Bank Fraud: ₹954 ಕೋಟಿ ಬ್ಯಾಂಕ್ ವಂಚನೆ ಆರೋಪ: ಭಾರತೀಯ ಮೂಲದ ಉದ್ಯಮಿ ಅಮೆರಿಕದಲ್ಲಿ ಬಂಧನ

Bank Fraud
Bank Fraud
Published on
ವಾಷಿಂಗ್ಟನ್: ಭಾರತೀಯ ಮೂಲದ ಉದ್ಯಮಿ ಹಾಗೂ ಹಣಕಾಸು ಕ್ಷೇತ್ರದ ಉದ್ಯೋಗಿ ಮಹೇಂದ್ರ ಮಖಿಜಾನಿ ಅಮೆರಿಕದಲ್ಲಿ ಭಾರೀ ಬ್ಯಾಂಕ್ ವಂಚನೆ(Bank Fraud) ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಸುಮಾರು 100 ಮಿಲಿಯನ್ ಡಾಲರ್‌ (ಸುಮಾರು ₹954 ಕೋಟಿ) ವಂಚನೆ ನಡೆಸಿದ ಆರೋಪ ಅವರ ಮೇಲೆ ಕೇಳಿಬಂದಿದೆ.
44 ವರ್ಷದ ಮಹೇಂದ್ರ ಮಖಿಜಾನಿ ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಹೊಂದಿದ್ದು, ಕ್ಯಾಲಿಫೋರ್ನಿಯಾದ ನ್ಯೂಪೋರ್ಟ್ ಬೀಚ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಬುಧವಾರ ಬೆಳಗ್ಗೆ ಅವರ ಐಷಾರಾಮಿ ನಿವಾಸದಲ್ಲಿ ಅಮೆರಿಕದ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನೂ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾದರೆ ಅವರಿಗೆ ಗರಿಷ್ಠ 30 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.

ಆರೋಪ ಏನು?

ಅಮೆರಿಕದ ತನಿಖಾ ಸಂಸ್ಥೆಗಳ ಪ್ರಕಾರ, ಮಹೇಂದ್ರ ಮಖಿಜಾನಿ ಬ್ಯಾಂಕ್‌ಗೆ ತಪ್ಪು ಮಾಹಿತಿ ನೀಡಿ ದೊಡ್ಡ ಪ್ರಮಾಣದ ಸಾಲ ಪಡೆದಿದ್ದಾರೆ ಎನ್ನಲಾಗಿದೆ.ರಿಯಲ್ ಎಸ್ಟೇಟ್ ಆಸ್ತಿಗಳಿಗೆ ಸಂಬಂಧಿಸಿದ ವಿಮೆ ದಾಖಲೆಗಳನ್ನು ನಕಲಿ ಮಾಡಿರುವ ಆರೋಪ ಕೇಳಿಬಂದಿದೆ. ಬ್ಯಾಂಕ್‌ಗೆ ಸಲ್ಲಿಸಿದ್ದ ಕೆಲವು ದಾಖಲೆಗಳಲ್ಲಿ ಸುಳ್ಳು ಮಾಹಿತಿ ನೀಡಿ, ಆಸ್ತಿಗಳ ಮೇಲಿನ ಹಕ್ಕುಗಳ ಬಗ್ಗೆ ತಪ್ಪು ಚಿತ್ರಣ ನೀಡಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಮಖಿಜಾನಿ ನಿಯಂತ್ರಣದಲ್ಲಿದ್ದ ‘ಕ್ಯಾಂಟರ್ ಗ್ರೂಪ್ V LLC’ ಎಂಬ ಕಂಪನಿಗೆ ಬ್ಯಾಂಕ್ ಸುಮಾರು 100 ಮಿಲಿಯನ್ ಡಾಲರ್ ಹಣ ನೀಡಿತ್ತು. ಈ ಹಣವನ್ನು ಆಸ್ತಿ ಆಧಾರಿತ ಸಾಲಗಳಿಗಾಗಿ ಬಳಸಬೇಕಾಗಿತ್ತು. ಆದರೆ ದಾಖಲೆಗಳನ್ನು ತಿರುಚಿ ಬ್ಯಾಂಕ್‌ನ್ನು ದಾರಿ ತಪ್ಪಿಸಲಾಗಿದೆ ಎಂದು ಆರೋಪಿಸಲಾಗಿದೆ.

ನಕಲಿ ದಾಖಲೆ ಬಳಕೆ

2024ರ ಸೆಪ್ಟೆಂಬರ್‌ನಿಂದ 2025ರ ಏಪ್ರಿಲ್‌ವರೆಗೆ ಹಲವು ವಿಮೆ ದಾಖಲೆಗಳನ್ನು ನಕಲಿ ಮಾಡಲಾಗಿದೆ ಎಂದು ತನಿಖೆ ತಿಳಿಸಿದೆ.ಈ ದಾಖಲೆಗಳನ್ನು ಬ್ಯಾಂಕ್‌ಗೆ ಸಲ್ಲಿಸುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದ್ದರೆಂದು ಆರೋಪಿಸಲಾಗಿದೆ. ಅಲ್ಲದೆ ಬ್ಯಾಂಕ್ ಅಧಿಕಾರಿಗಳೊಂದಿಗೆ ನಡೆದ ಹಲವು ಸಭೆಗಳಲ್ಲಿ ಮತ್ತು ದೂರವಾಣಿ ಸಂಭಾಷಣೆಗಳಲ್ಲೂ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.

ಪಾರ್ಟಿಗಳ ಮೂಲಕ ಬ್ಲ್ಯಾಕ್‌ಮೇಲ್ ಆರೋಪ

ಈ ಪ್ರಕರಣದಲ್ಲಿ ಮತ್ತೊಂದು ಗಂಭೀರ ಆರೋಪವೂ ಹೊರಬಿದ್ದಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಮಖಿಜಾನಿ ಖಾಸಗಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಈ ಪಾರ್ಟಿಗಳಲ್ಲಿ ಮಾದಕ ವಸ್ತುಗಳು ಮತ್ತು ಲೈಂಗಿಕ ಕಾರ್ಯಕರ್ತೆಯರು ಭಾಗವಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.ಕೆಲವು ಬ್ಯಾಂಕ್ ಸಿಬ್ಬಂದಿಯೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ನಂತರ ಆ ಪಾರ್ಟಿಗಳ ಬಗ್ಗೆ ಇರುವ ಮಾಹಿತಿಯನ್ನು ಬಳಸಿಕೊಂಡು ಕೆಲವರ ಮೇಲೆ ಒತ್ತಡ ಹೇರಲಾಗಿತ್ತು ಹಾಗೂ ಬ್ಲ್ಯಾಕ್‌ಮೇಲ್ ಮಾಡಲಾಗಿತ್ತು ಎಂದು ತನಿಖೆ ಹೇಳಿದೆ.

ಸಿಬ್ಬಂದಿಗೆ ಬೆದರಿಕೆ?

ಪ್ರಕರಣದ ದಾಖಲೆಗಳಲ್ಲಿ ಮಖಿಜಾನಿ ತಮ್ಮ ಸಿಬ್ಬಂದಿಗೆ ಗಂಭೀರ ಬೆದರಿಕೆ ಹಾಕಿದ್ದರೆಂಬ ಆರೋಪವೂ ಇದೆ. ತಮ್ಮ ಆದೇಶ ಪಾಲಿಸದಿದ್ದರೆ ಕೊಲೆ ಮಾಡುವುದಾಗಿ, ಕುಟುಂಬವನ್ನು ಬೀದಿಗೆ ತರುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಮತ್ತೊಂದು ಭಾರೀ ಪ್ರಕರಣ

ಇದಕ್ಕೂ ಮೊದಲು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲೂ ಮಖಿಜಾನಿ ಸಂಕಷ್ಟಕ್ಕೆ ಸಿಲುಕಿದ್ದರು. ಕ್ಯಾಲಿಫೋರ್ನಿಯಾದ ಉದ್ಯಮಿ ಮೊಹಮ್ಮದ್ ಹೊನಾರ್ಕರ್ ಅವರೊಂದಿಗೆ ನಡೆದ ವ್ಯವಹಾರದಲ್ಲಿ 1.3 ಬಿಲಿಯನ್ ಡಾಲರ್‌ಗಿಂತ ಹೆಚ್ಚು (ಸುಮಾರು ₹12,390 ಕೋಟಿ) ನಷ್ಟಕ್ಕೆ ಅವರು ಹೊಣೆ ಎಂದು ಮಧ್ಯಸ್ಥಿಕೆ ತೀರ್ಪು ನೀಡಿರುವ ವರದಿಗಳಿವೆ. ಆ ಪ್ರಕರಣದಲ್ಲೂ ಬೆದರಿಕೆ, ಒತ್ತಡ ಹಾಗೂ ಭಯ ಹುಟ್ಟಿಸುವ ತಂತ್ರಗಳನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ತನಿಖೆ ಮುಂದುವರಿಕೆ

ಅಮೆರಿಕದ ಆದಾಯ ತೆರಿಗೆ ಇಲಾಖೆ (IRS) ಹಾಗೂ ಇತರೆ ಫೆಡರಲ್ ಸಂಸ್ಥೆಗಳು ಈ ಪ್ರಕರಣದ ತನಿಖೆ ನಡೆಸುತ್ತಿವೆ.ಹಣದ ವರ್ಗಾವಣೆ, ಬ್ಯಾಂಕ್ ವ್ಯವಹಾರಗಳು ಹಾಗೂ ಕಂಪನಿಗಳ ಜಾಲವನ್ನು ಪರಿಶೀಲಿಸಿದ ಬಳಿಕ ವಂಚನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಮಹೇಂದ್ರ ಮಖಿಜಾನಿ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿದೆ. ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿಯ ವಿರುದ್ಧ ಕೇಳಿಬಂದಿರುವ ಈ ಭಾರೀ ವಂಚನೆ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net