ಸರ್ಕಾರದ ವಿರುದ್ಧ ಕಾನೂನು ಸಮರ ಸಾರಿ ಗೆದ್ದ ದಿಟ್ಟ ಯುವತಿ: ಕಾಲೇಜಿನಲ್ಲಿ ತನಗಾದ ಅನ್ಯಾಯಕ್ಕೆ 4 ಲಕ್ಷ ಪರಿಹಾರ! Student

ಪ್ಲಸ್ ಟು ಮೌಲ್ಯಮಾಪನದಲ್ಲಿ ಉಂಟಾದ ದೋಷದಿಂದಾಗಿ ಆರಂಭದಲ್ಲಿ ಕೇವಲ 57 ಅಂಕಗಳನ್ನು ಪಡೆದಿದ್ದ ವಿದ್ಯಾರ್ಥಿನಿಗೆ, ಮರುಮೌಲ್ಯಮಾಪನದ ಬಳಿಕ ಬರೋಬ್ಬರಿ 80ಕ್ಕೆ 80 ಅಂಕಗಳು (A+) ಲಭಿಸಿವೆ.
Student
ವಿದ್ಯಾರ್ಥಿನಿ ಸ್ನೇಹಮೋಲ್ ಮಣಿ
Published on: 

ತಿರುವನಂತಪುರಂ : ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಕೇರಳದ ಮುವಾಟ್ಟುಪುಳದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ( Student ) ತನ್ನ ಉನ್ನತ ಶಿಕ್ಷಣದ ಕನಸು ಮತ್ತು ಬಯಸಿದ ವೃತ್ತಿಜೀವನವನ್ನು ಕಳೆದುಕೊಂಡಿರುವ ಮನಕಲಕುವ ಘಟನೆ ವರದಿಯಾಗಿದೆ.

ಪ್ಲಸ್ ಟು ಮೌಲ್ಯಮಾಪನದಲ್ಲಿ ಉಂಟಾದ ದೋಷದಿಂದಾಗಿ ಆರಂಭದಲ್ಲಿ ಕೇವಲ 57 ಅಂಕಗಳನ್ನು ಪಡೆದಿದ್ದ ವಿದ್ಯಾರ್ಥಿನಿಗೆ, ಮರುಮೌಲ್ಯಮಾಪನದ ಬಳಿಕ ಬರೋಬ್ಬರಿ 80ಕ್ಕೆ 80 ಅಂಕಗಳು (A+) ಲಭಿಸಿವೆ. ಆದರೆ, ಇಲಾಖೆಯ ಈ ಎಡವಟ್ಟಿನಿಂದಾಗಿ ಸಮಯಕ್ಕೆ ಸರಿಯಾಗಿ ಕಾಲೇಜು ಪ್ರವೇಶ ಸಿಗದೆ ಸಂಕಷ್ಟಕ್ಕೀಡಾದ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳು ನ್ಯಾಯಾಲಯದ ವೆಚ್ಚ ಸೇರಿದಂತೆ ಒಟ್ಟು 4 ಲಕ್ಷ ರೂಪಾಯಿ ಪರಿಹಾರವನ್ನು ಪಾವತಿಸಬೇಕೆಂದು ಮುವಾಟ್ಟುಪುಳ ಮುನ್ಸಿಫ್ ಕೋರ್ಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

Also Read
ಮಗುವಿಗೆ ಜನ್ಮ ಕೊಟ್ಟ ಬೆನ್ನಲ್ಲೇ ತಾಯಿ ಹೃದಯಾಘಾತದಿಂದ ಸಾವು: ತನ್ನ ಕಂದನನ್ನು ಮುದ್ದಾಡುವ ಮುನ್ನವೇ ಕ್ರೂರತ್ವ ಮೆರೆದ ವಿಧಿ! Indian woman
Student

ತ್ರಿಕ್ಕಲಥೂರಿನ ಪಾನಿಕೋಡಿ ನಿವಾಸಿ ಸ್ನೇಹಮೋಲ್ ಮಣಿ ಎಂಬ ವಿದ್ಯಾರ್ಥಿನಿಯೇ ಈ ಕಾನೂನು ಹೋರಾಟ ನಡೆಸಿದ ದಿಟ್ಟ ಯುವತಿ. ಈಕೆ ಮಾರ್ಚ್ 2019 ರಲ್ಲಿ ಮುವಾಟ್ಟುಪುಳ ಎಸ್‌ಎನ್‌ಡಿಪಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಟು ಪರೀಕ್ಷೆ ಬರೆದಿದ್ದು, ಅರ್ಥಶಾಸ್ತ್ರ ವಿಷಯವನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲೂ 'ಎ+' ಗ್ರೇಡ್ ಗಳಿಸಿದ್ದಳು. ಆದರೆ ಅರ್ಥಶಾಸ್ತ್ರದಲ್ಲಿ ಮಾತ್ರ ಕೇವಲ 57 ಅಂಕಗಳನ್ನು ನೀಡಲಾಗಿತ್ತು. ತನ್ನ ಅಂಕಗಳ ಬಗ್ಗೆ ಅನುಮಾನಗೊಂಡು ಆಕೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಅಚ್ಚರಿಯ ಫಲಿತಾಂಶ ಹೊರಬಂತು. ಅಂದು 57 ಅಂಕಗಳನ್ನು ಪಡೆದಿದ್ದ ಅದೇ ಪತ್ರಿಕೆಗೆ ಮರುಮೌಲ್ಯಮಾಪನದಲ್ಲಿ 80ಕ್ಕೆ ಬರೋಬ್ಬರಿ 80 ಅಂಕಗಳು ಸಿಕ್ಕವು!

ಆದರೆ, ಈ ಮರುಮೌಲ್ಯಮಾಪನದ ಫಲಿತಾಂಶವು 2019, ಜುಲೈ 22ರಂದು ಪ್ರಕಟಗೊಳ್ಳುವಷ್ಟರಲ್ಲಿ ಕಾಲೇಜುಗಳಲ್ಲಿ ಸಾಮಾನ್ಯ ಮೆರಿಟ್ ಸೀಟುಗಳ ಪ್ರವೇಶ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದುಹೋಗಿತ್ತು. ಇಲಾಖೆಯ ಈ ದೊಡ್ಡ ತಪ್ಪಿನಿಂದಾಗಿ ಆಕೆಗೆ ತಾನು ಬಯಸಿದ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟ್ ಸಿಗಲಿಲ್ಲ, ಇದು ಆಕೆಯ ಭವಿಷ್ಯದ ಮೇಲೂ ಗಂಭೀರ ಪರಿಣಾಮ ಬೀರಿತು. ಅಂತಿಮವಾಗಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಆಕೆ ವಿದೇಶಕ್ಕೆ ತೆರಳಬೇಕಾಯಿತು ಮತ್ತು ಕೆನಡಾದಲ್ಲಿ ಅಧ್ಯಯನ ಮುಂದುವರಿಸಲು ಬ್ಯಾಂಕ್‌ ಮೂಲಕ ಸಾಲ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತು. ತನ್ನ ಬದುಕಿಗೆ ಎದುರಾದ ಈ ಅನ್ಯಾಯವನ್ನು ಸಹಿಸದೆ, ಸ್ನೇಹಮೋಲ್ ಮಣಿ 2021ರಲ್ಲಿ ಮುವಾಟ್ಟುಪುಳ ಮುನ್ಸಿಫ್ ನ್ಯಾಯಾಲಯದ ಮೆಟ್ಟಿಲೇರಿದರು.

ನ್ಯಾಯಾಲಯದಲ್ಲಿ ವಾದ ಮಂಡಿಸಿದ ಸರ್ಕಾರ, ತಪ್ಪು ಎಸಗಿದ ಶಿಕ್ಷಕರ ವಿರುದ್ಧ ಈಗಾಗಲೇ ಇಲಾಖಾ ಕ್ರಮ ಕೈಗೊಳ್ಳಲಾಗಿದೆ ಮತ್ತು ವಿದ್ಯಾರ್ಥಿನಿಯ ವೃತ್ತಿಜೀವನದ ನಷ್ಟಕ್ಕೆ ಸರ್ಕಾರ ನೇರವಾಗಿ ಜವಾಬ್ದಾರಿಯಲ್ಲ ಎಂದು ವಾದಿಸಿತ್ತು. ಆದರೆ, ಸರ್ಕಾರದ ಈ ಸಮರ್ಥನೆಯನ್ನು ನ್ಯಾಯಾಲಯ ಸ್ಪಷ್ಟವಾಗಿ ತಳ್ಳಿಹಾಕಿತು. ಉನ್ನತ ಶಿಕ್ಷಣದ ಅವಕಾಶ ವಂಚಿತಳಾಗಿರುವುದು, ವಿದ್ಯಾರ್ಥಿನಿ ಅನುಭವಿಸಿದ ತೀವ್ರ ಮಾನಸಿಕ ಯಾತನೆ ಮತ್ತು ಆಕೆಗೆ ಸಲ್ಲಬೇಕಿದ್ದ ಅರ್ಹ ಮನ್ನಣೆ ಸಿಗದೆ ಹೋಗಿರುವುದಕ್ಕೆ ಪರಿಹಾರ ಪಡೆಯಲು ಆಕೆ ಸಂಪೂರ್ಣ ಅರ್ಹಳಾಗಿದ್ದಾಳೆ ಎಂದು ಕೋರ್ಟ್ ತೀರ್ಪು ನೀಡಿತು.

Also Read
ರೀಲ್ಸ್ ನೋಡಿ ಕೊರಿಯನ್​ ಗ್ಲಾಸ್​ ಸ್ಕಿನ್​ಗೆ ಪ್ರಯತ್ನಿಸಿದ್ರೆ ಈಗಿರೋ ಸ್ಕಿನ್​ ಕೂಡ ಉಳಿಯಲ್ಲ ಎಚ್ಚರ! | ​ Glass Skin
Student

ಈ ಸುದೀರ್ಘ ಕಾನೂನು ಹೋರಾಟದಲ್ಲಿ ಶಾಲೆಯ ಪ್ರಾಂಶುಪಾಲರಾದ ಡಾ. ಸಿ. ರಾಧಾಕೃಷ್ಣನ್ ಹಾಗೂ ಇಂಡಿಯನ್ ಲಾಯರ್ಸ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಒ. ವಿ. ಅನೀಶ್ ಅವರು ವಿದ್ಯಾರ್ಥಿನಿಗೆ ತಕ್ಕ ಬೆಂಬಲ ನೀಡಿದರು. ಸದ್ಯ ಕೆನಡಾದಲ್ಲಿ ತನ್ನ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಸ್ನೇಹಮೋಲ್ ಮಣಿ, ಈಗ ತಾಯ್ನಾಡಿಗೆ ವಾಪಸ್ ಬರುವ ಸಿದ್ಧತೆಯಲ್ಲಿದ್ದಾರೆ. ಶಿಕ್ಷಣ ಇಲಾಖೆಯ ಸಣ್ಣ ನಿರ್ಲಕ್ಷ್ಯವು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಎಷ್ಟು ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ಹಾಗೂ ತಪ್ಪು ಮಾಡಿದ ಇಲಾಖೆಗಳು ಪರಿಹಾರ ತೆರಲೇಬೇಕೆಂಬುದಕ್ಕೆ ಈ ತೀರ್ಪು ಒಂದು ಸ್ಪಷ್ಟ ಮಾದರಿಯಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net