ಹೊರ್ಮುಜ್​ನಲ್ಲಿ ಟೋಲ್ ವಸೂಲಿ ಸುಳ್ಳು ಸುದ್ದಿ: ಇರಾನ್‌ಗೆ ಡೊನಾಲ್ಡ್ ಟ್ರಂಪ್ ಖಡಕ್ ವಾರ್ನಿಂಗ್; ಮಾತುಕತೆ ರದ್ದು ಭೀತಿ! Donald Trump

ಹೊರ್ಮುಜ್​ನಲ್ಲಿ ಟೋಲ್ ವಸೂಲಿ ಸುಳ್ಳು ಸುದ್ದಿ: ಇರಾನ್‌ಗೆ ಡೊನಾಲ್ಡ್ ಟ್ರಂಪ್ ಖಡಕ್ ವಾರ್ನಿಂಗ್; ಮಾತುಕತೆ ರದ್ದು ಭೀತಿ!
ಹೊರ್ಮುಜ್​ನಲ್ಲಿ ಟೋಲ್ ವಸೂಲಿ ಸುಳ್ಳು ಸುದ್ದಿ: ಇರಾನ್‌ಗೆ ಡೊನಾಲ್ಡ್ ಟ್ರಂಪ್ ಖಡಕ್ ವಾರ್ನಿಂಗ್; ಮಾತುಕತೆ ರದ್ದು ಭೀತಿ!
Published on
ನ್ಯೂಯಾರ್ಕ್​: ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಂದ ಇರಾನ್ ಸರ್ಕಾರವು ಯಾವುದೇ ರೀತಿಯ ತೆರಿಗೆ ಅಥವಾ ಸುಂಕ ವಸೂಲಿ ಮಾಡುತ್ತಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಸಂಪೂರ್ಣ ಸುಳ್ಳು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಸ್ಪಷ್ಟಪಡಿಸಿದ್ದಾರೆ. ಆದರೆ, ಇದೇ ವೇಳೆ ಇರಾನ್ ನೀಡಿರುವ ಈ ಮಾಹಿತಿ ಒಂದು ವೇಳೆ ಸುಳ್ಳೆಂದು ಸಾಬೀತಾದರೆ, ಪ್ರಸ್ತುತ ನಡೆಯುತ್ತಿರುವ ಎಲ್ಲಾ ಶಾಂತಿ ಮಾತುಕತೆಗಳನ್ನು ತಕ್ಷಣವೇ ರದ್ದುಗೊಳಿಸುವುದಾಗಿ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜತೆಗೆ, ಅಮೆರಿಕದ ನಿಯಂತ್ರಣದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್‌ನ ಶತಕೋಟಿ ಡಾಲರ್ ಹಣವನ್ನು ನೇರವಾಗಿ ಇರಾನ್‌ಗೆ ಬಿಡುಗಡೆ ಮಾಡುವುದಿಲ್ಲ. ಬದಲಿಗೆ ಆ ಹಣದಿಂದ ಅಮೆರಿಕದ ರೈತರಿಂದಲೇ ಆಹಾರ ಧಾನ್ಯಗಳನ್ನು ಖರೀದಿಸಿ, ಇರಾನ್ ಜನತೆಗೆ ಕಳುಹಿಸಿಕೊಡಲಾಗುವುದು ಎಂಬ ಮಹತ್ವದ ಯೋಜನೆಯನ್ನು ಟ್ರಂಪ್ ಬಿಚ್ಚಿಟ್ಟಿದ್ದಾರೆ.

ಸುಳ್ಳು ಮಾಹಿತಿ ನೀಡಿದ್ರೆ ಮಾತುಕತೆ ಬಂದ್ - ಟ್ರಂಪ್ ಗುಡುಗು

ಈ ಬಗ್ಗೆ ಟ್ರುತ್ ಸೋಶಿಯಲ್​ನಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಹಾಕಿರುವ ಡೊನಾಲ್ಡ್ ಟ್ರಂಪ್, ಕೆಲವು ಮಾಧ್ಯಮಗಳು ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗುಗಳಿಂದ ಟೋಲ್ ವಸೂಲಿ ಮಾಡುತ್ತಿದೆ ಎಂದು ಸುಳ್ಳು ಸುದ್ದಿ ಹರಡುತ್ತಿವೆ. ಆದರೆ, ಜಲಸಂಧಿಯಲ್ಲಿ ಚಲಿಸುವ ಯಾವುದೇ ಹಡಗುಗಳಿಂದ ಯಾವುದೇ ರೀತಿಯ ಟೋಲ್, ವಿಮಾ ವೆಚ್ಚ ಅಥವಾ ಇನ್ಯಾವುದೇ ಶುಲ್ಕವನ್ನು ಇರಾನ್ ಪಡೆಯುತ್ತಿಲ್ಲ ಎಂದು ಸ್ವತಃ ಇರಾನ್ ಸರ್ಕಾರವೇ ಅಮೆರಿಕಕ್ಕೆ ಲಿಖಿತ ಭರವಸೆ ನೀಡಿದೆ. ಒಂದು ವೇಳೆ ಇರಾನ್ ನೀಡಿರುವ ಈ ಮಾಹಿತಿ ಸುಳ್ಳಾಗಿದ್ದರೆ, ಉಭಯ ದೇಶಗಳ ನಡುವಿನ ಶಾಂತಿ ಮಾತುಕತೆಗಳು ಕ್ಷಣಾರ್ಧದಲ್ಲಿ ಕೊನೆಗೊಳ್ಳಲಿವೆ ಎಂದು ಎಚ್ಚರಿಸಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಅಮೆರಿಕದ ಸೆಂಟ್ರಲ್ ಕಮಾಂಡ್ ಇದನ್ನು ನಿರಾಕರಿಸಿ, ಜಲಸಂಧಿ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿತ್ತು. ಸೋಮವಾರ ಒಂದೇ ದಿನ ಬರೋಬ್ಬರಿ 1.9 ಕೋಟಿ (19 ಮಿಲಿಯನ್) ಬ್ಯಾರೆಲ್ ತೈಲ ಈ ಜಲಸಂಧಿಯ ಮೂಲಕ ಹಾದುಹೋಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ಇದರ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಣನೀಯವಾಗಿ ಕುಸಿಯುತ್ತಿದ್ದು, ಜಗತ್ತು ಈಗ ಸುರಕ್ಷಿತವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್‌ನ ಹಣ ಅಮೆರಿಕದ ರೈತರ ಪಾಲು!

ಇರಾನ್‌ನ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಹಣವನ್ನು ಅಮೆರಿಕ ಬಿಡುಗಡೆ ಮಾಡಿದೆ ಎಂಬ ವರದಿಗಳನ್ನು ಟ್ರಂಪ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ನಾವು ಇರಾನ್‌ಗೆ ಯಾವುದೇ ನಗದು ಹಣವನ್ನು ಕೈಗೆ ನೀಡುತ್ತಿಲ್ಲ. ನಮ್ಮ ಸಂಪೂರ್ಣ ನಿಯಂತ್ರಣದಲ್ಲಿರುವ ಇರಾನ್‌ನ ಹಣವನ್ನು ನಾವು ನಮ್ಮ ದೇಶದ ರೈತರು ಹಾಗೂ ಜಾನುವಾರು ಸಾಕಣೆದಾರರಿಗೆ ಬಿಡುಗಡೆ ಮಾಡಲಿದ್ದೇವೆ. ಆ ಹಣದ ಮೂಲಕ ಅಮೆರಿಕದ ರೈತರಿಂದ ಜೋಳ, ಗೋಧಿ ಮತ್ತು ಸೋಯಾಬೀನ್ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಖರೀದಿಸಲಾಗುವುದು. ಪ್ರಸ್ತುತ ಇರಾನ್‌ನಲ್ಲಿ ಆಹಾರದ ತೀವ್ರ ಕೊರತೆಯಿದ್ದು, ನಾವು ಆ ದೇಶದ ಜನರಿಗಾಗಿ ಕೇವಲ ಅಮೆರಿಕದಿಂದಲೇ ಆಹಾರವನ್ನು ಖರೀದಿಸಿ ಪೂರೈಸಲಿದ್ದೇವೆ ಎಂದು ಟ್ರಂಪ್ ವಿವರಿಸಿದ್ದಾರೆ.

ಇರಾನ್ ಸಂಸತ್ ಸ್ಪೀಕರ್ ಹೇಳಿದ್ದೇನು?

ಆದರೆ, ಇರಾನ್‌ನ ಪ್ರಮುಖ ಸಂಧಾನಕಾರ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಲಿಬಾಫ್ ನೀಡಿರುವ ಹೇಳಿಕೆ ಬೇರೆಯೇ ಆಗಿದೆ. ಅಮೆರಿಕದ ನಿಯಂತ್ರಣದಲ್ಲಿ ಫ್ರೀಜ್ ಆಗಿರುವ ಇರಾನ್‌ನ ನಿಧಿಯಿಂದ ತಲಾ 6 ಶತಕೋಟಿ (6 ಬಿಲಿಯನ್) ಡಾಲರ್‌ಗಳ ಎರಡು ಕಂತುಗಳನ್ನು ಬಿಡುಗಡೆ ಮಾಡಲು ಅಮೆರಿಕ ಒಪ್ಪಿಕೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.
ಕಳೆದ ವಾರ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟ ತಿಳಿವಳಿಕೆ ಪತ್ರದ (MoU) ಅನ್ವಯ, ಅಮೆರಿಕವು ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಮುಂದಿನ 60 ದಿನಗಳ ಅವಧಿಗೆ (ಆಗಸ್ಟ್ 21 ರವರೆಗೆ) ತಾತ್ಕಾಲಿಕವಾಗಿ ಸಡಿಲಗೊಳಿಸಿದೆ. ಇದರಿಂದಾಗಿ ಇರಾನ್ ಜಾಗತಿಕವಾಗಿ ತೈಲ ಮತ್ತು ಪೆಟ್ರೋಕೆಮಿಕಲ್ಸ್ ಮಾರಾಟ ಮಾಡಲು ಅವಕಾಶ ಸಿಕ್ಕಿದೆ. ಈ ಬೆನ್ನಲ್ಲೇ ಟ್ರಂಪ್ ಅವರ ಈ ಕಟ್ಟುನಿಟ್ಟಿನ ಆರ್ಥಿಕ ನಡೆ ಮಧ್ಯಪ್ರಾಚ್ಯದ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net