌತಿ ಬಂಡುಕೋರರ ದಾಳಿ ಬೆನ್ನಲ್ಲೇ ರಕ್ಷಣೆಗೆ ಧಾವಿಸಿದ ಪಾಕಿಸ್ತಾನ-ಟರ್ಕಿ; ಮೆಕ್ಕಾ ರಕ್ಷಣಾ ಮೈತ್ರಿಕೂಟದ ಸೇನಾ ನಿಯೋಜನೆ ಹಾಗೂ ಮಹತ್ವದ ಬೆಳವಣಿಗೆಗಳ ವಿವರ ಇಲ್ಲಿದೆ.
Meeting of the Strategic Political and Defence Committee of the Makkah Defence Alliance held in Riyadh.
ರಿಯಾದ್‌ನಲ್ಲಿ ನಡೆದ ಮೆಕ್ಕಾ ರಕ್ಷಣಾ ಮೈತ್ರಿಕೂಟದ ಕಾರ್ಯತಂತ್ರದ ರಾಜಕೀಯ ಮತ್ತು ರಕ್ಷಣಾ ಸಮಿತಿ ಸಭೆ
Published on: 

ರಿಯಾದ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದ್ದು, ಸೌದಿ ಅರೇಬಿಯಾ ಮತ್ತು ಯೆಮೆನ್‌ನ ಹೌತಿ ಬಂಡುಕೋರರ ನಡುವಿನ ಸಂಘರ್ಷ ತಾರಕಕ್ಕೇರಿದೆ. ಸೌದಿ ಅರೇಬಿಯಾ ಮೇಲೆ ಹೆಚ್ಚುತ್ತಿರುವ ಕ್ಷಿಪಣಿ ಹಾಗೂ ಡ್ರೋನ್ ದಾಳಿ ಬೆನ್ನಲ್ಲೇ, ಸೌದಿಯ ಬೆನ್ನಿಗೆ ಪ್ರಬಲ ಮಿತ್ರರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಟರ್ಕಿ ಬಂದು ನಿಂತಿವೆ.

ಸೌದಿ ಅರೇಬಿಯಾದಲ್ಲಿ ತನ್ನ ಸೇನಾ ಪಡೆಗಳನ್ನು ತಕ್ಷಣವೇ ನಿಯೋಜಿಸಲು ಮೂರೂ ದೇಶಗಳು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದು, ಈ ಬೆಳವಣಿಗೆ ಇಡೀ ಮಧ್ಯಪ್ರಾಚ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ರಿಯಾದ್‌ನಲ್ಲಿ ರಹಸ್ಯ ತುರ್ತು ಸಭೆ

ಪಾಕಿಸ್ತಾನದ ಮಾಧ್ಯಮ ಸಂಸ್ಥೆ ವರದಿಯ ಪ್ರಕಾರ, ಮೂರೂ ರಾಷ್ಟ್ರಗಳನ್ನೊಳಗೊಂಡ ‘ಮೆಕ್ಕಾ ರಕ್ಷಣಾ ಮೈತ್ರಿಕೂಟ’ದ (Mecca Defence Alliance) ಕಾರ್ಯತಂತ್ರದ ರಾಜಕೀಯ ಮತ್ತು ರಕ್ಷಣಾ ಸಮಿತಿ ಸೋಮವಾರ (ಅ.5) ರಿಯಾದ್‌ನಲ್ಲಿ ತುರ್ತು ಸಭೆ ನಡೆಸಿದೆ.

ಸೌದಿ ಅರೇಬಿಯಾ ಎದುರಿಸುತ್ತಿರುವ ಭದ್ರತಾ ಸವಾಲುಗಳು ಮತ್ತು ಪವಿತ್ರ ಮೆಕ್ಕಾ ಮೇಲಿನ ದಾಳಿಗಳನ್ನು ಹಿಮ್ಮೆಟ್ಟಿಸುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಸಭೆಯಲ್ಲಿ ಪಾಕಿಸ್ತಾನದ ಪರವಾಗಿ ಉಪ ಪ್ರಧಾನಿ ಇಶಾಕ್ ದಾರ್, ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ಒಬ್ಬರ ಮೇಲಿನ ದಾಳಿ, ಎಲ್ಲರ ಮೇಲಿನ ದಾಳಿ!

ಕಳೆದ ಆಗಸ್ಟ್ ತಿಂಗಳಿನಲ್ಲಿ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ಮಹತ್ವದ ತ್ರಿಪಕ್ಷೀಯ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ನ್ಯಾಟೋ ಮಾದರಿಯಲ್ಲೇ ರೂಪಿಸಲಾದ ಈ ಒಪ್ಪಂದದ ಮುಖ್ಯ ನಿಯಮವೆಂದರೆ, ಮೂರು ದೇಶಗಳಲ್ಲಿ ಯಾವುದೇ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೂ, ಅದನ್ನು ಎಲ್ಲ ಮೂರೂ ದೇಶಗಳ ಮೇಲಿನ ದಾಳಿ ಎಂದೇ ಪರಿಗಣಿಸಲಾಗುತ್ತದೆ ಎಂಬ ಒಪ್ಪಂದಕ್ಕೆ ಬಂದಿದ್ದವು.

ಈಗ ಸೌದಿ ಅರೇಬಿಯಾದ ಮೇಲೆ ಹೌತಿ ಬಂಡುಕೋರರ ಉಪಟಳ ಹೆಚ್ಚಾಗುತ್ತಿದ್ದಂತೆ, ಈ ಒಪ್ಪಂದವನ್ನು ಕಾಗದದಿಂದ ನೇರವಾಗಿ ಯುದ್ಧಭೂಮಿಗೆ ತರಲು ಮೆಕ್ಕಾ ರಕ್ಷಣಾ ಮೈತ್ರಿಕೂಟ ನಿರ್ಧರಿಸಿದೆ. ಸಭೆಯ ನಂತರ ಹೊರಬಿದ್ದ ಜಂಟಿ ಹೇಳಿಕೆಯ ಪ್ರಕಾರ, ಸೌದಿ ನೆಲದಲ್ಲಿ ಮಿಲಿಟರಿ ಪಡೆಗಳನ್ನು ತಕ್ಷಣವೇ ನಿಯೋಜಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ಪಾಕಿಸ್ತಾನ ಮತ್ತು ಟರ್ಕಿ ಪಾತ್ರವೇನು?

ಈ ನಿರ್ಧಾರದ ಕುರಿತು ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮಹತ್ವದ ಸುಳಿವು ನೀಡಿದ್ದಾರೆ. ಸೌದಿ ಪಡೆಗಳು ನೇರ ಯುದ್ಧ ಕಾರ್ಯಾಚರಣೆ ನಡೆಸುತ್ತಿದ್ದರೆ, ಪಾಕಿಸ್ತಾನ ಮತ್ತು ಟರ್ಕಿ ಪಡೆಗಳು ರಕ್ಷಣಾತ್ಮಕ ಹಾಗೂ ಯುದ್ಧ ಬೆಂಬಲದ ಪಾತ್ರವನ್ನು ವಹಿಸಲಿವೆ ಎಂದಿದ್ದಾರೆ.

ಪಾಕಿಸ್ತಾನದ ಪಡೆಗಳು ಶತ್ರುಗಳ ಚಲನವಲನದ ಮೇಲೆ ಕಣ್ಣಿಡುವ ಅತ್ಯಾಧುನಿಕ ಕಣ್ಗಾವಲು ಮತ್ತು ಕಾರ್ಯಾಚರಣೆಯಲ್ಲಿ ಈಗಾಗಲೇ ಸಕ್ರಿಯವಾಗಿವೆ. ಸೌದಿ ಅರೇಬಿಯಾ ಕೋರಿದ ಎಲ್ಲಾ ಮಿಲಿಟರಿ ಸಹಾಯವನ್ನು ಯಾವುದೇ ಹಿಂಜರಿಕೆಯಿಲ್ಲದೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

Also Read
ಭಾರತ-ಸ್ವಿಸ್ ದ್ವಿಪಕ್ಷೀಯ ಬೆಸುಗೆ: ಸ್ವಿಜರ್ಲೆಂಡ್ ಅಧ್ಯಕ್ಷ ಪರ್ಮೆಲಿನ್ ಗೌರವಾರ್ಥ ಔತಣಕೂಟ; ಪಿಎಂ ಮೋದಿ ಸತ್ಕಾರದಲ್ಲಿ ಡಾ. ಆನಂದ ಸಂಕೇಶ್ವರ ಭಾಗಿ! Dr Anand Sankeshwar
Meeting of the Strategic Political and Defence Committee of the Makkah Defence Alliance held in Riyadh.

ಪವಿತ್ರ ಮೆಕ್ಕಾ-ಮದೀನಾ ರಕ್ಷಣೆಗೆ ಪಣ

ಇತ್ತೀಚಿನ ದಿನಗಳಲ್ಲಿ ಸೌದಿಯ ನಗರಗಳು, ಆರ್ಥಿಕ ಕೇಂದ್ರಗಳು ಹಾಗೂ ತೈಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳನ್ನು ಮೈತ್ರಿಕೂಟ ಕಟುವಾಗಿ ಖಂಡಿಸಿದೆ. ಅದರಲ್ಲೂ ಮುಸ್ಲಿಮರ ಪವಿತ್ರ ಕ್ಷೇತ್ರಗಳಾದ ಮೆಕ್ಕಾ ಮತ್ತು ಮದೀನಾಗಳನ್ನು ಗುರಿಯಾಗಿಸುವ ಯಾವುದೇ ದುಸ್ಸಾಹಸವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ರವಾನಿಸಲಾಗಿದೆ.

ಯೆಮೆನ್ ಗಡಿಯಲ್ಲಿ ಹೆಚ್ಚಿದ ಕಾವು

ಯೆಮೆನ್‌ನಲ್ಲಿ ಹೌತಿಗಳು ವಶಪಡಿಸಿಕೊಂಡಿದ್ದ ಪ್ರಮುಖ ಪ್ರದೇಶಗಳನ್ನು ಮರುವಶಕ್ಕೆ ಪಡೆಯಲು ಸೌದಿ ನೇತೃತ್ವದ ಪಡೆಗಳು ಭಾನುವಾರ (ಅ.4) ಮಿಲಿಟರಿ ಆಪರೇಷನ್ ಪ್ರಾರಂಭಿಸಿವೆ. ಇದಕ್ಕೆ ಪ್ರತಿಯಾಗಿ ಹೌತಿಗಳು ಸೌದಿ ಮೇಲೆ ದಾಳಿ ತೀವ್ರಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಈ ದಾಳಿ-ಪ್ರತಿದಾಳಿಯ ಉದ್ವಿಗ್ನತೆಯ ನಡುವೆಯೇ ಈ ತುರ್ತು ಸಭೆ ನಡೆದಿದ್ದು, ಇಡೀ ಅರಬ್ ಜಗತ್ತು ಈಗ ಸೌದಿ-ಪಾಕ್-ಟರ್ಕಿ ಮೈತ್ರಿಕೂಟದ ಮುಂದಿನ ನಡೆಯನ್ನು ಕುತೂಹಲದಿಂದ ಗಮನಿಸುತ್ತಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net