ನಂಬಿಕೆ ಇಲ್ಲದವರ ಜೊತೆ ಒಪ್ಪಂದ ಕಷ್ಟಕರ: ಮುರಿದುಬಿದ್ದ ಇರಾನ್​-ಅಮೆರಿಕ ಒಪ್ಪಂದ; ನಿಯೋಗದ ಮುಖ್ಯಸ್ಥ ಜೆಡಿ ವ್ಯಾನ್ಸ್ ಹೇಳಿದ್ದೇನು? JD Vance on PeaceTalk

ಅಮೆರಿಕ-ಇರಾನ್​ ನಡುವೆ ಮುರಿದು ಬಿದ್ದ ಶಾಂತಿ ಒಪ್ಪಂದ
ಅಮೆರಿಕ-ಇರಾನ್​ ನಡುವೆ ಮುರಿದು ಬಿದ್ದ ಶಾಂತಿ ಒಪ್ಪಂದ
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ-ಇರಾನ್​ ನಡುವೆ ಮುರಿದು ಬಿದ್ದ ಶಾಂತಿ ಒಪ್ಪಂದ
  • ನಂಬಿಕೆ ಇರದ ಜನರ ಜೊತೆ ಮಾತುಕತೆ ಕಷ್ಟಕರ
  • ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್​ ಹೇಳಿಕೆ
ವಾಷಿಂಗ್​ಟನ್​: ಕಳೆದ ಸುಮಾರು ಒಂದುವರೆ ತಿಂಗಳಿನಿಂದ ಸಂಘರ್ಷಮಯವಾಗಿದ್ದ ಮಧ್ಯಪ್ರಾಚ್ಯ ಭಾಗದಲ್ಲಿ ಈಗ ಶಾಂತಿ ಮಾತುಕತೆಯ ವಾತಾವರಣ ನಿರ್ಮಾಣವಾಗಿದೆ. ಆದರೆ ಶನಿವಾರ (ಏ.11) ರಂದು ಇಸ್ಲಾಮಾಬಾದ್​ನಲ್ಲಿ ಶಾಂತಿ ಒಪ್ಪಂದ ಮುರಿದ ನಂತರ ಮುಂದೇನಾಗಲಿದೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ನಂಬಿಕೆ ಇಲ್ಲದವರ ಜೊತೆಗೆ ಮಾತುಕತೆ ಕಷ್ಟ!

ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ನಡೆದ ವಿಫಲ ಮಾತುಕತೆ ಬಗ್ಗೆ ಮಾತನಾಡಿದ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ (JD Vance on PeaceTalk)​, ಇರಾನ್​ಗೆ ಹೇಗೆ ನಮ್ಮ ಮೇಲೆ ನಂಬಿಕಯಿಲ್ಲವೋ ಹಾಗೇ ನಮಗೂ ಅವರ ಮೇಲೆ ಸಂಪೂರ್ಣ ನಂಬಿಕೆಯಿಲ್ಲ, ಆದರೆ ವಿಶ್ವಶಾಂತಿಗಾಗಿ ಮಾತುಕತೆ ಅನಿವಾರ್ಯವಾಗಿದೆ. ಆದರೆ ನಂಬಿಕೆಯಿಲ್ಲದವರ ಜೊತೆಗೆ ಮಾತುಕತೆ ಸುಲಭವಾಗಿ ಸುಖಾಂತ್ಯ ಕಾಣುವುದಿಲ್ಲ, ಅದಕ್ಕೆ ಸ್ಪಲ್ಪ ಸಮಯ ಹಿಡಿಯುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲೇ ಮುಂದಿನ ಮಾತುಕತೆ
ಶನಿವಾರ (ಏ.11) ರಂದು ಅಮೆರಿಕ ಮತ್ತು ಇರಾನ್​ ನಡುವೆ ಸುಮಾರು 21 ಗಂಟೆಗಳ ಮಾತುಕತೆ ನಡೆದರೂ ಸಹ ಯಾವುದೇ ಸಕಾರಾತ್ಮಕ ನಿರ್ಧಾರ ಹೊರ ಬೀಳಲಿಲ್ಲ. ಈ ಮಾತುಕತೆಯ ಮುಂದಿನ ಭಾಗ ಕೂಡ ಪಾಕಿಸ್ತಾನದಲ್ಲಿಯೇ ನಡೆಯಲಿದ್ದು, ದಿನಾಂಕವೊಂದು ನಿಗದಿಯಾಗಬೇಕಿದೆ.

ಅಮೆರಿಕ ಏನನ್ನು ಬಯಸುತ್ತಿದೆ?

ಅಮೆರಿಕ ಮತ್ತು ಇಸ್ರೇಲ್​, ಇರಾನ್​ ಮೇಲೆ ದಾಳಿ ಮಾಡಲು ಮೂಲ ಕಾರಣ ಇರಾನ್​ ಪರಮಾಣು ದೇಶವಾಗುವತ್ತ ಹೆಜ್ಜೆ ಇಟ್ಟಿದ್ದಾಗಿದೆ. ಆದ್ದರಿಂದ ಅಮೆರಿಕ, ಇರಾನ್​ ಯಾವತ್ತೂ ಪರಮಾಣು ಶಸ್ತ್ರವುಳ್ಳ ದೇಶವಾಗುವುದನ್ನು ಸಹಿಸುವುದಿಲ್ಲ. ಜೊತೆಗೆ ಹೊರ್ಮುಜ್​ ಜಲಸಂಧಿಯಲ್ಲಿ ವಿಶ್ವದ ಶೇ.20 ರಷ್ಟು ತೈಲ ಮತ್ತು ಶೇ.25 ರಷ್ಟು ಇಂಧನದ ವ್ಯಾಪಾರ ನಡೆಯುವ ಕಾರಣ ಈ ಮಾರ್ಗದಲ್ಲಿ ಇರಾನ್​ ಯಾವುದೇ ರೀತಿಯ ಅಡೆತಡೆ ಮಾಡ ಬಾರದು ಎನ್ನುವುದು ಅಮೆರಿಕದ ಪ್ರಮುಖ ಷರತ್ತುಗಳಾಗಿದೆ.

ಇರಾನಿನ ಷರತ್ತುಗಳೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲೆ, ಇರಾನ್ ಶಾಂತಿ ಸ್ಥಾಪನೆಯಾಗ ಬೇಕಾದರೆ ತನ್ನ 10 ಷರತ್ತುಗಳನ್ನು ಮುಂದಿಟ್ಟಿತು. ಯುದ್ಧ ಪರಿಹಾರ ನೀಡಬೇಕು, ಪರಮಾಣು ಶಕ್ತಿ ಹೊಂದಲು ತಡೆಯಬಾರು, ಲೆಬನಾನ್ ಮೇಲೆ ದಾಳಿ ಮಾಡಬಾರದು, ಹೊರ್ಮುಜ್ ಮೇಲೆ ತನ್ನದೆ ಹಿಡಿತವಿರಬೇಕು ಹೀಗೆ ಹತ್ತು ಷರತ್ತುಗಳನ್ನು ಇರಾನ್ ವಿಧಿಸಿತ್ತು. ಆದರೆ ಈ ಷರತ್ತುಗಳೆಗೆ ಅಮೆರಿಕ ಕ್ಯಾರೆ ಅನ್ನದ ಕಾರಣ ಈಗ ಮಾತುಕತೆ ವಿಫಲವಾಗಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net