ಜಿಮ್ ಟ್ರೈನರ್​​ ಮೇಲೆ ಗುಂಡಿನ ಸುರಿಮಳೆ: ಸ್ಥಳದಲ್ಲೇ ಸಾವು, ಘಟನೆ CCTVಯಲ್ಲಿ ಸೆರೆ!

CCTV
CCTV
Published on
ಹರಿಯಾಣ: ಹರಿಯಾಣದ ಹಾಂಸಿ ನಗರದಲ್ಲಿ 25 ವರ್ಷದ ಜಿಮ್ ಮಾಲೀಕನನ್ನು(ಟ್ರೈನರ್​​) ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬೆಚ್ಚಿಬೀಳಿಸಿದೆ. ವಿದ್ಯಾರ್ಥಿಗಳಿಗೆ ಬೆಳಗಿನ ತರಬೇತಿ ನೀಡುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಗುರುವಾರ ಬೆಳಗ್ಗೆ ಸುಮಾರು 5.30ರ ವೇಳೆಗೆ ಈ ಘಟನೆ ನಡೆದಿದೆ. ಜಿಮ್‌ನ ಹೊರಭಾಗದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ವ್ಯಾಯಾಮ ತರಬೇತಿ ನೀಡುತ್ತಿದ್ದ ವೇಳೆ ಇಬ್ಬರು ಯುವಕರು ಬೈಕ್‌ನಲ್ಲಿ ಅಲ್ಲಿಗೆ ಬಂದಿದ್ದಾರೆ.
ಸಿಸಿಟಿವಿ(CCTV) ದೃಶ್ಯಗಳಲ್ಲಿ, ಜಿಮ್ ಮಾಲೀಕ ಐದಾರು ಜನರಿಗೆ ಮೆಟ್ಟಿಲುಗಳ ಮೇಲೆ ‘ಸ್ಟೆಪ್-ಅಪ್’ ವ್ಯಾಯಾಮ ಮಾಡುವ ವಿಧಾನವನ್ನು ತಿಳಿಸುತ್ತಿರುವುದು ಸಿಸಿಟಿವಿಯಲ್ಲಿ ಕಾಣಿಸುತ್ತದೆ. ಈ ವೇಳೆ ಏಕಾಏಕಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬ, ಬಿಳಿ ಬಣ್ಣದ ಕ್ಯಾಪ್ ಧರಿಸಿದ್ದ ವ್ಯಕ್ತಿ, ಪಿಸ್ತೂಲ್ ತೆಗೆದು ಗುಂಡಿನ ದಾಳಿ ನಡೆಸಿದ್ದಾನೆ.
ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿದ್ದವರು ಭಯದಿಂದ ಓಡಾಡಲು ಆರಂಭಿಸಿದ್ದಾರೆ. ಸ್ಥಳದಲ್ಲಿ ಕೆಲ ಕ್ಷಣಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿಯ ಪ್ರಕಾರ, ದುಷ್ಕರ್ಮಿಗಳು ಸುಮಾರು 10 ಸುತ್ತು ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಜಿಮ್ ಮಾಲೀಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದರು.
ಈ ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿಗೂ ಗಾಯಗಳಾಗಿರುವ ಮಾಹಿತಿ ಲಭ್ಯವಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.ಘಟನೆಯ ಬಳಿಕ ದುಷ್ಕರ್ಮಿಗಳು ಬೈಕ್‌ನಲ್ಲೇ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ದ್ವೇಷ, ಹಳೆಯ ವೈಮನಸ್ಸು ಅಥವಾ ಇತರ ಕಾರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಬೆಳಗ್ಗೆ ವ್ಯಾಯಾಮ ತರಬೇತಿ ನಡೆಯುತ್ತಿದ್ದ ವೇಳೆ ನಡೆದ ಈ ಗುಂಡಿನ ದಾಳಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net