ದೋಹಾದಲ್ಲಿ ಅದ್ಧೂರಿಯಾಗಿ ನಡೆದ ICBF ದಿನಾಚರಣೆ; 19 ಸಾಧಕರಿಗೆ ಸನ್ಮಾನ, 2 ಮಹತ್ವದ ಯೋಜನೆಗಳಿಗೆ ಚಾಲನೆ

ICBF
ದೋಹಾದಲ್ಲಿ ಅದ್ಧೂರಿಯಾಗಿ ನಡೆದ ICBF; 19 ಸಾಧಕರಿಗೆ ಸನ್ಮಾನ, 2 ಮಹತ್ವದ ಯೋಜನೆಗಳಿಗೆ ಚಾಲನೆ
Published on: 

ದೋಹಾ: ಕತಾರ್‌ನಲ್ಲಿರುವ ಭಾರತೀಯ ಸಮುದಾಯದ ಕಲ್ಯಾಣಕ್ಕಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇಂಡಿಯನ್ ಕಮ್ಯುನಿಟಿ ಬೆನಿವಿಲೆಂಟ್ ಫೋರಮ್ (ICBF) ವತಿಯಿಂದ ‘ಐಸಿಬಿಎಫ್​ ದಿನ 2026’ ಕಾರ್ಯಕ್ರಮವನ್ನು ನವೆಂಬರ್ 13ರ ಶುಕ್ರವಾರ ದೋಹಾದ ಅಲ್ ವಕ್ರಾಹ್‌ನಲ್ಲಿರುವ ಡಿಪಿಎಸ್-ಮಾಡರ್ನ್ ಇಂಡಿಯನ್ ಸ್ಕೂಲ್‌ನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಸಂಜೆ 6 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಖ್ಯಾತ ದಕ್ಷಿಣ ಭಾರತೀಯ ಗಾಯಕರಾದ ಅಜಯ್ ವಾರಿಯರ್ ಮತ್ತು ದಿವ್ಯ ರಾಮಚಂದ್ರ ಅವರ ಸಂಗೀತ ರಸಸಂಜೆ ಪ್ರೇಕ್ಷಕರನ್ನು ರಂಜಿಸಿತು. ಕತಾರ್‌ನಲ್ಲಿರುವ ಭಾರತದ ರಾಯಭಾರಿ ಡಾ. ಕೆ. ಶ್ರೀಕರ್ ರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

1984ರಲ್ಲಿ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಸ್ಥಾಪನೆಯಾದ ICBF, ಕತಾರ್‌ನಲ್ಲಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಭಾರತೀಯರಿಗೆ ನೆರವು ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ, ಸಮಾಜ ಕಲ್ಯಾಣ, ಶಿಕ್ಷಣ ಹಾಗೂ ಸಮುದಾಯದ ಅಭಿವೃದ್ಧಿ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾವಿರಾರು ಭಾರತೀಯರ ಬದುಕಿಗೆ ನೆರವಾಗಿದೆ. ಕಾರ್ಯಕ್ರಮದಲ್ಲಿ ಕತಾರ್‌ಗೆ ಶ್ರೀಲಂಕಾದ ರಾಯಭಾರಿ ರೋಷನ್ ಸಿತಾರಾ ಖಾನ್, ಅಫ್ಘಾನಿಸ್ತಾನ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ರೂಹಾನಿ ಘಯಾಸಿ ಹಾಗೂ ಕಾರ್ಮಿಕ ಸಚಿವಾಲಯದ ಖಾಲಿದ್ ಎ. ಅಲ್ ಫಖ್ರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.

‘ಸಮರ್ಪಣ್ 2026’ ಸ್ಮರಣ ಸಂಚಿಕೆ ಬಿಡುಗಡೆ

ಕಳೆದ ಎರಡು ವರ್ಷಗಳಲ್ಲಿ ICBF ಕೈಗೊಂಡ ಸೇವಾ ಚಟುವಟಿಕೆಗಳು, ಸಾಧನೆಗಳು ಮತ್ತು ಸಮುದಾಯ ಕಲ್ಯಾಣ ಕಾರ್ಯಕ್ರಮಗಳನ್ನು ದಾಖಲಿಸಿರುವ ‘ಸಮರ್ಪಣ್ 2026’ ಸ್ಮರಣ ಸಂಚಿಕೆಯನ್ನು ಭಾರತದ ರಾಯಭಾರಿ ಡಾ. ಕೆ. ಶ್ರೀಕರ್ ರೆಡ್ಡಿ ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ಭಾರತೀಯ ಸಮುದಾಯದ ಅನುಕೂಲಕ್ಕಾಗಿ ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಾಯಿತು. ‘ಪ್ರವಾಸಿ ಸಾಥ್’ ಎಂಬ ಸೇವಾ ಕೇಂದ್ರವು ಕತಾರ್‌ನಲ್ಲಿರುವ ಭಾರತೀಯರಿಗೆ ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಕಲ್ಯಾಣ ಯೋಜನೆಗಳು ಹಾಗೂ ಸೇವೆಗಳ ಮಾಹಿತಿ ಮತ್ತು ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ನೆರವಾಗಲಿದೆ. ಇನ್ನೊಂದು ಯೋಜನೆಯಾದ ‘ವಿದ್ಯಾ ಜ್ಯೋತಿ’ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಒದಗಿಸುವ ಉದ್ದೇಶ ಹೊಂದಿದೆ.

Also Read
ಬಾಟಲಿ ಮೇಲೆ ನೀವಿದನ್ನು ಗಮನಿಸಿದ್ದೀರಾ? ಶುದ್ಧ ನೀರೆಂದ ಮೇಲೂ ಎಕ್ಸ್ಪೈರಿ ಡೇಟ್ ಹಾಕುವುದೇಕೆ ಗೊತ್ತಿದ್ಯಾ? ಇಲ್ಲಿದೆ ಉತ್ತರ | Water Bottle
ICBF

19 ಸಾಧಕರಿಗೆ ಗೌರವ

ಸಮುದಾಯದ ಕಲ್ಯಾಣಕ್ಕಾಗಿ ಸಲ್ಲಿಸಿದ ಸೇವೆ, ಮಾನವೀಯ ಕಾಳಜಿ ಮತ್ತು ಸಾಮಾಜಿಕ ಕೊಡುಗೆಗಳನ್ನು ಗುರುತಿಸಿ ಒಟ್ಟು 19 ಮಂದಿಯನ್ನು ಸನ್ಮಾನಿಸಲಾಯಿತು. ICBF ಸಲಹಾ ಮಂಡಳಿಯ ಅಧ್ಯಕ್ಷ ಕೊಡೂರು ಶಿವರಾಂ ಪ್ರಸಾದ್ (ಕೆ. ಎಸ್. ಪ್ರಸಾದ್) ಅವರಿಗೆ ಪ್ರತಿಷ್ಠಿತ ‘ಕಂಜನಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ICBF ಮಾಜಿ ಅಧ್ಯಕ್ಷ ಎನ್. ವಿ. ಖಾದರ್ ಅವರಿಗೆ ‘ಕೆ. ಪಿ. ಅಬ್ದುಲ್ ಹಮೀದ್ ಸ್ಮಾರಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ‘ಮೈಕ್ರೋ ಹೆಲ್ತ್ ಲ್ಯಾಬೊರೇಟರೀಸ್’ ಸಂಸ್ಥಾಪಕ ಡಾ. ಸಿ. ಕೆ. ನೌಶಾದ್ ಅವರಿಗೆ ಅತ್ಯಂತ ಸಾಮಾಜಿಕ ಜವಾಬ್ದಾರಿಯುತ ಉದ್ಯಮಿಗಾಗಿ ನೀಡುವ ‘ಸಿ. ಕೆ. ಮೆನನ್ ಸ್ಮಾರಕ ಪ್ರಶಸ್ತಿ’ ಹಾಗೂ ಜಯತಿ ಬಿ. ಮೈತ್ರಾ ಅವರಿಗೆ ‘ICBF ಮಾನವೀಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಇದಲ್ಲದೆ, ಅಬ್ದುಲ್ ರವೂಫ್ ಕೊಂಡೊಟ್ಟಿ, ಮೊಹಮ್ಮದ್ ಹುಸೇನ್ ಎಚ್., ಶಿವರಾಮನ್ ರಾಮಸ್ವಾಮಿ, ವೈರಲ್ ಟಿ. ಭಟ್, ಮಧುಕರ್ ಮೈದಮ್, ಕಿರಣ್ ಆನಂದ್, ಗರಿಮಾ ಮೆಹದಿರತ್ತ, ಒಸಾಮಾ ಶಂಸಿ, ಅಂಜನಾ ಮೆನನ್, ಜಯಪಾಲ್ ಮಾಧವನ್, ಮೊಹಮ್ಮದ್ ಅಬ್ದುಲ್ ರವೂಫ್, ಸಂಧ್ಯಾ ಕುಮಾರಿ, ವಿ. ಎಸ್. ಅಬ್ದುಲ್ ರೆಹಮಾನ್, ಮಂಜೂರ್ ಅಲಿ ಸಿ. ಮತ್ತು ಸಾದಿಕ್ ಅಲಿ ಚೆನ್ನಾಟ್ ಅವರಿಗೆ ‘ICBF ಮೆಚ್ಚುಗೆ ಪ್ರಶಸ್ತಿ’ಗಳನ್ನು ನೀಡಿ ಸನ್ಮಾನಿಸಲಾಯಿತು.

ಗಣ್ಯರ ಉಪಸ್ಥಿತಿ, ಪದಾಧಿಕಾರಿಗಳ ನೇತೃತ್ವ

ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರ ಕಚೇರಿಯ ಸಮನ್ವಯ ಅಧಿಕಾರಿ ಹಾಗೂ ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ, ಪ್ರಥಮ ಕಾರ್ಯದರ್ಶಿ ಅಶ್ವನಿ ಕುಮಾರ್, ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಡಾ. ಮೋಹನ್ ಥಾಮಸ್, ಇಂಡಿಯನ್ ಕಲ್ಚರಲ್ ಸೆಂಟರ್ (ICC) ಅಧ್ಯಕ್ಷ ಎ. ಪಿ. ಮಣಿಕಂದನ್, ಇಂಡಿಯನ್ ಸ್ಪೋರ್ಟ್ಸ್ ಸೆಂಟರ್ (ISC) ಅಧ್ಯಕ್ಷ ಇ. ಪಿ. ಅಬ್ದುಲ್ ರೆಹಮಾನ್, ಇಂಡಿಯನ್ ಬಿಸಿನೆಸ್ ಅಂಡ್ ಪ್ರೊಫೆಷನಲ್ಸ್ ಕೌನ್ಸಿಲ್ (IBPC) ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ICBF ಮಾಜಿ ಅಧ್ಯಕ್ಷರಾದ ಪಿ. ಎನ್. ಬಾಬುರಾಜನ್, ನೀಲಾಂಶು ಡೇ, ಎನ್. ವಿ. ಖಾದರ್, ಡೇವಿಸ್ ಎಡಕಲಾತೂರ್ ಮತ್ತು ಜಿಯಾದ್ ಉಸ್ಮಾನ್ ಹಾಗೂ ಸಮುದಾಯದ ಮುಖಂಡರು, ಅಂಗಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಐಸಿಬಿಎಫ್ ಅಧ್ಯಕ್ಷ ಶಾನವಾಸ್ ಬಾವಾ ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ ಸಭಿಕರನ್ನು ಸ್ವಾಗತಿಸಿದರೆ, ಕಾರ್ಯದರ್ಶಿ ಜಾಫರ್ ತಯ್ಯಿಲ್ ವಂದನಾರ್ಪಣೆ ಸಲ್ಲಿಸಿದರು. ಆರ್​ಜೆ ಅಂಶು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು.

ಐಸಿಬಿಎಫ್​ ಆಡಳಿತ ಸಮಿತಿಯ ಸದಸ್ಯರಾದ ಮಣಿಭಾರತಿ, ಮಿನಿ ಸಿಬಿ, ಖಾಜಾ ನಿಜಾಮುದ್ದೀನ್, ಶಂಕರ್ ಗೌಡ್, ಇರ್ಫಾನ್ ಅನ್ಸಾರಿ, ನೀಲಾಂಬರಿ ಮತ್ತು ಅಮರ್ ವೀರ್ ಸಿಂಗ್ ಅವರು ICBF ತಂಡದ ಸಹಕಾರದೊಂದಿಗೆ ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಮುದಾಯದ ಸೇವೆ, ಮಾನವೀಯ ಮೌಲ್ಯಗಳು ಮತ್ತು ಒಗ್ಗಟ್ಟನ್ನು ಗೌರವಿಸುವ ಮೂಲಕ ‘ICBF ದಿನ 2026’ ಕಾರ್ಯಕ್ರಮವು ಕತಾರ್‌ನ ಭಾರತೀಯ ಸಮುದಾಯದ ಪಾಲಿಗೆ ಸ್ಮರಣೀಯ ಸಂಭ್ರಮವಾಗಿ ಮೂಡಿಬಂದಿತು.