ಪಾಕಿಸ್ತಾನದ ಉಗ್ರ ಪೋಷಣೆಗೆ ಸಿಕ್ತು ಲೈವ್ ಸಾಕ್ಷಿ!...ಶೋಯೆಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್ ನಾಯಕರು ಭಾಗಿ | 26/11 Mastermind

26/11 Mastermind
26/11 Mastermind
Published on
26/11 Mastermind: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ಅಂತ್ಯಕ್ರಿಯೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ರಾಜಕೀಯ ಮುಖವಾಡ ಎನ್ನಲಾದ ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ ನಾಯಕರು ಭಾಗವಹಿಸಿರುವುದು ತೀವ್ರ ವಿವಾದ ಕಾರಣವಾಗಿದೆ. ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ಮುಕ್ತ ಹಾಗೂ ಸುರಕ್ಷಿತ ವಾತಾವರಣವಿದೆ ಮತ್ತು ಅವರು ಸುರಕ್ಷಿತ ಆಶ್ರಯ ತಾಣಗಳನ್ನು ಆನಂದಿಸುತ್ತಿದ್ದಾರೆ ಎಂಬ ಭಾರತದ ದೀರ್ಘಕಾಲದ ಆರೋಪಕ್ಕೆ ಈ ಘಟನೆ ಮತ್ತೊಂದು ಜೀವಂತ ಸಾಕ್ಷಿಯಾಗಿದೆ.
ಮುಂಬೈ 26/11 ಉಗ್ರರ ದಾಳಿಯ ಮಾಸ್ಟರ್‌ಮೈಂಡ್ ಮತ್ತು ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್‌ನ ಆಪ್ತರು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು ಎಂದು ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ (PMML) ಬಿಡುಗಡೆ ಮಾಡಿರುವ ವಿಡಿಯೋದಿಂದ ತಿಳಿದುಬಂದಿದೆ. ಲೀಗ್​ ಅನ್ನು ಲಷ್ಕರ್ ಸಂಘಟನೆಯ ರಾಜಕೀಯ ಮುಖವಾಣಿ ಎಂದೇ ಗುರುತಿಸಲಾಗುತ್ತದೆ.
ಅಂತ್ಯಕ್ರಿಯೆಯಿಂದ ಹೊರಬಂದಿರುವ ಫೋಟೋಗಳು ಮತ್ತು ವಿಡಿಯೋಗಳಲ್ಲಿ ಲೀಗ್​​ನ ಇಸ್ಲಾಮಾಬಾದ್ ಮುಖ್ಯಸ್ಥ ಇನಾಮ್-ಉರ್-ರೆಹಮಾನ್ ಕಂಬೋಹ್ ಉಪಸ್ಥಿತರಿರುವುದು ಸ್ಪಷ್ಟವಾಗಿ ಕಂಡಿದೆ. ಅವರೊಂದಿಗೆ ಉಪ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ತೂರ್, ವಲಯ ಪ್ರಧಾನ ಕಾರ್ಯದರ್ಶಿ ಹಫೀಜ್ ಉಮರ್ ಮತ್ತು ಖಿದ್ಮತ್ ಸಮಿತಿಯ ಅಧ್ಯಕ್ಷ ಅಮ್ಜದ್ ಭಟ್ಟಿ ಸೇರಿದಂತೆ ಇತರ ನಾಯಕರು ಭಾಗವಹಿಸಿದ್ದರು. ವಿಡಿಯೋದಲ್ಲಿ ಈ ಎಲ್ಲಾ ನಾಯಕರು ಪ್ರಾರ್ಥನೆಯ ಸಾಲಿನಲ್ಲಿ ಒಟ್ಟಿಗೆ ನಿಂತು ಮೃತರ ಆತ್ಮಕ್ಕೆ ಶಾಂತಿ ಕೋರುತ್ತಿರುವುದು ಕಂಡುಬಂದಿದೆ.
ಪಾಕಿಸ್ತಾನಿ ಮಾಧ್ಯಮಗಳ ವರದಿ ಪ್ರಕಾರ, ಶಾಹಿದ್ ಅಖ್ತರ್ ಅವರು ಮೂರು ದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ತಮ್ಮ ಕುಟುಂಬದಲ್ಲಿ ನಡೆದ ಈ ದುರಂತವನ್ನು ಖಚಿತಪಡಿಸಿದ್ದ ಶೋಯೆಬ್ ಅಖ್ತರ್, ನನ್ನ ಪ್ರೀತಿಯ ಹಿರಿಯ ಸಹೋದರ ಶಾಹಿದ್ ಅಖ್ತರ್ ಅಲ್ಲಾಹನ ಸನ್ನಿಧಿ ಸೇರಿದ್ದಾರೆ ಎಂದು ಹಂಚಿಕೊಳ್ಳಲು ನನಗೆ ತುಂಬಾ ಬೇಸರವಾಗುತ್ತಿದೆ. ನಮಾಜ್-ಎ-ಜನಾಜಾ ಸಮಯ ಮತ್ತು ಸ್ಥಳವನ್ನು ನಾಳೆ ಬೆಳಗ್ಗೆ ತಿಳಿಸಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ತಮ್ಮ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್ ಸಂಘಟನೆಯ ಮುಖಂಡರು ಭಾಗವಹಿಸಿದ ಬಗ್ಗೆ ಎದ್ದಿರುವ ಇತ್ತೀಚಿನ ತೀವ್ರ ಟೀಕೆಗಳ ಕುರಿತು ಶೋಯೆಬ್ ಅಖ್ತರ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪಾಕಿಸ್ತಾನದ ಖ್ಯಾತ ಸಾರ್ವಜನಿಕ ವ್ಯಕ್ತಿಯೊಬ್ಬರ ನೇತೃತ್ವದಲ್ಲಿ ನಡೆದ ಇಂತಹ ಕೌಟುಂಬಿಕ ಕಾರ್ಯಕ್ರಮದಲ್ಲಿ ಭಯೋತ್ಪಾದಕ ಸಂಘಟನೆಯ ಪ್ರಮುಖರು ಇಷ್ಟೊಂದು ಮುಕ್ತವಾಗಿ ಭಾಗವಹಿಸಿರುವುದು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ದಶಕಗಳಿಂದ ಪಾಕ್ ಪ್ರೇರಿತ ಭಯೋತ್ಪಾದನೆಗೆ ನಿರಂತರವಾಗಿ ಬಲಿಯಾಗುತ್ತಿರುವ ಭಾರತ, ಉಗ್ರರ ಮತ್ತು ಅವರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿರುವ ಇಸ್ಲಾಮಾಬಾದ್ ಧೋರಣೆಯನ್ನು ವಿಶ್ವಸಂಸ್ಥೆ ಸೇರಿದಂತೆ ವಿವಿಧ ಜಾಗತಿಕ ವೇದಿಕೆಗಳಲ್ಲಿ ಪದೇ ಪದೇ ತರಾಟೆಗೆ ತೆಗೆದುಕೊಳ್ಳುತ್ತಲೇ ಬಂದಿದೆ. ಈಗ ಹೊರಬಿದ್ದಿರುವ ಈ ವಿಡಿಯೋ ಪಾಕಿಸ್ತಾನದ ಉಗ್ರ ಪೋಷಣೆಯ ನೀತಿಯನ್ನು ಮತ್ತೊಮ್ಮೆ ಜಗತ್ತಿನೆದುರು ಬಹಿರಂಗಪಡಿಸಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net