ಕೆಲವೇ ದಿನಗಳಲ್ಲಿ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್: ಅಷ್ಟಕ್ಕೂ ಕಾರಣವೇನು? Elon Musk

ಕೆಲವೇ ದಿನಗಳಲ್ಲಿ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್: ಅಷ್ಟಕ್ಕೂ ಕಾರಣವೇನು? Elon Musk
ಕೆಲವೇ ದಿನಗಳಲ್ಲಿ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್: ಅಷ್ಟಕ್ಕೂ ಕಾರಣವೇನು? Elon Musk
Published on

ಪ್ರಮುಖ ಮುಖ್ಯಾಂಶಗಳು

  • ಮೂರೇ ವಾರದಲ್ಲಿ ಟ್ರಿಲಿಯನೇರ್ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್
  • ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸಿ ಮತ್ತೆ ಕೆಳಕ್ಕೆ ಬಿದ್ದ ಮಸ್ಕ್ ಸಂಪತ್ತು
  • ಮೂರು ವಾರಗಳಲ್ಲಿ ಎಲಾನ್ ಮಸ್ಕ್ ಅದೃಷ್ಟ ಬದಲಾಗಿದ್ದು ಹೇಗೆ?
  • ಸ್ಪೇಸ್‌ಎಕ್ಸ್ ಏರಿಳಿತದ ಬಗ್ಗೆ ತಜ್ಞ ವಿರಾಮ್ ಶಾ ನೀಡಿದ ಮಹತ್ವದ ಪಾಠ
Elon Musk : ಜಗತ್ತಿನ ಮೊದಲ ಟ್ರಿಲಿಯನೇರ್ ಎಂಬ ಐತಿಹಾಸಿಕ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಕೇವಲ ಮೂರೇ ವಾರದಲ್ಲಿ ಆ ಪಟ್ಟವನ್ನು ಕಳೆದುಕೊಂಡಿದ್ದಾರೆ.
ಹೌದು, ಜೂನ್ 12 ರಂದು ಅವರ ಒಡೆತನದ 'ಸ್ಪೇಸ್‌ಎಕ್ಸ್' (SpaceX) ಸಂಸ್ಥೆಯು ನಾಸ್ಡಾಕ್ ಷೇರು ಮಾರುಕಟ್ಟೆಗೆ ಭರ್ಜರಿಯಾಗಿ ಪದಾರ್ಪಣೆ ಮಾಡಿತ್ತು. ಆರಂಭದಲ್ಲಿ 135 ಡಾಲರ್‌ಗೆ ನಿಗದಿಯಾಗಿದ್ದ ಷೇರು ಬೆಲೆ, ಹೂಡಿಕೆದಾರರ ಭಾರಿ ಬೇಡಿಕೆಯಿಂದಾಗಿ ಅಲ್ಪಾವಧಿಯಲ್ಲೇ ಗಗನಕ್ಕೇರಿತು. ಒಂದು ಹಂತದಲ್ಲಿ ಸ್ಪೇಸ್‌ಎಕ್ಸ್ ಸಂಸ್ಥೆಯ ಒಟ್ಟು ಮಾರುಕಟ್ಟೆ ಮೌಲ್ಯ 2.8 ಟ್ರಿಲಿಯನ್ ಡಾಲರ್​ ತಲುಪಿ ಅಮೆಜಾನ್ ಕಂಪನಿಯನ್ನೇ ಹಿಂದಿಕ್ಕಿತ್ತು. ಇದರ ಬೆನ್ನಲ್ಲೇ ಎಲಾನ್ ಮಸ್ಕ್ ಅವರ ವೈಯಕ್ತಿಕ ಆಸ್ತಿ 1.4 ಟ್ರಿಲಿಯನ್ ಡಾಲರ್​ ದಾಟುವ ಮೂಲಕ ಅವರು ಹಣಕಾಸು ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದ್ದರು. ಭಾರತದ ಚಿಲ್ಲರೆ ಹೂಡಿಕೆದಾರರು ಸಹ ಟೋಕನೈಸೇಶನ್ ಮೂಲಕ ಈ ಷೇರುಗಳನ್ನು ಖರೀದಿಸಿ ಸಂಭ್ರಮಿಸಿದ್ದರು.
ಆದರೆ, ಮಾರುಕಟ್ಟೆಯ ಈ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಜುಲೈ ಆರಂಭದ ವೇಳೆಗೆ ಸ್ಪೇಸ್‌ಎಕ್ಸ್ ಷೇರುಗಳು ತಮ್ಮ ಗರಿಷ್ಠ ಮಟ್ಟದಿಂದ ಶೇ. 30 ಕ್ಕಿಂತ ಹೆಚ್ಚು ಕುಸಿತ ಕಂಡು, ನೂರಾರು ಶತಕೋಟಿ ಡಾಲರ್ ಮೌಲ್ಯವನ್ನು ಕಳೆದುಕೊಂಡವು. ಪರಿಣಾಮವಾಗಿ ಎಲಾನ್ ಮಸ್ಕ್ ಅವರ ಸಂಪತ್ತು ಮತ್ತೆ ಟ್ರಿಲಿಯನ್ ಡಾಲರ್ ಮಾರ್ಕ್‌ಗಿಂತ ಕೆಳಕ್ಕೆ ಇಳಿದಿದ್ದು, ಪ್ರಸ್ತುತ ವಿವಿಧ ವೆಲ್ತ್ ಟ್ರ್ಯಾಕರ್‌ಗಳ ಪ್ರಕಾರ 992 ರಿಂದ 997 ಬಿಲಿಯನ್ ಡಾಲರ್​ ಆಸುಪಾಸಿನಲ್ಲಿ ಏರಿಳಿತ ಕಾಣುತ್ತಿದೆ. ಸದ್ಯ ಮಸ್ಕ್ ತಮ್ಮ ಟ್ರಿಲಿಯನೇರ್ ಪಟ್ಟವನ್ನು ಕಳೆದುಕೊಂಡಿದ್ದರೂ, ಜಗತ್ತಿನ ನಂಬರ್ ಒನ್ ಶ್ರೀಮಂತನ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಕಂಪನಿಯ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಲೋಪವಿಲ್ಲ

ಸ್ಪೇಸ್‌ಎಕ್ಸ್ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದ್ದರೂ, ಕಂಪನಿಯ ಮೂಲಭೂತ ವ್ಯವಹಾರ ಮತ್ತು ಆರ್ಥಿಕ ಸ್ಥಿತಿಯಲ್ಲಿ ಯಾವುದೇ ದೋಷವಿಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಸ್ಪಷ್ಟಪಡಿಸಿದ್ದಾರೆ. ಕಂಪನಿಯ 'ಸ್ಟಾರ್‌ಲಿಂಕ್' ಸ್ಯಾಟಲೈಟ್ ಇಂಟರ್ನೆಟ್ ಸೇವೆ ಜಾಗತಿಕವಾಗಿ ಲಕ್ಷಾಂತರ ಹೊಸ ಚಂದಾದಾರರನ್ನು ಸೇರಿಸಿಕೊಳ್ಳುವ ಮೂಲಕ ವೇಗವಾಗಿ ವಿಸ್ತರಿಸುತ್ತಿದೆ. ಇದರೊಂದಿಗೆ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕ್ಷೇತ್ರಕ್ಕೂ ಲಗ್ಗೆ ಇಟ್ಟಿರುವ ಸ್ಪೇಸ್‌ಎಕ್ಸ್, 'ಕರ್ಸರ್' ಎಂಬ ಎಐ ಕೋಡಿಂಗ್ ಸ್ಟಾರ್ಟ್‌ಅಪ್ ಅನ್ನು 60 ಬಿಲಿಯನ್ ಡಾಲರ್ ಮೊತ್ತಕ್ಕೆ ಸಂಪೂರ್ಣ ಷೇರು ವಿನಿಮಯದ ಮೂಲಕ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ. ರಾಕೆಟ್​ ಉಡಾವಣೆ, ಉಪಗ್ರಹ ಇಂಟರ್ನೆಟ್ ಮತ್ತು ಎಐ ಮೂಲಸೌಕರ್ಯ ವಲಯಗಳಲ್ಲಿ ಕಂಪನಿಯು ದೀರ್ಘಾವಧಿಯಲ್ಲಿ ಸ್ಥಿರ ಬೆಳವಣಿಗೆ ಕಾಣಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಮಾರುಕಟ್ಟೆಯ ಅತಿಯಾದ ನಿರೀಕ್ಷೆಯೇ ಕಾರಣ

ವೆಸ್ಟೆಡ್​ ಫೈನಾನ್ಸ್‌ನ ಸಂಸ್ಥಾಪಕ ಮತ್ತು ಸಿಇಒ ವಿರಾಮ್ ಶಾ ಅವರ ಪ್ರಕಾರ, ಈ ಷೇರು ಕುಸಿತಕ್ಕೆ ಸ್ಪೇಸ್‌ಎಕ್ಸ್ ದುರ್ಬಲ ಕಂಪನಿಯಾಗಿರುವುದು ಕಾರಣವಲ್ಲ, ಬದಲಿಗೆ ಹೂಡಿಕೆದಾರರ ಅತಿಯಾದ ನಿರೀಕ್ಷೆಗಳೇ ಕಾರಣ ಎಂದಿದ್ದಾರೆ. ಕಂಪನಿಯು ಮಾರುಕಟ್ಟೆಗೆ ಬಂದಾಗ ಅದರ ಮೌಲ್ಯವನ್ನು ಅತ್ಯಂತ ಗರಿಷ್ಠ ಮಟ್ಟದಲ್ಲಿ ನಿಗದಿಪಡಿಸಲಾಗಿತ್ತು. ಇಂತಹ ಸಂದರ್ಭಗಳಲ್ಲಿ ಎಷ್ಟೇ ಬಲಿಷ್ಠ ಕಂಪನಿಯಾಗಿದ್ದರೂ ಷೇರು ಮಾರುಕಟ್ಟೆಯಲ್ಲಿ ತಿದ್ದುಪಡಿ ಅಥವಾ ಕುಸಿತ ಸಹಜ. ಹೂಡಿಕೆದಾರರು ಹೆಚ್ಚಾಗಿ 'ಒಳ್ಳೆಯ ಕಂಪನಿ' ಮತ್ತು 'ಒಳ್ಳೆಯ ಷೇರು' ಎಂಬುದರ ನಡುವೆ ಗೊಂದಲ ಮಾಡಿಕೊಳ್ಳುತ್ತಾರೆ, ಆದರೆ ಇವೆರಡೂ ಒಂದೇ ಅಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ. ಇದು ಮೇಲ್ನೋಟಕ್ಕೆ ಪರಸ್ಪರ ವಿರೋಧಾಭಾಸದಂತೆ ಕಂಡರೂ, ಷೇರು ಮಾರುಕಟ್ಟೆಯ ಇತ್ತೀಚಿನ ಏರಿಳಿತಗಳಿಗೆ ಪ್ರಮುಖ ಕಾರಣವನ್ನು ಬಿಚ್ಚಿಡುತ್ತದೆ.
ಸ್ಪೇಸ್‌ಎಕ್ಸ್ ಸಂಸ್ಥೆಯು ಬರೋಬ್ಬರಿ 75 ಬಿಲಿಯನ್ ಡಾಲರ್ ಸಂಗ್ರಹಿಸುವ ಮೂಲಕ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ (IPO) ಯಶಸ್ಸನ್ನು ದಾಖಲಿಸಿತು ಮತ್ತು ಲಿಸ್ಟಿಂಗ್ ದಿನದಂದೇ ಕಂಪನಿಯ ಮೌಲ್ಯ ಸುಮಾರು $1.8 ಟ್ರಿಲಿಯನ್ ತಲುಪಿತು. ಹೂಡಿಕೆದಾರರಿಂದ ಭಾರಿ ಬೇಡಿಕೆ ವ್ಯಕ್ತವಾಗಿ ಈ ಐಪಿಒ ಹಲವು ಪಟ್ಟು ಅಧಿಕ ಚಂದಾದಾರಿಕೆಯನ್ನು ಪಡೆದಿದ್ದರೂ, ಸಾರ್ವಜನಿಕ ಮುಕ್ತ ವಹಿವಾಟಿಗೆ ಲಭ್ಯವಿದ್ದ ಒಟ್ಟು ಷೇರುಗಳ ಪ್ರಮಾಣ ತೀರಾ ಕಡಿಮೆಯಾಗಿತ್ತು. ಮಾರುಕಟ್ಟೆಯಲ್ಲಿ ಮುಕ್ತವಾಗಿ ಕೈಬದಲಾಗುವ ಷೇರುಗಳ ಸಂಖ್ಯೆ ಸೀಮಿತವಾಗಿದ್ದಾಗ, ದಿನನಿತ್ಯದ ಸಣ್ಣ ಪ್ರಮಾಣದ ಖರೀದಿ ಮತ್ತು ಮಾರಾಟದ ಪ್ರಕ್ರಿಯೆಯೂ ಸಹ ಷೇರು ದರದಲ್ಲಿ ಭಾರಿ ಏರಿಳಿತವನ್ನು ಸೃಷ್ಟಿಸುತ್ತದೆ, ಹಾಗಾಗಿ, ಈ ಕುಸಿತವು ಕಂಪನಿಯ ವ್ಯವಹಾರದ ಗುಣಮಟ್ಟದಲ್ಲಾದ ಯಾವುದೇ ಬದಲಾವಣೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ವಿರಾಮ್ ಶಾ ವಿವರಿಸಿದ್ದಾರೆ.
ಸ್ಪೇಸ್‌ಎಕ್ಸ್ ಸಾರ್ವಜನಿಕವಾಗಿ ಲಿಸ್ಟ್ ಆದ ಕೇವಲ ನಾಲ್ಕೇ ದಿನಗಳಲ್ಲಿ 'ಕರ್ಸರ್' ಕಂಪನಿಯನ್ನು $60 ಬಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದ್ದು, ಇದು ದೀರ್ಘಾವಧಿಯ ದೃಷ್ಟಿಯಿಂದ ಉತ್ತಮ ನಿರ್ಧಾರವಾದರೂ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ. ಈ ಒಪ್ಪಂದವು ಕಂಪನಿಯ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಕನಸಿಗೆ ಬಲ ತುಂಬಲಿದೆಯಾದರೂ, ಹಣಕಾಸಿನ ದೃಷ್ಟಿಯಿಂದ ಷೇರುಗಳ ಮೌಲ್ಯ ದುರ್ಬಲಗೊಳ್ಳುವ ಆತಂಕವನ್ನು ಹೆಚ್ಚಿಸಿದೆ ಮತ್ತು ಗರಿಷ್ಠ ಮಟ್ಟದಲ್ಲಿದ್ದ ಷೇರು ಬೆಲೆಯ ಲಾಭವನ್ನು ಕಂಪನಿ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ವಿಶ್ಲೇಷಕರ ಪ್ರಕಾರ, ಈ ಸ್ವಾಧೀನವು ಈಗಾಗಲೇ ದುಬಾರಿಯಾಗಿದ್ದ ಷೇರು ಮೌಲ್ಯದ ಮೇಲೆ ಮತ್ತಷ್ಟು ಒತ್ತಡ ತಂದಿದೆ. ದೊಡ್ಡ ಸ್ವಾಧೀನಗಳು 5 ರಿಂದ 10 ವರ್ಷಗಳ ಅವಧಿಯಲ್ಲಿ ಯಶಸ್ವಿಯಾಗುತ್ತವೆ, ಆದರೆ ಸಾರ್ವಜನಿಕ ಷೇರು ಮಾರುಕಟ್ಟೆಯು ಯಾವಾಗಲೂ ಸದ್ಯದ ಅನಿಶ್ಚಿತತೆಗೆ ತಕ್ಷಣವೇ ಪ್ರತಿಕ್ರಿಯಿಸುತ್ತದೆ, ಹೀಗಾಗಿ ಹೂಡಿಕೆದಾರರು ದೀರ್ಘಾವಧಿಯ ತಂತ್ರಗಾರಿಕೆ ಮತ್ತು ಅಲ್ಪಾವಧಿಯ ಮಾರುಕಟ್ಟೆ ಏರಿಳಿತಗಳನ್ನು ಪ್ರತ್ಯೇಕವಾಗಿ ನೋಡಬೇಕು ಎಂದು ವಿರಾಮ್ ಶಾ ಸಲಹೆ ನೀಡಿದ್ದಾರೆ.
ಸ್ಪೇಸ್‌ಎಕ್ಸ್ ಸಂಸ್ಥೆಯನ್ನು ಸಾಂಪ್ರದಾಯಿಕ ವೈಮಾನಿಕ ಕಂಪನಿಯಾಗಿ ನೋಡದೆ, ಭವಿಷ್ಯದ ಉಪಗ್ರಹ ಬ್ರಾಡ್‌ಬ್ಯಾಂಡ್, ಮರುಬಳಕೆ ಮಾಡಬಹುದಾದ ರಾಕೆಟ್‌ಗಳು ಮತ್ತು ಎಐ ಮೂಲಸೌಕರ್ಯ ವಲಯಗಳ ಜಾಗತಿಕ ನಾಯಕ ಎಂಬಂತೆ ಹೂಡಿಕೆದಾರರು ಅತಿಯಾದ ಮೌಲ್ಯೀಕರಣ ಮಾಡಿದ್ದರು. ಇಂತಹ ಸಂದರ್ಭಗಳಲ್ಲಿ ಸಣ್ಣಪುಟ್ಟ ಆತಂಕಗಳೂ ಸಹ ಭಾರಿ ಕುಸಿತಕ್ಕೆ ಕಾರಣವಾಗುತ್ತವೆ ಎಂದು ವಿಶ್ಲೇಷಿಸಿರುವ ವಿರಾಮ್ ಶಾ, ಭವಿಷ್ಯದ ಬೆಳವಣಿಗೆಯು ಇಂದಿನ ದುಬಾರಿ ಬೆಲೆಗೆ ಯೋಗ್ಯವಾಗಿದೆಯೇ ಎಂದು ಮಾರುಕಟ್ಟೆ ಮರುಪರಿಶೀಲಿಸುವುದು ಒಂದು ಆರೋಗ್ಯಕರ ಪ್ರಕ್ರಿಯೆ ಎಂದಿದ್ದಾರೆ. ಎಲಾನ್ ಮಸ್ಕ್ ಅವರ ಬಹುಪಾಲು ಸಂಪತ್ತು ಸ್ಪೇಸ್‌ಎಕ್ಸ್ ಒಡೆತನದಲ್ಲೇ ಇರುವುದರಿಂದ, ಷೇರು ಮಾರುಕಟ್ಟೆಯ ಏರಿಳಿತಗಳು ಅವರ ನಿವ್ವಳ ಆಸ್ತಿಯ ಮೇಲೂ ನೇರ ಪರಿಣಾಮ ಬೀರುತ್ತವೆ. ಯಾವ ಷೇರು ಮೌಲ್ಯ ಅವರ ಜಗತ್ತಿನ ಮೊದಲ ಟ್ರಿಲಿಯನೇರ್ ಆಗಿತ್ತೋ, ಅದೇ ಲೆಕ್ಕಾಚಾರವು ಕೆಲವೇ ವಾರಗಳಲ್ಲಿ ಅವರನ್ನು ಮತ್ತೆ ಆ ಸ್ಥಾನದಿಂದ ಕೆಳಕ್ಕೆ ತಳ್ಳಿದೆ, ಏಕೆಂದರೆ ಕಾಗದದ ಮೇಲಿನ ಸಂಪತ್ತು ಕಂಪನಿಯ ನೈಜ ಪ್ರದರ್ಶನಕ್ಕಿಂತ ವೇಗವಾಗಿ ಬದಲಾಗುತ್ತದೆ.
ಮುಂದಿನ ದಿನಗಳಲ್ಲೂ ಸ್ಪೇಸ್‌ಎಕ್ಸ್ ಷೇರುಗಳಲ್ಲಿ ಮತ್ತಷ್ಟು ಏರಿಳಿತಗಳು ಮುಂದುವರಿಯುವ ಸಾಧ್ಯತೆಯಿದೆ. ಕಂಪನಿಯ ಆಂತರಿಕ ಉದ್ಯೋಗಿಗಳು ಮತ್ತು ಪ್ರವರ್ತಕರ ಬಳಿ ಇರುವ ಹೆಚ್ಚಿನ ಷೇರುಗಳು ಸದ್ಯಕ್ಕೆ ಲಾಕ್ ಆಗಿದ್ದು, ಆಗಸ್ಟ್ ತಿಂಗಳ ಆರ್ಥಿಕ ಫಲಿತಾಂಶದ ನಂತರ ಹಂತಹಂತವಾಗಿ ವಹಿವಾಟಿಗೆ ಮುಕ್ತವಾಗಲಿವೆ. ಅಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಷೇರುಗಳ ಕೊರತೆಯಿಂದಾಗಿ ಬೆಲೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಸಹಜ ಎನ್ನಲಾಗಿದೆ. ಆದಾಗ್ಯೂ, ವಾಲ್ ಸ್ಟ್ರೀಟ್ ವಿಶ್ಲೇಷಕರು ಕಂಪನಿಯ ದೀರ್ಘಾವಧಿಯ ಬೆಳವಣಿಗೆಯ ಬಗ್ಗೆ ಸಕಾರಾತ್ಮಕವಾಗಿದ್ದು, ಈ ಇತ್ತೀಚಿನ ಕುಸಿತವು ಕೇವಲ ಮೌಲ್ಯದ ಹೊಂದಾಣಿಕೆಯಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತಿಮವಾಗಿ, ಅಸಾಧಾರಣ ಕಂಪನಿಗಳು ದೀರ್ಘಾವಧಿಯಲ್ಲಿ ಅಪಾರ ಸಂಪತ್ತನ್ನು ಸೃಷ್ಟಿಸುತ್ತವೆ ನಿಜ, ಆದರೆ ಹೂಡಿಕೆದಾರರು ಅಲ್ಪಾವಧಿಯ ಉತ್ಸಾಹವನ್ನೇ ಸುಸ್ಥಿರ ಮೌಲ್ಯ ಎಂದು ತಪ್ಪಾಗಿ ತಿಳಿಯಬಾರದು; ಮಾರುಕಟ್ಟೆಯಲ್ಲಿ ಅತಿಯಾದ ಆಶಾವಾದವಿರುವಾಗ ಶಿಸ್ತು ಅತ್ಯಂತ ಮುಖ್ಯ ಎಂದು ಶಾ ಸಲಹೆ ನೀಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net