ಫಿಫಾ ವಿಶ್ವಕಪ್ 2026: ಮೆಸ್ಸಿ-ಎಂಬಾಪ್ಪೆ ಅಬ್ಬರದ ದಿನವೇ ಕ್ರಿಸ್ಟಿಯಾನೋಗೆ ನಿರಾಸೆ!; ಕಾಂಗೋ ಎದುರು ಪೋರ್ಚುಗಲ್ ಪಂದ್ಯ 1-1 ರಿಂದ ಡ್ರಾ! PortugalVsDRCongo

ಫಿಫಾ ವಿಶ್ವಕಪ್ 2026: ಮೆಸ್ಸಿ-ಎಂಬಾಪ್ಪೆ ಅಬ್ಬರದ ದಿನವೇ ಕ್ರಿಸ್ಟಿಯಾನೋಗೆ ನಿರಾಸೆ!; ಕಾಂಗೋ ಎದುರು ಪೋರ್ಚುಗಲ್ ಪಂದ್ಯ 1-1 ರಿಂದ ಡ್ರಾ!
ಫಿಫಾ ವಿಶ್ವಕಪ್ 2026: ಮೆಸ್ಸಿ-ಎಂಬಾಪ್ಪೆ ಅಬ್ಬರದ ದಿನವೇ ಕ್ರಿಸ್ಟಿಯಾನೋಗೆ ನಿರಾಸೆ!; ಕಾಂಗೋ ಎದುರು ಪೋರ್ಚುಗಲ್ ಪಂದ್ಯ 1-1 ರಿಂದ ಡ್ರಾ!
Published on
ಹೂಸ್ಟನ್: ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಬಲಿಷ್ಠ ಪೋರ್ಚುಗಲ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಅಮೆರಿಕದ ಹೂಸ್ಟನ್‌ನಲ್ಲಿ ನಡೆದ ಗ್ರೂಪ್ K ನ ತೀವ್ರ ಹಣಾಹಣಿಯ ಆರಂಭಿಕ ಪಂದ್ಯದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ತಂಡವು ಪೋರ್ಚುಗಲ್‌ಗೆ(PortugalVsDRCongo) 1-1 ಗೋಲುಗಳ ಸಮಬಲದ ಶಾಕ್ ನೀಡಿದೆ. ಇದರೊಂದಿಗೆ ಆರನೇ ವಿಶ್ವಕಪ್‌ನಲ್ಲಿ ಗೋಲು ಗಳಿಸಿ ಹೊಸ ಇತಿಹಾಸ ಬರೆಯುವ ಪೋರ್ಚುಗಲ್ ನಾಯಕ, 41 ವರ್ಷದ ಜಾಗತಿಕ ಫುಟ್‌ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಕನಸು ಸದ್ಯಕ್ಕೆ ಬಾಕಿಯಾಗಿದೆ.
ಬುಧವಾರದ ದಿನ ವಿಶ್ವ ಫುಟ್‌ಬಾಲ್‌ನ ಇತರ ದಿಗ್ಗಜರ ಪಾಲಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಿತ್ತು. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ತಮ್ಮ 200ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭರ್ಜರಿ ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದರೆ, ಫ್ರಾನ್ಸ್‌ನ ಕಿಲಿಯನ್ ಎಂಬಾಪ್ಪೆ ಎರಡು ಗೋಲು ಗಳಿಸಿ ತಮ್ಮ ದೇಶದ ಸಾರ್ವಕಾಲಿಕ ಗರಿಷ್ಠ ಗೋಲು ಸರದಾರ ಎನಿಸಿಕೊಂಡರು. ನಾರ್ವೆಯ ಸ್ಟಾರ್ ಆಟಗಾರ ಎರ್ಲಿಂಗ್ ಹಾಲ್ಯಾಂಡ್ ಕೂಡ ತಮ್ಮ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಎರಡು ಗೋಲು ಸಿಡಿಸಿ ಅಬ್ಬರಿಸಿದರು. ಆದರೆ, ಇವೆಲ್ಲದರ ನಡುವೆ ಕ್ರಿಸ್ಟಿಯಾನೋ ರೊನಾಲ್ಡೊ ಮಾತ್ರ ಮೈದಾನದಲ್ಲಿ ಗೋಲಿಗಾಗಿ ತೀವ್ರ ಹೋರಾಟ ನಡೆಸಿ ನಿರಾಸೆಯಿಂದ ಕೈಚೆಲ್ಲಬೇಕಾಯಿತು.

ಆರಂಭಿಕ ಮುನ್ನಡೆ ಕಾಯ್ದುಕೊಳ್ಳದ ಪೋರ್ಚುಗಲ್

ಪಂದ್ಯದ ಆರಂಭ ಪೋರ್ಚುಗಲ್ ಪಾಲಿಗೆ ಅತ್ಯಂತ ಆಶಾದಾಯಕವಾಗಿತ್ತು. ಪಂದ್ಯ ಆರಂಭವಾದ ಕೇವಲ 6ನೇ ನಿಮಿಷದಲ್ಲೇ ಪೆಡ್ರೊ ನೆಟೊ ನೀಡಿದ ಅತ್ಯಾಕರ್ಷಕ ಕ್ರಾಸ್ ಪಾಸ್ ಅನ್ನು ಬಳಸಿಕೊಂಡ ಯುವ ಆಟಗಾರ ಜೊವಾವೊ ನೆವೆಸ್ ಅತ್ಯಂತ ಚಾಣಾಕ್ಷ ಹೆಡರ್ ಮೂಲಕ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಈ ವೇಗದ ಆಟವನ್ನು ನೋಡಿದ ಅಭಿಮಾನಿಗಳು ಪೋರ್ಚುಗಲ್ ಸುಲಭ ಜಯ ಗಳಿಸಲಿದೆ ಎಂದೇ ಭಾವಿಸಿದ್ದರು.
ಆದರೆ, ಈ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಮೊದಲಾರ್ಧ ಮುಗಿಯುವ ಮುನ್ನವೇ ಕಾಂಗೋ ತಂಡದ ಯೋನೆ ವಿಸ್ಸಾ ಅವರು ಪೋರ್ಚುಗಲ್ ರಕ್ಷಣಾ ಕೋಟೆಯನ್ನು ಭೇದಿಸಿ ಆಕರ್ಷಕ ಗೋಲು ಬಾರಿಸುವ ಮೂಲಕ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು. ಆ ನಂತರ ಪೋರ್ಚುಗಲ್ ತಂಡದ ಆಟ ನಿಧಾನಗತಿಯಿಂದ ಕೂಡಿತ್ತು ಮತ್ತು ಆಟಗಾರರಲ್ಲಿ ಕಲ್ಪನಾಶಕ್ತಿಯ ಕೊರತೆ ಎದ್ದುಕಾಣುತ್ತಿತ್ತು.

ವಿಫಲವಾದ ಸ್ಟಾರ್ ಮಿಡ್‌ಫೀಲ್ಡ್ ತಂತ್ರ

ಪೋರ್ಚುಗಲ್ ತಂಡವು ಈ ಬಾರಿ ವಿಶ್ವಕಪ್‌ನಲ್ಲೇ ಅತ್ಯಂತ ಬಲಿಷ್ಠ ಮತ್ತು ತಾಂತ್ರಿಕವಾಗಿ ಶ್ರೀಮಂತವಾಗಿರುವ ಮಿಡ್‌ಫೀಲ್ಡ್ ಪಡೆಯನ್ನು ಹೊಂದಿದೆ. ಬ್ರೂನೋ ಫೆರ್ನಾಂಡಿಸ್, ಬರ್ನಾರ್ಡೊ ಸಿಲ್ವಾ, ವಿಟಿನ್ಹಾ ಮತ್ತು ಜೊವಾವೊ ನೆವೆಸ್ ಅವರಂತಹ ಸ್ಟಾರ್ ಆಟಗಾರರಿದ್ದರೂ ಕಾಂಗೋ ತಂಡದ ರಕ್ಷಣಾತ್ಮಕ ಆಟವನ್ನು ಮುರಿಯಲು ಅವರಿಂದ ಸಾಧ್ಯವಾಗಲಿಲ್ಲ.
ಪ್ರೀಮಿಯರ್ ಲೀಗ್‌ನ ಅತ್ಯುತ್ತಮ ಆಟಗಾರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಬ್ರೂನೋ ಫೆರ್ನಾಂಡಿಸ್ ಇಡೀ ಪಂದ್ಯದಲ್ಲಿ ತಮ್ಮ ಎಂದಿನ ಆಕ್ರಮಣಕಾರಿ ಪಾಸ್‌ಗಳನ್ನು ನೀಡಲು ತೀವ್ರವಾಗಿ ಪರದಾಡಿದರು. ಬರ್ನಾರ್ಡೊ ಸಿಲ್ವಾ ಕೂಡ ಮೈದಾನದಲ್ಲಿದ್ದರೂ ಯಾವುದೇ ಮ್ಯಾಜಿಕ್ ಮಾಡಲು ವಿಫಲರಾದರು. ಚೆಂಡು ಪೋರ್ಚುಗಲ್ ಆಟಗಾರರ ಬಳಿಯೇ ಹೆಚ್ಚು ಸಮಯ ಇದ್ದರೂ, ಅದನ್ನು ಗೋಲು ಪೆಟ್ಟಿಗೆಯೊಳಗೆ ತಲುಪಿಸುವ ನಿಖರ ಪಾಸ್‌ಗಳು ಬರಲಿಲ್ಲ.

ಒಂಟಿಯಾದ ರೊನಾಲ್ಡೊ; ಹೆಚ್ಚಿದ ವಯಸ್ಸಿನ ಆತಂಕ

ಮಿಡ್‌ಫೀಲ್ಡ್ ಆಟಗಾರರಿಂದ ಸೂಕ್ತ ಬೆಂಬಲ ಸಿಗದ ಕಾರಣ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದ ಮುಂಭಾಗದಲ್ಲಿ ಸಂಪೂರ್ಣವಾಗಿ ಒಂಟಿಯಾದರು. ಎದುರಾಳಿ ತಂಡದ ಇಬ್ಬರು ಡಿಫೆಂಡರ್‌ಗಳ ಮಧ್ಯೆ ಸಿಲುಕಿದ್ದ ರೊನಾಲ್ಡೊ ಅವರಿಗೆ ಚೆಂಡನ್ನು ಪಾಸ್ ಮಾಡುವವರೇ ಇಲ್ಲದಂತಾಯಿತು. ಯೂರೋ 2024 ರಲ್ಲೂ ಗೋಲು ಗಳಿಸಲು ವಿಫಲವಾಗಿದ್ದ ರೊನಾಲ್ಡೊ, ಈಗ ಸತತ ಎರಡನೇ ಪ್ರಮುಖ ಟೂರ್ನಿಯಲ್ಲಿ ಗೋಲಿನ ಬರ ಎದುರಿಸುತ್ತಿದ್ದಾರೆ.
ಪಂದ್ಯದ ಕೊನೆಯ ಕ್ಷಣಗಳಲ್ಲಿ ಪೋರ್ಚುಗಲ್ ಪಂದ್ಯವನ್ನು ಗೆಲ್ಲುವ ಜಾಗ್ರತೆ ವಹಿಸುವ ಬದಲು ನಿಯಂತ್ರಣ ಕಳೆದುಕೊಂಡಿತು. ಕಾಂಗೋ ತಂಡವು ಪೋರ್ಚುಗಲ್‌ಗೆ ಪ್ರಬಲ ಕೌಂಟರ್ ಅಟ್ಯಾಕ್ ಮೂಲಕ ಹಲವು ಬಾರಿ ನಡುಕ ಹುಟ್ಟಿಸಿತು. ಪಂದ್ಯದ ಮುಕ್ತಾಯದ ಸೀಟಿ ಮೊಳಗಿದಾಗ ರೊನಾಲ್ಡೊ ಕಣ್ಣೀರು ಹಾಕುತ್ತಾ ಮೈದಾನ ಬಿಟ್ಟ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶ್ವಕಪ್ ಗೆಲ್ಲುವ ಕನಸು ಹೊತ್ತಿರುವ ಪೋರ್ಚುಗಲ್‌ಗೆ ಈ ಪಂದ್ಯ ಒಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net