ಆಗಷ್ಟೇ ಹುಟ್ಟಿದ ಮಗುವಿಗೆ 6 ತಿಂಗಳು ನೀರು ಉಣಿಸುವುದಿಲ್ಲ ಏಕೆ? ಇಲ್ಲಿದೆ ನೋಡಿ ಅಚ್ಚರಿ ಉತ್ತರ | Newborn Baby

 Newborn Baby
ಆಗಷ್ಟೇ ಹುಟ್ಟಿದ ಮಗುವಿಗೆ 6 ತಿಂಗಳು ನೀರು ಉಣಿಸುವುದಿಲ್ಲ ಏಕೆ? ಇಲ್ಲಿದೆ ನೋಡಿ ಅಚ್ಚರಿ ಉತ್ತರ | Newborn Baby
Published on: 

Newborn Baby: ಮಗು ಹುಟ್ಟಿದ ಕೂಡಲೇ ಅದರ ಆರೋಗ್ಯದ ಬಗ್ಗೆ ಪೋಷಕರಲ್ಲಿ ಸಾಕಷ್ಟು ಪ್ರಶ್ನೆಗಳು ತಲೆಯಲ್ಲಿ ಓಡುವುದು ತೀರ ಸಹಜ. ಕಂದಮ್ಮ ಅಳುತ್ತಿದ್ದರೆ ಹಸಿವಾಗಿದೆಯೇ, ಬಾಯಾರಿಕೆಯಾಗಿದೆಯೇ ಎಂಬ ಗೊಂದಲವೂ ಕಾಡುತ್ತದೆ. ಅದರಲ್ಲೂ ಬೇಸಿಗೆಯ ದಿನಗಳಲ್ಲಿ ನವಜಾತ ಶಿಶುವಿಗೆ ಸ್ವಲ್ಪ ನೀರು ಕುಡಿಸಿದರೆ ಏನಾಗುತ್ತದೆ ಎಂಬ ಪ್ರಶ್ನೆ ಹಲವರಲ್ಲಿದೆ. ಆದರೆ, ಉತ್ತರ ಹುಡುಕುವ ಪ್ರಯತ್ನಕ್ಕೆ ಮುಂದಾಗುವುದಿಲ್ಲ. ವೈದ್ಯರು ಮಾತ್ರ ಮೊದಲ ಆರು ತಿಂಗಳವರೆಗೆ ಮಗುವಿಗೆ ಎದೆಹಾಲು ಬಿಟ್ಟರೆ ನೀರು ಉಣಿಸಬಾರದು ಎಂದು ಸಲಹೆ ನೀಡುತ್ತಾರೆ. ಅಷ್ಟಕ್ಕೂ ಪುಟ್ಟ ಮಗುವಿಗೆ ನೀರೇಕೆ ಕೊಡಬಾರದು ಎಂದು ವೈದ್ಯರು ಎಚ್ಚರಿಸುವುದು? ಇದರಿಂದ ಆಗುವ ಅಪಾಯವೇನು ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ.

ಮೊದಲ ಆರು ತಿಂಗಳು ಎದೆಹಾಲೇ ಸಾಕು

ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುನಿಸೆಫ್ ಶಿಫಾರಸಿನಂತೆ, ಮಗುವಿನ ಜನನದ ಮೊದಲ ಆರು ತಿಂಗಳವರೆಗೆ ಸಾಧ್ಯವಾದಷ್ಟು ಕೇವಲ ತಾಯಿಯ ಎದೆಹಾಲನ್ನೇ ನೀಡಬೇಕು. ಈ ಅವಧಿಯಲ್ಲಿ ಮಗುವಿಗೆ ಅಗತ್ಯವಿರುವ ಪೋಷಕಾಂಶಗಳು ಹಾಗೂ ದ್ರವಾಂಶ ಎದೆಹಾಲಿನಲ್ಲೇ ಲಭ್ಯವಿರುತ್ತವೆ. ಇದರಲ್ಲಿ, ಶೇ.80ಕ್ಕಿಂತ ಹೆಚ್ಚು ನೀರಿನ ಅಂಶವಿರುವುದರಿಂದ ಮಗುವಿನ ಬಾಯಾರಿಕೆಯನ್ನು ನೀಗಿಸಲು ಎದೆಹಾಲೇ ಸಾಕು.

ನೀರು ಉಣಿಸಿದ್ರೆ ಏನು ಸಮಸ್ಯೆ?

ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವಿಗೆ ಹೆಚ್ಚುವರಿಯಾಗಿ ನೀರು ನೀಡುವುದರಿಂದ ಹೊಟ್ಟೆ ತುಂಬಿ ಎದೆಹಾಲು ಕುಡಿಯುವ ಪ್ರಮಾಣ ಕುಸಿಯಬಹುದು. ಇದರಿಂದ ಮಗುವಿಗೆ ಅಗತ್ಯವಾದ ಪೋಷಕಾಂಶಗಳು ಸಮರ್ಪಕವಾಗಿ ದೊರೆಯದಿರುವ ಸಾಧ್ಯತೆಯಿದೆ. ಅಶುದ್ಧ ನೀರಿನಿಂದ ಸೋಂಕು ಮತ್ತು ಅತಿಸಾರದ ಅಪಾಯವೂ ಹೆಚ್ಚಾಗಬಹುದು.

ವಾಟರ್ ಇಂಟಾಕ್ಸಿಕೇಶನ್ ಅಪಾಯ

ಮಗುವಿಗೆ ಅತಿಯಾದ ಪ್ರಮಾಣದಲ್ಲಿ ನೀರು ನೀಡಿದರೆ 'ವಾಟರ್ ಇಂಟಾಕ್ಸಿಕೇಶನ್' ಎಂಬ ಅಪಾಯಕಾರಿ ಸ್ಥಿತಿ ಉಂಟಾಗಬಹುದು. ಇದರಿಂದ, ರಕ್ತದಲ್ಲಿನ ಸೋಡಿಯಂ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ತೀವ್ರ ಸಂದರ್ಭಗಳಲ್ಲಿ ನರಮಂಡಲದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ ಹಾಗೂ ಸೆಳೆತದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಶಿಶುಗಳ ಮೂತ್ರಪಿಂಡಗಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ ಹೆಚ್ಚುವರಿ ನೀರನ್ನು ನಿರ್ವಹಿಸುವ ಸಾಮರ್ಥ್ಯವೂ ಬಹಳ ಲಿಮಿಟೆಡ್​ ಆಗಿರುತ್ತದೆ ಎಂಬುದು ನೆನಪಿರಲಿ.

ಬೇಸಿಗೆಯಲ್ಲೂ ನೀರು ಬೇಕಿಲ್ಲವೇ?

ಬೇಕಿಲ್ಲ. ಪ್ರತ್ಯೇಕವಾಗಿ ಎದೆಹಾಲು ಕುಡಿಯುವ ಆರು ತಿಂಗಳೊಳಗಿನ ಶಿಶುಗಳಿಗೆ ಬೇಸಿಗೆಯಲ್ಲೂ ಹೆಚ್ಚುವರಿ ನೀರಿನ ಅಗತ್ಯವಿಲ್ಲ. ಮಗುವಿಗೆ ಬಾಯಾರಿಕೆಯಾಗಿದೆ ಎಂದು ಅನಿಸಿದರೆ ಹೆಚ್ಚು ಬಾರಿ ಎದೆಹಾಲು ನೀಡಬಹುದು ಎಂದು ಡಬ್ಲ್ಯೂಎಚ್​ಓ ಸಲಹೆ ನೀಡುತ್ತದೆ.

Also Read
ತುಟಿ ದೊಡ್ಡದಾದಷ್ಟೂ ವರದಕ್ಷಿಣೆ ಹೆಚ್ಚು! ಈ ಬುಡಕಟ್ಟಿನ ಸಂಪ್ರದಾಯದ ಹಿಂದಿರುವ ವಿಚಿತ್ರ ಕಥೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ | Lip Plate Tradition
 Newborn Baby

ಒಟ್ಟಿನಲ್ಲಿ, ಮಗುವಿನ ಆರೋಗ್ಯಕರ ಬೆಳವಣಿಗೆಗೆ ಮೊದಲ ಆರು ತಿಂಗಳು ಎದೆಹಾಲು ಅತ್ಯಂತ ಮುಖ್ಯ. ಮಗುವಿಗೆ ನೀರು ಅಥವಾ ಇತರ ದ್ರವಗಳನ್ನು ನೀಡುವ ಮೊದಲು ವೈದ್ಯರ ಸಲಹೆ ಪಡೆಯುವುದು ತುಂಬಾ ಉತ್ತಮ. ವೈದ್ಯರು ನಿರ್ದಿಷ್ಟ ಕಾರಣಕ್ಕೆ ಹೆಚ್ಚುವರಿ ದ್ರವ ನೀಡಲು ಸೂಚಿಸಿದರೆ ಮಾತ್ರ ಪಾಲಿಸಬೇಕು,(ಏಜೆನ್ಸೀಸ್).