ಬಾಂಗ್ಲಾ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳನ್ನು ಬಂಧಿಸಿದ ಪಶ್ಚಿಮ ಬಂಗಾಳ ಪೊಲೀಸರು | Usman Hadi murder case

ಉಸ್ಮಾನ್ ಹಾದಿ
ಉಸ್ಮಾನ್ ಹಾದಿ
Published on
ಕೋಲ್ಕತ್ತಾ: 2024ರ ಬಾಂಗ್ಲಾ ದೇಶದ ಆಂತರಿಕ ದಂಗೆಯ ಪ್ರಮುಖ ವಿದ್ಯಾರ್ಥಿ ಯುವ ನಾಯಕ ಉಸ್ಮಾನ್ ಹಾದಿ ಹತ್ಯೆ ಪ್ರಕರಣಕ್ಕೆ(Usman Hadi murder case) ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ಕಾರ್ಯಪಡೆ(ಎಸ್​ಟಿಎಫ್​) ಭಾನುವಾರ(ಮಾ. 08) ಇಬ್ಬರು ಆರೋಪಿಗಳನ್ನು ಬಂಧಿಸಿದೆ ಎಂದು ವರದಿಯಾಗಿದೆ.
ಉತ್ತರ 24 ಪರಗಣ ಜಿಲ್ಲೆಯ ಗಡಿ ಪಟ್ಟಣವಾದ ಬೊಂಗಾನ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಪಟುಖಾಲಿ ಮತ್ತು ಢಾಕಾ ನಿವಾಸಿಗಳಾದ ರಾಹುಲ್ ಅಲಿಯಾಸ್ ಫೈಸಲ್ ಕರೀಮ್ ಮಸೂದ್(37) ಮತ್ತು ಅಲಂಗೀರ್ ಹೊಸೇನ್ (34) ಎಂದು ಗುರುತಿಸಲಾದ ಗುರುತಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಎಸ್​ಟಿಎಫ್​ ಅಧಿಕಾರಿಗಳು, ಬಾಂಗ್ಲಾದಲ್ಲಿ ಕೊಲೆ ಮತ್ತು ಸುಲಿಗೆ ಸೇರಿದಂತೆ ಗಂಭೀರ ಅಪರಾಧಗಳನ್ನು ಮಾಡಿದ್ದ ಇಬ್ಬರು ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಪ್ರವೇಶಿಸಿ ಅಕ್ರಮವಾಗಿ ವಾಸವಾಗಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಮಾ. 07 ಮತ್ತು 08ರ ಮಧ್ಯರಾತ್ರಿ ಆರೋಪಿಗಳನ್ನು ಬಂಧಿಸಲಾಗಿದೆ.
ಇಬ್ಬರು ಆರೋಪಿಗಳು ಮೇಘಾಲಯ ಗಡಿಯ ಮೂಲಕ ಭಾರತದ ಪ್ರದೇಶವನ್ನು ಪ್ರವೇಶಿಸಿ, ಭಾರತದ ವಿವಿಧ ಸ್ಥಳಗಳಿಗೆ ತೆರಳಿ, ಅಂತಿಮವಾಗಿ ಬಾಂಗ್ಲಾದೇಶಕ್ಕೆ ಮರಳುವ ಉದ್ದೇಶದಿಂದ ಬೊಂಗಾವ್‌ಗೆ ಬಂದಿದ್ದರು. ಅವಕಾಶ ಸಿಕ್ಕಾಗ ಬಾಂಗ್ಲಾದೇಶಕ್ಕೆ ಹಿಂತಿರುಗುವ ಉದ್ದೇಶದಿಂದ ಬೊಂಗಾನ್ ಗಡಿ ಪ್ರದೇಶದಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ನ್ಯಾಯಾಲಯವು ಇಬ್ಬರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ತಿಳಿಸಿದ್ದಾರೆ.
2024ರಲ್ಲಿ ಶೇಖ್ ಹಸೀನಾ ಸರ್ಕಾರ ಉರುಳಿಸುವಲ್ಲಿ ನಡೆದ ಆಂತರಿಕ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಂಕ್ವಿಲಾಬ್ ಮಂಚದ ವಿದ್ಯಾರ್ಥಿ ನಾಯಕ ಮತ್ತು ರಾಜಕೀಯ ಕಾರ್ಯಕರ್ತನಾಗಿದ್ದ ಉಸ್ಮಾನ್ ಹಾದಿ ಮೇಲೆ 2025 ಡಿಸೆಂಬರ್ 12ರಂದು ಢಾಕಾದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಬಳಿಕ ಉತ್ತಮ ಚಿಕಿತ್ಸೆಗೆ ಸಿಂಗಾಪುರಕ್ಕೆ ಕರೆದೊಯ್ದರು, ಚಿಕಿತ್ಸೆ ಫಲಕಾರಿಯಾಗದೇ ಡಿ.18ರಂದು ಅವರು ನಿಧನರಾಗಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net