Flying Hoverboard: ಹಾಲಿವುಡ್ನ ಆ್ಯಕ್ಷನ್ ಅಥವಾ ಸೈನ್ಸ್ ಫಿಕ್ಷನ್ (ಸೈಫೈ) ಸಿನಿಮಾಗಳಲ್ಲಿ ತೋರಿಸುವ ಕಾಲ್ಪನಿಕ ದೃಶ್ಯಗಳಂತೆ ಇಲ್ಲೊಂದು ನೈಜ ಘಟನೆಯೂ ಅನೇಕರ ಹುಬ್ಬೇರಿಸಿದ್ದು, ನಿಜಕ್ಕೂ ಇದು ಭೂಮಿ ಮೇಲೆ ನಡೆದ ಘಟನೆಯೇ ಅಥವಾ ಆಧುನಿಕ ಟೆಕ್ನಾಲಜಿ ಎಐ ಸಹಾಯದಿಂದ ಸೃಷ್ಟಿಸಿರುವ ವಿಡಿಯೋನಾ ಎಂದು ಪ್ರಶ್ನಿಸುವಂತೆ ಮಾಡಿದೆ. ಅಸಲಿಗೆ, ಹೋವರ್ಬೋರ್ಡ್ನಲ್ಲಿ ಯುವಕನೊಬ್ಬ ಪರ್ವತ, ನದಿಗಳ ಮಧ್ಯೆ ಹಾರುತ್ತಿರುವ ದೃಶ್ಯ ಸತ್ಯವೇ.
ಬೆಟ್ಟ-ಗುಡ್ಡಗಳು, ನದಿಗಳು, ಪರ್ವತ ಶ್ರೇಣಿಗಳ ನಡುವೆ ಒಂದು ಹೋವರ್‌ಬೋರ್ಡ್ ಮೂಲಕ ಹಾರಾಡುತ್ತಿರುವ ಈ ಯುವಕನ ಹೆಸರು ಸಾಂಗ್ ಕ್ಸಿಂಗ್ಯು (26). ಮೂಲತಃ ಚೀನಾದ ಹುಬೈ ಭಾಗದ ನಿವಾಸಿಯಾಗಿರುವ ಈತ ಖುದ್ದಾಗಿ ತಾನೇ ಅಭಿವೃದ್ಧಿಪಡಿಸಿದ ಹಾರುವ ಸಾಧನವನ್ನು ಯಶಸ್ವಿಯಾಗಿ ಪರೀಕ್ಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.
ಈ ವಿಡಿಯೋ ಅ.15ರಂದು ಹಂಚಿಕೊಳ್ಳಲಾಗಿದ್ದು, ಯುವಕ ಯಶಸ್ವಿ ಪ್ರಯೋಗವನ್ನು ತೋರಿಸಿದೆ. ಸೋಶಿಯಲ್ ಮೀಡಿಯಾದಲ್ಲಿ 'ಅಮೇಜಿಂಗ್ ಆಯು' ಎಂದು ಕರೆಯಲ್ಪಡುವ ಸಾಂಗ್, ಸುಮಾರು ಎರಡು ತಿಂಗಳ ಅವಧಿಯಲ್ಲಿ ಹೋವರ್‌ಬೋರ್ಡ್ ಅನ್ನು ಅಭಿವೃದ್ಧಿಪಡಿಸಿದ್ದಾಗಿ ತಿಳಿಸಿದ್ದಾರೆ. ನಾಲ್ಕು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವಂತೆ ವಿನ್ಯಾಸಗೊಳಿಸಲಾದ ಈ ಸಾಧನವು ಎಐ ಟೆಕ್ನಾಲಜಿ ವ್ಯವಸ್ಥೆಯನ್ನು ಸಹ ಒಳಗೊಂಡಿದೆ.
ಗ್ರಾಮೀಣ ಕುಟುಂಬದಲ್ಲಿ ಬೆಳೆದ ಸಾಂಗ್ ತನ್ನ ತಂದೆ ನಡೆಸುತ್ತಿದ್ದ ಕಂಪನಿಯೊಂದರಲ್ಲಿ ಕೆಲಸ ಮಾಡಲು 14ನೇ ವಯಸ್ಸಿನಲ್ಲಿ ಶಾಲೆಗೆ ಗುಡ್ಬೈ ಹೇಳಿದ. ವಿಮಾನ ಪರೀಕ್ಷೆಗಳ ಬಗ್ಗೆ ದೂರದರ್ಶನ ಕಾರ್ಯಕ್ರಮವನ್ನು ವೀಕ್ಷಿಸಿದ ನಂತರ ಆತ ವಾಯುಯಾನದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡ. ನಂತರ ಬೇಡವೆಂದು ಬಿಸಾಡಿದ ವಸ್ತುಗಳನ್ನು ಸಂಗ್ರಹಿಸಿ, ಮಾದರಿ ವಿಮಾನಗಳನ್ನು ನಿರ್ಮಿಸಲು ಪ್ರಾರಂಭಿಸಿದ.
2022ರಲ್ಲಿ, ಪಾಳುಬಿದ್ದ ಶೆಡ್ ಅನ್ನು ತನ್ನದೇ ಸ್ವಂತ ಲ್ಯಾಬೋರೇಟರಿಯನ್ನಾಗಿ ಮಾಡಲು 2.4 ಮಿಲಿಯನ್ ಯುವಾನ್ ಸಾಲವನ್ನು ಪಡೆದುಕೊಂಡ. ಆದ್ರೆ, ಆತನಿಗೆ ವಂಚಕರು ಮೋಸ ಮಾಡಿದ್ದಲ್ಲದೇ, ಸಾಲದ ಸುಳಿವಿಗೆ ಸಿಲುಕಿಸಿ ಪರಾರಿಯಾದರು. ಈ ನಷ್ಟ ಅನುಭವಿಸಿದ ಯುವಕನಿಗೆ, ಅದೃಷ್ಟ ಎಂಬಂತೆ ಟೆಕ್ನಾಲಜಿ ಕಂಪನಿ ಇನ್ಸ್ಟಾ 360 (Insta360) ಸಂಸ್ಥೆಯವರು 1.8 ಮಿಲಿಯನ್ ಯುವಾನ್ ಹಣವನ್ನು ಸಹಾಯಧನವಾಗಿ ನೀಡುವ ಮೂಲಕ ಹಣಕಾಸಿನ ನೆರವು ನೀಡಿತು,(ಏಜೆನ್ಸೀಸ್).