ವೈಯಕ್ತಿಕ ಲಾಭಕ್ಕಾಗಿ ಅನ್ಯಾಯ ಮಾಡ್ತಿದ್ದಾರೆ; ಪಾಕ್ ನ್ಯಾಯಾಧೀಶರ ವಿರುದ್ಧ ಮಾಜಿ ಪ್ರಧಾನಿ ಇಮ್ರಾಮ್ ಖಾನ್ ಆಕ್ರೋಶ | Imran Khan

ಇಮ್ರಾನ್ ಖಾನ್
ಇಮ್ರಾನ್ ಖಾನ್
Published on
ಕರಾಚಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ತಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬ್ಲ್ಯಾಕ್ ಮೇಲ್​ ಮಾಡಲು ತಮ್ಮ ಪತ್ನಿಯನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತಿದ್ದು, ನ್ಯಾಯಾಧೀಶರು ವೈಯಕ್ತಿಕ ಲಾಭಕ್ಕಾಗಿ ಅನ್ಯಾಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಇಮ್ರಾನ್ ಖಾನ್ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮತ್ತೊಂದೆಡೆ ಅವರ ಪತ್ನಿ ಬುಶ್ರಾ ಬೀಬಿ ಕೂಡ ಅದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆದರೆ ಅವರ ಚಿಕಿತ್ಸೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಕುಟುಂಬ ದೂರಿದೆ.
ಈ ಕುರಿತು ತಮ್ಮ ಪುತ್ರ ಖಾಸಿಮ್​ಗೆ ತಮ್ಮ ಮಾತುಗಳನ್ನು ತಿಳಿಸಿರುವ ಇಮ್ರಾನ್ ಖಾನ್, ಪಾಕಿಸ್ತಾನದ ನ್ಯಾಯಾಧೀಶರು ತಮ್ಮ ವೈಯಕ್ತಿಕ ಲಾಭಕ್ಕಾಗಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ನಾವು ಪದೇ ಪದೇ ನ್ಯಾಯಾಂಗವನ್ನು ಸಂಪರ್ಕಿಸುತ್ತಿದ್ದೇವೆ. ಆದರೂ ಅವರು ಅನ್ಯಾಯವಾಗಿ ವರ್ತಿಸುತ್ತಿದ್ದಾರೆ. ಅವರಿಗೆ ನನ್ನನ್ನು ನಿಗ್ರಹಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ನನ್ನ ಹೆಂಡತಿಯನ್ನು ತಡೆಯುವ ಮೂಲಕ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅವಳ ಚಿಕಿತ್ಸೆಯ ವಿಷಯದಲ್ಲಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜೈಲಿನಲ್ಲಿರುವ ಪತ್ನಿ ಬುಶ್ರಾ ಬೀಬಿಯವರನ್ನು ಅಧಿಕಾರಿಗಳು ಇಮ್ರಾನ್ ಖಾನ್ ಅವರಿಂದ ಸಂಪೂರ್ಣವಾಗಿ ದೂರವಿರಿಸಿದ್ದಾರೆ ಎನ್ನಲಾಗಿದೆ. ವಾರಕ್ಕೆ ಕೇವಲ 30 ನಿಮಿಷ ಮಾತ್ರ ಇಬ್ಬರು ಮಾತನಾಡಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net