ಬಿಜೆಪಿ ವೋಟ್ ಬ್ಯಾಂಕ್‌ಗೆ ಕನ್ನ..? ಮಿತ್ರಪಕ್ಷದ ವಿರುದ್ಧವೇ ಗೋವಾದಲ್ಲಿ ಅಖಾಡಕ್ಕಿಳಿಯಲಿದ್ದಾರಂತೆ ಏಕನಾಥ್ ಶಿಂಧೆ! | Goa Politics

 Goa Politics > ಮಿತ್ರಪಕ್ಷದ ವಿರುದ್ಧವೇ ಗೋವಾದಲ್ಲಿ ಅಖಾಡಕ್ಕಿಳಿಯಲಿದ್ದಾರಂತೆ ಏಕನಾಥ್ ಶಿಂಧೆ!
Goa Politics > ಮಿತ್ರಪಕ್ಷದ ವಿರುದ್ಧವೇ ಗೋವಾದಲ್ಲಿ ಅಖಾಡಕ್ಕಿಳಿಯಲಿದ್ದಾರಂತೆ ಏಕನಾಥ್ ಶಿಂಧೆ!
Published on
ಪಣಜಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ, ಮಹಾರಾಷ್ಟ್ರದ ಗಡಿ ದಾಟಿ ನೆರೆಯ ಗೋವಾ ರಾಜ್ಯದಲ್ಲಿ ತನ್ನ ರಾಜಕೀಯ ಪ್ರಭಾವವನ್ನು ವಿಸ್ತರಿಸಲು ಭರ್ಜರಿ ತಯಾರಿ ನಡೆಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 40 ಸ್ಥಾನಗಳ ಪೈಕಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪಕ್ಷ ನಿರ್ಧರಿಸಿದೆ ಎಂದು ವರದಿಯಾಗಿದೆ. ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಬೇಕಾಗಿದ್ದರೂ, ಈ ವರ್ಷದ ಕೊನೆಯ ಭಾಗದಲ್ಲೇ ಅವಧಿಪೂರ್ವ ಚುನಾವಣೆ ನಡೆಯಬಹುದು ಎಂಬ ರಾಜಕೀಯ ಚರ್ಚೆಗಳ ನಡುವೆ ಶಿವಸೇನೆಯ ಈ ನಡೆ ತೀವ್ರ ಕುತೂಹಲ ಮೂಡಿಸಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ, ಗೋವಾದಲ್ಲಿ ಮಾತ್ರ ಆಡಳಿತಾರೂಢ ಬಿಜೆಪಿಯ ವಿರುದ್ಧವೇ ನೇರ ಕಣಕ್ಕಿಳಿಯುತ್ತಿರುವುದು ವಿಶೇಷ.

ಗೋವಾ ಮಿಷನ್‌ಗೆ ಶಿಂಧೆ ಪಡೆ ಸಜ್ಜು

ಗೋವಾದಲ್ಲಿ ಪಕ್ಷವನ್ನು ಸಂಘಟಿಸಲು ಶಿವಸೇನೆಯು ಹಿರಿಯ ನಾಯಕ ಹಾಗೂ ಮಾಜಿ ಸಂಸದ ಗಜಾನನ್ ಕೀರ್ತಿಕರ್, ಮುಂಬೈನ ಮಾಜಿ ಕಾರ್ಪೊರೇಟರ್‌ಗಳಾದ ದಿಲೀಪ್ ನಾಯ್ಕ್ (ದಕ್ಷಿಣ ಗೋವಾ ಉಸ್ತುವಾರಿ) ಮತ್ತು ರಾಜು ಪೆಡ್ನೇಕರ್ (ಉತ್ತರ ಗೋವಾ ಉಸ್ತುವಾರಿ) ಅವರನ್ನು ನಿಯೋಜಿಸಿದೆ. ಗೋವಾದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ಸಿಗಬೇಕು ಮತ್ತು ಉತ್ತರ ಭಾರತದಿಂದ ಬರುತ್ತಿರುವ ವಲಸಿಗರ ಹರಿವನ್ನು ತಡೆಯಬೇಕು ಎಂಬ ಸನ್ಸ್ ಆಫ್ ದಿ ಸಾಯಿಲ್ (Sons-of-the-soil) ನೀತಿಯನ್ನು ಶಿವಸೇನೆ ಪ್ರಮುಖವಾಗಿ ಕೈಗೆತ್ತಿಕೊಂಡಿದೆ.
ಗೋವಾದಲ್ಲಿ ಮರಾಠಿ ಭಾಷಿಕ ಹಿಂದೂ ಮತದಾರರನ್ನು ಸೆಳೆಯುವುದು ಪಕ್ಷದ ಮುಖ್ಯ ಉದ್ದೇಶವಾಗಿದ್ದು, ಸಾಮಾನ್ಯವಾಗಿ ಚುನಾವಣೆ ಹತ್ತಿರವಿರುವಾಗ ಗೋವಾದಲ್ಲಿ ಸಕ್ರಿಯವಾಗುತ್ತಿದ್ದ ಶಿವಸೇನೆ, ಈ ಬಾರಿ ಹಲವು ತಿಂಗಳುಗಳ ಮುಂಚಿತವಾಗಿಯೇ ಕಚೇರಿ ತೆರೆದು, ಆಂಬ್ಯುಲೆನ್ಸ್ ಸೇವೆ, ಛತ್ರಿ ವಿತರಣೆಯಂತಹ ಸಾಮಾಜಿಕ ಕಾರ್ಯಗಳ ಮೂಲಕ ಜನರ ಹತ್ತಿರವಾಗುತ್ತಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಗೋವಾದ ಪೋರ್ವೊರಿಮ್‌ನಲ್ಲಿ ಶಿವಸೇನೆಯ 60ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಗಿದೆ.

ಮರುಕಳಿಸಲಿದೆಯೇ ಹಳೇ ಇತಿಹಾಸ..?

ಮಹಾರಾಷ್ಟ್ರದ ಹೊರಗೆ ಶಿವಸೇನೆ ಶಾಸಕರೊಬ್ಬರು ಆಯ್ಕೆಯಾಗಿದ್ದು 1991 ರ ಉತ್ತರ ಪ್ರದೇಶದ ಅಕ್ಬರ್‌ಪುರ ಕ್ಷೇತ್ರದಲ್ಲಿ (ಪವನ್ ಕುಮಾರ್ ಪಾಂಡೆ) ಮಾತ್ರ. ಅದಾದ ಬಳಿಕ ಪಕ್ಷದ ಪ್ರಾದೇಶಿಕ (ಮರಾಠಿ ಮಾನುಷ್) ನೀತಿ ಹಾಗೂ ಹಿಂದುತ್ವ ಸಿದ್ಧಾಂತಗಳ ನಡುವಿನ ಗೊಂದಲದಿಂದಾಗಿ ಶಿವಸೇನೆ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿತ್ತು. 2022 ರ ಗೋವಾ ಚುನಾವಣೆಯಲ್ಲಿ ಅವಿಭಜಿತ ಶಿವಸೇನೆಯು ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡು 10 ಸೀಟುಗಳಲ್ಲಿ ಸ್ಪರ್ಧಿಸಿತ್ತಾದರೂ, ಕೇವಲ ಶೇ. 0.18 ರಷ್ಟು (1,726 ಮತ) ಮತಗಳನ್ನು ಪಡೆದು ಹೀನಾಯವಾಗಿ ಸೋತಿತ್ತು. ಆದರೆ ಈ ಬಾರಿ ತೃಣಮೂಲ ಕಾಂಗ್ರೆಸ್​ನಂತೆ ಇತರ ಪಕ್ಷಗಳ ಅತೃಪ್ತ ಅಥವಾ ಪ್ರಭಾವಿ ನಾಯಕರನ್ನು ಸೆಳೆದು ಸ್ವತಂತ್ರವಾಗಿ ಸ್ಪರ್ಧಿಸಲು ಶಿಂಧೆ ಬಣ ಯೋಜಿಸಿದೆ.

ಮತ್ತೆ ಮುನ್ನೆಲೆಗೆ ಬಂದ ಮರಾಠಿ - ಕೊಂಕಣಿ ಭಾಷಾ ವಿವಾದ

ಶಿವಸೇನೆಯ ಈ ಎಂಟ್ರಿಯು ಗೋವಾದಲ್ಲಿ ದಶಕಗಳ ಹಳೆಯ ಭಾಷಾ ವಿವಾದವನ್ನು ಮತ್ತೆ ಕೆರಳಿಸುವ ಸಾಧ್ಯತೆಯಿದೆ. 1967 ರಲ್ಲೇ ಗೋವಾ ಜನರು ಮಹಾರಾಷ್ಟ್ರದೊಂದಿಗೆ ವಿಲೀನವಾಗುವುದರ ವಿರುದ್ಧ ಮತ ಚಲಾಯಿಸಿದ್ದರು. ತದನಂತರ 1987 ರಲ್ಲಿ ನಡೆದ ತೀವ್ರ ಭಾಷಾ ಚಳವಳಿ ಮತ್ತು ಹಿಂಸಾಚಾರದ ಬಳಿಕ ದೇವನಾಗರಿ ಲಿಪಿಯ ಕೊಂಕಣಿಯನ್ನು ಗೋವಾದ ಏಕೈಕ ಅಧಿಕೃತ ಭಾಷೆಯಾಗಿ ಘೋಷಿಸಲಾಯಿತು, ಹಾಗೂ ಮರಾಠಿಯನ್ನು ಅಧಿಕೃತ ಉದ್ದೇಶಗಳಿಗಾಗಿ ಬಳಸಲು ಅನುಮತಿ ನೀಡಲಾಗಿತ್ತು.
ಪ್ರಸ್ತುತ, ಆರ್‌ಎಸ್‌ಎಸ್‌ನ ಗೋವಾ ಮಾಜಿ ಮುಖ್ಯಸ್ಥ ಸುಭಾಷ್ ವೆಲಿಂಗ್ಕರ್ ನೇತೃತ್ವದ ಮರಾಠಿ ರಾಜಭಾಷಾ ನಿರ್ಧಾರ್ ಸಮಿತಿಯು ಕೊಂಕಣಿಯೊಂದಿಗೆ ಮರಾಠಿಗೂ ಸಹ-ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿದೆ. ಒಂದು ವೇಳೆ ಬಿಜೆಪಿ ಸರ್ಕಾರ ಈ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮರಾಠಿ ಮತಬ್ಯಾಂಕ್ ಸೃಷ್ಟಿಸಿ ಅಧಿಕಾರದಿಂದ ಕೆಳಗಿಳಿಸುವುದಾಗಿ ವೆಲಿಂಗ್ಕರ್ ಎಚ್ಚರಿಸಿದ್ದಾರೆ.

ಸವಾಲಾಗಿ ಪರಿಣಮಿಸಿದ ಭಾಷಾ ಧ್ರುವೀಕರಣ

ಮರಾಠಿ ಪರ ಸಂಘಟನೆಗಳ ಈ ಹೋರಾಟಕ್ಕೆ ಪ್ರತಿಯಾಗಿ, ಕೊಂಕಣಿ ಕಾರ್ಯಕರ್ತರು ಕೂಡ ಎದ್ದುನಿಂತಿದ್ದು, ಕೊಂಕಣಿ ಮಾತ್ರವೇ ಅಧಿಕೃತ ಭಾಷೆಯಾಗಿ ಮುಂದುವರಿಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮರಾಠಿಗೆ ಸ್ಥಾನಮಾನ ನೀಡುವ ಯಾವುದೇ ರಾಜಕೀಯ ಪಕ್ಷವನ್ನು ಬಹಿಷ್ಕರಿಸುವುದಾಗಿ ಅವರು ಎಚ್ಚರಿಸಿದ್ದಾರೆ. ಒಟ್ಟಾರೆಯಾಗಿ, ಡಾ. ಪ್ರಮೋದ್ ಸಾವಂತ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂದೆಡೆ ಭಾಷಾ ವಿವಾದದ ಬಿಸಿ ತಟ್ಟುತ್ತಿದ್ದರೆ, ಮತ್ತೊಂದೆಡೆ ತನ್ನದೇ ಮಿತ್ರಪಕ್ಷವಾದ ಶಿವಸೇನೆಯು ಗೋವಾ ರಾಜಕೀಯಕ್ಕೆ ಲಗ್ಗೆ ಇಡುತ್ತಿರುವುದು ಆಡಳಿತ ಪಕ್ಷದ ಮತಗಳನ್ನು ಒಡೆಯುವ ಸಾಧ್ಯತೆ ಇದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net