ಆಸ್ಕರ್ ಅಂಗಳಕ್ಕೆ ಯಶ್​, ರಣಬೀರ್​ ನಟನೆಯ 'ರಾಮಾಯಣ'! ರೇಸ್‌ಗೆ ಸ್ವತಂತ್ರವಾಗಿ ಎಂಟ್ರಿಕೊಟ್ಟ ನಿತೇಶ್​ ತಿವಾರಿ ಸಿನಿಮಾ | Ramayana: Part 1

Ramayana: Part 1
ಆಸ್ಕರ್ ಅಂಗಳಕ್ಕೆ ಯಶ್​, ರಣಬೀರ್​ ಅಭಿನಯದ 'ರಾಮಾಯಣ'! ರೇಸ್‌ಗೆ ಸ್ವತಂತ್ರವಾಗಿ ಎಂಟ್ರಿಕೊಟ್ಟ ನಿತೇಶ್​ ತಿವಾರಿ ಸಿನಿಮಾ | Ramayana: Part 1
Published on: 

Ramayana: Part 1: ಪ್ರಸ್ತುತ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಮಿಂಚಿನ ಓಟವನ್ನು ಮುಂದುವರೆಸಿರುವ ನಿತೇಸ್​ ತಿವಾರಿ ನಿರ್ದೇಶನದ ಹಾಗೂ ಯಶ್​, ರಣಬೀರ್​ ಕಪೂರ್​ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ: ಭಾಗ 1' ಚಿತ್ರವು ಇದೀಗ ಸ್ವತಂತ್ರವಾಗಿ ಪ್ರತಿಷ್ಠಿತ ಆಸ್ಕರ್​ ರೇಸ್​ಗೆ ಎಂಟ್ರಿಕೊಟ್ಟಿದೆ.

ಅಧಿಕೃತ ಪ್ರವೇಶ ಪಡೆದ ಮರಾಠಿ ಸಿನಿಮಾ

ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆಗಳಿಂದ ಚಿತ್ರಮಂದಿರಗಳಲ್ಲಿ ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ರಾಮಾಯಣ ಚಿತ್ರವನ್ನು ಆಸ್ಕರ್ ಅಂಗಳಕ್ಕೆ ಕಳುಹಿಸಲು ಚಿತ್ರತಂಡ ದಾಪುಗಾಲಿಟ್ಟಿದೆ. ಈಗಾಗಲೇ 2027ರ ಆಸ್ಕರ್ ಪ್ರಶಸ್ತಿಗಳಿಗಾಗಿ ಭಾರತದ ಅಧಿಕೃತ ಪ್ರವೇಶವಾಗಿ ಮರಾಠಿ ಸಿನಿಮಾ 'ಗೊಂಡಳ್' ಆಯ್ಕೆಯಾಗಿದೆ. ಅಂತೆಯೇ, ತಮ್ಮ ಚಿತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ನಿರ್ದೇಶಕ ನಿತೇಶ್ ತಿವಾರಿ ಅವರು ಸ್ವತಂತ್ರವಾಗಿ 'ರಾಮಾಯಣ'ವನ್ನು ಪರಿಗಣನೆಗೆ ಸಲ್ಲಿಕೆ ಮಾಡಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ 99ನೇ ಆಸ್ಕರ್​ ಅಕಾಡೆಮಿ ಪ್ರಶಸ್ತಿಗಳಿಗಾಗಿ ಚಿತ್ರತಂಡವು ಸಿನಿಮಾವನ್ನು ಪರಿಗಣನೆಗೆ ಸಲ್ಲಿಸಿದೆ. ಆಸ್ಕರ್‌ನ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದ ಅಧಿಕೃತ ಪ್ರವೇಶವಾಗಿ ಮರಾಠಿ ಸಿನಿಮಾ 'ಗೊಂಡಳ್' ಆಯ್ಕೆಯಾದ ಬೆನ್ನಲ್ಲೇ ನಿತೇಶ್​ ತಿವಾರಿ, ತಾವು ನಿರ್ದೇಶನದ ಸಿನಿಮಾವನ್ನು ಪರಿಗಣಿಸುವಂತೆ ಅರ್ಜಿ ಮೂಲಕ ಸಲ್ಲಿಕೆ ಮಾಡಿದ್ದಾರೆ. ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗದ ಸಿನಿಮಾಗಳನ್ನು ಆಸ್ಕರ್ ಪರಿಗಣನೆಗೆ ಸ್ವತಂತ್ರವಾಗಿ ಸಲ್ಲಿಸಲು ಮುಕ್ತ ಅವಕಾಶವಿದೆ.

ಸ್ವತಂತ್ರವಾಗಿ ಸಲ್ಲಿಸುವ ಅವಕಾಶ ಹೇಗೆ?

ಒಂದು ದೇಶದಿಂದ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಸಾಮಾನ್ಯವಾಗಿ ಒಂದೇ ಅಧಿಕೃತ ಸಿನಿಮಾವನ್ನು ಆಯ್ಕೆ ಮಾಡಲಾಗುತ್ತದೆ. ಆದರೆ, ಅಕಾಡೆಮಿಯ ಅರ್ಹತಾ ನಿಯಮಗಳನ್ನು ಪೂರೈಸುವ ಇತರ ಸಿನಿಮಾಗಳಿಗೂ ಕೆಲವು ವಿಭಾಗಗಳಲ್ಲಿ ಸ್ವತಂತ್ರವಾಗಿ ಪರಿಗಣನೆಗೆ ಸಲ್ಲಿಸುವ ಅವಕಾಶವಿದೆ. ಸಾಮಾನ್ಯ ವಿಭಾಗಗಳಲ್ಲಿ ಅರ್ಹತೆ ಪಡೆಯಲು ಸಿನಿಮಾ ಅಮೆರಿಕದ ಆರು ಅರ್ಹ ಮಹಾನಗರ ಪ್ರದೇಶಗಳ ಪೈಕಿ ಯಾವುದಾದರೂ ಒಂದರಲ್ಲಿ ಕನಿಷ್ಠ ಏಳು ದಿನಗಳ ಕಾಲ ಸತತವಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಬೇಕು.

ಲಾಸ್ ಏಂಜಲೀಸ್ ಕೌಂಟಿ, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ ಬೇ ಏರಿಯಾ, ಚಿಕಾಗೊ, ಡಲ್ಲಾಸ್-ಫೋರ್ಟ್ ವರ್ತ್ ಹಾಗೂ ಅಟ್ಲಾಂಟಾ ಈ ಪ್ರದೇಶಗಳಾಗಿವೆ. ಈ ಷರತ್ತುಗಳನ್ನು ಪೂರೈಸಿದ ಬಳಿಕ ಚಿತ್ರತಂಡ ಅಥವಾ ವಿತರಕರು ಅಗತ್ಯ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಪ್ರತ್ಯೇಕ ಆಯ್ಕೆ ಪ್ರಕ್ರಿಯೆಯಿದೆ. ಈ ಹಿಂದೆ ದೇಶದ ಅಧಿಕೃತ ಆಯ್ಕೆ ಸಮಿತಿಯ ಮೂಲಕವೇ ಸಿನಿಮಾವನ್ನು ಸಲ್ಲಿಸಬೇಕಿತ್ತು. ಆದರೆ, ಅಕಾಡೆಮಿಯ ಹೊಸ ನಿಯಮದಡಿ ಕೆಲವು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ನಿರ್ದಿಷ್ಟ ಪ್ರಶಸ್ತಿಗಳನ್ನು ಗೆದ್ದ ಸಿನಿಮಾಗಳಿಗೂ ಸ್ವತಂತ್ರವಾಗಿ ಈ ವಿಭಾಗದಲ್ಲಿ ಅರ್ಹತೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಈ ನಿಯಮದಡಿ ಭಾರತದ ಅಧಿಕೃತ ಪ್ರವೇಶ 'ಗೊಂಡಳ್' ಜತೆಗೆ, 2026ರ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಪ್ಲಾಟ್‌ಫಾರ್ಮ್ ಪ್ರಶಸ್ತಿ ಗೆದ್ದ ನಾಗಾ ಭಾಷೆಯ 'ಅಂಗ್' ಚಿತ್ರವೂ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದ ಪರಿಗಣನೆಗೆ ಅರ್ಹತೆ ಪಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

'ರಾಮಾಯಣ ಭಾಗ 1'

ನಮೀತ್​ ಮಲ್ಹೋತ್ರಾ ನಿರ್ಮಾಣದಲ್ಲಿ, ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬಂದಿರುವ 'ರಾಮಾಯಣ: ಭಾಗ 1' ಇದೇ ನವೆಂಬರ್ 5ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ತೆರೆಕಂಡಿತು. ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಸಹ ನಿರ್ಮಾಪಕರಾಗಿಯೂ ಚಿತ್ರಕ್ಕೆ ಕೈಜೋಡಿಸಿದ್ದಾರೆ.

Also Read
ತುಟಿ ದೊಡ್ಡದಾದಷ್ಟೂ ವರದಕ್ಷಿಣೆ ಹೆಚ್ಚು! ಈ ಬುಡಕಟ್ಟಿನ ಸಂಪ್ರದಾಯದ ಹಿಂದಿರುವ ವಿಚಿತ್ರ ಕಥೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ | Lip Plate Tradition
Ramayana: Part 1

ಸಿನಿ ವರದಿಗಳ ಪ್ರಕಾರ, ಇಲ್ಲಿಯವರೆಗೆ ಚಿತ್ರವು ಭಾರತದಲ್ಲಿ 403.95 ಕೋಟಿ ರೂ. ಹಾಗೂ ಜಾಗತಿಕವಾಗಿ 673.90 ಕೋಟಿ ರೂಪಾಯಿಗೂ ಅಧಿಕ ಗಳಿಕೆಯನ್ನು ಕಂಡಿದೆ. ಭಾರತೀಯ ಮಹಾಕಾವ್ಯ ರಾಮಾಯಣವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶ ಹೊತ್ತ ಚಿತ್ರತಂಡ, ಇದೀಗ ಆಸ್ಕರ್ ರೇಸ್​ಗೆ ತಮ್ಮ ಸಿನಿಮಾವನ್ನು ಮುಂದಿಟ್ಟಿದೆ. ಪರಿಗಣನೆಗೆ ಸಲ್ಲಿಕೆಯಾಗಿರುವುದು ಆಸ್ಕರ್ ನಾಮನಿರ್ದೇಶನ ಅಥವಾ ಪ್ರಶಸ್ತಿ ಖಚಿತ ಎಂದರ್ಥವಲ್ಲ. ಅಂತಿಮ ಆಯ್ಕೆ ಪ್ರಕ್ರಿಯೆಯ ಬಳಿಕವೇ ಚಿತ್ರದ ಮುಂದಿನ ಹಂತ ಸ್ಪಷ್ಟವಾಗಲಿದೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).