ಒಬ್ಬರ ಮೇಲೆ ದಾಳಿಯಾದರೆ ಇಬ್ಬರೂ ಸೇರಿ ತಿರುಗೇಟು: ಗಲ್ಫ್ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಟರ್ಕಿ-ಕತಾರ್ ರಕ್ಷಣಾ ಒಪ್ಪಂದ! Turkey-Qatar Defense Pact

Turkish President Recep Tayyip Erdoğan and the Emir of Qatar, Sheikh Tamim bin Hamad Al Thani, signed a defense agreement at a meeting held in Istanbul.
ಇಸ್ತಾನ್‌ಬುಲ್‌ನಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಮತ್ತು ಕತಾರ್ ಅಮೀರ್ ಶೇಖ್ ತಮೀಮ್ ಬಿನ್ ಹಮಾದ್ ಅಲ್ ಥಾನಿ.
Published on: 

ಇಸ್ತಾನ್​ಬುಲ್​: ಮಧ್ಯಪ್ರಾಚ್ಯದ ಪ್ರತಿ ಮೂಲೆಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನಲೆ ಜಾಗತಿಕ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸುವ ಬೆಳವಣಿಗೆಯೊಂದು ನಡೆದಿದೆ. ಶುಕ್ರವಾರ (ನ.13) ಇಸ್ತಾನ್‌ಬುಲ್‌ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಟರ್ಕಿ ಮತ್ತು ಕತಾರ್ ದೇಶಗಳು ಐತಿಹಾಸಿಕ 'ಪರಸ್ಪರ ರಕ್ಷಣಾ ಒಪ್ಪಂದ'ಕ್ಕೆ (Mutual Defence Pact) ಸಹಿ ಹಾಕಿವೆ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಮತ್ತು ಕತಾರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮಾದ್ ಅಲ್ ಥಾನಿ ಅವರ ನೇತೃತ್ವದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಒಬ್ಬರ ಮೇಲೆ ದಾಳಿಯಾದರೆ ಇಬ್ಬರೂ ಸೇರಿ ತಿರುಗೇಟು!

ಈ ಹೊಸ ರಕ್ಷಣಾ ಒಪ್ಪಂದದ ಪ್ರಮುಖ ಅಂಶವೇನೆಂದರೆ, ಟರ್ಕಿ ಅಥವಾ ಕತಾರ್, ಈ ಎರಡು ದೇಶಗಳಲ್ಲಿ ಯಾವುದಾದರೂ ಒಂದರ ಮೇಲೆ ಹೊರಗಿನಿಂದ ಸಶಸ್ತ್ರ ದಾಳಿ ನಡೆದರೆ, ಅದನ್ನು ಎರಡೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳು ಒಗ್ಗಟ್ಟಾಗಿ ನಿಂತು ಶತ್ರುಗಳನ್ನು ಎದುರಿಸಲಿವೆ. ಇದು ಕೇವಲ ತಮ್ಮ ಗಡಿ ರಕ್ಷಣೆಗೆ ಮಾತ್ರವಲ್ಲದೆ, ಇಡೀ ಗಲ್ಫ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ ಎಂದು ಉಭಯ ನಾಯಕರು ಹೇಳಿಕೊಂಡಿದ್ದಾರೆ.

ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳೇನು?

ಇಸ್ತಾನ್‌ಬುಲ್‌ನಲ್ಲಿ ನಡೆದ 'ಸರ್ವೋಚ್ಚ ಕಾರ್ಯತಂತ್ರ ಸಮಿತಿ'ಯ 12ನೇ ಅಧಿವೇಶನದಲ್ಲಿ ಉಭಯ ನಾಯಕರು ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಜಂಟಿ ಸೇನಾ ಬಲವರ್ಧನೆ: ಎರಡೂ ದೇಶಗಳ ಸೇನೆಗಳು ಒಟ್ಟಾಗಿ ಸಮರಾಭ್ಯಾಸ ನಡೆಸುವುದು, ಸೈನಿಕರಿಗೆ ತರಬೇತಿ ನೀಡುವುದು ಮತ್ತು ರಕ್ಷಣಾ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಒಪ್ಪಿಕೊಂಡಿವೆ.

Also Read
ಓವರ್ ಸ್ಪೀಡ್, ರೀಲ್ಸ್ ಹುಚ್ಚಿಗೆ ಅಮೂಲ್ಯ ಜೀವಗಳ ಬಲಿ: ದೇಶದ ಮೂರು ಕಡೆ ಸಂಭವಿಸಿದ ಭೀಕರ ಆಕ್ಸಿಡೆಂಟ್‌ಗೆ 10 ಮಂದಿ ದುರ್ಮರಣ! Road Accidents
Turkish President Recep Tayyip Erdoğan and the Emir of Qatar, Sheikh Tamim bin Hamad Al Thani, signed a defense agreement at a meeting held in Istanbul.

ವ್ಯಾಪಾರ ಮತ್ತು ಆರ್ಥಿಕತೆ: ಕಳೆದ ವರ್ಷ ಜಾರಿಗೆ ಬಂದ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ಎರಡೂ ದೇಶಗಳ ವಹಿವಾಟು ಭರ್ಜರಿಯಾಗಿ ಬೆಳೆದಿದೆ. ಇದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.

ಶಾಂತಿ ಮಂತ್ರ: ಗಲ್ಫ್ ಪ್ರದೇಶದಲ್ಲಿ ಮತ್ತೆ ಯುದ್ಧ ಅಥವಾ ಸಂಘರ್ಷಗಳು ನಡೆಯದಂತೆ ತಡೆಯಲು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳೇ ಸೂಕ್ತ ಎಂದು ಎರ್ಡೋಗನ್ ಹೇಳಿದ್ದಾರೆ.

'ಎಕ್ಸ್' ಖಾತೆಯಲ್ಲಿ ನಾಯಕರ ಮಾತು

ಈ ಭೇಟಿಯ ಕುರಿತು ಸಾಮಾಜಿಕ ಜಾಲತಾಣ ವೇದಿಕೆ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿರುವ ಕತಾರ್ ಅಮೀರ್ ಶೇಖ್ ತಮೀಮ್, "ನನ್ನ ಸಹೋದರ ಅಧ್ಯಕ್ಷ ಎರ್ಡೋಗನ್ ಅವರೊಂದಿಗೆ ನಡೆದ ಈ ಸಭೆಯು ನಮ್ಮ ನಡುವಿನ ಬಲವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕಾದ ಆದ್ಯತೆಗಳನ್ನು ಗುರುತಿಸಿದ್ದೇವೆ" ಎಂದಿದ್ದಾರೆ.

ಇತ್ತ ಟರ್ಕಿ ಅಧ್ಯಕ್ಷ ಎರ್ಡೋಗನ್ ಮಾತನಾಡಿ, "ಈ ರಕ್ಷಣಾ ಒಪ್ಪಂದವು ನಮ್ಮ ಸಹೋದರ ಸಂಬಂಧಕ್ಕೆ ಹೊಸ ಶಕ್ತಿ ನೀಡಲಿದೆ. ಪ್ರಾದೇಶಿಕ ವಿವಾದಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಲು ನಾವು ಸದಾ ಪ್ರಯತ್ನಿಸುತ್ತೇವೆ" ಎಂದು ತಿಳಿಸಿದ್ದಾರೆ.

ನಾಲ್ಕು ದೇಶಗಳ ರಕ್ಷಣಾ ಒಪ್ಪಂದಕ್ಕೂ ಮೆಚ್ಚುಗೆ

ಇದೇ ವೇಳೆ ಟರ್ಕಿ, ಕತಾರ್, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ದೇಶಗಳು ಸೇರಿ ಸಹಿ ಹಾಕಿರುವ 'ಬದ್ರ್ ಜ್ಞಾಪಕ ಪತ್ರ'ದ ಬಗ್ಗೆಯೂ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ನಾಲ್ಕೂ ದೇಶಗಳು ಸೇರಿ ಸ್ವದೇಶಿ ರಕ್ಷಣಾ ಸಾಮಗ್ರಿಗಳ ತಯಾರಿಕೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ರಕ್ಷಣಾ ಪೂರೈಕೆ ಸರಪಳಿಯನ್ನು ಬಲಪಡಿಸಲು ಕೈಜೋಡಿಸಿರುವುದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

Also Read
ಪಂದ್ಯ ಸೋತರು ಹೃದಯ ಗೆದ್ದ ರನ್​ ಮೆಷಿನ್​: ತಮ್ಮನ್ನು ಔಟ್ ಮಾಡಿದ ಬೌಲರ್‌ಗೇ ಜೆರ್ಸಿ ಗಿಫ್ಟ್ ಕೊಟ್ಟ ಕಿಂಗ್​ ಕೊಹ್ಲಿ! Virat Kohli
Turkish President Recep Tayyip Erdoğan and the Emir of Qatar, Sheikh Tamim bin Hamad Al Thani, signed a defense agreement at a meeting held in Istanbul.

ನ್ಯಾಟೋ ಮಾದರಿಯ ಹೊಸ ಒಕ್ಕೂಟಗಳು

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಕೂಡ ಇದೇ ರೀತಿಯ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅಮೆರಿಕ ನೇತೃತ್ವದ 'ನ್ಯಾಟೋ' ಪಡೆಯಂತೆ, ಒಬ್ಬರ ಮೇಲಿನ ದಾಳಿಯನ್ನು ಇಬ್ಬರ ಮೇಲಿನ ಆಕ್ರಮಣವೆಂದು ಪರಿಗಣಿಸುವ ನಿಯಮವನ್ನು ಅವು ಅಳವಡಿಸಿಕೊಂಡಿದ್ದವು. ಈಗ ಟರ್ಕಿ ಮತ್ತು ಕತಾರ್ ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಇಟ್ಟಿರುವುದು ಗಲ್ಫ್ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ, (ಏಜೆನ್ಸೀಸ್​).