

ಮೊರಾಕೊ: ಅರಬ್ ಜಗತ್ತಿನಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆಯಿಡುವ ಮೂಲಕ ಉತ್ತರ ಆಫ್ರಿಕಾದ ದೇಶವಾದ ಮೊರಾಕೊ ಹೊಸ ದಾಖಲೆ ಬರೆದಿದೆ. ಮೊರಾಕೊದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದಾರೆ.
ಅಥೆಂಟಿಸಿಟಿ ಅಂಡ್ ಮಾಡರ್ನಿಟಿ ಪಾರ್ಟಿ (PAM) ನಾಯಕಿ ಫಾತಿಮಾ ಝಹ್ರಾ ಮನ್ಸೂರಿ (Fatima Zahra Mansouri) ಅವರನ್ನು ದೇಶದ ಹೊಸ ಪ್ರಧಾನಿಯಾಗಿ ರಾಜ ಆರನೇ ಮೊಹಮ್ಮದ್ ಮಂಗಳವಾರ (ಸೆ.29) ಅಧಿಕೃತವಾಗಿ ಘೋಷಿಸಿದ್ದಾರೆ.
ಕಳೆದ ವಾರ ಮುಕ್ತಾಯಗೊಂಡ ಸಂಸದೀಯ ಚುನಾವಣೆಯಲ್ಲಿ ಫಾತಿಮಾ ಮನ್ಸೂರಿ ನೇತೃತ್ವದ PAM ಪಕ್ಷವು ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ, ಮುಂದಿನ ಸರ್ಕಾರವನ್ನು ರಚಿಸುವ ಜವಾಬ್ದಾರಿಯನ್ನು ರಾಜರು ಇವರಿಗೆ ವಹಿಸಿದ್ದಾರೆ.
ಮೊರಾಕೊ ಸಂವಿಧಾನದ ಪ್ರಕಾರ, ಪ್ರಧಾನಿಯನ್ನು ನೇಮಿಸುವ ಸಂಪೂರ್ಣ ಅಧಿಕಾರ ರಾಜರಿಗಿದೆ. ಆದರೆ ಅವರು ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷದಿಂದಲೇ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ.
ಅದರಂತೆ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಒಟ್ಟು 395 ಸ್ಥಾನಗಳ ಪೈಕಿ ಮನ್ಸೂರಿ ಅವರ PAM ಪಕ್ಷವು ಬರೋಬ್ಬರಿ 97 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ತನ್ನ ಹತ್ತಿರದ ಪ್ರತಿಸ್ಪರ್ಧಿಗಿಂತ 31 ಸ್ಥಾನಗಳ ಭರ್ಜರಿ ಮುನ್ನಡೆ ಸಾಧಿಸಿ ಅಧಿಕಾರದ ಗದ್ದುಗೆ ಏರಿದೆ.
ಅರಬ್ ಜಗತ್ತಿನಲ್ಲಿ (ಟುನೀಶಿಯಾದ ಮಾಜಿ ಪ್ರಧಾನಿ ನಜ್ಲಾ ಬೌಡೆನ್ ನಂತರ) ಪ್ರಧಾನಿ ಹುದ್ದೆ ಅಲಂಕರಿಸುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಫಾತಿಮಾ ಪಾತ್ರರಾಗಿದ್ದಾರೆ. ನಮ್ಮ ದೇಶದ ಇತಿಹಾಸದಲ್ಲೇ ಮಹಿಳೆಯೊಬ್ಬರು ಸರ್ಕಾರ ಮುನ್ನಡೆಸುತ್ತಿರುವುದು ನನಗೆ ಹಾಗೂ ಇಡೀ ಮೊರಾಕೊ ಮಹಿಳಾಕುಲಕ್ಕೆ ಅತ್ಯಂತ ಹೆಮ್ಮೆಯ ವಿಷಯ ಎಂದು ಮನ್ಸೂರಿ ಸಂಭ್ರಮ ಹಂಚಿಕೊಂಡಿದ್ದಾರೆ.
50 ವರ್ಷ ವಯಸ್ಸಿನ ಫಾತಿಮಾ ರಾಜಕೀಯ ಕ್ಷೇತ್ರದಲ್ಲಿ ಹೊಸಬರೇನಲ್ಲ. ಈ ಹಿಂದೆ ಮರ್ರಾಕೆಶ್ ನಗರದ ಮೊದಲ ಮಹಿಳಾ ಮೇಯರ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. 2009ರಲ್ಲಿ ಹಾಗೂ 2021ರಲ್ಲಿ ಎರಡು ಬಾರಿ ಮೇಯರ್ ಆಗಿ ಸೇವೆ ಸಲ್ಲಿಸಿ ತಮ್ಮ ದಕ್ಷ ಆಡಳಿತದಿಂದ ಜನಮನ್ನಣೆ ಗಳಿಸಿದ್ದಾರೆ. 2008ರಿಂದಲೂ PAM ಪಕ್ಷದಲ್ಲಿ ಸಕ್ರಿಯವಾಗಿರುವ ಇವರು, ಇದೀಗ ದೇಶದ ಚುಕ್ಕಾಣಿ ಹಿಡಿಯುವ ಮೂಲಕ ಮತ್ತೊಂದು ದೊಡ್ಡ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡಿದ್ದಾರೆ.
ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಸವಾಲುಗಳೇ ಕಾದಿವೆ. ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವುದು, ವೇತನ ಹೆಚ್ಚಳ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವುದು ಮತದಾರರ ಪ್ರಮುಖ ಬೇಡಿಕೆಗಳಾಗಿವೆ.
ಇದರ ಜೊತೆಗೆ, ಮುಂಬರುವ 2030ರ ಫಿಫಾ (FIFA) ವಿಶ್ವಕಪ್‌ಗೆ ಮೊರಾಕೊ ಸಹ-ಆತಿಥ್ಯ ವಹಿಸುತ್ತಿದ್ದು, ಈ ಮಹತ್ವದ ಕ್ರೀಡಾಕೂಟಕ್ಕಾಗಿ ಹೂಡಿಕೆ ಮಾಡಲಾಗುತ್ತಿರುವ ಶತಕೋಟಿ ಡಾಲರ್‌ಗಳ ಯೋಜನೆಗಳ ಮೇಲ್ವಿಚಾರಣೆ ನಡೆಸುವ ದೊಡ್ಡ ಜವಾಬ್ದಾರಿಯೂ ಫಾತಿಮಾ ಅವರ ಮೇಲಿದೆ. ಜನಸಾಮಾನ್ಯರ ನಿರೀಕ್ಷೆಗಳಿಗೆ ತಕ್ಕಂತೆ ವಾಸ್ತವಿಕ ಪರಿಹಾರಗಳನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದು, ಮೊರಾಕೊ ರಾಜಕೀಯದಲ್ಲಿ ಹೊಸ ಯುಗ ಆರಂಭವಾಗಿದೆ, (ಏಜೆನ್ಸೀಸ್).