ವಿಪತ್ತು ನಿರ್ವಹಣೆಯ ಯೋಚನೆ ನಿನ್ನೆ ಇಂದಿನದೇನಲ್ಲ. ಅದು ರಾಜಮಹಾರಾಜರ ಕಾಲದಿಂದಲೂ ಇತ್ತು. ಆದರೆ ಅದಕ್ಕೊಂದು ಸ್ಪಷ್ಟ ರೂಪ ಸಿಕ್ಕು ದೇಶಗಳು ಅಳವಡಿಸಿಕೊಳ್ಳಲು ಆರಂಭಿಸಿದ್ದು ಎರಡನೇ ಮಹಾಯುದ್ಧದ ನಂತರ. ಪ್ರತಿವರ್ಷವೂ ಸುನಾಮಿ, ಭೂಕಂಪ, ತೂಫಾನುಗಳನ್ನು ನೋಡುವ ಜಪಾನ್, ಫಿಲಿಪೈನ್ಸ್, ಇಂಡೋನೇಷ್ಯಾದಂತಹ ದೇಶಗಳು ವಿಪತ್ತು ನಿರ್ವಹಣಾ ಯೋಜನೆಗಳನ್ನು ಅಳವಡಿಸಿಕೊಂಡು ವರ್ಷವರ್ಷವೂ ಬಿದ್ದು ಮತ್ತೆ ಎದ್ದು ನಿಲ್ಲುತ್ತಿವೆ. ಫರಕು ಏನೆಂದರೆ ಬೀಳುವ ಮತ್ತು ಏಳುವ ನಡುವಿನ ಸಮಯ ಮತ್ತು ವಿಪತ್ತಿನ ಸಮಯದಲ್ಲಿ ಉಂಟಾಗುತ್ತಿದ್ದ ಸಾವು-ನೋವಿನ ಪ್ರಮಾಣ ಇದೀಗ ಬಹಳಷ್ಟು ಕಡಿಮೆಯಾಗಿದೆ. ನೀವೇ ಯೋಚಿಸಿ, ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಭಾರಿ ಭೂಕುಸಿತ, ಒರಿಸ್ಸಾದಲ್ಲಿ ಚಂಡಮಾರುತವಾಗಿ ಅಪಾರ ಪ್ರಮಾಣದ ಜನಜೀವನ, ಆಸ್ತಿಪಾಸ್ತಿಯ ಹಾನಿಯಾದಾಗ ಅವುಗಳನ್ನು ಶತಮಾನದಲ್ಲೊಮ್ಮೆ ಉಂಟಾಗುವ ದುರ್ಘಟನೆಯೆಂಬ ರೀತಿಯಲ್ಲಿ ಬಿಂಬಿಸಲಾಗಿತ್ತು. ಆದರೆ ಪರಿಸರದ ಮೇಲಿನ ನಿರಂತರ ದಬ್ಬಾಳಿಕೆಯಿಂದ ಕಾಲ ಬದಲಾದಂತೆ ನೈಸರ್ಗಿಕ ವಿಪತ್ತುಗಳು ವಿವಿಧ ರೂಪಗಳಲ್ಲಿ ಬರುತ್ತಿವೆ.