Israel Elections: ಇಸ್ರೇಲ್ ಪ್ರಧಾನಿ ರೇಸ್‌ನಲ್ಲಿ ಗಾಡಿ ಐಸೆನ್‌ಕೋಟ್: ನೆತನ್ಯಾಹುಗೆ ಬಿಗ್ ಶಾಕ್​ ಕೊಟ್ಟ ಮಾಜಿ ಸೇನಾ ಮುಖ್ಯಸ್ಥ!

 Israel , IDF Chief Gadi Eisenkot
ಇಸ್ರೇಲ್ ಚುನಾವಣಾ ರೇಸ್‌ನಲ್ಲಿರುವ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್
Published on: 

Politics in Israel: ಇಸ್ರೇಲ್‌ನಲ್ಲಿ ರಾಜಕೀಯ ಕಾವು ಜೋರಾಗಿದ್ದು, ಚುನಾವಣೆಯಲ್ಲಿ ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ಪ್ರಬಲ ಸವಾಲಾಗಿ ಹೊರಹೊಮ್ಮಿದ್ದಾರೆ.

ಇಸ್ರೇಲ್ ರಕ್ಷಣಾಪಡೆಯಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಐಸೆನ್‌ಕೋಟ್, ಈಗ ನೆತನ್ಯಾಹು ಆಡಳಿತಕ್ಕೆ ನೇರ ಪೈಪೋಟಿ ನೀಡುತ್ತಿದ್ದಾರೆ.

ಯಾರು ಈ ಗಾಡಿ ಐಸೆನ್‌ಕೋಟ್?

ಮೊರೊಕ್ಕೊದಿಂದ ಬಂದು ನೆಲೆಸಿದ ಯಹೂದಿ ದಂಪತಿಗಳ ಮಗನಾಗಿ ಜನಿಸಿದ ಐಸೆನ್‌ಕೋಟ್, ಟಿಬೇರಿಯಾಸ್ ಮತ್ತು ಈಲಾಟ್‌ನಲ್ಲಿ ಬೆಳೆದರು. 1978 ರಲ್ಲಿ ಇಸ್ರೇಲ್ ಸೇನೆಯ (IDF) ಗೋಲಾನಿ ಬ್ರಿಗೇಡ್‌ಗೆ ಸೇರಿದ ಇವರು, ತಮ್ಮ 40 ವರ್ಷಗಳ ಸೇನಾ ಜೀವನದಲ್ಲಿ ಹಂತ-ಹಂತವಾಗಿ ಬೆಳೆದು 2015 ರಿಂದ 2019 ರವರೆಗೆ ಸೇನೆಯ ಪ್ರಧಾನ ಮುಖ್ಯಸ್ಥರಾಗಿ (Chief of Staff) ಜವಾಬ್ದಾರಿ ನಿರ್ವಹಿಸಿದರು.

2016 ರಲ್ಲಿ ಹೆಬ್ರಾನ್‌ನಲ್ಲಿ ಗಾಯಗೊಂಡಿದ್ದ ಪ್ಯಾಲಸ್ಟೈನ್ ದಾಳಿಕೋರನನ್ನು ಗುಂಡಿಕ್ಕಿ ಕೊಂದ ಇಸ್ರೇಲ್ ಸೈನಿಕ ಎಲೋರ್ ಅಜಾರಿಯಾ ಪ್ರಕರಣದ ತನಿಖೆ ಮತ್ತು ವಿಚಾರಣೆಯನ್ನು ಬೆಂಬಲಿಸುವ ಮೂಲಕ ಐಸೆನ್‌ಕೋಟ್ ಸುದ್ದಿಯಲ್ಲಿದ್ದರು. ರಾಜಕೀಯ ಒತ್ತಡಗಳ ನಡುವೆಯೂ ಸೇನಾ ಶಿಸ್ತು ಮತ್ತು ನೈತಿಕತೆಯನ್ನು ಕಾಯ್ದುಕೊಳ್ಳುವಲ್ಲಿ ಅವರು ಬದ್ಧರಾಗಿದ್ದರು.

ರಾಜಕೀಯ ಪ್ರವೇಶ ಮತ್ತು ವೈಯಕ್ತಿಕ ನೋವು

2022ರಲ್ಲಿ ಬೆನ್ನಿ ಗಾಂಟ್ಜ್ ಜತೆ ಸೇರಿ ರಾಜಕೀಯಕ್ಕೆ ಬಂದ ಐಸೆನ್‌ಕೋಟ್, ಅಕ್ಟೋಬರ್ 7ರ ಹಮಾಸ್ ದಾಳಿಯ ಬಳಿಕ ದೇಶಕ್ಕಾಗಿ ನೆತನ್ಯಾಹು ಅವರ ತುರ್ತು ಸರ್ಕಾರ ಸೇರಿದ್ದರು. ಆದರೆ, ಗಾಜಾ ಯುದ್ಧದ ನಂತರ ಸೂಕ್ತ ಯೋಜನೆಯಿಲ್ಲವೆಂದು ಜೂನ್ 2024ರಲ್ಲಿ ಆ ಸರ್ಕಾರ ತೊರೆದರು. ಈ ಯುದ್ಧದಲ್ಲಿ ಅವರ 25 ವರ್ಷದ ಮಗ ಗ್ಯಾಲ್ ಹಾಗೂ ಇಬ್ಬರು ಸೋದರಳಿಯಂದಿರು ಹುತಾತ್ಮರಾಗಿದ್ದಾರೆ.

ಜಾತಿ ನಿಂದನೆ ಮತ್ತು ವಿವಾದ

ಇಸ್ರೇಲಿ ಟಿವಿ ನಿರೂಪಕ ಯಿನಾನ್ ಮಗಾಲ್, ಐಸೆನ್‌ಕೋಟ್ ಅವರ ಮೊರೊಕ್ಕೊ-ಮಿಜ್ರಾಹಿ ಹಿನ್ನೆಲೆಯನ್ನು ಗುರಿಯಾಗಿಸಿಕೊಂಡು ‘ಅಶ್ಕೆನಾಜಿ ಗಣ್ಯರ ಕೈಗೊಂಬೆ’ ಎಂದು ಟೀಕಿಸಿದ್ದು ದೊಡ್ಡ ವಿವಾದ ಸೃಷ್ಟಿಸಿತು. ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದಾಗ, ಮಗಾಲ್ ಸ್ಪಷ್ಟನೆ ನೀಡಿ ತಾನು ಅವರ ಮೂಲದ ಬಗ್ಗೆ ಹಗುರವಾಗಿ ಮಾತನಾಡಲಿಲ್ಲ ಎಂದರು. ಸ್ವತಃ ಪ್ರಧಾನಿ ನೆತನ್ಯಾಹು ಕೂಡ ಈ ಟೀಕೆಯನ್ನು ಖಂಡಿಸಿದ್ದಾರೆ.

ಪ್ರಧಾನಿಯಾಗುವ ಸನ್ನಿವೇಶ ಹೇಗಿದೆ?

ಇಸ್ರೇಲ್‌ನ 120 ಕ್ಷೇತ್ರಗಳ ಕನೆಸೆಟ್ (ಸಂಸತ್) ಚುನಾವಣೆಯಲ್ಲಿ ಐಸೆನ್‌ಕೋಟ್ ಅವರ 'ಯಾಶರ್' ಪಾರ್ಟಿ 20 ರಿಂದ 23 ಸೀಟುಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದು ನೆತನ್ಯಾಹು ಅವರ ಲಿಕುಡ್ ಪಾರ್ಟಿಗಿಂತ ಅಧಿಕವಾಗಿದೆ.

ಇದನ್ನೂ ಓದಿ: ಕರ್ನಾಟಕ ಮತದಾರರ ಅಂತಿಮ ಪಟ್ಟಿ ಪ್ರಕಟ: ಬರೋಬ್ಬರಿ 1 ಕೋಟಿ ಹೆಸರು ಡಿಲೀಟ್, ನಿಮ್ಮ ಹೆಸರಿದೆಯಾ ಹೀಗೆ ಚೆಕ್ ಮಾಡಿ! | Karnataka Electoral Roll

ಇಸ್ರೇಲ್ ಇತಿಹಾಸದಲ್ಲಿ ಇದುವರೆಗೆ ಮಿಜ್ರಾಹಿ ಮೂಲದ ವ್ಯಕ್ತಿ ಪ್ರಧಾನಿಯಾಗಿಲ್ಲ. ಹೀಗಾಗಿ ಐಸೆನ್‌ಕೋಟ್ ಸ್ಪರ್ಧೆ ಐತಿಹಾಸಿಕ ಪ್ರಾಮುಖ್ಯತೆ ಪಡೆದಿದೆ. ಆದರೆ, ಸರ್ಕಾರ ರಚಿಸಲು 61 ಶಾಸಕರ ಬೆಂಬಲ ಬೇಕಿರುವುದರಿಂದ, ಕೇವಲ ಹೆಚ್ಚು ಸೀಟು ಗೆದ್ದರೆ ಸಾಲದು. ಇತರ ಪ್ರಾದೇಶಿಕ ಮತ್ತು ಅರಬ್ ಪಕ್ಷಗಳ ಬೆಂಬಲ ಪಡೆಯುವುದು ಅವರಿಗೆ ಸವಾಲಾಗುವ ಸಾಧ್ಯತೆಯಿದೆ.(ಏಜೆನ್ಸಿಸ್​)

Related Stories

Benjamin Netanyahu, modi
Prime Minister Benjamin Netanyahu invited Indian pilot Smith Machar to the Israel Independence Day celebration.
ಒಮಾನ್ ಕೋ ಪೈಲಟ್ ಹಿನ್ನೆಲೆ ಬಗ್ಗೆ ಕಾಡುತ್ತಿವೆ ಅಚ್ಚರಿಯ ಪ್ರಶ್ನೆಗಳು!
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net