

ವಿಜಯಪುರ: ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರು ಸೂಪರ್ ಮಾರ್ಕೆಟ್ನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ದೃಶ್ಯ ವೈರಲ್ ಆಗಿದ್ದು, ಇದೇನಾ ಸಭ್ಯತೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ನಗರದ ಸೋಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್ಗೆ ಶನಿವಾರ(ನ.26) ಸ್ನೇಹಿತೆಯೊಂದಿಗೆ ಕಾಸ್ಮೆಟಿಕ್ ಖರೀದಿಸಲೆಂದು ರಾಜೇಶ್ವರಿ ಗಾಯಕ್ವಾಡ್ ತೆರಳಿದ್ದರು. ಕಾಸ್ಮೆಟಿಕ್ ವಸ್ತುಗಳ ಪರಿಶೀಲನೆ ವೇಳೆ ಸೂಪರ್ ಮಾರ್ಕೆಟ್ ಸಿಬ್ಬಂದಿಗೂ ರಾಜೇಶ್ವರಿಗೂ ವಾಗ್ವಾದ ನಡೆದಿದೆ.
ಬಳಿಕ ಸೂಪರ್ ಮಾರ್ಕೆಟ್ಗೆ ಬಂದ 8-10 ಮಂದಿ ಮಾಲೀಕ ಮಲ್ಲಿಕಾರ್ಜುನ್ ಉಮದಿ ಹಾಗೂ ಅವರ ಪುತ್ರ ಪ್ರಶಾಂತ್ ಮೇಲೆ ನಡೆಸಿದ್ದಾರೆ. ಸಿಟ್ಟಿಗೆದ್ದ ರಾಜೇಶ್ವರಿಯೇ ಬೆಂಬಲಿಗರನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ ಎಂದು ಅಂಗಡಿ ಮಾಲೀಕ ದೂರಿದ್ದಾರೆ. ಶನಿವಾರ ಸಂಜೆಯೇ ಈ ಘಟನೆ ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾದ ಗಲಾಟೆಯ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ.
ಇನ್ನು ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ರಾಜೇಶ್ವರಿ, ಉಮದಿ ಸೂಪರ್ ಮಾರ್ಕೆಟ್ಗೆ ನಾನು ಹೋಗಿದ್ದು ನಿಜ. ಆದರೆ ಯಾವುದೇ ರೀತಿಯ ಗಲಾಟೆ ನಡೆದಿಲ್ಲ ಎಂದಿದ್ದಾರೆ.