6 ವರ್ಷ Ai ಕ್ಷೇತ್ರದಲ್ಲಿ ಕೆಲಸ, 700 ಕೋಟಿ ಬಂಗಲೆ ಖರೀದಿ: Ai ದಿಗ್ಗಜ ವು ಟಾವೊ ಐಷಾರಾಮಿ ಜೀವನದ ಇಂಟ್ರೆಸ್ಟಿಂಗ್​ ಸ್ಟೋರಿ ಇಲ್ಲಿದೆ! Wu Tao

700 ಕೋಟಿ ರೂ. ಬಂಗಲೆ ಖರೀದಿಸಿದ AI ದಿಗ್ಗಜ ವು ಟಾವೊ
700 ಕೋಟಿ ರೂ. ಬಂಗಲೆ ಖರೀದಿಸಿದ AI ದಿಗ್ಗಜ ವು ಟಾವೊ
Published on

ಪ್ರಮುಖ ಮುಖ್ಯಾಂಶಗಳು

  • ಕೇವಲ 6 ವರ್ಷಗಳಲ್ಲಿ AI ಕ್ಷೇತ್ರದಲ್ಲಿ ಸಾಧನೆ
  • 700 ಕೋಟಿ ರೂ. ಬಂಗಲೆ ಖರೀದಿಸಿದ AI ದಿಗ್ಗಜ ವು ಟಾವೊ
ಅಮೆರಿಕ​: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಮಾಜಿ xAI ಸಂಶೋಧಕ ವು ಟಾವೊ (Wu Tao) ಇದೀಗ ತಮ್ಮ ಐಷಾರಾಮಿ ಜೀವನಶೈಲಿಯಿಂದ ಸುದ್ದಿಯಲ್ಲಿದ್ದಾರೆ.
ಬರೋಬ್ಬರಿ 12 ಎಕರೆ ವಿಸ್ತೀರ್ಣದ, ಸುಮಾರು 75 ಮಿಲಿಯನ್​ ಡಾಲರ್​ (ಸುಮಾರು ಏಳು ನೂರು ಕೋಟಿ) ಮೌಲ್ಯದ ಐಷಾರಾಮಿ ಎಸ್ಟೇಟ್‌ ಅನ್ನು ಖರೀದಿಸಿದ್ದಾರೆ ಎಂಬ ವರದಿ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಆಸ್ತಿಯನ್ನು ‘ವಿಲ್ಲಾ ಡಿ ವೆರಾನೊ’ ಎಂದು ಕರೆಯಲಾಗುತ್ತಿದ್ದು, ಇದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರು ಅತ್ಯಂತ ಐಷಾರಾಮಿ ಹಾಗೂ ಅದ್ದೂರಿ ಎಸ್ಟೇಟ್‌ನಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.

ಆರು ಮಲಗುವ ಕೋಣೆಗಳನ್ನು ಹೊಂದಿರುವ ಈ ಬೃಹತ್ ಬಂಗಲೆಯಲ್ಲಿ ಖಾಸಗಿ ಗಾಲ್ಫ್ ಕೋರ್ಸ್, ಸುಮಾರು 150 ಜನರು ಕುಳಿತುಕೊಳ್ಳಬಹುದಾದ ಹೊರಾಂಗಣ ಆಂಫಿಥಿಯೇಟರ್ ಹಾಗೂ ಬರೋಬ್ಬರಿ 2,100 ಗ್ಯಾಲನ್ ಸಾಮರ್ಥ್ಯದ ಅಕ್ವೇರಿಯಂ ಕೂಡ ಇದೆ. ಇಷ್ಟೇ ಅಲ್ಲದೆ, ವಿಶಾಲವಾದ ಜಾಗ ಮತ್ತು ಐಷಾರಾಮಿ ವಿನ್ಯಾಸದಿಂದಾಗಿ ಈ ಎಸ್ಟೇಟ್ ಗಮನ ಸೆಳೆಯುತ್ತಿದೆ.

ಆದರೆ ವು ಟಾವೊ ಅವರು ಈ ಆಸ್ತಿಯನ್ನು ಖರೀದಿಸಿರುವುದನ್ನು ಸಾರ್ವಜನಿಕವಾಗಿ ದೃಢಪಡಿಸಿಲ್ಲ. ಅವರ ಎಸ್ಟೇಟ್ ಖರೀದಿಯ ಸುದ್ದಿ ಮೊದಲು ಚೀನಿ ಪತ್ರಿಕೆಯೊಂದು ವರದಿ ಮಾಡಿದ್ದು, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.


ಯಾರು ಈ ವು ಟಾವೊ?

ಚೀನಾದ ಹ್ಯಾಂಗ್‌ಝೌನಲ್ಲಿ ಜನಿಸಿದ ವು ಟಾವೊ, ಪ್ರೌಢಶಾಲಾ ಶಿಕ್ಷಣದ ಸಮಯದಲ್ಲಿ ಕೆನಡಾಕ್ಕೆ ತೆರಳಿದ್ದರು. 2015ರಲ್ಲಿ ಯೂನಿವರ್ಸಿಟಿ ಆಫ್​ ಬ್ರನ್ಸ್‌ವಿಕ್​ನಲ್ಲಿ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ನಂತರ ಟೊರಾಂಟೊ ವಿಶ್ವವಿದ್ಯಾಲಯದಲ್ಲಿ ಮೆಷಿನ್ ಲರ್ನಿಂಗ್ ಕ್ಷೇತ್ರದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದರು.
ಅವರ ಪಿಎಚ್‌ಡಿ ಮಾರ್ಗದರ್ಶಕರಾಗಿದ್ದ ಜಿಮ್ಮಿ ಬಾ ಕೂಡ AI ಕ್ಷೇತ್ರದ ಪ್ರಮುಖ ಸಂಶೋಧಕರಾಗಿದ್ದು, ಬಳಿಕ ಎಲಾನ್ ಮಸ್ಕ್ ಅವರ xAI ತಂಡದ ಆರಂಭಿಕ ಸದಸ್ಯರಲ್ಲಿ ಒಬ್ಬರಾದರು.

ಓಪನ್​ ಎಐ, ಗೂಗಲ್​ ಬಳಿಕ xAI

xAI ಸೇರುವ ಮುನ್ನ ವು ಟಾವೊ ಅವರು ಓಪನ್​ ಎಐ ಮತ್ತು ಗೂಗಲ್​ ಡೀಪ್​ಮೈಂಡ್​​ನಲ್ಲಿ ಇಂಟರ್ನ್‌ಶಿಪ್ ಮಾಡಿದ್ದರು. ನಂತರ 2021ರಲ್ಲಿ ಗೂಗಲ್​ನಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕೆಲಸ ಆರಂಭಿಸಿದರು.
2023ರಲ್ಲಿ ಎಲಾನ್ ಮಸ್ಕ್ ಸ್ಥಾಪಿಸಿದ xAIನ ಆರಂಭಿಕ ಸದಸ್ಯರಲ್ಲಿ ವು ಟಾವೊ ಕೂಡ ಒಬ್ಬರಾದರು. ಇಲ್ಲಿ ಅವರು AI ಗಣಿತ ಮತ್ತು ಯಂತ್ರ ತಾರ್ಕಿಕತೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು. xAIಯ ಜನಪ್ರಿಯ AI ಚಾಟ್‌ಬಾಟ್ ಗ್ರೋಕ್​ (Grok) ಅಭಿವೃದ್ಧಿಯಲ್ಲೂ ಅವರ ಪಾತ್ರವಿತ್ತು.
2025ರಲ್ಲಿ Grok 3ನ ನೇರಪ್ರಸಾರದ ಅನಾವರಣ ಕಾರ್ಯಕ್ರಮದಲ್ಲಿ ಎಲಾನ್ ಮಸ್ಕ್ ಜೊತೆಗೆ ಕಾಣಿಸಿಕೊಂಡ ಬಳಿಕ ವು ಟಾವೊ ಅವರಿಗೆ ಸಾರ್ವಜನಿಕವಾಗಿ ಹೆಚ್ಚಿನ ಗಮನ ದೊರೆತಿತ್ತು. ನಂತರದ ದಿನಗಳಲ್ಲಿ xAI ತೊರೆದ ವು ಟಾವೊ, ಈಗ ಈ ಭವ್ಯ ಬಂಗಲೆ ಖರೀದಿ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net