ಇರಾನ್ ಸೈನ್ಯದ ಗುಂಡಿಗೆ ಅಮೆರಿಕದ ಹೆಮ್ಮೆ ಬಲಿಯಾಯ್ತಾ? ಹೊರ್ಮುಜ್ ಬಳಿ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್ ಅಪಾಚೆ ಪತನ! US Apache Helicopter Down

ಇರಾನ್ ಸೈನ್ಯದ ಗುಂಡಿಗೆ ಅಮೆರಿಕದ ಹೆಮ್ಮೆ ಬಲಿಯಾಯ್ತಾ? ಹೊರ್ಮುಜ್ ಬಳಿ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್ ಅಪಾಚೆ ಪತನ! US Apache Helicopter Down
ಇರಾನ್ ಸೈನ್ಯದ ಗುಂಡಿಗೆ ಅಮೆರಿಕದ ಹೆಮ್ಮೆ ಬಲಿಯಾಯ್ತಾ? ಹೊರ್ಮುಜ್ ಬಳಿ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್ ಅಪಾಚೆ ಪತನ! US Apache Helicopter Down
Published on
ಟೆಹ್ರಾನ್: ಇಡೀ ಜಗತ್ತಿನ ಪ್ರಮುಖ ವ್ಯಾಪಾರ ಸಾಗರ ಮಾರ್ಗವಾಗಿರುವ ಸ್ಟ್ರೇಟ್ ಆಫ್ ಹೊರ್ಮುಜ್ ಬಳಿ ಅಮೆರಿಕ ಸೇನೆಗೆ ಸೇರಿದ ಯುದ್ಧ ಹೆಲಿಕಾಪ್ಟರ್ ಅಪಾಚೆ (US Apache Helicopter Down) ಪತನಗೊಂಡಿದೆ. ಸೋಮವಾರ ನಡೆದ ಈ ಘಟನೆಯಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಪೈಲಟ್‌ಗಳನ್ನು ಅದೃಷ್ಟವಶಾತ್ ಪ್ರಾಣಾಪಾಯದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ, ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಉಭಯ ದೇಶಗಳ ನಡುವೆ ವಾಯು ವೀಕ್ಷಣೆ ಮತ್ತು ಕ್ಷಿಪಣಿ ದಾಳಿಗಳು ತೀವ್ರಗೊಂಡಿದ್ದವು. ಈ ಉದ್ವಿಗ್ನ ವಾತಾವರಣದ ನಡುವೆಯೇ ಅಮೆರಿಕದ ಅತ್ಯಾಧುನಿಕ ಗನ್‌ಶಿಪ್ ಹೆಲಿಕಾಪ್ಟರ್ ಪತನಗೊಂಡಿರುವುದು ಭಾರಿ ಆತಂಕ ಮೂಡಿಸಿದೆ.
ಪತನಕ್ಕೆ ಅಸಲಿ ಕಾರಣವೇನು? ಬಿಡದ ರಹಸ್ಯ
ವಿಶ್ವದ ಅತ್ಯಂತ ಬಲಿಷ್ಠ ಯುದ್ಧ ಹೆಲಿಕಾಪ್ಟರ್ ಎಂದು ಕರೆಯಲ್ಪಡುವ ಅಪಾಚೆ ಪತನಗೊಳ್ಳಲು ನಿಖರವಾದ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇರಾನ್ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಇದು ಬಲಿಯಾಗಿದೆಯೇ ಅಥವಾ ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೆ, ಸದ್ಯದ ಬೆಳವಣಿಗೆಗೆ ಸಂಬಂಧಿಸಿದಂತೆ ಅಮೆರಿಕದ ಶ್ವೇತಭವನವಾಗಲಿ ಅಥವಾ ಮಧ್ಯಪ್ರಾಚ್ಯದ ಜವಾಬ್ದಾರಿ ಹೊತ್ತಿರುವ ಅಮೆರಿಕದ ಮಿಲಿಟರಿ ಕಮಾಂಡ್ ಸೆಂಟ್‌ಕಾಮ್ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇರಾನ್ ಇತ್ತೀಚೆಗೆ ಸ್ಟ್ರೇಟ್ ಆಫ್ ಹೊರ್ಮುಜ್ ಜಲಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿದ ನಂತರ, ಅಮೆರಿಕ ಸೇನೆಯು ಇರಾನ್ ವಿರುದ್ಧ ಆಕ್ರಮಣಕಾರಿ ಕಾರ್ಯಾಚರಣೆಗೆ ಇಳಿದಿತ್ತು. ಇದರ ಭಾಗವಾಗಿ ಅಪಾಚೆ ಹೆಲಿಕಾಪ್ಟರ್‌ಗಳು, ಎಂಕ್ಯೂ-9 ರೀಪರ್ ಡ್ರೋನ್‌ಗಳು ಹಾಗೂ ಎಫ್-35 ಯುದ್ಧ ವಿಮಾನಗಳನ್ನು ಈ ಪ್ರದೇಶದಲ್ಲಿ ಗಸ್ತಿಗೆ ನಿಯೋಜಿಸಲಾಗಿತ್ತು. ಫೆಬ್ರವರಿ 28 ರಿಂದ ಆರಂಭವಾದ ಈ ಸಂಘರ್ಷದಲ್ಲಿ ಅಮೆರಿಕ ಈಗಾಗಲೇ ಸುಮಾರು 30 ಡ್ರೋನ್‌ಗಳು ಮತ್ತು ಕೆಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ. ಆದರೆ, ಈ ಯುದ್ಧದಲ್ಲಿ ಅಮೆರಿಕದ ಹೆಮ್ಮೆಯ ಅಪಾಚೆ ಹೆಲಿಕಾಪ್ಟರ್ ಪತನಗೊಂಡಿರುವುದು ಇದೇ ಮೊದಲು ಎನ್ನಲಾಗಿದೆ.

ಹೊರ್ಮುಜ್ ರಕ್ಷಣೆ ಮತ್ತು ಅಮೆರಿಕದ ಸವಾಲು

ಕಳೆದ ತಿಂಗಳಷ್ಟೇ ಅಮೆರಿಕದ ನೌಕಾಪಡೆಯ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಅವರು ಈ ಆಯಕಟ್ಟಿನ ಜಲಮಾರ್ಗದ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಇಲ್ಲಿ ವಾಣಿಜ್ಯ ಹಡಗುಗಳಿಗೆ ರಕ್ಷಣೆ ನೀಡಲು ಅಮೆರಿಕವು ಪ್ರಾಜೆಕ್ಟ್ ಫ್ರೀಡಂ ಎಂಬ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿತ್ತು.
ಹೆಲ್‌ಫೈರ್ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಈ ಅಪಾಚೆ ಹೆಲಿಕಾಪ್ಟರ್‌ಗಳು ಇರಾನ್‌ನ ಸಣ್ಣ ಯುದ್ಧ ದೋಣಿಗಳು ಹಾಗೂ ಡ್ರೋನ್‌ ದಾಳಿಗಳನ್ನು ತಡೆಯಲು ನಿರಂತರವಾಗಿ ಸಮುದ್ರದ ಮೇಲೆ ಕಾವಲು ಕಾಯುತ್ತಿದ್ದವು. ಆದರೆ ಈಗ ಅಮೆರಿಕದ ಅತ್ಯಂತ ಶಕ್ತಿಶಾಲಿ ಹೆಲಿಕಾಪ್ಟರ್ ಪತನಗೊಂಡಿರುವುದು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net