ಇರಾನ್ ಪರಮಾಣು ಕೇಂದ್ರಗಳ ಮೇಲೆ ವಿಶ್ವಸಂಸ್ಥೆ ಕಣ್ಣು: ಶಾಂತಿ ಒಪ್ಪಂದ ಬೆನ್ನಲ್ಲೇ ಐಎಇಎ ಮುಖ್ಯಸ್ಥ ಹೇಳಿದ್ದೇನು! Nuclear Enrichment Facilities

ಇರಾನ್ ಪರಮಾಣು ಕೇಂದ್ರಗಳ ಮೇಲೆ ವಿಶ್ವಸಂಸ್ಥೆ ಕಣ್ಣು: ಅಮೆರಿಕ-ಇರಾನ್ ಒಪ್ಪಂದ ಬೆನ್ನಲ್ಲೇ ಐಎಇಎ ಮುಖ್ಯಸ್ಥ ಹೇಳಿದ್ದೇನು!
ಇರಾನ್ ಪರಮಾಣು ಕೇಂದ್ರಗಳ ಮೇಲೆ ವಿಶ್ವಸಂಸ್ಥೆ ಕಣ್ಣು: ಅಮೆರಿಕ-ಇರಾನ್ ಒಪ್ಪಂದ ಬೆನ್ನಲ್ಲೇ ಐಎಇಎ ಮುಖ್ಯಸ್ಥ ಹೇಳಿದ್ದೇನು!
Published on
ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವೆ ಇತ್ತೀಚೆಗಷ್ಟೇ ಏರ್ಪಟ್ಟಿರುವ ಮಧ್ಯಂತರ ಶಾಂತಿ ಒಪ್ಪಂದದ ಬೆನ್ನಲ್ಲೇ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಇರಾನ್‌ನ ಪ್ರಮುಖ ಪರಮಾಣು ಇಂಧನ ವರ್ಧನೆ ಕೇಂದ್ರಗಳು (Nuclear Enrichment Facilities) ಶೀಘ್ರದಲ್ಲೇ ಮತ್ತೊಮ್ಮೆ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಲಿವೆ ಎಂದು ಸಂಸ್ಥೆಯ ಮುಖ್ಯಸ್ಥ ರಾಫೆಲ್ ಗ್ರೊಸ್ಸಿ ದೊಡ್ಡ ಸುಳಿವು ನೀಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಪರಮಾಣು ಬಿಕ್ಕಟ್ಟು ತಿಳಿಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳ ಅಧ್ಯಕ್ಷರು ಸಹಿ ಮಾಡಿರುವ ಒಪ್ಪಂದದ ಅನ್ವಯ, ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಇರಾನ್‌ನ ಪರಮಾಣು ಸ್ಥಾವರಗಳಿಗೆ ಭೇಟಿ ನೀಡುವುದು ಖಚಿತ ಎಂದು ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.

"ರಾಜಕೀಯ ಹೇಳಿಕೆ ಏನೇ ಇರಲಿ, ಒಪ್ಪಂದದಂತೆ ತಪಾಸಣೆ ಖಚಿತ" - ಗ್ರೊಸ್ಸಿ

ಜಪಾನ್‌ನ ಫುಕುಶಿಮಾ ದೈಚಿ ಪರಮಾಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ IAEA ಮಹಾನಿರ್ದೇಶಕ ರಾಫೆಲ್ ಮರಿಯಾನೊ ಗ್ರೊಸ್ಸಿ, ಅಮೆರಿಕ ಮತ್ತು ಇರಾನ್ ನಡುವಿನ ಸಾರ್ವಜನಿಕ ಹೇಳಿಕೆಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಒಪ್ಪಂದದ ಲಿಖಿತ ನಿಯಮಗಳು ಬದಲಾಗುವುದಿಲ್ಲ ಎಂದಿದ್ದಾರೆ.
ವಾಷಿಂಗ್ಟನ್ ಮತ್ತು ಟೆಹ್ರಾನ್ ನೀಡುತ್ತಿರುವ ರಾಜಕೀಯ ಹೇಳಿಕೆಗಳು ಆಯಾ ದೇಶಗಳ ರಾಜಕಾರಣದ ಭಾಗ ಇರಬಹುದು. ಆದರೆ ನಾನು ನಿಮಗೆ ನೆನಪಿಸಲು ಬಯಸುವುದೇನೆಂದರೆ, ಉಭಯ ದೇಶಗಳ ಅಧ್ಯಕ್ಷರು ಅಧಿಕೃತ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದಲ್ಲಿ ಇರಾನ್‌ನ ಪರಮಾಣು ಚಟುವಟಿಕೆಗಳು ಮತ್ತು ವಸ್ತುಗಳನ್ನು ಐಎಇಎ ಸಂಪೂರ್ಣವಾಗಿ ಮೇಲ್ವಿಚಾರಣೆ ಮಾಡಲಿದೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಆದ್ದರಿಂದ ನಮ್ಮ ಅಧಿಕಾರಿಗಳು ತಪಾಸಣೆ ನಡೆಸುವುದು ಗ್ಯಾರಂಟಿ. ಇದು ನಾಡಿದ್ದು ನಡೆಯುತ್ತದೋ, ಒಂದು ವಾರದಲ್ಲೋ ಅಥವಾ ಹತ್ತು ದಿನಗಳಲ್ಲೋ ಎಂಬುದು ಮುಖ್ಯವಲ್ಲ, ಆದರೆ ತಪಾಸಣೆ ಖಂಡಿತ ನಡೆಯಲಿದೆ ಎಂದು ಗ್ರೊಸ್ಸಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಪಾಸಣೆ ಏಕೆ ಮುಖ್ಯ? ಯುರೇನಿಯಂ ತಳಮಳ!

2025ರಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ನಡೆದ 12 ದಿನಗಳ ಭೀಕರ ಯುದ್ಧದ ಬಳಿಕ, ಇರಾನ್ ತನ್ನ ಪ್ರಮುಖ ಪರಮಾಣು ಸ್ಥಾವರಗಳಿಗೆ ವಿಶ್ವಸಂಸ್ಥೆಯ ಅಧಿಕಾರಿಗಳ ಪ್ರವೇಶವನ್ನು ನಿರ್ಬಂಧಿಸಿತ್ತು. ಇರಾನ್ ಸದ್ಯ ಅಣುಬಾಂಬ್ ತಯಾರಿಕೆಗೆ ಬಳಸಬಹುದಾದ ಶೇ. 60 ರಷ್ಟು ಶುದ್ಧತೆಯುಳ್ಳ ಯುರೇನಿಯಂ ಅನ್ನು ದೊಡ್ಡ ಮಟ್ಟದಲ್ಲಿ ಸಂಗ್ರಹಿಸಿಟ್ಟುಕೊಂಡಿದೆ ಎಂದು ಜಾಗತಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ತನ್ನ ಪರಮಾಣು ಯೋಜನೆ ಕೇವಲ ಶಾಂತಿಯುತ ಉದ್ದೇಶಗಳಿಗಾಗಿ (ವಿದ್ಯುತ್ ಉತ್ಪಾದನೆಗೆ) ಇದೆ ಎಂದು ಇರಾನ್ ವಾದಿಸುತ್ತಿದ್ದರೂ, ಅಣ್ವಸ್ತ್ರ ರಹಿತ ದೇಶಗಳ ಪೈಕಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಯುರೇನಿಯಂ ಶುದ್ಧೀಕರಿಸುತ್ತಿರುವ ಏಕೈಕ ದೇಶ ಇರಾನ್ ಆಗಿದೆ. ಪ್ರಸ್ತುತ ಒಪ್ಪಂದದ ಪ್ರಕಾರ, ಇರಾನ್ ತನ್ನಲ್ಲಿರುವ ಯುರೇನಿಯಂ ಸಾಂದ್ರತೆಯನ್ನು ಕಡಿಮೆ ಮಾಡಬೇಕಿದೆ. ಇದನ್ನು ಖಚಿತಪಡಿಸಿಕೊಳ್ಳಲು ವಿಶ್ವಸಂಸ್ಥೆಯ ತಪಾಸಣೆ ಅತ್ಯಂತ ಅಗತ್ಯವಾಗಿದೆ.

ಒಪ್ಪಂದದ ಒಳಸುಳಿವು ಮತ್ತು ರಾಜತಾಂತ್ರಿಕ ಕಸರತ್ತು

ಕಳೆದ ವಾರ ನಡೆದ ಈ ಮಧ್ಯಂತರ ಒಪ್ಪಂದದ ಪ್ರಕಾರ, ಇರಾನ್ ತನ್ನ ಯುರೇನಿಯಂ ದಾಸ್ತಾನನ್ನು ಕರಗಿಸಲು ಒಪ್ಪಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ಇರಾನ್ ಮೇಲಿನ ತೈಲ ರಫ್ತು ನಿರ್ಬಂಧಗಳನ್ನು ಸಡಿಲಗೊಳಿಸಲು ಸಮ್ಮತಿಸಿದೆ. ಮುಂದಿನ 60 ದಿನಗಳಲ್ಲಿ ಉಭಯ ದೇಶಗಳು ತಮ್ಮ ದೀರ್ಘಕಾಲದ ವಿವಾದಗಳನ್ನು ಬಗೆಹರಿಸಿಕೊಳ್ಳಲು ಗಡುವನ್ನು ನಿಗದಿಪಡಿಸಿಕೊಂಡಿವೆ.
ಆದರೆ, ಈ ಪ್ರಗತಿಯ ನಡುವೆಯೂ ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಘೇಯ್, ಅಮೆರಿಕ ದಾಳಿ ನಡೆಸಿದ್ದ ಪರಮಾಣು ಕೇಂದ್ರಗಳಿಗೆ ವಿಶ್ವಸಂಸ್ಥೆಯ ಅಧಿಕಾರಿಗಳು ಈಗಲೇ ಭೇಟಿ ನೀಡುತ್ತಿಲ್ಲ ಎಂದು ಹೇಳುವ ಮೂಲಕ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಈ ಗೊಂದಲಗಳ ನಡುವೆಯೇ, ಮುಂದಿನ ವಾರದ ಆರಂಭದಲ್ಲಿ ಸ್ವಿಟ್ಜರ್ಲೆಂಡ್‌ನ ಬಂಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ಅಮೆರಿಕ ಮತ್ತು ಇರಾನ್ ಅಧಿಕಾರಿಗಳ ನಡುವೆ ತಾಂತ್ರಿಕ ಮಟ್ಟದ ಮಹತ್ವದ ಮಾತುಕತೆಗಳು ಪುನರಾರಂಭಗೊಳ್ಳಲಿವೆ. ಈ ಶಾಂತಿ ಪ್ರಕ್ರಿಯೆಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದೆ.
ಮತ್ತೊಂದೆಡೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಯುಎಇ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅರಬ್ ರಾಷ್ಟ್ರಗಳೊಂದಿಗೆ ಮಾತುಕತೆ ಆರಂಭಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net