ಡ್ರಮ್​ನಲ್ಲಿ ತೇಲುತ್ತಾ ಬಂದ ಹೆಣ: ಬಾಂಗ್ಲಾದಲ್ಲಿ ಮುಂದುವರಿದ ಹಿಂದೂಗಳ ನರಮೇಧ; ಚಿನ್ನದಂಡಗಿ ಮಾಲೀಕನನ್ನು ಕೊಚ್ಚಿ ಕೊಂದ ದುರುಳರು! Hindu Man in Bangladesh

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಜ್ಯುವೆಲ್ಲರಿ ಅಂಗಡಿ ಮಾಲೀಕನ ಭೀಕರ ಹತ್ಯೆ. ಡ್ರಮ್‌ನಲ್ಲಿ ಶವ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆ. ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಸಂಪೂರ್ಣ ವಿವರ ಇಲ್ಲಿದೆ.
Deceased unfortunate Niranjan Chandra Sutradhar, the drum where the body was found
ಮೃತ ದುರ್ದೈವಿ ನಿರಂಜನ್​ ಚಂದ್ರ ಸೂತ್ರಧರ್, ಶವ ಪತ್ತೆಯಾದ ಡ್ರಮ್​​
Published on: 

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ಮತ್ತು ಹತ್ಯೆಗಳ ಸರಣಿ ಮುಂದುವರಿದಿದ್ದು, ದೇಶದಲ್ಲಿ ಮತ್ತೊಂದು ಆತಂಕಕಾರಿ ಘಟನೆ ವರದಿಯಾಗಿದೆ. ಮೈಮೆನ್ಸಿಂಗ್ ಜಿಲ್ಲೆಯ ಚಿನ್ನದಂಗಡಿ ಮಾಲೀಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಡ್ರಮ್‌ನಲ್ಲಿ ಕಟ್ಟಿ ನೀರಿನಲ್ಲಿ ಎಸೆದಿರುವ ಪೈಶಾಚಿಕ ಘಟನೆ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿದೆ.

ಡ್ರಮ್‌ನಲ್ಲಿ ತೇಲುತ್ತಿತ್ತು ಶವ!

ಮೈಮೆನ್ಸಿಂಗ್ ಜಿಲ್ಲೆಯ ಬೆಗುನ್‌ಬಾರಿ ಎಂಬಲ್ಲಿ ನೀರಿನಲ್ಲಿ ಡ್ರಮ್‌ವೊಂದು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದು ಡ್ರಮ್ ಪರಿಶೀಲಿಸಿದ ಪೊಲೀಸರಿಗೆ ಒಳಗಿದ್ದ ದೃಶ್ಯ ಕಂಡು ದಂಗಾಗಿದ್ದಾರೆ.

ಮೃತರನ್ನು 50 ವರ್ಷ ವಯಸ್ಸಿನ ನಿರಂಜನ್ ಚಂದ್ರ ಸೂತ್ರಧರ್ ಎಂದು ಗುರುತಿಸಲಾಗಿದೆ. ಮೃತ ದುರ್ದೈವಿ ಮೈಮೆನ್ಸಿಂಗ್‌ನ ಪ್ರದೇಶದಲ್ಲಿ ಆಭರಣದ ಅಂಗಡಿಯನ್ನು ನಡೆಸುತ್ತಿದ್ದರು. ನಿರಂಜನ್​ನ ತಲೆ ಹಾಗೂ ಎದೆಯ ಮೇಲೆ ಹರಿತವಾದ ಆಯುಧದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿರುವ ಗಾಯಗಳು ಸ್ಪಷ್ಟವಾಗಿ ಕಂಡುಬಂದಿವೆ. ಶವವನ್ನು ಡ್ರಮ್‌ನಲ್ಲಿ ತುಂಬಿ ನೀರಿನಲ್ಲಿ ಎಸೆಯುವ ಮುನ್ನವೇ ಬೇರೆಡೆ ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪತ್ತೆಯಾಗಿದ್ದು ಹೇಗೆ?

ಪ್ರಾರಂಭದಲ್ಲಿ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗಿತ್ತುಮ ಆದರೆ ಮೃತ ವ್ಯಕ್ತಿ ಧರಿಸಿದ್ದ ಪ್ಯಾಂಟ್​ ಜೇಬಿನಲ್ಲಿದ್ದ 'ಮೈಮೆನ್ಸಿಂಗ್ ಹಿಂದೂ ಕೋ-ಆಪರೇಟಿವ್ ಕ್ರೆಡಿಟ್ ಯೂನಿಯನ್ ಲಿಮಿಟೆಡ್' ನ ಸಣ್ಣ ಟೋಕನ್ ಪೊಲೀಸರಿಗೆ ಪ್ರಕರಣವನ್ನು ಬೇಧಿಸಲು ದಾರಿ ತೋರಿಸಿದೆ.

ಕೂಡಲೇ ಆ ಸಂಸ್ಥೆಯನ್ನು ಸಂಪರ್ಕಿಸಿದ ಪೊಲೀಸರು, ಟೋಕನ್ ಸಹಾಯದಿಂದ ಮೃತನನ್ನು ನಿರಂಜನ್ ಚಂದ್ರ ಎಂದು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಅವರ ಪತ್ನಿ ಸುಮಿತಾ ರಾಣಿ ಮತ್ತು ಮಗ ಜಾಯ್ ಸೂತ್ರಧರ್ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಗುರುತಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಇಲ್ಲಿವರೆಗೆ ಯಾರನ್ನು ಬಂಧಿಸಿಲ್ಲ ಎಂದು ತಿಳಿದು ಬಂದಿದೆ.

ಬಾಂಗ್ಲಾದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ!

ಈ ಭೀಕರ ಹತ್ಯೆಯು ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕವನ್ನು ಹುಟ್ಟುಹಾಕಿದೆ. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಆರಂಭವಾದ ಅಲ್ಪಸಂಖ್ಯಾತರ ಮೇಲಿನ ದಾಳಿಗಳು, ಪ್ರಸ್ತುತ ಬಿಎನ್‌ಪಿ (BNP) ಆಡಳಿತದಲ್ಲೂ ಮುಂದುವರಿದಿದೆ ಎಂದು ಸ್ಥಳೀಯ ಮಾಧ್ಯಮಗಳು ಹಾಗೂ ರಾಜಕೀಯ ಮುಖಂಡರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Also Read
ಬಿರಿಯಾನಿ ಬಿಟ್ಟಿಲ್ಲ, ಐಸ್​ಕ್ರೀಂ ತ್ಯಜಿಸಿಲ್ಲ: 4 ವರ್ಷದಲ್ಲಿ 38 ಕೆಜಿ ಇಳಿಸಿಕೊಂಡ ಖುಷ್ಬೂ ಸುಂದರ್!​ ಜಿಮ್​ಗೂ ಹೋಗದೆ Weight Loss ಮಾಡಿದ್ದಾದರೂ ಹೇಗೆ? Kushboo Sundar
Deceased unfortunate Niranjan Chandra Sutradhar, the drum where the body was found

ದೇವಾಲಯಗಳ ಮೇಲೆ ದಾಳಿ ಮಾಡುವುದು, ಮನೆಗಳಿಗೆ ಬೆಂಕಿ ಹಚ್ಚುವುದು, ಭೂಮಿ ಕಬಳಿಸುವುದು ಮತ್ತು ಬಾಂಗ್ಲಾವನ್ನು ಬಿಟ್ಟು ತೊಲಗುವಂತೆ ಹಿಂದೂಗಳಿಗೆ ಬಲವಂತ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕೆಲ ದಿನಗಳ ಹಿಂದೆ ರಂಗ್‌ಪುರ ನಗರದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಗಣಪತಿ ಚಕ್ರವರ್ತಿ ಹಾಗೂ ಅವರ ಇಡೀ ಕುಟುಂಬವನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಗಳ ವಿರುದ್ಧ ಆಡಳಿತಾರೂಢ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೆ ಮೌನವಾಗಿರುವುದು ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.

ದಿನದಿಂದ ದಿನಕ್ಕೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಸರಣಿ ದೌರ್ಜನ್ಯಗಳು, ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇದರ ವಿರುದ್ಧ ಧ್ವನಿ ಎತ್ತಬೇಕಾದ ತುರ್ತು ಅಗತ್ಯವಿದೆ ಎನ್ನುವುದು ಬಾಂಗ್ಲಾದಲ್ಲಿರುವ ಹಿಂದೂಗಳ ಮನವಿಯಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net