

ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ, ಭಾರತದ ಕೀರ್ತಿಯನ್ನು ಹೆಚ್ಚಿಸಿದ ಮಹಿಳಾ ವಿಜ್ಞಾನಿಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಇದರ ಹೊರತಾಗಿ, ತಲೆತಲಾಂತರಗಳಿಂದ ಸಾಮಾನ್ಯ ಮಹಿಳೆಯರು ಕೂಡ ವೈಜ್ಞಾನಿಕ ತಳಹದಿಯ ಮೇಲೆ ನಿತ್ಯ ಜೀವನದಲ್ಲಿ ಕೊಡುಗೆ ನೀಡುತ್ತ ಬಂದಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಹಾಗೂ ಹೆಣ್ಣುಮಕ್ಕಳ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಅಂಥವರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಕಳೆದ ವರ್ಷ ಮೇ ತಿಂಗಳಿನ ಬಿರು ಬೇಸಿಗೆಗೆೆ ಬೆಂಗಳೂರಿನಲ್ಲೂ ತಾಪಮಾನ 35 ಡಿಗ್ರಿ ದಾಟಿತ್ತು. ನಮ್ಮ ತಾರಸಿ ತೋಟ ನೋಡಿ ಹೃದಯವೇ ಕಿತ್ತು ಬಂದಂತಾಯಿತು. ಪ್ರೀತಿಯಿಂದ ನೆಟ್ಟು ಆರೈಕೆ ಮಾಡಿದ ನೂರಾರು ಗಿಡಗಳು ಜೋಲು ಮುಖ ಮಾಡಿಕೊಂಡು ನಿಂತಿವೆ! ಬೆಳಗ್ಗೆಯಷ್ಟೇ ಗಿಡಗಳಿಗೆಲ್ಲಾ ಮೈ ಸ್ನಾನ, ತಲೆಸ್ನಾನ ಚೆನ್ನಾಗಿಯೇ ಮಾಡಿಸಿದ್ದೆ. ಪುನಃ ಬಾಯಾರಿದ ನನ್ನ ಕಂದಮ್ಮಗಳಿಗೆಲ್ಲಾ ಪುನಃ ನೀರುಣಿಸಿ ನನ್ನ ಅಕ್ಕ ದೇವಕಿಗೆ ವಿಷಯ ತಿಳಿಸಿದೆ. ಆಕೆ ಕೂಡಲೇ, ‘ಬಿಸಿಲು ಜೋರಾಗಿರುವುದರಿಂದ ಹೀಗಾಗಿದೆ. ಆ ಕುಂಡಗಳ ಮೇಲ್ಭಾಗದಲ್ಲಿರುವ ಮಣ್ಣು ಮುಚ್ಚುವಂತೆ ಅದರ ಮೇಲೆ ತೆಂಗಿನ ಸಿಪ್ಪೆಯನ್ನು ಇಡು ಎಂದಳು. ಅದರಂತೆ ತೆಂಗಿನಕಾಯಿಯ ಸಿಪ್ಪೆಯಿಂದ ತಾರಸಿಯ ಕುಂಡಗಳನ್ನೆಲ್ಲಾ ಅಲಂಕರಿಸಿದೆ.ಮಾರನೇ ದಿನದಿಂದ ತಾಪಮಾನ ಹೆಚ್ಚಾಗಿದ್ದರೂ, ಸಂಜೆಯೂ ಗಿಡಗಳೆಲ್ಲಾ ನಗುತ್ತಿದ್ದವು.
ಎಷ್ಟು ಸರಳ ವಿಜ್ಞಾನ! ಗಿಡಕ್ಕೆ ಹಾಕಿದ ನೀರು ಕುಂಡದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಉಳಿದಿರುತ್ತದೆ, ಅದೂ ಬಿಸಿಲಿನ ಶಾಖಕ್ಕೆ ಆವಿಯಾಗಿ ಹೋಗುತ್ತದೆ. ತೆಂಗಿನ ಕಾಯಿಯ ಸಿಪ್ಪೆಯನ್ನು ಮಣ್ಣಿನ ಮೇಲೆ ಮುಚ್ಚಿದ್ದರಿಂದ ಆವಿಯಾಗುವ ಪ್ರಮಾಣ ಕಡಿಮೆಯಾಗಿ ಗಿಡಗಳಿಗೆ ನೀರು ಸಿಕ್ಕಿತ್ತು. ಹೀಗೇ ನಮ್ಮ ದೈನಂದಿನ ಜೀವನದಲ್ಲಿ ನಮಗೇ ಅರಿವಿಲ್ಲದಂತೆ ನಾವು ಅನೇಕ ಬಾರಿ ವಿಜ್ಞಾನವನ್ನು ಅಳವಡಿಸಿಕೊಂಡಿರುತ್ತೇವೆ ಅಲ್ಲವೆ?
ವಿಜ್ಞಾನ ಎಂದರೆ ಏನು?: ಭೌತಿಕ ಸಂಗತಿಗಳನ್ನು ಮತ್ತೊಮ್ಮೆ ಪರೀಕ್ಷಿಸಲು ಮತ್ತು ಭವಿಷ್ಯದ ಬಗ್ಗೆ ಮುನ್ಸೂಚನೆಯನ್ನು ಕೊಡಲು ಸಾಧ್ಯವಾಗುವಂತೆ ಜ್ಞಾನವನ್ನು ಸುವ್ಯವಸ್ಥಿತವಾಗಿ ಸಂಘಟಿಸುವುದೇ ವಿಜ್ಞಾನ. ಪ್ರತಿ ಕ್ಷಣವೂ ಈ ಭೌತಿಕ ಜಗತ್ತಿನೊಂದಿಗೆ ವ್ಯವಹರಿಸುವ ನಮಗೆ ಅದರೊಂದಿಗೆ ಸಲೀಸಾಗಿ ಬದುಕಲು ನಾವು ನಮ್ಮ ದೈನಂದಿನ ಜೀವನದಲ್ಲಿ ಅನೇಕ ವಿಷಯಗಳನ್ನು ತಿಳಿದಿರಲೇಬೇಕಾದ ಅನಿವಾರ್ಯತೆೆ ಇದೆ.
ನಮ್ಮ ಪೂರ್ವಜರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದ ಎಲ್ಲಾ ವಿಷಯಗಳೂ ವಿಜ್ಞಾನದ ನೆಲೆಗಟ್ಟಿನಲ್ಲೇ ಆಗಿರುವಂಥದ್ದು. ಅದಕ್ಕವರು ಶಾಸ್ತ್ರ, ಜಾತಿ ಅಥವಾ ಧಾರ್ವಿುಕತೆಯ ಲೇಪವನ್ನು ಹಚ್ಚಿದ್ದರೂ ಅವೆಲ್ಲವೂ ವಿಜ್ಞಾನವೇ. ಉದಾಹರಣೆಗೆ ತಿಂಗಳಲ್ಲಿ ಒಂದೆರಡು ದಿನ ಅಥವಾ ವರ್ಷದಲ್ಲಿ ಒಂದೆರಡು ತಿಂಗಳು ಉಪವಾಸ ಮಾಡುವುದಕ್ಕೂ ವೈಜ್ಞಾನಿಕ ಕಾರಣಗಳಿವೆ. ನಮ್ಮ ಹಿರಿಯರು ಬಾಣಂತಿಯರಿಗೆ , ಮಕ್ಕಳಿಗೆ ಮಾಡಿ ಕೊಡುವ ಆಹಾರ ಹಾಗೂ ಔಷಧಗಳೂ ವೈಜ್ಞಾನಿಕ ತಳಹದಿಯಲ್ಲೇ ಇವೆ.
ಭಾರತೀಯರು ಮೈತ್ರೇಯಿ, ಗಾರ್ಗಿ, ಲೋಪಮುದ್ರ ಇನ್ನೂ ಅನೇಕ ಮಹಿಳೆಯರನ್ನು ತತ್ವಜ್ಞಾನಿಗಳೆಂದು ಪರಿಗಣಿಸುತ್ತೇವೆ. ಜೀವನದ ಸತ್ಯವನ್ನು ಅರಿತು ಅದಕ್ಕೆ ವೇದಗಳ ರೂಪ ಕೊಟ್ಟು ಸಾಮಾನ್ಯರಿಗೂ ಅದನ್ನು ಅರ್ಥೈಸಿದ ಅವರೂ ಒಂದು ರೀತಿಯಲ್ಲಿ ವಿಜ್ಞಾನಿಗಳೇ. ಭಾರತದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವೈದ್ಯೆ ಆನಂದಿ ಬಾಯಿ ಗೋಪಾಲ್ ರಾವ್ ಜೋಷಿ, ಕರ್ನಾಟಕದ ಮೊದಲ ಮಹಿಳಾ ವಿಜ್ಞಾನಿ ಇಂಜಿನಿಯರ್ ರಾಜೇಶ್ವರಿ ಚಟರ್ಜಿ, ಪ್ರಪಂಚದ ಮೊದಲ ಬಾಹ್ಯಾಕಾಶ ವಿಜ್ಞಾನಿ ವ್ಯಾಲೆಂಟೆನಾ ಟೆರೆಶ್ಕೋವಾ, ಭಾರತದ ಮೊದಲ ಬಾಹ್ಯಾಕಾಶ ವಿಜ್ಞಾನಿ ಕಲ್ಪನಾ ಚಾವ್ಲಾ, ಸಂತಾನ ಭಾಗ್ಯದಿಂದ ವಂಚಿತರಾದ ಮಹಿಳೆಯರ ಆಶಾಕಿರಣವಾದ ಡಾ. ಇಂದಿರಾ ಹಿಂದುಜಾ, ಮಂಗಳಯಾನ ಹಾಗೂ ಚಂದ್ರಯಾನ ತಂಡಗಳಲ್ಲಿ ವಿಶೇಷ ಕಾರ್ಯ ನಿರ್ವಹಿಸಿದ ಅನೇಕ ಮಹಿಳಾ ವಿಜ್ಞಾನಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಜನಹಿತ ಸಂಶೋಧನೆಗಳಲ್ಲಿ ಯಶಸ್ವಿಯಾಗಿ ಆ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಮಹಿಳಾ ವಿಜ್ಞಾನಿಗಳ ಸಾಧನೆ ಪ್ರಶಂಸನೀಯ. ಇವರಲ್ಲದೆ ಇನ್ನೂ ಅನೇಕ ಮಹಿಳೆಯರು ಸದ್ದಿಲ್ಲದೆ ವಿಜ್ಞಾನವನ್ನು ಜನಕ್ಕೆ ಜಗತ್ತಿಗೆ ಉಣಬಡಿಸುತ್ತಿದ್ದಾರೆ.
ವಿಜ್ಞಾನ ಕ್ಷೇತ್ರದಲ್ಲಿ ಹೀಗೆಲ್ಲ ಕೊಡುಗೆ: ವಿಶ್ವವಿದ್ಯಾನಿಲಯದಿಂದ ಪದವಿ ಪಡೆದು ಅದನ್ನೇ ವೃತ್ತಿಯಾಗಿಸಿಕೊಂಡು, ಆಹಾರ ಕ್ರಮದ ಬಗ್ಗೆ ಅನೇಕರಿಗೆ ಉಚಿತ ಮಾರ್ಗದರ್ಶನವನ್ನೂ ಕೊಡುತ್ತಿರುವವರು ಡಾ. ಪ್ರೇಮಾ ರಮೇಶ್ 30 ವರ್ಷಗಳ ಹಿಂದೆ ತಮ್ಮ ಮನೆಯ ಗ್ಯಾರೇಜ್ನ ಕ್ಲಿನಿಕ್ ಆರಂಭಿಸಿದಾಗ ಜನರು ಅದನ್ನು ಅಸಡ್ಡೆಯಿಂದ ನೋಡುತ್ತಿದ್ದರು. ಆದಾಗ್ಯೂ ಅವರು, ನಮ್ಮ ಜೀವನ ಶೈಲಿ, ಸ್ಥಳೀಯ ಆಹಾರದ ಆಯ್ಕೆ ಹಾಗೂ ನಮ್ಮ ನೆಲದ ಸಂಸ್ಕೃತಿಯಲ್ಲಿ ಬೆಳೆದುಬಂದ ಆಹಾರ ಸೇವನಾ ಕ್ರಮಗಳ ಬಗ್ಗೆ ಪ್ರಚಾರ ಮಾಡುತ್ತಲಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿದ್ಧ ಆಹಾರವನ್ನು ಎಷ್ಟೇ ಆಮಿಷ ಒಡ್ಡಿದರೂ ಪ್ರೋತ್ಸಾಹಿಸದೆ, ಜನರಿಗೆ ಸ್ಥಳೀಯ ಆಹಾರದ ಪ್ರಾಮುಖ್ಯತೆಯ ಬಗ್ಗೆ ವಿವಿಧ ಮಾಧ್ಯಮಗಳಲ್ಲೂ ಅರಿವು ಮೂಡಿಸುತ್ತಿದ್ದಾರೆ, ಜತೆಗೆ ಹಿರಿಯ ನಾಗರಿಕರಿಗೆ, ಕ್ಯಾನ್ಸರ್ ರೋಗಿಗಳಿಗೆ ಆಹಾರ ಕ್ರಮದ ಬಗೆ್ಗೆ ಉಚಿತವಾಗಿ ಮಾರ್ಗದರ್ಶನ ಕೊಟ್ಟು, ಆದಾಯದಲ್ಲಿ ಶೇ.30ರಷ್ಟನ್ನು ತೆರಿಗೆ ಕಟ್ಟುತ್ತೇನೆ ಎನ್ನುತ್ತಾರೆ!
ಮಂಗಳೂರಿನ ಸರೋಜಾ ಪ್ರಕಾಶ್ ಪದವಿ ಪಡೆದಿದ್ದು ಭೌತಶಾಸ್ತ್ರದಲ್ಲಿ ಆದರೆ ಪರಿಸರ ಕಾಳಜಿಯಿಂದ ತಮ್ಮ ಮನೆಯಲ್ಲೂ ಹಸಿ ತ್ಯಾಜ್ಯವನ್ನು ಪೋಲು ಮಾಡದೆ ಗಿಡಗಳಿಗೆ ಗೊಬ್ಬರವಾಗಿ ಪರಿವರ್ತಿಸುತ್ತಾರೆೆ. ಮನೆಯ ಸುತ್ತೆಲ್ಲಾ ಹೂವು, ಹಣ್ಣು ತರಕಾರಿಗಳನ್ನು ಬೆಳೆಸಿರುವುದಲ್ಲದೇ, ಅದರಲ್ಲೂ ಕಸಿ ಕಟ್ಟುವ ಪ್ರಯೋಗ ಮಾಡಿದ್ದಾರೆ. ತಾರಸಿಯಲ್ಲಿ, ಸಣ್ಣ ಜಾಗದಲ್ಲಿ ಒಂದು ಸಂಸಾರಕ್ಕೆ ಬೇಕಾಗುವಷ್ಟು ತರಕಾರಿಗಳನ್ನು, ಹಣ್ಣುಗಳನ್ನು ಹೇಗೆ ಬೆಳೆಯಬಹುದು, ಗಿಡಗಳನ್ನು ಹೇಗೆ ಗುರುತಿಸುವುದು ಎಂಬ ಬಗ್ಗೆ ದೊಡ್ಡವರಿಗೆ ಹಾಗೂ ಮಕ್ಕಳಿಗೆ ಪ್ರಾತ್ಯಕ್ಷಿಕೆಗಳನ್ನೂ ಮಾಡುತ್ತಾರೆ. ತೋಟದಿಂದ ತಾಟಿಗೆ (ತಟ್ಟೆ) ಬರುವ ತಾಜಾ ತರಕಾರಿಯಲ್ಲಿರುವ ಅಮೂಲ್ಯ ಸತ್ವಾಂಶಗಳ ಬಗ್ಗೆ ಅರಿವು ಮೂಡಿಸುತ್ತಾರೆ.
ಬೆಂಗಳೂರಿನ ಪುಷ್ಪಾ ಸುರೇಶ್ ಸಸ್ಯಶಾಸ್ತ್ರವನ್ನು ಅಭ್ಯಾಸ ಮಾಡದಿದ್ದರೂ ಹೂವಿನ ಮೇಲಿನ ಪ್ರೀತಿ ಮತ್ತು ಆಸಕ್ತಿಯಿಂದ ಆಯ್ಕೆ ಮಾಡಿಕೊಂಡಿರುವುದು ಒಂದು ವಿನೂತನ ಪ್ರಯೋಗ. ದಾಸವಾಳದ ಹೂವಿನಿಂದ ಬೀಜಗಳನ್ನು ಮಾಡಿರುವುದೇ ಅಲ್ಲದೇ ಅದರಿಂದ ಮಿಶ್ರ ಪರಾಗಸ್ಪರ್ಶ ಮಾಡಿ ಗೆಳತಿ ಶ್ಯಾಮಲಾ ಮಾದಪ್ಪಣ್ಣ್ಣ ಜತೆಗೂಡಿ ಮಿಶ್ರ ತಳಿಗಳನ್ನೇ ಸೃಷ್ಟಿಸಿದ್ದಾರೆ. ಈ ದಾಸವಾಳದ ಬೀಜಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ತ್ರೀಯ ಗ್ರಾಹಕರಿದ್ದಾರೆ. ಲಾಲ್ಬಾಗ್ನಲ್ಲೂ ಇವರ ಗಿಡಗಳಿಗೆ ಜಾಗ ಗಿಟ್ಟಿಸಿದ್ದಾರೆ. ಸಾಗರದ ಸಮೀಪದ ಹಿಂಡೂಮನೆಯ ರೇಖಾ ಕೂಡ ಈ ರೀತಿಯ ಪ್ರಯೋಗ ಮಾಡುತ್ತಿದ್ದಾರೆ. ಮೂಲತಃ ಇಂಜಿನಿಯರ್ ಆಗಿರುವ ಡಾ. ತೇಜಸ್ವಿನಿ ಅನಂತಕುಮಾರ್ ಶೂನ್ಯ ತ್ಯಾಜ್ಯ ಅಡುಗೆಮನೆಯಿಂದ ಒಂದು ದಿನಕ್ಕೆ ಸಹಸ್ರಾರು ಮಕ್ಕಳಿಗೆ ಊಟ ತಯಾರಿಸುವ ಯೋಜನೆ, ಹಸಿರು ಭಾನುವಾರ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವುದು ಹಾಗೂ ಪುನರ್ಬಳಕೆಗೆ ಒತ್ತುಕೊಡುವುದು ಈ ರೀತಿಯ ಅನೇಕ ಪರಿಸರ ಸ್ನೇಹಿ ಯೋಜನೆಗಳಲ್ಲಿ ತಾವೇ ಮೊದಲು ಅದನ್ನು ಅನುಸರಿಸಿ ಸಮಾಜಕ್ಕೆ ಮಾದರಿಯಾಗಿ ಅದರಲ್ಲೊಂದು ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಇನ್ನು, ಹಸಿತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವುದನ್ನು ಕಲಿಸಿಕೊಡುತ್ತಿರುವ ಬೆಂಗಳೂರಿನ ವಾಣಿ ಮೂರ್ತಿ, ಸ್ಥಳೀಯ ಆಹಾರ ಪದ್ಧತಿಯನ್ನೇ ಅನುಸರಿಸಿ ಎನ್ನುತ್ತಿರುವ ಆಹಾರ ತಜ್ಞೆ ರುಜುತಾ ದಿವೇಕರ್, ಒಣಗಿದ ಹೂವುಗಳಿಂದ ಪರಿಸರ ಸ್ನೇಹಿ ಬಣ್ಣಗಳನ್ನು ತಯಾರಿಸುತ್ತಿರುವ ಶಿರಸಿಯ ಮೇಧಾ, ಋತುಸ್ರಾವದ ಸಮಯದಲ್ಲಿ ಉಪಯೋಗಿಸುವ ಪರಿಸರ ಸ್ನೇಹಿ ಬಟ್ಟೆಗಳನ್ನು ತಯಾರಿಸುತ್ತಿರುವ ಲೂಧಿಯಾನದ ಪರಮ್ ಸಯಾನಿ, ನೃತ್ಯ ಮತ್ತು ಸಂಗೀತವನ್ನು ಬುದ್ಧಿಮಾಂದ್ಯ ಮತ್ತು ಆಟಿಸಂ ಮಕ್ಕಳಿಗೆ ಚಿಕಿತ್ಸೆಯಾಗಿ ಪರಿಣಾಮಕಾರಿಯಾಗಿ ಬಳಸುತ್ತಿರುವ ಅನೇಕ ಮಹಿಳೆಯರು... ಹೀಗೇ ಪಟ್ಟಿ ಬೆಳೆೆಯುತ್ತಾ ಹೋಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಮಹಿಳೆಯರನೇಕರು ಮಾನವ ಕುಲಕ್ಕೆ ಅಮೂಲ್ಯ ಕೊಡುಗೆಗಳನ್ನು ಕೊಡುತ್ತಿರುವ ವಿಜ್ಞಾನಿಗಳೇ. ಗೆಳತಿ ಸರೋಜಾ ಪ್ರಕಾಶ್ರವರ ಮಾತಿನಲ್ಲೇ ಹೇಳುವುದಾದರೆ ಉತ್ತೇಜನ, ಚೂರೇ ಚೂರು ಪ್ರಶಂಸೆ ಸಿಕ್ಕಿದರೆ ಪ್ರತಿಯೊಬ್ಬ ಮಹಿಳೆಯೂ ವಿಜ್ಞಾನಿಯೇ ಎನ್ನಬಹುದು.
ಇವರೂ ವಿಜ್ಞಾನಿಗಳೇ...
ಹೊಸಬಾಳೆ ಮೀನಾಕ್ಷಮ್ಮ ಕಂಡುಕೊಂಡಿದ್ದ ಉಪಾಯವೆಂದರೆ, ಹಿಂದಿನ ರಾತ್ರಿ ಹಾಲಿನ ಕುಕ್ಕರ್ಗೆ ನೀರು ತುಂಬುವ ಜಾಗದಲ್ಲಿ ಕುದಿಯುವ ನೀರು ತುಂಬಿ ಒಳಗಿನ ಪಾತ್ರೆಯಲ್ಲಿ ಹಾಲು ಹೆಪ್ಪು ಹಾಕಿಟ್ಟರೆ ಮರುದಿನ ಬೆಳಗ್ಗೆ ಗಟ್ಟಿ ಮೊಸರು ತಯಾರು! ಹಾಗೆಯೇ, ಮಲೆನಾಡಿನಲ್ಲಿ ದೀಪಾವಳಿಯಲ್ಲಿ ಮನೆಯ ಬಾಗಿಲಿಗೆ, ದೇವರಿಗೆ, ತಿಜೋರಿಗೆೆ, ತೆಂಗಿನ ಮರಕ್ಕೆ , ಕೊಟ್ಟಿಗೆ ಇತ್ಯಾದಿ ಜಾಗಗಳಿಗೆ ಕಾಯಿ ಒಡೆಯುತ್ತಾರೆ. ಹಬ್ಬದ ನಂತರ ಎಲ್ಲರ ಮನೆಗಳಲ್ಲಿ ಕಾಯಿ ಹೋಳಿಗೆ ಮಾಡುವುದೂ ಇದೆ. ಆದರೆ ಇಷ್ಟು ಕಾಯಿ ಒಡೆದಾಗ ಸಿಗುವ ಕಾಯಿ ನೀರನ್ನು ವ್ಯರ್ಥಮಾಡದೆ ನನ್ನ ಅಮ್ಮ ಅದನ್ನು ಕುದಿಸಿ ಕುದಿಸಿ ಅಂಟಿನಂತೆ ಮಾಡುತ್ತಿದ್ದಳು. ಕೊಯ್ದ ಗಾಯಗಳಿಗೆ ಅದನ್ನು ಲೇಪಿಸಿದರೆ ಗಾಯ ಮಾಯುವವರೆಗೆ ಅದು ಚರ್ಮಕ್ಕೆ ಅಂಟಿಕೊಂಡೇ ಇದ್ದು ಚರ್ಮವನ್ನು ಸಂರಕ್ಷಿಸುತ್ತದೆ. ಕಾಯಿ ನೀರಿನಲ್ಲಿರುವ ವಿಟಮಿನ್ ಬಿ.6 ಚರ್ಮದ ಉರಿಯೂತವನ್ನು ಶಮನಗೊಳಿಸುತ್ತದೆ ಎಂದು ನನಗೆ ಗೊತ್ತಾಗಿದ್ದು ಆಗ! ಹೀಗೇ ಆಕೆ ಮಾಡುತ್ತಿದ್ದ ತರಕಾರಿ ಸಿಪ್ಪೆಯ ಲೇಹ, ಬಾಣಂತಿ ಔಷಧಿಗಳು, ಮಂಡಿನೋವಿಗೆ ಔಷಧ ಒಂದೇ ಎರಡೇ, ಇದರಲ್ಲಿ ಹೆಚ್ಚಿನವು ಅವಳ ಅನ್ವೇಷಣೆಯೇ ಆಗಿದ್ದವು. ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿರುವ ಅಹಲ್ಯಾ ನರಹರಿ ಚರ್ಮರೋಗಕ್ಕೆ, ಮಹಿಳೆಯರ ಮುಟ್ಟು, ಬಾಣಂತನದ ಸಮಸ್ಯೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ಔಷಧಿ ಕೊಡುವ ಕ್ರಮ ಬೆರಗುಗೊಳಿಸುತ್ತದೆ. ಅವರವರ ದೇಹ ಪ್ರಕೃತಿಗೆ ಅನುಗುಣವಾಗಿ ಯಾವ ಔಷಧ ಕೆಲಸ ಮಾಡುತ್ತದೆ ಎಂಬುದನ್ನು ನಿರಂತರ ಪ್ರಯತ್ನಗಳಿಂದ ಅಭ್ಯಾಸ ಮಾಡಿ ಖುದ್ದಾಗಿ ಔಷಧವನ್ನೂ ತಯಾರಿಸಿ ಉಚಿತ ಚಿಕಿತ್ಸೆ ಕೊಡುವ ಆಕೆಯ ಜ್ಞಾನ ಅಪಾರ. ಜ್ಞಾನಕ್ಕೆ ಸಂಬಂಧಪಟ್ಟಂತೆ ಯಾವ ವಿಶ್ವವಿದ್ಯಾಲಯದ ಪದವಿಯೂ ಇರದ ಅಹಲ್ಯಾ, ಏನೇ ಸಣ್ಣ ಪುಟ್ಟ ಕಾಯಿಲೆಗೆ ಮನೆ ಮದ್ದು ಅಥವಾ ಏನಾದರೂ ಹದ ಕೆಟ್ಟ ಅಡುಗೆಯನ್ನು ದಿಢೀರನೆ ಸರಿ ಮಾಡುವ ನನ್ನ ಅಕ್ಕ, ತನ್ನ ಅನ್ವೇಷಣೆಯಿಂದಲೇ ಕೆಲವು ಔಷಧಗಳನ್ನು ಕಂಡುಕೊಂಡ ನನ್ನ ಅಮ್ಮನಂಥವರು... ಇಂತಹ ಅನೇಕರು ಒಂದರ್ಥದಲ್ಲಿ ವಿಜ್ಞಾನಿಗಳೇ ಅಲ್ಲವೇ?
ಸಂಖ್ಯೆ ಕಡಿಮೆಯಿದ್ದರೂ ಕೊಡುಗೆ ಅಪಾರ
ಮಾನವನ ಮೆದುಳಿನ ಎಡ ಗೋಳಾರ್ಧ ವೈಜ್ಞಾನಿಕ ಚಿಂತನೆಗೆ, ವಿವೇಚನೆಗೆ ಹೆಚ್ಚು ಸಮರ್ಥವಾಗಿದೆ. ಮೆದುಳಿನ ಮೇಲ್ಭಾಗದಲ್ಲಿ ಇರುವ ಒಂದು ತೆಳು ಹೊದಿಕೆ ಕಾರ್ಟೆಕ್ಸ್. ಅನೇಕ ಪದರವುಳ್ಳ, ಮಡಿಕೆ ಮಡಿಕೆಯಾಗಿರುವ ಕಾರ್ಟೆಕ್ಸ್ನಲ್ಲಿ ಮಿಲಿಯನ್ಗಟ್ಟಲೆ ತಂತುಕಣಗಳು ಇರುತ್ತವೆ. ಅಪಾರ ವಿಷಯ ಸಂಗ್ರಹಿಸಲು, ರ್ತಸಲು ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಈ ಅಂಗ ಅತ್ಯಂತ ಅವಶ್ಯಕ. ಸಂಶೋಧನೆಗಳ ಪ್ರಕಾರ ಸ್ತ್ರೀ ಮತ್ತು ಪುರುಷರ ಮೆದುಳಿನ ಆಕಾರ, ಗಾತ್ರ ಹಾಗೂ ರಚನೆಯಲ್ಲಿ ಕೆಲವು ವ್ಯತ್ಯಾಸಗಳಿರುತ್ತವೆ ಆದರೂ ಅವುಗಳ ಕಾರ್ಯಗಳಲ್ಲಿ ಗಮನಾರ್ಹವಾದ ವ್ಯತ್ಯಾಸಗಳೇನೂ ಇರುವುದಿಲ್ಲ, ಹೀಗಿದ್ದರೂ ಪ್ರಪಂಚದ ಎಲ್ಲ ದೇಶಗಳ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಮಹಿಳಾ ವಿಜ್ಞಾನಿಗಳ ಸಂಖ್ಯೆ ಶೇ.30 ಕ್ಕಿಂತ ಕಡಿಮೆ ಕಡಿಮೆ ಎನ್ನುತ್ತದೆ ಯುನೆಸ್ಕೊ ಇನ್ಸ್ಟಿಟ್ಯೂಟ್ ಫಾರ್ ಸ್ಟಾಟಿಸ್ಟಿಕ್ಸ್. ಭಾರತದಲ್ಲಿ ಸದ್ಯ ಶೇ.14 ರಷ್ಟು ಮಾತ್ರ ಮಹಿಳಾ ವಿಜ್ಞಾನಿಗಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹುಡುಗಿಯರ ಮತ್ತು ಮಹಿಳೆಯರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದ್ದರೂ ಮಹಿಳಾ ವಿಜ್ಞಾನಿಗಳಾಗಿ ಪರಿವರ್ತನೆಗೊಳ್ಳುತ್ತಿರುವವರು ಅತ್ಯಂತ ಕಡಿಮೆ. ಇದಕ್ಕೆ ಕಾರಣವೆಂದರೆ ಮಹಿಳೆಯರಿಗೆ ಇರುವ ಕೌಟಂಬಿಕ ಜವಾಬ್ದಾರಿಗಳು ಒಂದು ಕಡೆಯಾದರೆ ಸಾಮಾಜಿಕವಾಗಿ ಮಹಿಳೆಯ ಸ್ಥಾನ ಮಾನಗಳಲ್ಲಿ ಇರುವ ತಾರತಮ್ಯಗಳೂ ಇದಕ್ಕೆ ಕಾರಣ ಎನ್ನಬಹುದೇನೋ. ಅದೇನೇ ಇರಲಿ ಮಹಿಳಾ ವಿಜ್ಞಾನಿಗಳೆಂಬ ಅಧಿಕೃತ ಬಿರುದು -ಬಾವಲಿಗಳಿರದಿದ್ದರೂ ನಮ್ಮ -ನಿಮ್ಮ ನಡುವೆ ಇರುವ ಅನೇಕ ತಾಯಂದಿರು, ಸಹೋದರಿಯರು ಹಾಗೂ ಗೆಳತಿಯರು ವಿಜ್ಞಾನಿಗಳಿಗೇನೂ ಕಡಿಮೆಯಿಲ್ಲ.