ಯೂಕ್ರೇನ್​ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರ ಹೋರಾಡಿದ 4.5 ಲಕ್ಷ ಮಂದಿ ದುರಂತ ಸಾವು? ಸ್ಫೋಟಕ ಮಾಹಿತಿ ಸೋರಿಕೆ! Russia

ಯೂಕ್ರೇನ್​ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರ ಹೋರಾಡಿದ 4.5 ಲಕ್ಷ ಮಂದಿ ದುರಂತ ಸಾವು? ಸ್ಫೋಟಕ ಮಾಹಿತಿ ಸೋರಿಕೆ! Russia
Published on: 

Russia: ಉಕ್ರೇನ್ ಮತ್ತು ರಷ್ಯಾ ನಡುವಿನ ಭೀಕರ ಯುದ್ಧವು ಆರಂಭವಾಗಿ ಇಂದಿಗೆ ನಾಲ್ಕು ವರ್ಷಗಳಿಗೂ ಹೆಚ್ಚು ಸಮಯವೇ ಆಗಿದೆ. ಈ ಸಂಘರ್ಷದಲ್ಲಿ ಇಲ್ಲಿಯವರೆಗೆ ರಷ್ಯಾ ಪರವಾಗಿ ಹೋರಾಡಿದ ಅಥವಾ ಯುದ್ಧದಲ್ಲಿ ಭಾಗಿಯಾದ ಸೈನಿಕರು ಸೇರಿ ಸುಮಾರು 4.5 ಲಕ್ಷ ಮಂದಿ ದುರಂತವಾಗಿ ಸಾವಿಗೀಡಾಗಿದ್ದಾರೆ ಎಂಬ ಶಾಕಿಂಗ್​ ಮಾಹಿತಿ ಇದೀಗ ಸೋರಿಕೆಯಾಗಿದೆ.

ಸ್ವತಂತ್ರವಾಗಿ ದೃಢಪಡಿಸಲು ಸಾಧ್ಯವಾಗಿಲ್ಲ

ರಷ್ಯಾ ಸರ್ಕಾರದ ಡೇಟಾ ಸಂಗ್ರಹ ಸಂಸ್ಥೆಯಾದ ರೋಸ್‌ಸ್ಟಾಟ್‌ನಿಂದ ಕದ್ದೊಯ್ಯಲಾಗಿದೆ ಎನ್ನಲಾದ ದಾಖಲೆಗಳನ್ನು ಆಧರಿಸಿ ಹ್ಯಾಕರ್‌ ಗುಂಪೊಂದು ಈ ಮಾಹಿತಿಯನ್ನು ಬಟಾಬಯಲು ಮಾಡಿದೆ. ಆದರೆ, ಈ ಅಂಕಿ-ಅಂಶಗಳ ನೈಜತೆಯನ್ನು ಸ್ವತಂತ್ರವಾಗಿ ದೃಢಪಡಿಸಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ರೋಸ್‌ಸ್ಟಾಟ್‌ನ ಆಂತರಿಕ ದಾಖಲೆಗಳನ್ನು ಹ್ಯಾಕ್ ಮಾಡಿ ಈ ಮಾಹಿತಿ ಸಂಗ್ರಹಿಸಿರುವುದಾಗಿ ಎರಡು ಹ್ಯಾಕರ್‌ ತಂಡಗಳು ಬಹಿರಂಗವಾಗಿ ಹೇಳಿಕೊಂಡಿವೆ.

ಹ್ಯಾಕರ್ಸ್​ ಸ್ಪಷ್ಟನೆ

'ಬೆಲರೂಸಿಯನ್ ಸೈಬರ್‌ಪಾರ್ಟಿಸನ್ಸ್' ಮತ್ತು 'ಸೈಲೆಂಟ್ ಕ್ರೋ' ಎಂಬ ಹ್ಯಾಕರ್‌ ಗುಂಪುಗಳು ನವೆಂಬರ್ 7ರಂದು ಈ ಮಾಹಿತಿಯನ್ನು ಪ್ರಕಟಿಸಿವೆ. 2022ರ ಫೆಬ್ರವರಿಯಿಂದ 2026ರ ಆಗಸ್ಟ್‌ವರೆಗೆ ದಾಖಲಾದ ಮರಣ ಪ್ರಮಾಣಪತ್ರಗಳ ಮಾಹಿತಿಯನ್ನು ಒಳಗೊಂಡಿರುವ ರೋಸ್‌ಸ್ಟಾಟ್‌ನ ಆಂತರಿಕ 'ಡೆಮೋಗ್ರಫಿ' ಡೇಟಾಬೇಸ್‌ಗೆ ಪ್ರವೇಶ ಪಡೆದಿದ್ದೇವೆ ಎಂದು ಹ್ಯಾಕರ್ಸ್​ ಸ್ಪಷ್ಟಪಡಿಸಿದ್ದಾರೆ.

ಬೆಲರೂಸಿಯನ್ ಸೈಬರ್‌ಪಾರ್ಟಿಸನ್ಸ್ ಪ್ರಕಾರ, ಯುದ್ಧ ಅಥವಾ ಸೇನಾ ಕಾರ್ಯಾಚರಣೆಗಳಿಂದ ಸಾವಿಗೀಡಾಗಿದ್ದಾರೆ ಎಂಬ ನೇರ ಕಾರಣವನ್ನು ಮುಂದಿಟ್ಟು ನಮೂದಿಸಿರುವ ದಾಖಲೆಗಳ ಆಧಾರದಲ್ಲಿ ಕನಿಷ್ಠ 3,93,881 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಮತ್ತೊಂದೆಡೆ, ಸೈಲೆಂಟ್ ಕ್ರೋ ಗ್ರೂಪ್​, ತನ್ನ ಲೆಕ್ಕಾಚಾರದಲ್ಲಿ ಸೇನಾ ಸಿಬ್ಬಂದಿಯ ಯುದ್ಧೇತರ ಸಾವುಗಳು ಹಾಗೂ ಸಾವಿನ ಕಾರಣ ಸ್ಪಷ್ಟವಾಗಿ ನಮೂದಿಸದ ಕೆಲವು ಪ್ರಕರಣಗಳನ್ನೂ ಸೇರಿಸಿ ಒಟ್ಟು 4,50,100 ಸಾವುಗಳಾಗಿರಬಹುದು ಎಂದು ಅಂದಾಜಿಸಿದೆ.

73 ಸಾವಿರ ಚದರ ಕಿ.ಮೀ.

ಈ ಸೋರಿಕೆಯಾದ ದಾಖಲೆಗಳ ನೈಜತೆ ಮತ್ತು ಹ್ಯಾಕರ್‌ಗಳು ನೀಡಿರುವ ಸಾವಿನ ಸಂಖ್ಯೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು 'ದಿ ಕೈವ್ ಇಂಡಿಪೆಂಡೆಂಟ್' ವರದಿ ತಿಳಿಸಿದೆ. ಇನ್ನು, ಉಕ್ರೇನ್‌ನ ಓಪನ್‌ಸೋರ್ಸ್ ಮ್ಯಾಪಿಂಗ್ ಯೋಜನೆ ಡೀಪ್‌ಸ್ಟೇಟ್‌ನ ಅಂದಾಜಿನ ಪ್ರಕಾರ, 2022ರಲ್ಲಿ ಯುದ್ಧ ಆರಂಭವಾದ ಬಳಿಕ ರಷ್ಯಾ ಸುಮಾರು 73 ಸಾವಿರ ಚದರ ಕಿ.ಮೀ. ಉಕ್ರೇನ್ ಭೂಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಸೈಲೆಂಟ್ ಕ್ರೋ ನೀಡಿರುವ ಸಾವಿನ ಅಂದಾಜನ್ನು ಈ ಭೂಪ್ರದೇಶದ ಪ್ರಮಾಣಕ್ಕೆ ಹೋಲಿಸಿದರೆ, ಪ್ರತಿ ಚದರ ಕಿ.ಮೀಗೆ ಸರಾಸರಿ ಆರು ಸಾವುಗಳಾಗುತ್ತವೆ.

ಹ್ಯಾಕರ್‌ಗಳ ಹೇಳಿಕೆಯ ಪ್ರಕಾರ, ದಾಳಿಗೂ ಸುಮಾರು ಆರು ತಿಂಗಳ ಮುನ್ನವೇ ರೋಸ್‌ಸ್ಟಾಟ್‌ನ ನೆಟ್‌ವರ್ಕ್‌ಗೆ ಪ್ರವೇಶ ಪಡೆದಿದ್ದರು. ಅಕ್ಟೋಬರ್ 31ರಿಂದ ನವೆಂಬರ್ 1ರ ನಡುವಿನ ರಾತ್ರಿ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಮೇಲೆ ದಾಳಿ ನಡೆಸುವ ಮೊದಲು ಆಂತರಿಕ ದಾಖಲೆಗಳು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಿದ್ದರು. ಆದರೆ, ರೋಸ್‌ಸ್ಟಾಟ್ ಅಕ್ಟೋಬರ್ 29ರಿಂದ ನವೆಂಬರ್ 1ರ ನಡುವೆ ತನ್ನ ವ್ಯವಸ್ಥೆಗಳ ಮೇಲೆ ಸೈಬರ್ ದಾಳಿಗಳು ನಡೆದಿರುವುದನ್ನು ಒಪ್ಪಿಕೊಂಡಿದ್ದರೂ, ಡೇಟಾಬೇಸ್ ಹ್ಯಾಕ್ ಆಗಿಲ್ಲ ಮತ್ತು ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ನಿರಾಕರಿಸಿದೆ.

2,85,881 ರಷ್ಯಾದ ಸೇನಾ ಸಿಬ್ಬಂದಿ

ದಾಳಿಯ ಬಳಿಕ ಕೆಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲವು ಅಂಕಿಅಂಶಗಳನ್ನು ಸಲ್ಲಿಸುವ ಗಡುವನ್ನೂ ವಿಸ್ತರಿಸಿತ್ತು. ರಷ್ಯಾ ತನ್ನ ಮಿಲಿಟರಿಯ ಸಾವಿನ ಅಧಿಕೃತ ಅಂಕಿಅಂಶಗಳನ್ನು ಬಹಿರಂಗಪಡಿಸದ ಕಾರಣ, ಯುದ್ಧದಲ್ಲಿ ಮೃತಪಟ್ಟವರ ನಿಖರ ಸಂಖ್ಯೆಯನ್ನು ಅಂದಾಜಿಸುವುದು ಕಷ್ಟಕರವಾಗಿದೆ. ನವೆಂಬರ್ 6ರವರೆಗಿನ ಲೆಕ್ಕಾಚಾರದ ಪ್ರಕಾರ, ರಷ್ಯಾದ ಸ್ವತಂತ್ರ ಮಾಧ್ಯಮ ಸಂಸ್ಥೆ ಮೀಡಿಯಝೋನಾ, ಬಿಬಿಸಿ ರಷ್ಯನ್ ಮತ್ತು ಸ್ವಯಂಸೇವಕರ ಸಹಯೋಗದಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ 2,85,881 ರಷ್ಯಾದ ಸೇನಾ ಸಿಬ್ಬಂದಿಯ ಸಾವುಗಳನ್ನು ಗುರುತಿಸಲಾಗಿದೆ.

Also Read
ಆಗಷ್ಟೇ ಹುಟ್ಟಿದ ಮಗುವಿಗೆ 6 ತಿಂಗಳು ನೀರು ಉಣಿಸುವುದಿಲ್ಲ ಏಕೆ? ಇಲ್ಲಿದೆ ನೋಡಿ ಅಚ್ಚರಿ ಉತ್ತರ | Newborn Baby
ಯೂಕ್ರೇನ್​ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರ ಹೋರಾಡಿದ 4.5 ಲಕ್ಷ ಮಂದಿ ದುರಂತ ಸಾವು? ಸ್ಫೋಟಕ ಮಾಹಿತಿ ಸೋರಿಕೆ! Russia

ಈ ಸಂಖ್ಯೆ ಕೂಡ ಸಂಪೂರ್ಣವಾಗಿಲ್ಲ. ವಾಸ್ತವಿಕ ಸಾವಿನ ಸಂಖ್ಯೆ ಇದಕ್ಕಿಂತ ಹೆಚ್ಚಿರಬಹುದು ಎಂದು ವರದಿಗಾರರು ಹೇಳಿದ್ದಾರೆ. ಇದರ ನಡುವೆ ರಷ್ಯಾ, ಉಕ್ರೇನ್ ಮತ್ತು ಅಮೆರಿಕ ನಡುವೆ ಮತ್ತೊಂದು ಸುತ್ತಿನ ಶಾಂತಿ ಮಾತುಕತೆ ಮಂಗಳವಾರ ಯುಎಇ ರಾಜಧಾನಿ ಅಬುಧಾಬಿಯಲ್ಲಿ ನಡೆಯಲು ಸಿದ್ಧತೆ ನಡೆದಿದ್ದು, ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ನಾಲ್ಕನೇ ಸುತ್ತಿನ ಮಾತುಕತೆ ಇದಾಗಿದೆ. ಈ ಹಿಂದೆ ಫೆಬ್ರವರಿಯಲ್ಲಿ ಜಿನೇವಾದಲ್ಲಿ ಸಭೆ ನಡೆದಿತ್ತು. ಆದರದು, ಯಶಸ್ವಿಯಾಗಲಿಲ್ಲ.

ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಹೊಸ ಒಪ್ಪಂದದ ಸೂತ್ರ ರೂಪಿಸಲು ಪ್ರಯತ್ನಿಸುತ್ತಿವೆ. ಆದರೆ, ಉಕ್ರೇನ್‌ನ ಭೂಪ್ರದೇಶ ಮತ್ತು ಭದ್ರತಾ ಖಾತರಿಗಳ ವಿಚಾರದಲ್ಲಿ ಇನ್ನೂ ಒಮ್ಮತ ಮೂಡದಿರುವುದು ಶಾಂತಿ ಪ್ರಯತ್ನಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ,(ಏಜೆನ್ಸೀಸ್).