ಅಮೆರಿಕ ರಾಜಕೀಯ ಈಗ ಸರ್ಕಸ್ ಕಂಪನಿ: ಟ್ರಂಪ್​ರ ವರ್ಣಭೇದ ವಿಡಿಯೋ ವಿರುದ್ಧ ಒಬಾಮಾ ಕಿಡಿ | Barack Obama

ಅಮೆರಿಕ ರಾಜಕೀಯ ಈಗ ಸರ್ಕಸ್ ಕಂಪನಿ: ಟ್ರಂಪ್​ರ ವರ್ಣಭೇದ ವಿಡಿಯೋ ವಿರುದ್ಧ ಒಬಾಮಾ ಕಿಡಿ
ಅಮೆರಿಕ ರಾಜಕೀಯ ಈಗ ಸರ್ಕಸ್ ಕಂಪನಿ: ಟ್ರಂಪ್​ರ ವರ್ಣಭೇದ ವಿಡಿಯೋ ವಿರುದ್ಧ ಒಬಾಮಾ ಕಿಡಿ
Published on
ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ(Barack Obama) ಅವರು ಡೊನಾಲ್ಡ್ ಟ್ರಂಪ್ ಅವರ ನಡೆ ಹಾಗೂ ದೇಶದ ಇಂದಿನ ರಾಜಕೀಯ ವಿವೇಚನೆಯ ಕುಸಿತದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಅವರ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಒಬಾಮಾ ದಂಪತಿಯನ್ನು ಕೋತಿಗಳಿಗೆ ಹೋಲಿಸುವ ಜನಾಂಗೀಯ ನಿಂದನೆಯ ವಿಡಿಯೋ ಹಂಚಿಕೊಂಡಿದ್ದಕ್ಕೆ ಪ್ರತಿಕ್ರಿಯಿಸಿರುವ ಒಬಾಮಾ, ಇಂದಿನ ರಾಜಕೀಯವು ಒಂದು ಸರ್ಕಸ್ ಕಂಪನಿಯಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಪತ್ರಕರ್ತ ಬ್ರಿಯಾನ್ ಟೈಲರ್ ಕೋಹೆನ್ ಅವರೊಂದಿಗಿನ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಒಬಾಮಾ, ಅಮೆರಿಕದ ರಾಜಕೀಯ ಸಂಭಾಷಣೆಯ ಮಟ್ಟವು ಅತ್ಯಂತ ಕ್ರೂರ ಹಂತಕ್ಕೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಜನಾಂಗೀಯ ನಿಂದನೆಯ ವಿಡಿಯೋ ವಿವಾದ

ಫೆಬ್ರವರಿ 5ರಂದು ಡೊನಾಲ್ಡ್ ಟ್ರಂಪ್ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಆಗಿತ್ತು. 2020ರ ಚುನಾವಣೆಯ ಪಿತೂರಿಗಳ ಬಗ್ಗೆ ಇದ್ದ ಈ ವಿಡಿಯೋದ ಕೊನೆಯಲ್ಲಿ, ಬರಾಕ್ ಒಬಾಮಾ ಮತ್ತು ಮಿಶೆಲ್ ಒಬಾಮಾ ಅವರ ಮುಖಗಳನ್ನು ಕೋತಿಗಳ ದೇಹಕ್ಕೆ ಅಳವಡಿಸಲಾಗಿತ್ತು.
ಒಬಾಮಾ ಪ್ರತಿಕ್ರಿಯೆ
ಸೋಷಿಯಲ್ ಮೀಡಿಯಾ ಮತ್ತು ದೂರದರ್ಶನದಲ್ಲಿ ಒಂದು ರೀತಿಯ ಸರ್ಕಸ್ ನಡೆಯುತ್ತಿದೆ. ಈ ಹಿಂದೆ ರಾಜಕೀಯದಲ್ಲಿ ಒಂದು ಘನತೆ, ಮರ್ಯಾದೆ ಮತ್ತು ಕಚೇರಿಯ ಬಗ್ಗೆ ಗೌರವವಿರಬೇಕು ಎಂದು ಜನ ಭಾವಿಸುತ್ತಿದ್ದರು. ಆದರೆ ಈಗ ಜನರಲ್ಲಿ ಯಾವುದೇ ನಾಚಿಕೆ ಇಲ್ಲದಂತಾಗಿದೆ ಎಂದು ಯುಎಸ್​ ಮಾಜಿ ಅಧ್ಯಕ್ಷ ಬೇಸರ ವ್ಯಕ್ತಪಡಿಸಿದ್ದಾರೆ.

ಮಿನ್ನೇಸೋಟದ ವಲಸೆ ದಮನ ನೀತಿ

ಇತ್ತೀಚೆಗೆ ಮಿನ್ನೇಸೋಟದಲ್ಲಿ ನಡೆದ ವಲಸಿಗರ ವಿರುದ್ಧದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆಯೂ ಒಬಾಮಾ ಮಾತನಾಡಿದ್ದು, ಫೆಡರಲ್ ಏಜೆಂಟ್‌ಗಳ (ICE) ನಡವಳಿಕೆಯನ್ನು ಸರ್ವಾಧಿಕಾರಿ ರಾಷ್ಟ್ರಗಳಲ್ಲಿ ಕಂಡುಬರುವ ವರ್ತನೆ ಎಂದು ಕಿಡಿಕಾರಿದ್ದಾರೆ.
ಮಿನ್ನೇಸೋಟದಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಇಬ್ಬರು ಅಮೆರಿಕನ್ನರು ಗುಂಡಿಗೆ ಬಲಿಯಾಗಿದ್ದರು. ಇದು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಲದೆ, ಫೆಡರಲ್ ಸರ್ಕಾರದ ಏಜೆಂಟ್‌ಗಳ ಈ ಅಶಿಸ್ತಿನ ವರ್ತನೆ ಅತ್ಯಂತ ಅಪಾಯಕಾರಿ ಎಂದು ಒಬಾಮಾ ಎಚ್ಚರಿಸಿದ್ದಾರೆ.

ಸರ್ಕಾರದ ಭಾಗಶಃ ಸ್ಥಗಿತ

ಈ ವಿವಾದಗಳ ಬೆನ್ನಲ್ಲೇ, ವಲಸೆ ಜಾರಿ ಸುಧಾರಣೆಗಳ ಕುರಿತು ಡೆಮೋಕ್ರಾಟ್ ಮತ್ತು ರಿಪಬ್ಲಿಕನ್ನರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅಮೆರಿಕದ ದೇಶೀಯ ಭದ್ರತಾ ಇಲಾಖೆಯ (DHS) ಹಣಕಾಸು ವ್ಯವಸ್ಥೆ ಶನಿವಾರದಿಂದ ಭಾಗಶಃ ಸ್ಥಗಿತಗೊಂಡಿದೆ. ಅಲ್ಲದೆ, ಡೆಮೋಕ್ರಾಟ್‌ಗಳು ವಲಸೆ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರುವಂತೆ ಒತ್ತಾಯಿಸುತ್ತಿದ್ದಾರೆ.

ಹೋರಾಟದ ಬಗ್ಗೆ ಒಬಾಮಾ ಮೆಚ್ಚುಗೆ

ಟ್ರಂಪ್ ಆಡಳಿತದ ಈ ಕ್ರಮಗಳ ವಿರುದ್ಧ ತೀವ್ರ ಚಳಿಯಲ್ಲೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಸಾಮಾನ್ಯ ಜನರನ್ನು ಒಬಾಮಾ ಶ್ಲಾಘಿಸಿದ್ದಾರೆ. ಇದು ನಾವು ನಂಬಿರುವ ಅಮೆರಿಕವಲ್ಲ ಎಂದು ಧೈರ್ಯದಿಂದ ಹೇಳುತ್ತಿರುವ ಜನರು ನಮಗೆ ಭರವಸೆ ನೀಡುತ್ತಾರೆ ಎಂದು ಒಬಮಾ ಹೇಳಿದ್ದಾರೆ.
ಬಹುಪಾಲು ಅಮೆರಿಕನ್ನರು ಇಂತಹ ಅಸಭ್ಯ ವರ್ತನೆಯನ್ನು ಒಪ್ಪುವುದಿಲ್ಲ. ಅಂತಿಮವಾಗಿ ಅಮೆರಿಕದ ಜನರೇ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ಬರಾಕ್ ಒಬಾಮಾ ತಿಳಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net