

ನವದೆಹಲಿ: ಯುವ ಸಮುದಾಯವನ್ನು ಹೆಚ್ಚು ಆಕ್ರಮಿಸಿಕೊಂಡಿರುವ ಪ್ರಖ್ಯಾತ ಸಾಮಾಜಿಕ ಜಾಲತಾಣ ವೇದಿಕೆ ಇನ್‌ಸ್ಟಾಗ್ರಾಂ ಬಗ್ಗೆ ವಿಶ್ವದ ನಂಬರ್ ಒನ್ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ( Elon Musk ) ನೀಡಿರುವ ಹೇಳಿಕೆ ಇದೀಗ ಡಿಜಿಟಲ್ ಲೋಕದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಅಷ್ಟಕ್ಕೂ ಮಸ್ಕ್ ಹೇಳಿದ್ದೇನೆಂದರೆ, ಇನ್‌ಸ್ಟಾಗ್ರಾಂ ಕೇವಲ ಹುಡುಗಿಯರಿಗಾಗಿ ಇರುವ ಸೋಷಿಯಲ್ ಮೀಡಿಯಾ ಆ್ಯಪ್ ಅಂತೆ. ಇನ್‌ಸ್ಟಾಗ್ರಾಂ ಡಿಲೀಟ್ ಮಾಡುವ ತನ್ನ ನಿರ್ಧಾರದ ಬಗ್ಗೆ ಎಕ್ಸ್ (X) ಬಳಕೆದಾರ ಗೈಗರ್ ಕ್ಯಾಪಿಟಲ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ನಾನು ಅಧಿಕೃತವಾಗಿ ಇನ್‌ಸ್ಟಾಗ್ರಾಂ ಡಿಲೀಟ್ ಮಾಡಿದೆ. ಇದು ಮೂಲತಃ ಮಹಿಳೆಯರಿಗಾಗಿಯೇ ಇರುವ ಆ್ಯಪ್ ಮತ್ತು ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕ್ಯಾಪಿಟಲ್ ಪೋಸ್ಟ್ ಮಾಡಿದ್ದರು.
ಗೈಗರ್ ಕ್ಯಾಪಿಟಲ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್, "ಇನ್‌ಸ್ಟಾಗ್ರಾಂ ಕೇವಲ ಹುಡುಗಿಯರಿಗಾಗಿ ಎಂದು ಕಾಮೆಂಟ್ ಮಾಡಿದ್ದಾರೆ. ಮಸ್ಕ್ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಕೆದಾರರು ವಿಭಿನ್ನ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ.
ಇನ್‌ಸ್ಟಾಗ್ರಾಂ ಕುರಿತು ಮಸ್ಕ್ ಈ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಈ ವರ್ಷದ ಮೇ ತಿಂಗಳಲ್ಲೂ ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ಆನ್ಲೈನ್ ಟ್ರೆಂಡ್ಗಳ ಕುರಿತು ನಡೆದ ವೈರಲ್ ಚರ್ಚೆಯೊಂದಕ್ಕೆ ಪ್ರತಿಕ್ರಿಯಿಸುವಾಗ “ಇನ್‌ಸ್ಟಾಗ್ರಾಂ ಫಾರ್ ಗರ್ಲ್ಸ್” ಎಂದು ಹೇಳಿದ್ದರು.
ಜನರ ಆನ್ಲೈನ್ ಚಟುವಟಿಕೆಗಳು ಅವರ ಜೀವನದ ವಿವಿಧ ಹಂತಗಳನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬ ವಿಷಯದ ಕುರಿತು ಚರ್ಚೆ ನಡೆದಿತ್ತು. ಈ ವೇಳೆ ಇನ್ಸ್ಟಾಗ್ರಾಂನಲ್ಲಿ ‘ಥರ್ಸ್ಟ್ ಟ್ರಾಪ್ಸ್ ( ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಅಥವಾ ಹಂಚಿಕೊಳ್ಳುವಂತಹ ಆಕರ್ಷಕ, ಬಿಸಿಬಿಸಿ ಅಥವಾ ಪ್ರಚೋದನಕಾರಿ ಫೋಟೋಗಳು ಅಥವಾ ವಿಡಿಯೋಗಳು), ದಿನವಿಡೀ ಸ್ಟೋರಿಸ್ ಹಾಕುವುದು, ಮನೆಯಲ್ಲಿ ತಯಾರಿಸಿದ ಆಹಾರದ ಫೋಟೋಗಳನ್ನು ಹಂಚಿಕೊಳ್ಳುವುದು ಸೇರಿದಂತೆ ಹಲವು ಟ್ರೆಂಡ್ಗಳ ಕುರಿತು ಚರ್ಚಿಲಾಗಿತ್ತು.
ಇದೇ ಸಂದರ್ಭದಲ್ಲಿ ಮಸ್ಕ್ ಮತ್ತೊಂದು ಕಾಮೆಂಟ್ ಮಾಡುತ್ತಾ, ಪ್ರೌಢ ವಯಸ್ಸಿನ ಪುರುಷರು ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ಗಳನ್ನು ತಮಗೆ ಕಳುಹಿಸಿದಾಗ, ಅವರೇನು 'ಲಿಂಗ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೋ ಅಥವಾ ಏನೋ' ಎಂದು ತಮಗೆ ಆಶ್ಚರ್ಯವಾಗುತ್ತದೆ ಎಂದು ಮಸ್ಕ್ ಹೇಳಿದರು. ಮಸ್ಕ್ ಅವರ ಈ ಹೇಳಿಕೆಗಳು ಆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ಕೆಲ ಬಳಕೆದಾರರು ಅವರ ಕಾಮೆಂಟ್ಗಳನ್ನು ಲಿಂಗಭೇದದ ಮತ್ತು ಆಕ್ಷೇಪಾರ್ಹ ಹೇಳಿಕೆಗಳೆಂದು ಟೀಕಿಸಿದ್ದರು.
ಇದೀಗ ಇನ್‌ಸ್ಟಾಗ್ರಾಂ ಕುರಿತು ಮಸ್ಕ್ ಮಾಡಿರುವ ಹೊಸ ಕಾಮೆಂಟ್ ಮತ್ತೆ ವೈರಲ್ ಆಗಿದೆ. ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಓರ್ವ ಬಳಕೆದಾರ ನಿಮ್ಮ ಎಕ್ಸ್ (ಈ ಹಿಂದೆ ಟ್ವಿಟರ್) ಯಾರಿಗೆ? ಎಂದು ಪ್ರಶ್ನಿಸಿದರೆ, ಮತ್ತೊಬ್ಬರು ನಿಮ್ಮ ಎಕ್ಸ್ ಬಗ್ಗೆ ಮಾತನಾಡಿ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊರ್ವ ಬಳಕೆದಾರರು “ನಾನಿದನ್ನು ಒಪ್ಪುವುದಿಲ್ಲ, ಇನ್‌ಸ್ಟಾಗ್ರಾಂ ಎಲ್ಲಾ ಲಿಂಗದವರಿಗೂ ಸ್ವಾಗತಾರ್ಹ ವೇದಿಕೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಒಟ್ಟಿನಲ್ಲಿ, ಎಲಾನ್ ಮಸ್ಕ್ ಅವರ ‘ಇನ್‌ಸ್ಟಾಗ್ರಾಂ ಹುಡುಗಿಯರಿಗಷ್ಟೇ’ ಎಂಬ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಚರ್ಚೆಯ ಕಿಡಿ ಹೊತ್ತಿಸಿದೆ. ಈ ಬಗ್ಗೆ ನಿಮ್ಮೆ ಅಭಿಪ್ರಾಯ ಏನೆಂದು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್).