ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆದ ದೊಡ್ಡಣ್ಣ! ಅಮೆರಿಕದ ಈ ನಿರ್ಧಾರಕ್ಕೆ ಕಾರಣವೇನು ಗೊತ್ತೆ? World Health Organization

ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬಿದ್ದ ಅಮೆರಿಕ
  • ಕೋವಿಡ್​ ಸಾಂಕ್ರಾಮಿಕದ ಸಂದರ್ಭದಲ್ಲಿ WHO ವಿಫಲ ಎಂಬ ಆರೋಪ
  • ಅಮೆರಿಕ ಇನ್ನೂ ಬಾಕಿ ಹಣ ಪಾವತಿಸಬೇಕೆಂದ WHO
ಅಮೆರಿಕ: ಭೌಗೋಳಿಕ ರಾಜಕೀಯದಲ್ಲಿ ಬಹುದೊಡ್ಡ ಸ್ಥಾನ ಪಲ್ಲಟ ನಡೆದಿದ್ದು, ಯುನೈಟೆಡ್ ಸ್ಟೇಟ್ಸ್ ಆಫ್​ ಅಮೆರಿಕ, ವಿಶ್ವ ಆರೋಗ್ಯ ಸಂಸ್ಥೆಯಿಂದ (World Health Organization) ತನ್ನ ಸದಸ್ಯತ್ವವನ್ನು ಅಧಿಕೃತವಾಗಿ ರದ್ದುಗೊಳಿಸಿಕೊಂಡಿದೆ.
ಈ ಘೋಷಣೆಯನ್ನು ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಮತ್ತು ವಿದೇಶಾಂಗ ಇಲಾಖೆ ಜಂಟಿಯಾಗಿ ಮಾಡಿವೆ. ಈ ನಿರ್ಧಾರದ ನಂತರ, ಜಿನೀವಾದಲ್ಲಿರುವ WHO ಪ್ರಧಾನ ಕಚೇರಿಯ ಹೊರಗೆ ಅಮೇರಿಕನ್ ಧ್ವಜವನ್ನು ತೆಗೆದುಹಾಕಲಾಗಿದೆ.

WHO ಗೆ ಮತ್ತೆ ಸೇರುವ ಯಾವುದೇ ಯೋಜನೆ ಇಲ್ಲ ಎಂದ ಅಮೆರಿಕ

ಅಮೆರಿಕದ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ನಾವು WHO ಗೆ ವೀಕ್ಷಕ ರಾಷ್ಟ್ರವಾಗಿಯೂ ಸಹ ಸೇರುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಅದರೆ ನೂತನವಾಗಿ ತಲೆದೂರುವ ರೋಗಗಳ ಮೇಲೆ ಕಣ್ಗಾವಲು ಮತ್ತು ನಿರ್ಣಾಯಕ ಆರೋಗ್ಯ ಸವಾಲುಗಳಂತಹ ವಿಷಯಗಳ ಕುರಿತು ಇತರ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಹಕಾರಕ್ಕೆ ಯುನೈಟೆಡ್ ಸ್ಟೇಟ್ಸ್ ಆದ್ಯತೆ ನೀಡುತ್ತದೆ ಎಂದು ಅವರು ಹೇಳಿದರು.
ಈ ನಿರ್ಧಾರವು ವಿಶ್ವ ಆರೋಗ್ಯ ಸಂಸ್ಥೆಯ ಮೇಲೆ ಅಮೆರಿಕ ನಂಬಿಕೆ ಕಳೆದುಕೊಂಡಿರುವ ಸೂಚನೆಯಾಗಿದ್ದು, ಕೋವಿಡ್ ಸಾಂಕ್ರಾಮಿಕವನ್ನು ತಡೆಯುವಲ್ಲಿ ವಿಶ್ವ ಸಂಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬೀಳುವುದು ಟ್ರಂಪ್​ ನಿರ್ಧಾರ
ಸಾಂಕ್ರಾಮಿಕ ರೋಗದ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕಳಪೆ ಬಿಕ್ಕಟ್ಟು ನಿರ್ವಹಣೆಯನ್ನು ಪ್ರದರ್ಶಿಸಿತು ಮತ್ತು ಅಮೆರಿಕದ ನಿರಂತರ ಬೇಡಿಕೆಗಳಿಗೆ ರಚನಾತ್ಮಕ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ಅಮೆರಿಕ ಹೇಳಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ಅಧಿಕಾರ ವಹಿಸಿಕೊಂಡ ಮೊದಲ ದಿನದಂದು ಈ ಆದೇಶಕ್ಕೆ ಸಹಿ ಹಾಕುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕವನ್ನು ಹಿಂತೆಗೆದುಕೊಳ್ಳಲು ಪ್ರಾರಂಭಿಸಿದರು.

ಅಮೆರಿಕ ಬಾಕಿ ಹಣ ಪಾವತಿಸಿಲ್ಲ

2024 ಮತ್ತು 2025 ರ ಸದಸ್ಯತ್ವ ಶುಲ್ಕವಾದ ಸುಮಾರು 260 ಮಿಲಿಯನ್ ಡಾಲರ್‌ಗಳನ್ನು ಅಮರಿಕ ಇನ್ನೂ ಪಾವತಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಬಾಕಿಗಳನ್ನು ಪಾವತಿಸದೆ, ಸಂಸ್ಥೆಯಿಂದ ಸಂಪೂರ್ಣ ಬೇರ್ಪಡಿಕೆ ಸಾಧ್ಯವಿಲ್ಲ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಸಂಸ್ಥೆಯಿಂದ ಉಂಟಾದ ಆರ್ಥಿಕ ನಷ್ಟಗಳಿಂದ ಬಾಕಿಯಿರುವ ಹಣವನ್ನು ನಾವು ನಿಲ್ಲಿಸಿದ್ದೇವೆ ಎನ್ನುವುದು ಅಮೆರಿಕದ ವಾದವಾಗಿದೆ.

ವಿಶ್ವ ಆರೋಗ್ಯ ಭದ್ರತೆಯ ಮೇಲೆ ಬೀರಲಿದೆ ಪರಿಣಾಮ

ಯುಎಸ್ ನಿರ್ಗಮನವು ಜಾಗತಿಕ ಆರೋಗ್ಯ ಸಹಕಾರಕ್ಕೆ ಗಂಭೀರ ಪರಿಣಾಮಗಳನ್ನು ಬೀರಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಜಾಗತಿಕ ಆರೋಗ್ಯ ಕಾನೂನು ತಜ್ಞ ಲಾರೆನ್ಸ್ ಗೋಸ್ಟಿನ್, ಅಮೆರಿಕದ ಈ ಕ್ರಮವನ್ನು ಕಾನೂನು ಉಲ್ಲಂಘನೆ ಎಂದು ಕರೆದ್ದಿದ್ದಾರೆ.
ಫೆಬ್ರವರಿಯಲ್ಲಿ ನಡೆಯಲಿರುವ ಮುಂಬರುವ WHO ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸುವ ನಿರೀಕ್ಷೆಯಿದ್ದು, ಅಲ್ಲಿ ಸದಸ್ಯ ರಾಷ್ಟ್ರಗಳು ಅಮೆರಿಕದ ನಿರ್ಗಮನದ ಪರಿಣಾಮಗಳ ಬಗ್ಗೆ ಚರ್ಚಿಸಬಹುದು ಎಂದು ಹೇಳಲಾಗುತ್ತಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net