ಜಿ7 ಒಕ್ಕೂಟ ಇನ್ಮುಂದೆ ಜಗತ್ತನ್ನು ಆಳಲು ಸಾಧ್ಯವಿಲ್ಲ: ಶೃಂಗಸಭೆಗೂ ಮುನ್ನ ಭಾರತದ ಶಕ್ತಿ ಕೊಂಡಾಡಿದ ಕೆನಡಾ ಪ್ರಧಾನಿ! Mark Carney

ಜಿ7 ಒಕ್ಕೂಟ ಇನ್ಮುಂದೆ ಜಗತ್ತನ್ನು ಆಳಲು ಸಾಧ್ಯವಿಲ್ಲ: ಶೃಂಗಸಭೆಗೂ ಮುನ್ನ ಭಾರತದ ಶಕ್ತಿ ಕೊಂಡಾಡಿದ ಕೆನಡಾ ಪ್ರಧಾನಿ!
ಜಿ7 ಒಕ್ಕೂಟ ಇನ್ಮುಂದೆ ಜಗತ್ತನ್ನು ಆಳಲು ಸಾಧ್ಯವಿಲ್ಲ: ಶೃಂಗಸಭೆಗೂ ಮುನ್ನ ಭಾರತದ ಶಕ್ತಿ ಕೊಂಡಾಡಿದ ಕೆನಡಾ ಪ್ರಧಾನಿ!
Published on
ಪ್ಯಾರಿಸ್: ಫ್ರಾನ್ಸ್‌ನ ಎವಿಯನ್ ನಗರದಲ್ಲಿ ಆರಂಭವಾಗಲಿರುವ 52ನೇ ಜಿ7 ಶೃಂಗಸಭೆಯ ಮುನ್ನವೇ ಜಾಗತಿಕ ರಾಜಕಾರಣದಲ್ಲಿ ಭಾರತದ ಪ್ರಭಾವದ ಕುರಿತು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಜಿ7 ಒಕ್ಕೂಟವು ಒಂದು ಕಾಲದಲ್ಲಿ ಜಗತ್ತನ್ನು ಆಳುತ್ತಿರಬಹುದು, ಆದರೆ ಇನ್ಮುಂದೆ ಅದು ಜಗತ್ತನ್ನು ನಡೆಸಲು ಸಾಧ್ಯವಿಲ್ಲ ಎಂದು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ(Mark Carney) ಮುಕ್ತವಾಗಿ ಘೋಷಿಸಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಭಾರತದ ಆರ್ಥಿಕ ಮತ್ತು ರಾಜತಾಂತ್ರಿಕ ಶಕ್ತಿ ಎಷ್ಟು ಬಲಿಷ್ಠವಾಗಿ ಬೆಳೆದಿದೆ ಎಂದರೆ, ಜಗತ್ತಿನ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೇವಲ ಕೆಲವೇ ಕೆಲವು ಪಾಶ್ಚಿಮಾತ್ಯ ದೇಶಗಳು ಒಂಟಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಾರಿದ್ದಾರೆ.
ತಮ್ಮ ಆರು ದಿನಗಳ ಯುರೋಪ್ ಪ್ರವಾಸದ ಭಾಗವಾಗಿ ಡಬ್ಲಿನ್‌ನ ಟ್ರಿನಿಟಿ ಕಾಲೇಜಿನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಕೆನಡಾ ಪ್ರಧಾನಿ ಕಾರ್ನಿ, ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಭಾರತದ ಪಾತ್ರ ಎಷ್ಟು ಅನಿವಾರ್ಯ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಜಗತ್ತನ್ನು ಆಳುವ ಹಣೆಪಟ್ಟಿ ಜಿ7ಗೆ ತಪ್ಪಿದೆ!

ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳ ಚರ್ಚೆಯಲ್ಲಿ ಭಾರತದಂತಹ ಪ್ರಭಾವಿ ದೇಶಗಳನ್ನು ಸೇರಿಸಿಕೊಳ್ಳುತ್ತಿರುವುದು ಅಂತಾರಾಷ್ಟ್ರೀಯ ರಾಜಕಾರಣ ಬದಲಾಗುತ್ತಿರುವುದಕ್ಕೆ ಸಾಕ್ಷಿ ಎಂದ ಕಾರ್ನಿ, ಜಿ7 ಒಕ್ಕೂಟವು ಜಗತ್ತನ್ನು ತನ್ನಿಷ್ಟದಂತೆ ನಡೆಸುವ ಕಾಲ ಈಗ ಮುಗಿದಿದೆ. ಸ್ವತಃ ಜಿ7 ರಾಷ್ಟ್ರಗಳೇ ಈಗ ಆ ಭ್ರಮೆಯಲ್ಲಿಲ್ಲ. ಜಗತ್ತು ಎದುರಿಸುತ್ತಿರುವ ಸಂಕೀರ್ಣ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಸಾಂಪ್ರದಾಯಿಕ ಸದಸ್ಯರನ್ನು ಮೀರಿ, ಭಾರತದಂತಹ ಪ್ರಭಾವಿ ರಾಷ್ಟ್ರಗಳನ್ನು ಜೊತೆಗೊಯ್ಯುವುದು ಇಂದಿನ ಅನಿವಾರ್ಯತೆಯಾಗಿದೆ. ಇಂತಹ ದೇಶಗಳು ಜಾಗತಿಕ ಸಮಸ್ಯೆಗಳಿಗೆ ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಪ್ರಾಯೋಗಿಕ ಪರಿಹಾರಗಳನ್ನು ನೀಡಬಲ್ಲವು ಎಂದು ಪ್ರಶಂಸಿಸಿದ್ದಾರೆ.
ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ, ಮಧ್ಯಮ ಶಕ್ತಿಗಳ ನಡುವಿನ ಸಹಕಾರ ಅತ್ಯಗತ್ಯ ಎಂಬ ತಮ್ಮ ದಾವೋಸ್ ವಿಶ್ವ ಆರ್ಥಿಕ ವೇದಿಕೆಯ ಆಶಯವನ್ನು ಅವರು ಇಲ್ಲಿ ಪುನರುಚ್ಚರಿಸಿದ್ದಾರೆ.

ಶೃಂಗಸಭೆಯ ಪ್ರಮುಖ ಅಜೆಂಡಾ: AI ಕಣ್ಗಾವಲು

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿಯ ಶೃಂಗಸಭೆಯಲ್ಲಿ ಜಾಗತಿಕ ಆರ್ಥಿಕ ಸ್ಥಿರತೆ, ಇಂಧನ ಭದ್ರತೆ, ಯುಕ್ರೇನ್ ಹಾಗೂ ಮಧ್ಯಪ್ರಾಚ್ಯದ ಯುದ್ಧ ಬಿಕ್ಕಟ್ಟುಗಳ ಜೊತೆಗೆ ಮುಖ್ಯವಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನಿಯಂತ್ರಣದ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಜಗತ್ತಿನಾದ್ಯಂತ ಎಐ ತಂತ್ರಜ್ಞಾನವು ಯಾವುದೇ ಕಠಿಣ ನಿಯಮಗಳಿಲ್ಲದೆ ವೇಗವಾಗಿ ವಿಸ್ತರಿಸುತ್ತಿದ್ದು, ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸಾಮಾನ್ಯ ನಿಯಮಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ರೂಪಿಸುವ ಅಗತ್ಯವಿದೆ ಎಂದು ಜಾಗತಿಕ ನಾಯಕರು ಚರ್ಚಿಸಲಿದ್ದಾರೆ.

ಜಾಗತಿಕ ನಾಯಕರ ದಂಡು; ಭಾರತದ ಆಹ್ವಾನ ಏಕೆ ಮುಖ್ಯ?

ಜಿ7 ಒಕ್ಕೂಟದಲ್ಲಿ ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯರಾಗಿದ್ದಾರೆ. ಈ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಹಲವರು ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಜಿ7 ಸದಸ್ಯರಲ್ಲದಿದ್ದರೂ ಭಾರತದ ಪ್ರಧಾನಿ ನರೇಂದ್ರ ಮೋದಿ, ಬ್ರೆಜಿಲ್ ಅಧ್ಯಕ್ಷ ಲುಲಾ ಡಾ ಸಿಲ್ವಾ, ಈಜಿಪ್ಟ್ ಅಧ್ಯಕ್ಷ ಸಿಸಿ, ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ-ಮ್ಯುಂಗ್ ಮತ್ತು ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯಾಗಿ ಮತ್ತು ‘ಗ್ಲೋಬಲ್ ಸೌತ್’ (ಅಭಿವೃದ್ಧಿಶೀಲ ರಾಷ್ಟ್ರಗಳು) ಧ್ವನಿಯಾಗಿ ಭಾರತ ಹೊರಹೊಮ್ಮಿದೆ. ತಂತ್ರಜ್ಞಾನ ನಿಯಂತ್ರಣ, ಹವಾಮಾನ ವೈಪರೀತ್ಯ ಮತ್ತು ಜಾಗತಿಕ ಭದ್ರತೆಯ ಚರ್ಚೆಗಳಲ್ಲಿ ಭಾರತ ಈಗ ಅತ್ಯಂತ ಪ್ರಮುಖ ಪಾಲುದಾರನಾಗಿದೆ. ಪಾಶ್ಚಿಮಾತ್ಯ ದೇಶಗಳ ಹಿಡಿತದಲ್ಲಿದ್ದ ಇಂತಹ ಉನ್ನತ ವೇದಿಕೆಗಳಲ್ಲಿ ಭಾರತದ ಸಕ್ರಿಯ ಉಪಸ್ಥಿತಿಯು, ಜಗತ್ತು ಈಗ ಬಹುಧ್ರುವೀಯ ವ್ಯವಸ್ಥೆಯತ್ತ ಸಾಗುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net