ವೆನೆಜುವೆಲಾ ಬಳಿಕ ಕ್ಯೂಬಾ ಮೇಲೆ ಟ್ರಂಪ್ ಕಣ್ಣು: ಕಮ್ಯುನಿಸ್ಟ್ ಆಡಳಿತ ಅಂತ್ಯಗೊಳಿಸಲು ಅಮೆರಿಕ ಮಾಸ್ಟರ್ ಪ್ಲಾನ್! Donald Trump

ಡೊನಾಲ್ಡ್ ಟ್ರಂಪ್,  ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್
ಡೊನಾಲ್ಡ್ ಟ್ರಂಪ್, ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್
Published on

ಪ್ರಮುಖ ಮುಖ್ಯಾಂಶಗಳು

  • ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊವನ್ನು ಪದಚ್ಯುತಿಗೊಳಿಸಿದ ಅಮೆರಿಕ
  • ಗ್ರೀನ್‌ಲ್ಯಾಂಡ್​ನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಅಮೆರಿಕ ಅಧ್ಯಕ್ಷರ ನಿರಂತರ ಹೇಳಿಕೆ
  • ಕ್ಯೂಬಾದಲ್ಲಿ ಕಮ್ಯುನಿಸ್ಟ್ ಆಡಳಿತವನ್ನು ಕೊನೆಗೊಳಿಸುವುದಾಗಿ ಹೇಳಿರುವ ಡೊನಾಲ್ಡ್ ಟ್ರಂಪ್
ಅಮೆರಿಕ: ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಪದಚ್ಯುತಿ ನಂತರ ಗ್ರೀನ್‌ಲ್ಯಾಂಡ್​ನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಿರಂತರ ಹೇಳಿಕೆ ನೀಡುತ್ತಿರುವುದನ್ನು ಜಗತ್ತು ಕೇಳಿಸಿಕೊಳ್ಳುತ್ತಿದೆ.
ಜಗತ್ತಿನಲ್ಲಿ ತನ್ನ ಆಡಳಿತ ಛಾಪನ್ನು ಖಾಯಂಗೊಳಿಸ ಬೇಕೆಂದು ಶಪತ ಮಾಡಿರುವ ಡೊನಾಲ್ಡ್ ಟ್ರಂಪ್ ಈ ವರ್ಷ (2026) ಅಂತ್ಯದ ಒಳಗಾಗಿ ಕ್ಯೂಬಾ ದೇಶವನ್ನು ಕಮ್ಯುನಿಸ್ಟ್ ಆಡಳಿತದಿಂದ ಮುಕ್ತಗೊಳಿಸಲು ಯೋಜನೆಯನ್ನು ರೂಪಿಸುತ್ತಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಕೆರಿಬಿಯನ್ ದ್ವೀಪದಲ್ಲಿ ಸುಮಾರು ಏಳು ದಶಕಗಳಿಂದ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಸರ್ಕಾರವನ್ನು ಕಿತ್ತೊಗೆಯಲು ಟ್ರಂಪ್ ನಿರತರಾಗಿದ್ದಾರೆ, ಆದರೆ ಈ ದ್ವೀಪಗಳ ಮೇಲೆ ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಬಲಿಷ್ಟ ಹಿಡಿತವನ್ನು ಹೊಂಡಿದ್ದಾರೆ. ಆದರೆ ಕ್ಯೂಬಾದ ಮಿತ್ರ ರಾಷ್ಟ್ರ ವೆನೆಜುವೆಲಾದ ಸರ್ವಾಧಿಕಾರಿ ಮಡುರೊ ಅವರ ಪದಚ್ಯುತಿಯ ನಂತರ, ಕ್ಯೂಬಾದ ಆರ್ಥಿಕತೆಯು ಕುಸಿತದ ಅಂಚಿನಲ್ಲಿದೆ ಎಂದು ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕ್ಯೂಬಾ-ವೆನೆಜುವೆಲಾ ಭಾಯ್​-ಭಾಯ್​

ಕ್ಯೂಬಾ ಬಹಳ ಹಿಂದಿನಿಂದಲೂ ವೆನೆಜುವೆಲಾದ ಸಮಾಜವಾದಿ ಆಡಳಿತದ ಮಿತ್ರ ರಾಷ್ಟ್ರವಾಗಿದ್ದು, ತೈಲಕ್ಕೆ ಬದಲಾಗಿ ವೈದ್ಯಕೀಯ, ಭದ್ರತೆ ಮತ್ತು ಗುಪ್ತಚರ ಸಿಬ್ಬಂದಿಯನ್ನು ಒದಗಿಸುತ್ತದೆ. ಅಮೆರಿಕದ ಕಾರ್ಯಾಚರಣೆಯ ಸಮಯದಲ್ಲಿ ಮಡುರೊಗೆ ಕಾವಲು ಕಾಯುತ್ತಿದ್ದ ಸುಮಾರು ಮೂರು ಡಜನ್ ಕ್ಯೂಬನ್ ಏಜೆಂಟ್‌ಗಳು ಕೊಲ್ಲಲ್ಪಟ್ಟರು ಎಂಬ ಮಾಹಿತಿ ಇದೆ.
ಅಮೆರಿಕದ ಗುಪ್ತಚರ ಅಂದಾಜಿನ ಪ್ರಕಾರ, ಕ್ಯೂಬಾ ಮೂಲಭೂತ ಸರಕುಗಳು ಮತ್ತು ಔಷಧಿಗಳ ದೀರ್ಘಕಾಲದ ಕೊರತೆಯನ್ನು ಎದುರಿಸುತ್ತಿದೆ ಮತ್ತು ಆಗಾಗ್ಗೆ ವಿದ್ಯುತ್ ಕಡಿತದಿಂದ ಬಳಲುತ್ತಿದೆ. ದ್ವೀಪ ರಾಷ್ಟ್ರವು ವಾರಗಳಲ್ಲಿ ಇಂಧನ ಖಾಲಿಯಾಗುವ ಹಂತದಲ್ಲಿದ್ದು, ಇದು ಆರ್ಥಿಕತೆಯನ್ನು ಸಂಪೂರ್ಣ ಸ್ಥಗಿತಗೊಳಿಸುವ ಸಾಧ್ಯತೆಯಿದೆ., ಟ್ರಂಪ್ ಆಡಳಿತವು ಕ್ಯೂಬಾಗೆ ಇನ್ನು ಮುಂದೆ ವೆನೆಜುವೆಲಾದ ತೈಲ ಹರಿಯುವುದನ್ನು ತಡೆದು ಅಲ್ಲಿಯ ಆಡಳಿತವನ್ನು ಮತ್ತಷ್ಟು ದುರ್ಬಲಗೊಳಿಸಲು ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಅಮೆರಿಕದ ಪ್ಲಾನ್​ ಏನು?

ಮಡುರೊ ಅವರನ್ನು ಯುಎಸ್ ಪಡೆಗಳು ಸೆರೆಹಿಡಿಯುವುದು ಮತ್ತು ಮಧ್ಯಂತರ ವೆನೆಜುವೆಲಾದ ಸರ್ಕಾರದಿಂದ ರಿಯಾಯಿತಿಗಳನ್ನು ಪಡೆಯುವಲ್ಲಿ ಯಶಸ್ಸು ಗಳಿಸಿದ ನಂತರ ಟ್ರಂಪ್ ಆಡಳಿತವು ಈಗ ಕ್ಯೂಬಾದತ್ತ ಮುಖಮಾಡಿದೆ. ಅದಕ್ಕಾಗಿ, ಮಿಯಾಮಿ ಮತ್ತು ವಾಷಿಂಗ್ಟನ್‌ನಲ್ಲಿರುವ ಕ್ಯೂಬನ್ ದೇಶಭ್ರಷ್ಟರು ಮತ್ತು ನಾಗರಿಕ ಗುಂಪುಗಳೊಂದಿಗೆ ಸಭೆಗಳನ್ನು ನಡೆಸುವ ಮೂಲಕ ಕ್ಯೂಬಾಗೆ ನೂತನ ಅಧ್ಯಕ್ಷನನ್ನು ರೂಪಿಸುವ ಗುರಿಯನ್ನು ಹೊಂದಿದೆ.
ಕ್ಯೂಬಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಬಳಸುವುದಾಗಿ ಅಮೆರಿಕ ಸಾರ್ವಜನಿಕವಾಗಿ ಬೆದರಿಕೆ ಹಾಕಿಲ್ಲವಾದರೂ, ಟ್ರಂಪ್, ತುಂಬಾ ತಡವಾಗುವ ಮೊದಲು ಅವರು ಒಪ್ಪಂದ ಮಾಡಿಕೊಳ್ಳಬೇಕೆಂದು ನಾನು ಕ್ಯೂಬಾಗೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಮುಂದೆ ವೆನಿಜುವೆಲಾದ ತೈಲ ಮತ್ತು ಹಣ ಕ್ಯೂಬಾಗೆ ಹೋಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜನವರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು.

ಕ್ಯೂಬಾದ ನಿಲುವೇನು?

ಕ್ಯೂಬಾದ ಉಪ ವಿದೇಶಾಂಗ ಸಚಿವ ಕಾರ್ಲೋಸ್ ಫೆರ್ನಾಂಡಿಸ್ ಡಿ ಕೊಸಿಯೊ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ವಿದೇಶಾಂಗ ಇಲಾಖೆಯಿಂದ ಕ್ಯೂಬಾ ವಿರುದ್ಧದ ಅಪೋಕ್ಯಾಲಿಪ್ಟಿಕ್ ಬೆದರಿಕೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
ಮೆಲಿಸ್ಸಾ ಚಂಡಮಾರುತದಿಂದ ಪೀಡಿತ ಕ್ಯೂಬಾದ ಜನರಿಗೆ ಅತ್ಯಂತ ಅಗತ್ಯವಿರುವ ವಿಪತ್ತು ಪರಿಹಾರದಲ್ಲಿ 3 ಮಿಲಿಯನ್ ಡಾಲರ್ ಕಳುಹಿಸುತ್ತಿರುವುದಾಗಿ ವಿದೇಶಾಂಗ ಇಲಾಖೆ ಘೋಷಿಸಿತು. ಆಹಾರ, ನೀರು ಸಂಸ್ಕರಣಾ ಕಿಟ್‌ಗಳು, ಅಡುಗೆ ಸಲಕರಣೆಗಳು, ಕಂಬಳಿಗಳು ಮತ್ತು ಸೌರ ಲ್ಯಾಂಟರ್ನ್‌ಗಳನ್ನು ಒಳಗೊಂಡ ಸಾಗಣೆಗಳನ್ನು ಮಿಯಾಮಿಯಿಂದ ಪೂರ್ವ ನಗರಗಳಾದ ಹೋಲ್ಗುಯಿನ್ ಮತ್ತು ಸ್ಯಾಂಟಿಯಾಗೊ ಡಿ ಕ್ಯೂಬಾಗೆ ಕಳುಹಿಸಲಾಗಿದೆ.
ವಿದೇಶಾಂಗ ಸಚಿವ ಬ್ರೂನೋ ರೊಡ್ರಿಗಸ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಕ್ಯೂಬಾ ಸರ್ಕಾರವು ತಾತ್ವಿಕವಾಗಿ ಅಂತಹ ಸಹಾಯವನ್ನು ಪಡೆಯಲು ಮುಕ್ತವಾಗಿದ್ದರೂ, ಅಮೆರಿಕ ತನ್ನ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಮಾನವೀಯ ಸಮಸ್ಯೆಯನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net