Chery Tiggo: ಚೀನಾದ ಬ್ರ್ಯಾಂಡೆಡ್ ‘ಚೆರಿ’ ಕಂಪನಿ ಭಾರತದ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆಸುತ್ತಿರುವ ಸಮಯದಲ್ಲೇ ಕಾರಿನ ಒಂದೊಂದೇ ಸಮಸ್ಯೆಗಳು ಇದೀಗ ಬಯಲಾಗಿವೆ. ಜೆಎಸ್‌ಡಬ್ಲ್ಯು ಗ್ರೂಪ್‌ನಂತಹ ದೈತ್ಯ ಕಂಪನಿಯೊಂದಿಗೆ ಕೈಜೋಡಿಸಲು ಮುಂದಾಗಿರುವ ಸಂಸ್ಥೆಯ ಹೆಸರು, ಯೋಜನೆಗಳು ದೊಡ್ಡದಾಗಿದ್ದೇ ಆದರೂ ಕಾರಿನಲ್ಲಿ ಕಾಣಿಸಿಕೊಂಡಿರುವ ಡಿಫೆಕ್ಟ್ ಮಾತ್ರ ತೀರ ಆತಂಕ ಸೃಷ್ಟಿಸಿದೆ.
ಕಂಪನಿಯ ಕಾರುಗಳಿಗೆ ಸಂಬಂಧಿಸಿದಂತೆ ಬೆಳಕಿಗೆ ಬಂದಿರುವ ಸರಣಿ ಅಪಘಾತಗಳೇ ಇದಕ್ಕೆ ಪ್ರಮುಖ ಕಾರಣ. ಇತ್ತೀಚೆಗಷ್ಟೇ ಮಲೇಷ್ಯಾದಲ್ಲಿ ಸಂಸ್ಥೆಯ ಜನಪ್ರಿಯ ಕಾರು ‘ಒಮೊಡಾ 5’ನ ಆ್ಯಕ್ಸಲ್ ರಾಡ್ ಮುರಿದು ಚಕ್ರಗಳು ದೂರಕ್ಕೆ ಹಾರಿಬಿದ್ದ ಘಟನೆ ಗ್ರಾಹಕರ ಎದುರು ತಲೆತಗ್ಗಿಸುವಂತೆ ಮಾಡಿತು. ಇದೀಗ ಅದೇ ಕಂಪನಿಯ ಇನ್ನೊಂದು ಕಾರು ‘ಟಿಗ್ಗೋ ಕ್ರಾಸ್’ ವಿಚಾರದಲ್ಲೂ ಇಂಥದ್ದೇ ಘಟನೆ ರಿಪೀಟ್ ಆಗಿರುವುದು ಸದ್ಯ ಗ್ರಾಹಕರಲ್ಲಿ ಕೊಳ್ಳುವುದು ಸುರಕ್ಷಿತವೇ ಎಂಬ ಪ್ರಶ್ನೆಯನ್ನು ಸೃಷ್ಟಿಸಿದೆ.
ಈ ಘಟನೆಯಲ್ಲಿ ಕಾರಿನ ಆ್ಯಕ್ಸಲ್ ರಾಡ್ ಮುರಿದು, ಚಕ್ರಗಳು ರಸ್ತೆಯ ಮೇಲೆ ಹರಿದಾಡುತ್ತಿರುವುದು, ಈ ಬ್ರ್ಯಾಂಡ್‌ನ ಸುರಕ್ಷತೆಯ ಮಟ್ಟ ಎಷ್ಟಿದೆ ಎಂಬ ಗಂಭೀರ ಪ್ರಶ್ನೆಗಳು ಮತ್ತೆ ಜಾಗತಿಕವಾಗಿ ಚರ್ಚಿಸುವಂತೆ ಮಾಡಿದೆ. ಸದ್ಯ ಘಟನೆಯ ವಿಡಿಯೋಗಳು ಹರಿದಾಡುತ್ತಿದ್ದು, ಅನೇಕರು ಸಂಸ್ಥೆಯ ಕಾರಿನ ಗುಣಮಟ್ಟವನ್ನು ಪ್ರಶ್ನಿಸಿ, ಕಿಡಿಕಾರಿದ್ದಾರೆ.
ಮಲೇಷ್ಯಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅಲ್ಲಿ ಚೆರಿ ಟಿಗ್ಗೋ ಕ್ರಾಸ್ ಕಾರು ಅಪಘಾತಕ್ಕೀಡಾಗಿರುವುದು ಸ್ಪಷ್ಟವಾಗಿದೆ. ಕೆಲವೇ ದಿನಗಳಲ್ಲಿ ಚೆರಿ ಗ್ರೂಪ್ನ ಕಾರುಗಳು ಎರಡು ಪ್ರತ್ಯೇಕ ಘಟನೆಗಳಲ್ಲಿ ಒಂದೇ ರೀತಿಯ ಸಮಸ್ಯೆಗಳನ್ನು ನೋಡಿರುವುದು ಬ್ರ್ಯಾಂಡ್ ಬಗ್ಗೆಗಿನ ಚರ್ಚೆಗಳನ್ನು ಜೋರಾಗಿಸಿವೆ. ಮೊದಲ ಘಟನೆಗೆ ಪ್ರತಿಕ್ರಿಯೆ ನೀಡದ ಸಂಸ್ಥೆಯು, ಎರಡನೇ ಅಪಘಾತಕ್ಕೀಡಾದ ಟಿಗ್ಗೋ ಕ್ರಾಸ್ ಕಾರಿನ ಚಕ್ರಗಳು ಯಾವುದೇ ತಾಂತ್ರಿಕ ತೊಂದರೆಯಿಂದ ಹೊರಬಂದಿಲ್ಲ. ಬದಲಿಗೆ ಅಪಘಾತದ ತೀವ್ರತೆಗೆ ಚಕ್ರಗಳು ಹಾರಿಬಿದ್ದಿವೆ ಎಂದು ಹೇಳಿದೆ.
ಚೆರಿ ಕಂಪನಿಗೆ ಸಂಬಂಧಿಸಿದ ಈ ಬೆಳವಣಿಗೆಗಳು ಭಾರತೀಯ ಆಟೋಮೊಬೈಲ್ ಗ್ರಾಹಕರಲ್ಲಿ ಖರೀದಿ ಬಗ್ಗೆ ಕಳವಳ ಹುಟ್ಟುಹಾಕಿದೆ. ಕಾರಣ, ಚೆರಿ ಆಟೋಮೊಬೈಲ್ಸ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ಲ್ಯಾನ್ ಮಾಡಿಕೊಂಡಿದ್ದು, ಅದಕ್ಕೆ ಬೇಕಾದ ವ್ಯವಸ್ಥೆಯನ್ನು ತೆರೆಮರೆಯಲ್ಲಿ ನಡೆಸುತ್ತಿದೆ. ಈ ಚೀನೀ ಬ್ರ್ಯಾಂಡ್ ನಮ್ಮ ದೇಶವನ್ನು ಪ್ರವೇಶಿಸಲು ಭಾರತೀಯ ದೈತ್ಯ ಜೆಎಸ್ಡಬ್ಲ್ಯೂ (JSW) ಗ್ರೂಪ್‌ನೊಂದಿಗೆ ಪಾಲುದಾರಿಕೆಯ ಮಾತುಕತೆಯಲ್ಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರ ಅಂತ್ಯದ ವೇಳೆಗೆ ಅಥವಾ 2027ರ ಆರಂಭದಲ್ಲಿ ಚೆರಿ ಕಾರುಗಳು ನಮ್ಮ ದೇಶದ ರಸ್ತೆಗಳಿಗೆ ಇಳಿಯುವ ಸಾಧ್ಯತೆಗಳಿವೆ. ಈ ಯೋಜನೆ ಯಶಸ್ವಿಯಾದರೆ, ಇದು ಭಾರತೀಯ ಕಾರು ಮಾರುಕಟ್ಟೆಗೆ ನೇರವಾಗಿ ಪ್ರವೇಶಿಸುವ ಮತ್ತೊಂದು ಚೀನಾ ಮೂಲದ ಹೊಸ ಆಟೋ ಬ್ರ್ಯಾಂಡ್ ಆಗಲಿದೆ,(ಏಜೆನ್ಸೀಸ್).