

ವಾಷಿಂಗ್ಟನ್: ಸದ್ಯ ಅಮೆರಿಕದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತಿದ್ದು, ಓಹಿಯೋ ಗವರ್ನರ್ ಚುನಾವಣೆಯ ಫಲಿತಾಂಶ ಈಗ ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಬೆಂಬಲಿತ, ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಮುಖಭಂಗ ಅನುಭವಿಸಿದ್ದಾರೆ.
ಸಾಂಪ್ರದಾಯಿಕವಾಗಿ ರಿಪಬ್ಲಿಕನ್ ಪಕ್ಷದ ಭದ್ರಕೋಟೆಯಾಗಿದ್ದ ಓಹಿಯೋದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ವೈದ್ಯೆ ಡಾ. ಆಮಿ ಆಕ್ಟನ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಈ ರಾಜ್ಯದ ಗವರ್ನರ್ ಪಟ್ಟಕ್ಕೇರಿದ ಮೊದಲ ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
2024ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್‌ನಿಂದ ಹಿಂದೆ ಸರಿದು ಟ್ರಂಪ್‌ಗೆ ಬೆಂಬಲ ಘೋಷಿಸಿದ್ದ ವಿವೇಕ್ ರಾಮಸ್ವಾಮಿ, ಈ ಬಾರಿ ಓಹಿಯೋ ಗವರ್ನರ್ ಆಗಲೇಬೇಕೆಂದು ಪಣತೊಟ್ಟಿದ್ದರು. ಪ್ರಚಾರಕ್ಕಾಗಿ ತಮ್ಮ ಸ್ವಂತ ಜೇಬಿನಿಂದಲೇ ಬರೋಬ್ಬರಿ 36 ಮಿಲಿಯನ್ ಡಾಲರ್ (ಅಂದಾಜು 300 ಕೋಟಿಗೂ ಅಧಿಕ) ಹಣವನ್ನು ನೀರಂತೆ ಖರ್ಚು ಮಾಡಿದ್ದರು. ಇದು ಎದುರಾಳಿ ಆಮಿ ಆಕ್ಟನ್ ಅವರ ಒಟ್ಟು ಪ್ರಚಾರ ವೆಚ್ಚಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚಿತ್ತು. ಆದರೆ ಮತದಾರ ಪ್ರಭು ಮಾತ್ರ ಹಣದ ಹೊಳೆಗೆ ಮರುಳಾಗದೆ, ಜನಸಾಮಾನ್ಯರ ಪರ ನಿಂತ ವೈದ್ಯೆಗೆ ಮಣೆ ಹಾಕಿದ್ದಾನೆ.
ಚುನಾವಣೆಯ ಕೊನೆಯ ದಿನಗಳಲ್ಲಿ ರಾಮಸ್ವಾಮಿ ಹೆಣೆದ ಒಂದು ಕುತಂತ್ರವೇ ಅವರ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಎದುರಾಳಿ ಆಮಿ ಆಕ್ಟನ್ ಅವರ ತೇಜೋವಧೆ ಮಾಡಲು ರಾಮಸ್ವಾಮಿ ಬರೋಬ್ಬರಿ 4 ಮಿಲಿಯನ್ ಡಾಲರ್ (ಸುಮಾರು 33 ಕೋಟಿ) ಸುರಿದು ಜಾಹೀರಾತೊಂದನ್ನು ಪ್ರಸಾರ ಮಾಡಿದ್ದರು.
ಆ ಜಾಹೀರಾತಿನಲ್ಲಿ ಆಕ್ಟನ್ ಅವರ ತಾಯಿಯನ್ನೇ ಕರೆತಂದು, ಆಮಿ ಒಬ್ಬಳು "ಸುಳ್ಳುಗಾರ್ತಿ" ಎಂದು ಹೇಳಿಸಲಾಗಿತ್ತು. ಬಾಲ್ಯದಲ್ಲಿ ತಾನು ಅನುಭವಿಸಿದ ಲೈಂಗಿಕ ದೌರ್ಜನ್ಯ ಮತ್ತು ಕಷ್ಟಗಳ ಬಗ್ಗೆ ಆಮಿ ಈ ಹಿಂದೆ ಮಾತನಾಡಿದೆಲ್ಲಾ, ಸುಳ್ಳೆಂದು ತೋರಿಸುವ ಪ್ರಯತ್ನ ರಾಮಸ್ವಾಮಿ ಅವರದ್ದಾಗಿತ್ತು.
ಆದರೆ, ಕೇವಲ ಮತಕ್ಕಾಗಿ ಒಬ್ಬ ಮಹಿಳೆಯ ಕುಟುಂಬದ ಆಂತರಿಕ ನೋವನ್ನು ಬೀದಿಗೆ ತಂದ ರಾಮಸ್ವಾಮಿ ನಡೆಗೆ ಜನರಿಂದ ಮಾತ್ರವಲ್ಲ, ಸ್ವತಃ ಅವರದೇ ರಿಪಬ್ಲಿಕನ್ ಪಕ್ಷದ ನಾಯಕರಿಂದಲೂ ತೀವ್ರ ವಿರೋಧ ವ್ಯಕ್ತವಾಯಿತು. ಹಾಲಿ ರಿಪಬ್ಲಿಕನ್ ಗವರ್ನರ್ ಮೈಕ್ ಡಿವೈನ್, "ಇದು ಅತ್ಯಂತ ಅಸಹ್ಯಕರ ಮತ್ತು ಆತಂಕಕಾರಿ ನಡೆ" ಎಂದು ರಾಮಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಒಂದೇ ಒಂದು ಜಾಹೀರಾತು ಜನರಲ್ಲಿ ರಾಮಸ್ವಾಮಿ ಬಗ್ಗೆ ತೀವ್ರ ಅಸಮಾಧಾನ ಮೂಡಿಸಿತು.
ಓಹಿಯೋ, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ತವರು ರಾಜ್ಯ. ಹೀಗಾಗಿ ಟ್ರಂಪ್ ಮತ್ತು ವ್ಯಾನ್ಸ್ ಇಬ್ಬರೂ ರಾಮಸ್ವಾಮಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. 2024ರ ಚುನಾವಣೆಯಲ್ಲಿ ಟ್ರಂಪ್ ಇಲ್ಲಿ ಶೇಕಡಾ 11 ರಷ್ಟು ದೊಡ್ಡ ಅಂತರದಿಂದ ಗೆದ್ದಿದ್ದರು. ಆದರೂ ರಾಮಸ್ವಾಮಿಯನ್ನು ಗೆಲ್ಲಿಸಲು ಟ್ರಂಪ್ ವರ್ಚಸ್ಸಿಗೆ ಸಾಧ್ಯವಾಗಲಿಲ್ಲ.
ಇನ್ನೊಂದೆಡೆ, ಆಮಿ ಆಕ್ಟನ್ ಅವರು ರಾಮಸ್ವಾಮಿಯನ್ನು "ಜನಸಾಮಾನ್ಯರ ಕಷ್ಟ ಗೊತ್ತಿಲ್ಲದ ಬಿಲಿಯನೇರ್" ಎಂದು ಕರೆಯುತ್ತಾ, ಅವರೊಂದಿಗೆ ಬಹಿರಂಗ ಚರ್ಚೆಗೂ ಇಳಿಯದೆ ತಿರಸ್ಕರಿಸಿದ್ದರು. ಬದಲಿಗೆ, ಕಾರ್ಮಿಕರಿಗೆ ತೆರಿಗೆ ವಿನಾಯಿತಿ, ಸಾಮಾನ್ಯರಿಗೆ ಆಸ್ತಿ ತೆರಿಗೆ ಪರಿಹಾರ ಮತ್ತು ಕಡಿಮೆ ದರದಲ್ಲಿ ಔಷಧಿ ಸಿಗುವಂತಹ ಜನಪರ ಭರವಸೆಗಳನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡರು. ಕೊರೊನಾ ಸಂದರ್ಭದಲ್ಲಿ ಓಹಿಯೋ ಆರೋಗ್ಯ ಇಲಾಖೆಯ ಮುಖ್ಯಸ್ಥೆಯಾಗಿ ಅವರು ಮಾಡಿದ ಸೇವೆ ಕೂಡ ಜನರಿಗೆ ಹತ್ತಿರವಾಗಿತ್ತು.
2010 ರಿಂದಲೂ ಈ ರಾಜ್ಯದಲ್ಲಿ ರಿಪಬ್ಲಿಕನ್ ಪಕ್ಷದ ಪಾರುಪತ್ಯವಿತ್ತು. 2006 ರ ಬಳಿಕ ಡೆಮಾಕ್ರಟಿಕ್ ಪಕ್ಷ ಇಲ್ಲಿ ಗವರ್ನರ್ ಹುದ್ದೆ ಗೆದ್ದೇ ಇರಲಿಲ್ಲ. ಆದರೆ ಈಗ 60 ವರ್ಷದ ಡಾ. ಆಮಿ ಆಕ್ಟನ್ 18 ವರ್ಷಗಳ ನಂತರ ಆ ಇತಿಹಾಸವನ್ನು ಬದಲಿಸಿ ಹೊಸ ದಾಖಲೆ ಬರೆದಿದ್ದಾರೆ. ಇತ್ತ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿಯ ಅತಿಯಾದ ಆತ್ಮವಿಶ್ವಾಸ, ಧನಬಲ ಮತ್ತು ಕೆಸರೆರಚಾಟದ ರಾಜಕೀಯ ಕೊನೆಗೂ ಅವರಿಗೆ ತೀವ್ರ ಮುಖಭಂಗ ತಂದಿಟ್ಟಿದೆ, (ಏಜೆನ್ಸೀಸ್).