ಗಾಜಾದಲ್ಲಿ ಕದನ ವಿರಾಮಕ್ಕೆ ಧಕ್ಕೆ: ಇಸ್ರೇಲ್ ವೈಮಾನಿಕ ದಾಳಿಗೆ 11 ಬಲಿ | Gaza Attack

ಗಾಜಾದಲ್ಲಿ ಕದನ ವಿರಾಮಕ್ಕೆ ಧಕ್ಕೆ: ಇಸ್ರೇಲ್ ವೈಮಾನಿಕ ದಾಳಿಗೆ 11 ಬಲಿ
ಗಾಜಾದಲ್ಲಿ ಕದನ ವಿರಾಮಕ್ಕೆ ಧಕ್ಕೆ: ಇಸ್ರೇಲ್ ವೈಮಾನಿಕ ದಾಳಿಗೆ 11 ಬಲಿ
Published on
ಗಾಜಾ: ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಒಪ್ಪಂದವು ಎರಡನೇ ಹಂತಕ್ಕೆ ತಲುಪಿದ್ದರೂ, ಗಾಜಾ(Gaza Attack) ಪಟ್ಟಿಯಲ್ಲಿ ರಕ್ತಪಾತ ನಿಂತಿಲ್ಲ. ಭಾನುವಾರ ಬೆಳಗಿನ ಜಾವ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ 11ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಹಮಾಸ್ ಕದನ ವಿರಾಮದ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಈ ದಾಳಿ ಅನಿವಾರ್ಯವಾಗಿತ್ತು ಎಂದು ಇಸ್ರೇಲ್ ಸೇನೆ ಸಮರ್ಥಿಸಿಕೊಂಡಿದೆ.

ದಾಳಿಯ ವಿವರ

ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯ ಪ್ರಕಾರ, ದಾಳಿಯು ಪ್ರಮುಖವಾಗಿ ಉತ್ತರ ಮತ್ತು ದಕ್ಷಿಣ ಗಾಜಾವನ್ನು ಗುರಿಯಾಗಿಸಿಕೊಂಡಿತ್ತು.
ಜಬಾಲಿಯಾ: ಇಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಜನರು ನಿದ್ದೆಯಲ್ಲಿದ್ದಾಗಲೇ ಈ ದಾಳಿ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಖಾನ್ ಯೂನಿಸ್: ಇಲ್ಲಿ ನಡೆದ ಪ್ರತ್ಯೇಕ ವೈಮಾನಿಕ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ.
ಗಾಜಾ: ಇಸ್ರೇಲ್‌ನ ಫಿರಂಗಿ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾನೆ. ಅಲ್-ಶಿಫಾ ಮತ್ತು ನಾಸರ್ ಆಸ್ಪತ್ರೆಗಳು ಇದುವರೆಗೆ 11 ಮೃತದೇಹಗಳನ್ನು ಸ್ವೀಕರಿಸಿವೆ ಎಂದು ಖಚಿತಪಡಿಸಿವೆ.

ಇಸ್ರೇಲ್ ನೀಡಿದ ಕಾರಣವೇನು..?

ಇಸ್ರೇಲ್ ಮಿಲಿಟರಿ ಅಧಿಕಾರಿಯೊಬ್ಬರ ಪ್ರಕಾರ, ಹಮಾಸ್ ಉಗ್ರರು ಕದನ ವಿರಾಮದ ನಿಯಮಗಳನ್ನು ಗಾಳಿಗೆ ತೂರಿದ್ದಕ್ಕೆ ಈ ಪ್ರತಿದಾಳಿ ನಡೆಸಲಾಗಿದೆ.
ಶಸ್ತ್ರಸಜ್ಜಿತ ಭಯೋತ್ಪಾದಕರು ಕದನ ವಿರಾಮದ ನಿಯಮದಂತೆ ನಿಗದಿಪಡಿಸಲಾಗಿದ್ದ ಯೆಲ್ಲೋ ಲೈನ್ ದಾಟಿ ಇಸ್ರೇಲ್ ರಕ್ಷಣಾ ಪಡೆಗಳ (IDF) ಸಮೀಪಕ್ಕೆ ಬಂದಿದ್ದರು. ಭೂಗತ ಸುರಂಗಗಳ ಮೂಲಕ ಬಂದು ಪಡೆಯ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸುತ್ತಿದ್ದ ಇವರನ್ನು ಪತ್ತೆಹಚ್ಚಿ ನಿಗ್ರಹಿಸಲಾಗಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.

ಕದನ ವಿರಾಮದ ಸದ್ಯದ ಸ್ಥಿತಿ

2025ರ ಅಕ್ಟೋಬರ್ 10 ರಂದು ಜಾರಿಗೆ ಬಂದ ಕದನ ವಿರಾಮ ಒಪ್ಪಂದದ ಪ್ರಕಾರ, ಇಸ್ರೇಲ್ ಪಡೆಗಳು ಯೆಲ್ಲೋ ಲೈನ್​ನ ಹಿಂದೆ ಹಿಂತೆಗೆಯಬೇಕಿತ್ತು. ಆದರೆ, ಪ್ರಸ್ತುತ ಗಾಜಾದ ಅರ್ಧಕ್ಕಿಂತ ಹೆಚ್ಚು ಪ್ರದೇಶ ಇಸ್ರೇಲ್ ನಿಯಂತ್ರಣದಲ್ಲಿದೆ.
ಸಾವಿನ ಸಂಖ್ಯೆ: ಕದನ ವಿರಾಮ ಆರಂಭವಾದಾಗಿನಿಂದ ಇದುವರೆಗೆ ಗಾಜಾದಲ್ಲಿ ಕನಿಷ್ಠ 601 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಅಲ್ಲದೆ, ಇಸ್ರೇಲ್ ಕಡೆಯಿಂದ ಕನಿಷ್ಠ ನಾಲ್ವರು ಸೈನಿಕರು ಇದೇ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ದಾಳಿಯು ಮುಂಬರುವ ಶಾಂತಿ ಮಾತುಕತೆಗಳ ಮೇಲೆ ಕರಿನೆರಳು ಬೀರಿದ್ದು, ಹಮಾಸ್ ಇದನ್ನು ಹತ್ಯಾಕಾಂಡ ಎಂದು ಬಣ್ಣಿಸಿದರೆ, ಇಸ್ರೇಲ್ ಇದನ್ನು ಆತ್ಮರಕ್ಷಣೆ ಎಂದು ಕರೆಯುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net