ಈ ಗೆಲುವಿಗೆ ದೇಶವೇ ಹೆಮ್ಮೆಪಡುತ್ತಿದೆ: ವಿಶ್ವ ಚಾಂಪಿಯನ್ಸ್ ಆಟಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ | Narendra Modi

Narendra Modi | ವಿಶ್ವ ಚಾಂಪಿಯನ್ಸ್ ಆಟಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ
Narendra Modi | ವಿಶ್ವ ಚಾಂಪಿಯನ್ಸ್ ಆಟಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ
Published on
ನವದೆಹಲಿ: ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದು ಐತಿಹಾಸಿಕ ಜಯ ಸಾಧಿಸಿದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಈ ಮಹೋನ್ನತ ಗೆಲುವು 140 ಕೋಟಿ ಭಾರತೀಯರ ಹೃದಯವನ್ನು ಹೆಮ್ಮೆ ಮತ್ತು ಸಂತೋಷದಿಂದ ತುಂಬಿದೆ ಎಂದು ಶ್ಲಾಘಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು! ಈ ಗಮನಾರ್ಹ ಗೆಲುವು ಆಟಗಾರರ ಅಸಾಧಾರಣ ಕೌಶಲ್ಯ, ದೃಢನಿಶ್ಚಯ ಮತ್ತು ಅದ್ಭುತ ತಂಡದ ಕೆಲಸವನ್ನು ಪ್ರತಿಬಿಂಬಿಸುತ್ತದೆ ಎಂದು ಬಣ್ಣಿಸಿದ್ದಾರೆ. ಇಡೀ ಪಂದ್ಯಾವಳಿಯುದ್ದಕ್ಕೂ ಭಾರತೀಯ ಆಟಗಾರರು ತೋರಿದ ಅಪ್ರತಿಮ ಧೈರ್ಯ ಮತ್ತು ಸಂಘಟಿತ ಹೋರಾಟವನ್ನು ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪಂದ್ಯಾವಳಿಯ ಕಠಿಣ ಸಂದರ್ಭಗಳನ್ನು ತಂಡವು ಅತ್ಯಂತ ಜಾಣ್ಮೆಯಿಂದ ಎದುರಿಸಿ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿರುವುದನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. "ಟೀಮ್ ಇಂಡಿಯಾ, ನೀವು ಅದ್ಭುತವಾಗಿ ಆಡಿದ್ದೀರಿ. ನಿಮ್ಮ ಈ ಸಾಧನೆಯನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ," ಎಂದು ಅಭಿನಂದಿಸಿದ್ದಾರೆ. ಪ್ರಧಾನಿಯವರ ಈ ಹಾರೈಕೆಯು ವಿಶ್ವವಿಜೇತ ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಚಾಂಪಿಯನ್​ ಆದ ಟೀಮ್​ ಇಂಡಿಯಾ

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಗಾರದ ನಡುವೆ, ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಬೃಹತ್ ಅಂತರದಿಂದ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ (T20 WorldCup Final ) ಮುಡಿಗೇರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತವು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (3 ಬಾರಿ) ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net