ಅಮೆರಿಕದ 5,000 ಸೈನಿಕರು ಥಾಯ್ಲೆಂಡ್‌ಗೆ ಎಂಟ್ರಿ: ಪಟ್ಟಾಯದಲ್ಲಿ ಪೊಲೀಸರ ‘ಬೇಟೆ’ ಆರಂಭ; ಅಸಲಿ ಕಾರಣವೇನು? US Soldiers enter Thailand

ಯುಎಸ್‌ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆಯ ಆಗಮನದ ಹಿನ್ನೆಲೆಯಲ್ಲಿ ಪಟ್ಟಾಯ ನಗರದ ದೃಶ್ಯ
ಯುಎಸ್‌ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆಯ ಆಗಮನದ ಹಿನ್ನೆಲೆಯಲ್ಲಿ ಪಟ್ಟಾಯ ನಗರದ ದೃಶ್ಯ
Published on
ಥಾಯ್ಲೆಂಡ್‌​​: ಪ್ರಪಂಚದ ಅತಿ ದೊಡ್ಡ ಪ್ರವಾಸಿ ತಾಣಗಳಲ್ಲಿ ಒಂದಾದ ಥಾಯ್ಲೆಂಡ್‌​​ನ  ಪಟ್ಟಾಯ ನಗರ ಈಗ ಸಖತ್ ಸುದ್ದಿಯಲ್ಲಿದೆ. ಅಮೆರಿಕದ ನೌಕಾಪಡೆಯ ಬೃಹತ್ ಯುದ್ಧನೌಕೆ (US Soldiers enter Thailand) ಇಲ್ಲಿಗೆ ಬರಲಿದ್ದು, ಸಾವಿರಾರು ಸೈನಿಕರು ನಗರಕ್ಕೆ ಲಗ್ಗೆ ಇಡಲಿದ್ದಾರೆ. ಆದರೆ ಈ ಸೈನಿಕರ ಆಗಮನಕ್ಕೂ ಮುನ್ನವೇ ಅಲ್ಲಿನ ಆಡಳಿತ ಮಂಡಳಿ ಮತ್ತು ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ. ಕರಾವಳಿ ತೀರದಲ್ಲಿ ದೊಡ್ಡ ಮಟ್ಟದ ಬೇಟೆ ಆರಂಭವಾಗಿದ್ದು, ಅದರ ಅಸಲಿ ಕಥೆ ಇಲ್ಲಿದೆ.

ಬರಲಿದೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆ!

ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧದ ಕಾರ್ಯಾಚರಣೆಗಳಲ್ಲಿ ನಿರತವಾಗಿದ್ದ ಅಮೆರಿಕದ ಪ್ರಸಿದ್ಧ 'ಯುಎಸ್‌ಎಸ್ ಅಬ್ರಹಾಂ ಲಿಂಕನ್' ವಿಮಾನವಾಹಕ ನೌಕೆ ಈಗ ಥಾಯ್ಲೆಂಡ್‌ನ ಪಟ್ಟಾಯ ಸಮೀಪದ ಲೇಮ್ ಚಾಬಾಂಗ್ ಬಂದರಿಗೆ ಬರಲಿದೆ. ಸತತ 250 ದಿನಗಳ ಕಾಲ ಸಮುದ್ರದಲ್ಲೇ ಕಳೆದು, ಹಡಗಿನ ಸಿಬ್ಬಂದಿ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಸುಸ್ತಾಗಿದ್ದಾರೆ. ಸೆಪ್ಟೆಂಬರ್ 2 ರಿಂದ 6ರವರೆಗೆ ಸುಮಾರು 5,000 ಅಮೆರಿಕದ ನಾವಿಕರು, ಮೆರೈನ್‌ಗಳು ಹಾಗೂ ಪೈಲಟ್‌ಗಳು ಪಟ್ಟಾಯ ತೀರದಲ್ಲಿ ಇಳಿದು ಕೆಲಕಾಲ ವಿಶ್ರಾಂತಿ ಪಡೆಯಲಿದ್ದಾರೆ.

ಆರ್ಥಿಕತೆಗೆ ಬೂಸ್ಟ್, ಆದರೆ ಪೊಲೀಸರಿಗೆ ನಡುಕ!

ಒಂದು ಕಡೆ ಈ ಸೈನಿಕರ ಆಗಮನದಿಂದ ಪಟ್ಟಾಯದ ಕುಸಿದು ಹೋಗಿರುವ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳಲಿದೆ ಎಂದು ವ್ಯಾಪಾರಸ್ಥರು ಕೈಕಟ್ಟಿ ಕುಳಿತಿದ್ದಾರೆ. ಬಂದ ತಕ್ಷಣ ಪ್ರತಿ ಸೈನಿಕ ದಿನಕ್ಕೆ ಕನಿಷ್ಠ 1,000 ದಿಂದ 3,000 ಬಾತ್‌ವರೆಗೆ ( ಸುಮಾರು 30 ರಿಂದ 90 ಡಾಲರ್) ಖರ್ಚು ಮಾಡಬಹುದು ಎಂದು ಮೇಯರ್ ಪೊರಮಾಸೆ ಅಂದಾಜಿಸಿದ್ದಾರೆ.
ಆದರೆ ಮತ್ತೊಂದೆಡೆ, ಪಟ್ಟಾಯ ಅಂದ್ರೆ ಜಗಜ್ಜಾಹೀರಾಗಿರುವ ‘ಸೆಕ್ಸ್ ಟೂರಿಸ್ಮ್’ (ಲೈಂಗಿಕ ಪ್ರವಾಸೋದ್ಯಮ) ಜಾಲಕ್ಕೆ ಇದು ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎಂಬ ಆತಂಕ ಶುರುವಾಗಿದೆ. ಅಮೆರಿಕದ ಸೈನಿಕರ ಹಣವೆಲ್ಲಾ ಈ ಅಕ್ರಮ ವೇಶ್ಯಾವಾಟಿಕೆ ಜಾಲದ ಪಾಲಾಗಬಹುದು ಹಾಗೂ ಲೈಗಿಂಕ ರೋಗಗಳು ಹರಡಬಹುದು ಎಂಬ ಎಚ್ಚರಿಕೆ ತಜ್ಞರಿಂದ ಕೇಳಿಬಂದಿದೆ.

ಬೀದಿಗಿಳಿದು ಪೊಲೀಸರಿಂದ ಬೇಟೆ: 50ಕ್ಕೂ ಹೆಚ್ಚು ಜನರ ಬಂಧನ!

ಈ ಎಲ್ಲ ಸಮಸ್ಯೆಗಳಿಗೆ ಕಡಿವಾಣ ಹಾಕಲು ಪಟ್ಟಾಯ ಪೊಲೀಸರು ಈಗ ಮೈದಾನಕ್ಕಿಳಿದಿದ್ದಾರೆ. ಯುದ್ಧನೌಕೆ ಬರುವ ಮುನ್ನವೇ ನಗರಾದ್ಯಂತ ಮಿಂಚಿನ ಕಾರ್ಯಾಚರಣೆ ನಡೆಸಿರುವ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 50ಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧಿಸಿದ್ದಾರೆ.
ಪಟ್ಟಾಯ ಬೀಚ್‌ನಲ್ಲಿ ನಡೆಸಿದ ರೇಡ್‌ನಲ್ಲಿ ಥಾಯ್ಲೆಂಡ್ ಮಾತ್ರವಲ್ಲದೆ, ಲಾವೋಸ್ ಹಾಗೂ ಉಗಾಂಡಾದಿಂದ ಬಂದಿದ್ದ ಮಹಿಳೆಯರು ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾವು ಎಷ್ಟೇ ಕಾವಲು ಕಾದಿದ್ದರೂ, ಸಾರ್ವಜನಿಕವಾಗಿ ಈ ದಂಧೆ ನಡೆಯುವುದನ್ನು ಸಂಪೂರ್ಣ ತಡೆಯುವುದು ಕಷ್ಟವಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ಅಳಲು ತೋಡಿಕೊಂಡಿದ್ದಾರೆ.

ಸೈನಿಕರಿಗೆ ಬಿಗಿ ರೂಲ್ಸ್!

ಅಮೆರಿಕದ ಸೈನಿಕರ ಆಗಮನದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿಟಿ ಹಾಲ್‌ನಲ್ಲಿ ತುರ್ತು ಸಭೆ ನಡೆಸಲಾಗಿದೆ. ಸೈನಿಕರು ಪಟ್ಟಾಯಕ್ಕೆ ಬಂದ ಮೇಲೆ ಗಾಂಜಾ ಅಂಗಡಿಗಳು, ಕೆಲವು ಜಲಕ್ರೀಡೆಗಳು ಹಾಗೂ ರಾತ್ರಿ ತಂಗುವ ಬಾರ್‌ಗಳ ಬಳಿ ಬೆಳಗ್ಗೆ 2 ಗಂಟೆಯ ನಂತರ ತಿರುಗಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗಿದೆ. ಅದರಲ್ಲೂ ವಿಶೇಷವಾಗಿ, ವಾಣಿಜ್ಯ ಲೈಂಗಿಕ ಸೇವೆಗಳು ಮತ್ತು ಮಕ್ಕಳ ಶೋಷಣೆಯಂತಹ ಕೃತ್ಯಗಳಿಂದ ದೂರವಿರುವಂತೆ ಕಡಕ್ ವಾರ್ನಿಂಗ್ ನೀಡಲಾಗಿದೆ. ಒಟ್ಟಿನಲ್ಲಿ, ಅಮೆರಿಕದ ನಾವಿಕರ ಈ ಭೇಟಿಯು ಪಟ್ಟಾಯದ ಬಡವಾಗುತ್ತಿರುವ ಬ್ಯುಸಿನೆಸ್‌ಗೆ ಜೀವ ತುಂಬಲಿದೆಯೋ ಅಥವಾ ದೊಡ್ಡ ತಲೆನೋವಾಗಿ ಪರಿಣಮಿಸಲಿದೆಯೋ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net