

Weight Loss: ಸಿನಿಮಾ ಹಾಗೂ ರಾಜಕೀಯ ರಂಗದಲ್ಲಿ ಸದಾ ಸಕ್ರೀಯವಾಗಿರುವ ಜನಪ್ರಿಯ ನಟಿ ಖುಷ್ಬೂ ಸುಂದರ್ (Kushboo Sundar) ತಮ್ಮ ಅದ್ಭುತವಾದ ನಟನೆ ಮೂಲಕ 80, 90 ರ ದಶಕದಲ್ಲಿ ಸಿನಿಮಾ ರಂಗವನ್ನು ಆಳಿದ ನಟಿ ಎಂದರೂ ತಪ್ಪಾಗದು.
ಆದರೆ, ಈಗ ನಟಿ ಖುಷ್ಬೂ ಕಳೆದ ನಾಲ್ಕು ವರ್ಷಗಳಲ್ಲಿ ತಮ್ಮ ತೂಕವನ್ನು ಗಣನೀಯವಾಗಿ ಇಳಿಕೆ ಮಾಡಿಕೊಂಡು ಎಲ್ಲರೂ ಹಬ್ಬೇರುವಂತೆ ಮಾಡಿದ್ದಾರೆ. ಮಾಹಿತಿ ಪ್ರಕಾರ, ಶಿಸ್ತಿನಿಂದ ಡಯಟ್ ಮಾಡಿದ ನಟಿ ನಾಲ್ಕು ವರ್ಷಗಳಲ್ಲಿ ಭರ್ತಿ 38 ಕೆಜಿ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಾಮಾನ್ಯವಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕೆಂದರೆ, ನಮಗೆ ಅತ್ಯಂತ ಇಷ್ಟವಿರುವ ಆಹಾರಗಳನ್ನು ತ್ಯಜಿಸಬೇಕು, ಸಿಹಿತಿಂಡಿಗಳನ್ನು ತಪ್ಪಿಯೂ ಸೇವಿಸಬಾರದು ಎಂಬೆಲ್ಲಾ ಮಾತುಗಳನ್ನು ಕೇಳಿರುತ್ತೇವೆ. ಆದರೆ ಖಷ್ಬೂ, ತಮ್ಮ ನೆಚ್ಚಿನ ಆಹಾರಗಳನ್ನು ತಿನ್ನುತ್ತಲೇ, ಜಿಮ್ಗೂ ಸಹ ಹೋಗದೆ ತೂಕವನ್ನು ಇಳಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಖಷ್ಬೂ ಅವರ ತೂಕ ಇಳಿಕೆ ಮಾಡಿಕೊಳ್ಳುವ ಪ್ರಯಾಣ ಹೇಗಿತ್ತು? ಎನ್ನುವುದನ್ನು ಇಲ್ಲಿ ತಿಳಿಯೋಣ.
ಖುಷ್ಬೂ ಅವರ ತೂಕ ಒಮ್ಮೆ ಬರೋಬ್ಬರಿ 98 ಕೆಜಿ ಮುಟ್ಟಿತ್ತಂತೆ. ರಜನಿಕಾಂತ್ ಜೊತೆ ನಟಿಸಿದ ಸಿನಿಮಾವೊಂದರಲ್ಲಿ ತೆರೆಯ ಮೇಲೆ ತಮ್ಮನ್ನು ತಾವು ನೋಡಿಕೊಂಡಾಗ, ಸ್ವತಃ ಅವರೇ ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಇದರ ಜತೆಗೆ ಮೆಟ್ಟಿಲುಗಳನ್ನು ಹತ್ತುವಾಗ ಮೊಣಕಾಲು ನೋವು ಕೂಡ ಶುರುವಾಯಿತು.
ಮನೆಯಲ್ಲಿ ಅವರ ಪತಿ ಆಗಲೇ ವಾಕಿಂಗ್ ಮತ್ತು ಯೋಗ ಮಾಡುತ್ತಿದ್ದರು, ಮಕ್ಕಳು ಸಹ ತಮ್ಮ ಫಿಟ್‌ನೆಸ್ ಕಡೆ ಗಮನ ಹರಿಸುತ್ತಿದ್ದರು. ಇವೆಲ್ಲವೂ ಖುಷ್ಬೂ ಅವರಿಗೆ ತಮ್ಮ ಆರೋಗ್ಯದ ಬಗ್ಗೆ ಯೋಚಿಸುವಂತೆ ಮಾಡಿತು. ಕೇವಲ ನಾಲ್ಕು ವರ್ಷಗಳ ಪರಿಶ್ರಮದಿಂದ ಅವರು ಇಂದು ತಮ್ಮ ದೇಹವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ.
ಖುಷ್ಬೂ ಅವರಿಗೆ ಮಟನ್ ಬಿರಿಯಾನಿ ಎಂದರೆ ಬಹಳ ಇಷ್ಟವಂತೆ. ತೂಕ ಇಳಿಸುವ ಭರದಲ್ಲಿ ಅವರು ಬಿರಿಯಾನಿಯನ್ನು ಎಂದಿಗೂ ಸಂಪೂರ್ಣವಾಗಿ ತ್ಯಜಿಸಲಿಲ್ಲ. ಬದಲಿಗೆ, ಮೊದಲು ಸೇವಿಸುತ್ತಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ. ಮೊದಲೆಲ್ಲಾ ಪ್ಲೇಟ್ ತುಂಬಾ ಹಾಕಿಕೊಂಡು ತಿನ್ನುತ್ತಿದೆ.
ನಂತರ ಒಂದು ಬೌಲ್ ರೈಸ್ ಹಾಗೂ ಕೇವಲ ಒಂದು ಪೀಸ್ ಮಟನ್ ತಿನ್ನಲು ಅಭ್ಯಾಸ ಮಾಡಿಕೊಂಡೆ ಎಂದಿದ್ದಾರೆ. ಆದರೆ, ನನಗೆ ತಿನ್ನುವ ಪ್ರತಿಯೊಂದನ್ನು ಅಳೆದು ತಿನ್ನಲು ಸಾಧ್ಯವಿರಲಿಲ್ಲ, ಹೀಗಾಗಿ ಏನು ತಿನ್ನಬೇಕು ಎನಿಸುತ್ತಿತ್ತೋ ಅದನ್ನು ತಿನ್ನುತ್ತಿದೆ, ಆದರೆ ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡಿಕೊಂಡೆ ಎಂದಿದ್ದಾರೆ.
ಬಹಳಷ್ಟು ಜನ ತೂಕ ಇಳಿಸುವಾಗ ಸಕ್ಕರೆ ಹಾಗೂ ಸಿಹಿತಿಂಡಿಗಳಿಂದ ದೂರವಿರುತ್ತಾರೆ. ಆದರೆ ಖುಷ್ಬೂ ತೂಕ ಇಳಿಕೆಯ ಹಾದಿಯಲ್ಲೂ ಐಸ್ ಕ್ರೀಮ್ ಹಾಗೂ ಸಿಹಿತಿಂಡಿಗಳನ್ನು ಸವಿಯುವುದನ್ನು ನಿಲ್ಲಿಸಲಿಲ್ಲ. ಅವರು ಈಗಲೂ ಹಾಲಿನ ಜೊತೆ ಸಕ್ಕರೆ ಹಾಕಿದ ಚಹಾ ಕುಡಿಯುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ಖುಷ್ಬೂ ಅವರಿಗೆ ಜಿಮ್ ವರ್ಕೌಟ್ ಮಾಡುವುದು ಅಷ್ಟಾಗಿ ಇಷ್ಟವಿರಲಿಲ್ಲ. ಹೀಗಾಗಿ ಅವರು ಜಿಮ್ ಕಡೆ ಹೋಗಲೇ ಇಲ್ಲ. ಬದಲಿಗೆ ಪತಿಯ ಪ್ರೇರಣೆಯಿಂದ ವಾಕಿಂಗ್ ಮತ್ತು ಯೋಗವನ್ನು ಪ್ರತಿದಿನ ಮಾಡುತ್ತಿದ್ದರಂತೆ. ದೈಹಿಕ ಚಟುವಟಿಕೆ, ಕಡಿಮೆ ಪ್ರಮಾಣದ ಆಹಾರ ಮತ್ತು ಸತತ ಪ್ರಯತ್ನದಿಂದ ಅವರ ದೇಹದಲ್ಲಾದ ಬದಲಾವಣೆ, ತೂಕ ಇಳಿಸಲು ನಟಿಗೆ ಇನ್ನಷ್ಟು ಪ್ರೇರಣೆಯನ್ನು ನೀಡಿದೆ.
ತಮ್ಮ ವೇಟ್ ಲಾಸ್ ಕುರಿತು ಖಾಸಗಿ ವಾಹಿನಿ ಜೊತೆ ಮಾತನಾಡುತ್ತಾ ಖುಷ್ಬೂ, ತೂಕ ಇಳಿಸಿಕೊಳ್ಳುವುದಕ್ಕಿಂತ ಅದನ್ನು ದೀರ್ಘಕಾಲ ಕಾಯ್ದುಕೊಳ್ಳುವುದು ನಿಜವಾದ ಸವಾಲು ಎಂದಿದ್ದಾರೆ. ಜನರು ಸಾಮಾನ್ಯವಾಗಿ ಹಸಿವಿಗಾಗಿ ಅಲ್ಲ, ಬದಲಿಗೆ ನಾಲಗೆಯ ರುಚಿಗಾಗಿ ಹೆಚ್ಚು ತಿನ್ನುತ್ತಾರೆ ಎಂದಿದ್ದಾರೆ. ಈ ಸತ್ಯವನ್ನು ಅರಿತುಕೊಂಡ ನಟಿ, ಕಠಿಣ ನಿರ್ಬಂಧಗಳನ್ನು ಹೇರಿಕೊಳ್ಳುವ ಬದಲು ಮಿತಿಯಾದ ಆಹಾರ, ದೈಹಿಕ ಚಟುವಟಿಕೆ ಹಾಗೂ ನಿರಂತರತೆಯನ್ನೇ ತಮ್ಮ ಯಶಸ್ಸಿನ ಮಂತ್ರವನ್ನಾಗಿಸಿಕೊಂಡಿದ್ದಾರೆ, (ಏಜೆನ್ಸೀಸ್).