ಶೇಖ್ ಹಸೀನಾ ದೇಶಬಿಡುವ ವಿಡಿಯೋ ಹಂಚಿಕೊಂಡಿದ್ದ ಬಾಂಗ್ಲಾ ವಾಯುಪಡೆಯ ಮಾಜಿ ಅಧಿಕಾರಿಯ ಮೃತದೇಹ ನದಿಯಲ್ಲಿ ಪತ್ತೆ..Bangladesh

 ಶೇಖ್ ಹಸೀನಾ ದೇಶಬಿಡುವ ವಿಡಿಯೋ ಹಂಚಿಕೊಂಡಿದ್ದ  ಬಾಂಗ್ಲಾ ವಾಯುಪಡೆಯ ಮಾಜಿ ಅಧಿಕಾರಿಯ ಮೃತದೇಹ ನದಿಯಲ್ಲಿ ಪತ್ತೆ..Bangladesh
Published on: 
  • ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶಬಿಟ್ಟು ತೆರಳುವ ವಿಡಿಯೋವನ್ನು ಹಂಚಿಕೊಂಡಿದ್ದ ಮಾಜಿ ವಾಯುಪಡೆ ಅಧಿಕಾರಿ.

  • ಮಾಜಿ ವಾಯುಪಡೆ ಅಧಿಕಾರಿ ಕೆ.ಎಂ. ತಹ್ಸಿಫ್ ಸೌರಿ (28) ಢಾಕಾದ ತುರಾಗ್ ನದಿಯಲ್ಲಿ ಶವವಾಗಿ ಪತ್ತೆ.

  • ಅಕ್ಟೋಬರ್ 27ರಂದು ಸಂಜೆ ಕಾಣೆಯಾಗಿದ್ದರು, ಬಳಿಕ ಅಕ್ಟೋಬರ್ 28ರಂದು ಮೃತದೇಹ ಪತ್ತೆ.

ಬಾಂಗ್ಲಾದಲ್ಲಿ ನಡೆಯುತ್ತಿದ್ದ ದೊಡ್ಡ ಮಟ್ಟದ ಪ್ರತಿಭಟನೆಗಳು, ರಾಜಕೀಯ ಬಿಕ್ಕಟ್ಟಿನಿಂದಾಗಿ 2024 ಆಗಸ್ಟ್ 5ರಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ದೇಶ ತೊರೆದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಾಯುಪಡೆ ಮಾಜಿ ಅಧಿಕಾರಿ ಕೆಎಂ ತಹ್ಸಿಪ್ ಸೌರಿ ನಿಗೂಢವಾಗಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಹೌದು, 28 ವರ್ಷ ವಯಸ್ಸಿನ ವಾಯುಪಡೆ ಮಾಜಿ ಅಧಿಕಾರಿ ಕೆಎಂ ತಹ್ಸಿಪ್ ಸೌರಿ ಅವರ ಮೃತದೇಹವು ಅಕ್ಟೋಬರ್ 28ರಂದು ಢಾಕಾದ ಉತ್ತರ್‌ಖಾನ್ ಪ್ರದೇಶದ ರಾಜಾಬಾರಿ ಘಾಟ್ ಸಮೀಪದ ತುರಾಗ್ ನದಿಯಲ್ಲಿ ಪತ್ತೆಯಾಗಿದೆ. ಅವರ ಸಾವು ಆಕಸ್ಮಿಕವಲ್ಲ ಇದೊಂದು ಕೊಲೆ ಸಂಚು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪ್ರಕರಣದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಮನೆಗೆ ಬರ್ತೀನಿ ಎಂದಿದ್ದ ಮಗ ನಾಪತ್ತೆ

ಅಕ್ಟೋಬರ್ 27ರಂದು ಸಂಜೆ ತಹ್ಸಿಫ್ ಸೌರಿ ತಾಯಿ ಜೊತೆಗೆ ಶಾಪಿಂಗ್​ ಮುಗಿಸಿ ಮನೆಗೆ ಬಂದಿದ್ದರು. ಆ ನಂತರ ಸ್ನೇಹಿತ ಕರೆ ಮಾಡಿದ್ದ ಎಂದು ಹೊರಟರು. ರಾತ್ರಿ 1:35ರ ಸುಮಾರಿಗೆ ಮನೆಗೆ ಬರುತ್ತಿರುವುದಾಗಿ ತಾಯಿಗೆ ಮೆಸೇಜ್ ಮಾಡಿದ್ದ ಅವರು, ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದರು ಎನ್ನಲಾಗಿದೆ. ನಂತರ ಅವರು ಶವವಾಗಿ ಪತ್ತೆಯಾಗಿದ್ದಾರೆ. ಅವರ ಪಾಕೆಟ್‌ನಲ್ಲಿದ್ದ ಐಫೋನ್ ಮತ್ತು ಕೈಗಡಿಯಾರದ ಮೂಲಕ ಮೃತರನ್ನು ಗುರುತಿಸಲಾಗಿದೆ.

ಶೇಖ್ ಹಸೀನಾ ದೇಶ ತೊರೆಯುವ ವಿಡಿಯೋವನ್ನು ಹಂಚಿಕೊಂಡಿದ್ದಕ್ಕಾಗಿಯೇ ಅವರನ್ನು ಕೊಲೆ ಮಾಡಲಾಗಿದೆ. ವಿಡಿಯೋ ಹಂಚಿಕೊಂಡಿದ್ದಾರೆ ಎಂದು ಅವರಿಗೆ ಮಾನಸಿಕವಾಗಿ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂದು ತಹ್ಸಿಫ್ ಅವರ ಸೋದರಸಂಬಂಧಿ ಮೊಶ್ಫೆಕಾ ಜಹಾನ್ ಫೇಸ್‌ಬುಕ್‌ನಲ್ಲಿ ಆರೋಪಿಸಿದ್ದಾರೆ.

Also Read
ಇದು ನಾವು ಕಟ್ಟಿದ್ದ ಬಾಂಗ್ಲಾವಲ್ಲ: ಕಣ್ಣೀರಿಟ್ಟ ಮಾಜಿ ಪ್ರಧಾನಿ; ಯೂನಸ್​ ಸರ್ಕಾರದ ಹರಿಹಾಯ್ದ ಶೇಖ್​ ಹಸೀನಾ! Sheikh Hasina on Bangladesh
 ಶೇಖ್ ಹಸೀನಾ ದೇಶಬಿಡುವ ವಿಡಿಯೋ ಹಂಚಿಕೊಂಡಿದ್ದ  ಬಾಂಗ್ಲಾ ವಾಯುಪಡೆಯ ಮಾಜಿ ಅಧಿಕಾರಿಯ ಮೃತದೇಹ ನದಿಯಲ್ಲಿ ಪತ್ತೆ..Bangladesh

ಏನಿದು ಘಟನೆ?

ಆಗಸ್ಟ್ 2024ರಲ್ಲಿ ಶೇಖ್ ಹಸೀನಾ ಅವರು ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ತೆರಳಿದ್ದ ವಿಡಿಯೋವನ್ನು ತಹ್ಸಿಫ್ ಸಾಮಾನ್ಯ ನಾಗರಿಕನಾಗಿ ಶೇರ್ ಮಾಡಿದ್ದರು. ಆದರೆ ಇದೇ ವಿಚಾರಕ್ಕೆ ಅವರನ್ನು ಮೊದಲು ಬೇಹುಗಾರಿಕೆ ಆರೋಪ ಹೊರಿಸಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಅವರ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿತ್ತು.

ದೇಶದ ಬಗ್ಗೆ ಮಾತನಾಡಿದ್ದ ತಹ್ಸಿಫ್

ಕೆಲವು ತಿಂಗಳ ಹಿಂದೆ ‘ಸ್ಪೀಕ್ ವಿತ್ ರಶೀದ್’ ಅವರ ಸಂದರ್ಶನದಲ್ಲಿ ತಹ್ಸಿಫ್​ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡುವುದಕ್ಕಿಂತ ದೊಡ್ಡ ಉದ್ದೇಶಕ್ಕಿಂತ ಬೇರೆ ಇಲ್ಲ ಎಂದಿದ್ದರು.

ತಹ್ಸಿಫ್​ ಅವರ ದೇಹ ನದಿ ಬಳಿ ಪತ್ತೆಯಾಗಿದ್ದರೂ ಸಹ ಅವರ ಸಾವಿನ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೇ ಎನ್ನುವುದನ್ನು ಪತ್ತೆ ಹಚ್ಚಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಢಾಕಾದ ಶಹೀದ್ ಸುಹ್ರವರ್ದಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ, (ಏಜೆನ್ಸೀಸ್).