ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ: ಬಲಪಂಥೀಯ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಎಂದ ನೆತನ್ಯಾಹು! | Israel Elections

ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ: ಬಲಪಂಥೀಯ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಎಂದ ನೆತನ್ಯಾಹು! | Israel Elections
Published on: 

Israel Elections: ಇಸ್ರೇಲ್ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದು, ಅಧಿಕೃತ ಚಿತ್ರಣ ಇನ್ನೂ ಹೊರಬರಬೇಕಿದೆ. ಈ ನಡುವೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯಾವುದೇ ಕಾರಣಕ್ಕೂ ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೆರುಸಲೇಮ್‌ನಲ್ಲಿರುವ ಲಿಕುಡ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಹರ್ಷೋದ್ಗಾರ ಮಾಡುತ್ತಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಕ್ಕೆ ಬಲಪಂಥೀಯ ಒಕ್ಕೂಟದ ಸ್ಥಿರವಾದ ಸರ್ಕಾರ ಅತ್ಯಗತ್ಯ ಎಂದು ಒತ್ತಿ ಹೇಳಿದರು.

ಚುನಾವಣೆಯ ಅಂತಿಮ ಫಲಿತಾಂಶ ಬರುವವರೆಗೆ ಕಾಯಬೇಕಿದೆ ಎಂದಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯಾವುದೇ ಕಾರಣಕ್ಕೂ ಅರಬ್ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಹೂದಿ ಹಾಗೂ ಸಿಯನ್ವಾದಿ ಒಂದಾಗಿ, ದೇಶದಲ್ಲಿ ಬಲಪಂಥೀಯ ಮತ್ತು ಬಲವಾದ ಸರ್ಕಾರವನ್ನು ರಚಿಸುವುದೇ ತಮ್ಮ ಗುರಿ ಎಂದು ಅವರು ಪುನರುಚ್ಚರಿಸಿದ್ದಾರೆ.

ಎಕ್ಸಿಟ್ ಪೋಲ್ ಸಮೀಕ್ಷೆಗಳ ಮುನ್ಸೂಚನೆ ಏನು..?

ಚುನಾವಣೆಯ ಫಲಿತಾಂಶವು ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವುದರಿಂದ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ. ಆರಂಭಿಕ ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ, ಪ್ರಧಾನಿ ನೆತನ್ಯಾಹು ಅವರ ಬ್ಲಾಕ್ ಮತ್ತು ಗಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಶಿಬಿರದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಚಾನೆಲ್ 11 ಮತ್ತು 13 ರ ವರದಿಗಳ ಪ್ರಕಾರ ಎರಡೂ ಶಿಬಿರಗಳು ತಲಾ 51 ಸ್ಥಾನಗಳನ್ನು ಗಳಿಸಬಹುದೆಂದು ಅಂದಾಜಿಸಲಾಗಿದ್ದು, ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ.

ಮತ್ತೊಂದೆಡೆ ಚಾನೆಲ್ 12 ವಿರೋಧ ಪಕ್ಷಕ್ಕೆ ಅಲ್ಪ ಮುನ್ನಡೆ ತೋರಿಸಿದ್ದು, ಈ ನಡುವೆ, ಅರಬ್ ಅಲ್ಪಸಂಖ್ಯಾತ ಗುಂಪುಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವುದಿಲ್ಲ ಎಂದು ವಿಪಕ್ಷ ನಾಯಕ ಐಸೆನ್‌ಕೋಟ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

Also Read
Israel Elections: ಇಸ್ರೇಲ್ ಪ್ರಧಾನಿ ರೇಸ್‌ನಲ್ಲಿ ಗಾಡಿ ಐಸೆನ್‌ಕೋಟ್: ನೆತನ್ಯಾಹುಗೆ ಬಿಗ್ ಶಾಕ್​ ಕೊಟ್ಟ ಮಾಜಿ ಸೇನಾ ಮುಖ್ಯಸ್ಥ!
ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ: ಬಲಪಂಥೀಯ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಎಂದ ನೆತನ್ಯಾಹು! | Israel Elections

ಹೊಸ ಸರ್ಕಾರ ರಚನೆಯ ಚರ್ಚೆಗಳ ಜೊತೆಗೆ, ಇರಾನ್‌ನ ಪರಮಾಣು ಹಾಗೂ ಭದ್ರತಾ ಬೆದರಿಕೆಗಳನ್ನು ಎದುರಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಕೈಜೋಡಿಸಲು ಇದು ಸುವರ್ಣಾವಕಾಶ ಎಂದು ನೆತನ್ಯಾಹು ಬಣ್ಣಿಸಿದ್ದಾರೆ. ಇರಾನ್ ಹಿಂದೆಂದಿಗಿಂತಲೂ ದುರ್ಬಲವಾಗಿದ್ದು, ಇಸ್ರೇಲ್ ತುಂಬಾ ಶಕ್ತಿಶಾಲಿಯಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ. ನಮ್ಮ ಪಾಲುದಾರರಾದ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಇಸ್ರೇಲ್ ಒಂದು ದೊಡ್ಡ ಅವಕಾಶವನ್ನು ಹೊಂದಿದ್ದು, ಇರಾನ್‌ನ ಅಸ್ತಿತ್ವದ ಬೆದರಿಕೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಇರಾನ್ ವಿರುದ್ಧ ಮತ್ತೊಂದು ದಾಳಿಯ ಎಚ್ಚರಿಕೆ ನೀಡಿದ ಕೆಲವೇ ದಿನಗಳಲ್ಲಿ ನೆತನ್ಯಾಹು ಈ ಹೇಳಿಕೆ ನೀಡಿರುವುದು ಗಮನಿಸಬೇಕಾದ ಸಂಗತಿ. ಇಸ್ರೇಲ್‌ನ ಮಿಲಿಟರಿ ಸ್ಥಾನ ಹಾಗೂ ವಾಷಿಂಗ್ಟನ್ ಜತೆಗಿನ ಒಡನಾಟವೇ ಇರಾನ್​​ ಅನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net