ಮದುವೆಯಾದ ಮರುದಿನವೇ ಗಂಡನ ಕೊಲೆಗೆ ಸ್ಕೆಚ್! ಅಮೆರಿಕಕ್ಕೆ ಓಡಿದ್ದ ಲೇಡಿಗೆ 65 ವರ್ಷ ಜೈಲು ಶಿಕ್ಷೆಯಾಗಿದ್ದು ಹೇಗೆ? Chinese investor crime story

Chinese investor crime story ಸಾಂದರ್ಭಿಕ ಚಿತ್ರ
Chinese investor crime story ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಚೀನಾ ಮೂಲದ ಹೂಡಿಕೆದಾರನೊಬ್ಬ ತನ್ನನ್ನು ವಂಚಿಸಿ, ಹತ್ಯೆಗೆ ಸಂಚು ರೂಪಿಸಿ ಅಮೆರಿಕಾಗೆ ಪರಾರಿಯಾಗಿದ್ದ ಮಾಜಿ ಪತ್ನಿ
  • ಹೂಡಿಕೆದಾರ ತನಗಾದ ಅನ್ಯಾಯದ ಕುರಿತು ಜೂನ್ 30 ರಂದು 15 ನಿಮಿಷಗಳ ವಿಡಿಯೋವೊಂದನ್ನು ಹಂಚಿಕೊಂಡಿದ್ದರು
  • ತಾವು ಗರ್ಭಿಣಿ ಎಂದು ನಂಬಿಸಿ, ಲಿ ಪಿಂಗ್ ಅವರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಫ್ಲಾಟ್ ಅನ್ನು ತನ್ನ ಹೆಸರಿಗೆ ಬರೆಸಿಕೊಂಡಳು
ಬೀಜಿಂಗ್: ಚೀನಾ ಮೂಲದ ಹೂಡಿಕೆದಾರನೊಬ್ಬ ತನ್ನನ್ನು ವಂಚಿಸಿ, ಹತ್ಯೆಗೆ ಸಂಚು ರೂಪಿಸಿ ಅಮೆರಿಕಾಗೆ ಪರಾರಿಯಾಗಿದ್ದ ಮಾಜಿ ಪತ್ನಿಯನ್ನು ಬರೋಬ್ಬರಿ 9 ವರ್ಷಗಳ ಕಾಲ ಹುಡುಕಾಡಿ, ಆಕೆಗೆ ಶಿಕ್ಷೆ ಕೊಡಿಸಿರುವ ರೋಚಕ (Chinese investor crime story) ಘಟನೆಯೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಲಿ ಪಿಂಗ್ (52) ಎಂಬ ಹೂಡಿಕೆದಾರ ತನಗಾದ ಅನ್ಯಾಯದ ಕುರಿತು ಜೂನ್ 30 ರಂದು 15 ನಿಮಿಷಗಳ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಸದ್ಯ ವೈರಲ್ ಆಗಿದೆ. ಈ ಇಡೀ ಕಾರ್ಯಾಚರಣೆಗಾಗಿ ಅವರು ಸುಮಾರು 18 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ.

ಪರಿಚಯ ಪ್ರೇಮವಾಗಿ ಬದಲಾದ ಕಥೆ

ಷೇರು ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದ್ದ ಲಿ ಪಿಂಗ್ ಅವರಿಗೆ 2014ರಲ್ಲಿ ಉದ್ಯಮ ರಂಗದ ವೇದಿಕೆಯೊಂದರಲ್ಲಿ ಝಾಂಗ್ ಶುದಾನ್ ಎಂಬ ಮಹಿಳೆಯ ಪರಿಚಯವಾಗಿತ್ತು. ಬ್ಯಾಂಕೊಂದರಲ್ಲಿ ಅಕೌಂಟ್ ಮ್ಯಾನೇಜರ್ ಆಗಿದ್ದ ಆಕೆ, ತನ್ನ ಬಡತನ ಹಾಗೂ ಕಷ್ಟದ ದಿನಗಳ ಭಾವನಾತ್ಮಕ ಕಥೆ ಹೇಳಿ ಲಿ ಪಿಂಗ್ ಅವರ ನಂಬಿಕೆ ಗಳಿಸಿದ್ದಳು. ಪಿಂಗ್ ಅವರ ಆಸ್ತಿ ವಿವರವನ್ನು ಮೊದಲೇ ಅರಿತು ಆಕೆ ಈ ಜಾಲ ಹೆಣೆದಿದ್ದಳು ಎನ್ನಲಾಗಿದೆ.
ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸುವುದು, ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಹಣ ಪಡೆಯುವುದು ಮಾಡುತ್ತಿದ್ದ ಆಕೆ, 2015ರಲ್ಲಿ ಲಿ ಪಿಂಗ್ ಅವರನ್ನು ಮದುವೆಯಾಗುವುದಾಗಿ ಪ್ರೀತಿಯ ನಾಟಕವಾಡಿದಳು. ತಾವು ಗರ್ಭಿಣಿ ಎಂದು ನಂಬಿಸಿ, ಲಿ ಪಿಂಗ್ ಅವರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಫ್ಲಾಟ್ ಅನ್ನು ತನ್ನ ಹೆಸರಿಗೆ ಬರೆಸಿಕೊಂಡಳು. ನಂತರ ಇಬ್ಬರೂ ವಿವಾಹವಾದರು.

ಹತ್ಯೆಗೆ ಸಂಚು ಮತ್ತು ನಾಪತ್ತೆ

ಮದುವೆಯಾದ ಮರುದಿನವೇ ಲಿ ಪಿಂಗ್ ಪ್ರಯಾಣಿಸುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿ ಅಪಘಾತ ಸಂಭವಿಸಿತ್ತು. ಅದೃಷ್ಟವಶಾತ್ ಅವರು ಬದುಕುಳಿದರು. ಇದಾದ ಕೆಲವೇ ದಿನಗಳಲ್ಲಿ ಬ್ಯಾಂಕ್ ವ್ಯವಹಾರದ ನೆಪದಲ್ಲಿ ಲಿ ಪಿಂಗ್ ಅವರಿಂದ ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡ ಝಾಂಗ್, ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಆಕೆ ಹಾಂಗ್ ಕಾಂಗ್ ಮೂಲಕ ಅಮೆರಿಕಾದ ಲಾಸ್ ಏಂಜಲೀಸ್‌ಗೆ ಓಡಿಹೋಗಿರುವುದು ನಂತರ ಬೆಳಕಿಗೆ ಬಂತು. ಹೋಗುವಾಗ ಪಿಂಗ್ ಅವರಿಗೆ ಸೇರಿದ ನಾಲ್ಕು ಆಸ್ತಿ ಪತ್ರಗಳು ಮತ್ತು ಹಣವನ್ನು ದೋಚಿರುವುದಾಗಿ ತಿಳಿದು ಬಂದಿದೆ.
ತನಿಖೆಯ ವೇಳೆ ಕೇವಲ ಹಣಕ್ಕಾಗಿ ಮಾತ್ರವಲ್ಲದೆ, ಲಿ ಪಿಂಗ್ ಅವರನ್ನು ಕೊಲೆ ಮಾಡಿ ಅವರ ಸಂಪೂರ್ಣ ಆಸ್ತಿಗೆ ವಾರಸುದಾರಳಾಗಲು ಆಕೆ ಕಾರಿನ ಬ್ರೇಕ್ ವೈರ್ ಕತ್ತರಿಸಿ ಕೊಲೆಗೆ ಸಂಚು ರೂಪಿಸಿದ್ದಳು ಎಂಬ ಆಘಾತಕಾರಿ ವಿಷಯ ಬಯಲಾಯಿತು.

9 ವರ್ಷಗಳ ಸುದೀರ್ಘ ಹುಡುಕಾಟ

ತನ್ನನ್ನು ಕೊಲ್ಲಲು ಯತ್ನಿಸಿದಾಕೆಯನ್ನು ಬಿಡುವುದಿಲ್ಲ ಎಂದು ಪಣತೊಟ್ಟ ಲಿ ಪಿಂಗ್, ಆಕೆಯ ಪತ್ತೆಗಾಗಿ ಬರೋಬ್ಬರಿ 1 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಘೋಷಿಸಿದರು. ಅಮೆರಿಕಾದಲ್ಲಿ ಖಾಸಗಿ ಪತ್ತೇದಾರರು, ವಕೀಲರು ಹಾಗೂ ಚೀನಿ ಸಮುದಾಯಗಳ ನೆರವು ಪಡೆದು ತೀವ್ರ ಹುಡುಕಾಟ ನಡೆಸಿದರು. ಈ ಹುಡುಕಾಟಕ್ಕಾಗಿ ಅವರು ಬರೋಬ್ಬರಿ 18 ಕೋಟಿ ರೂ. ವೆಚ್ಚ ಮಾಡಿದರು. ಕೊನೆಗೆ ಲಾಸ್ ಏಂಜಲೀಸ್ ಪೊಲೀಸರು ಆಕೆಯನ್ನು ಪತ್ತೆಹಚ್ಚಿದರು. ಆಕೆಯೊಂದಿಗಿದ್ದ ಮಗುವಿಗೆ ಡಿಎನ್‌ಎ ಪರೀಕ್ಷೆ ನಡೆಸಿದಾಗ, ಅದು ಲಿ ಪಿಂಗ್ ಅವರ ಮಗುವಲ್ಲ ಎಂಬುದು ಸಾಬೀತಾಯಿತು.

ಕೋರ್ಟ್ ನೀಡಿದ ಕಠಿಣ ಶಿಕ್ಷೆ

ಆರಂಭದಲ್ಲಿ ಆಕೆ ಕಾನೂನುಬದ್ಧ ಪತ್ನಿಯಾಗಿದ್ದರಿಂದ ವಂಚನೆ ಪ್ರಕರಣ ದಾಖಲಿಸುವುದು ಕಷ್ಟವಾಗಿತ್ತು. ಆದರೆ 2020 ರಲ್ಲಿ ಚೀನಾದ ನ್ಯಾಯಾಲಯ ಇವರ ಮದುವೆಯನ್ನು ರದ್ದುಗೊಳಿಸಿ, ಆಸ್ತಿಯನ್ನು ಮತ್ತೆ ಲಿ ಪಿಂಗ್ ಹೆಸರಿಗೆ ವರ್ಗಾಯಿಸಿತು.
ಇದಾದ ಬಳಿಕ, ಅಮೆರಿಕಾದ ಕ್ಯಾಲಿಫೋರ್ನಿಯಾ ನ್ಯಾಯಾಲಯವು ವಂಚನೆ, ಅಕ್ರಮ ವಲಸೆ, ವೀಸಾ ಅವಧಿ ಮೀರಿದ ವಾಸ್ತವ್ಯ, ಮಕ್ಕಳ ಅಪಹರಣ ಮತ್ತು ಮಾನವ ಕಳ್ಳಸಾಗಣೆ ಸೇರಿದಂತೆ 23 ಗಂಭೀರ ಅಪರಾಧಗಳಡಿ ಝಾಂಗ್‌ಗೆ 65 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆಕೆಗೆ ನೆರವು ನೀಡಿದ ಇತರ ಸಹಚರರ ಮೇಲೆಯೂ ಕಾನೂನು ಕ್ರಮ ಜರುಗಿಸಲಾಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net