ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ

mysore
Published on

ಮೈಸೂರು: ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಶೀಘ್ರದಲ್ಲೇ ಮೈಸೂರಿನಲ್ಲಿ ಸ್ವಂತ ಜಾಗ ಪಡೆದು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಿಸಲಿದೆ ಸಂಸ್ಥೆ ಅಧ್ಯಕ್ಷ ರಘುರಾಮ್ ಭಟ್ ಹೇಳಿದರು.
ಕೆಎಸ್‌ಸಿಎ ಮೈಸೂರು ವಲಯ ವತಿಯಿಂದ ಬಲ್ಲಾಳ್ ವೃತ್ತದ ನಿತ್ಯೋತ್ಸವ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2022-23 ಮತ್ತು 2023-24 ನೇ ಸಾಲಿನ ಟೂರ್ನಿಗಳಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣೆ ಹಾಗೂ ಸಾಧನೆಗೈದ ಕ್ರಿಕೆಟ್‌ಪಟುಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕೆಎಸ್‌ಸಿಎ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಬೇಕು ಎಂದು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿದೆ. ಈ ಹಿಂದೆ ನೋಡಿದ್ದ ಜಾಗ ತಾಂತ್ರಿಕ ಕಾರಣದಿಂದ ಪಡೆಯಲು ಸಾಧ್ಯವಾಗಲಿಲ್ಲ. ಈಗ ಮತ್ತೊಂದು ಜಾಗ ನೋಡಲಾಗಿದೆ. ಕೆಎಸ್‌ಸಿಎಗೆ ಸರ್ಕಾರದಿಂದಲೂ ಉತ್ತಮ ಸಹಕಾರ ದೊರೆತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದರು.
ನಮ್ಮ ಕಮಿಟಿ ರಾಜ್ಯದಲ್ಲಿ ಕ್ರಿಕಟ್ ಅಭಿವೃದ್ಧಿಗೆ ಎಲ್ಲ ರೀತಿ ದುಡಿಯುತ್ತಿದೆ. ಪ್ರಮುಖವಾಗಿ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಬದ್ಧವಾಗಿದ್ದೇವೆ. ಮಹಿಳಾ ಕ್ರಿಕೆಟರ್‌ಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತದೆ. ಕಳೆದ ಸಾಲಿನಲ್ಲಿ ನಮ್ಮ ರಾಜ್ಯ ತಂಡ 19 ವರ್ಷದೊಳಗಿನ ಮಹಿಳಾ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆಗಿದ್ದಾರೆ ಎಂದು ಶ್ಲಾಘಿಸಿದರು. ಭಾನುವಾರ 15 ವರ್ಷದ ಒಳಗಿನವರ ಆಯ್ಕೆ ಪ್ರಕ್ರಿಯೆ ಸಹ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಸ್ಪಿನ್ ಹಾಗೂ ವೇಗಿಗಳಿಗೆ ಪ್ರತ್ಯೇಕ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದೆ. ಇಲ್ಲಿ ಅವಕಾಶ ಸಿಗದ, ಪ್ರತಿಭೆ ಹೊಂದಿರುವ ತಲಾ ಇಬ್ಬರು ಸ್ಪಿನ್ನರ್‌ಗಳನ್ನು ಕ್ರಿಕೆಟ್ ಕ್ಲಬ್‌ಗಳು ಗುರುತಿಸಿಕೊಟ್ಟಲ್ಲಿ ಅವರಿಗೂ ತರಬೇತಿ ನೀಡಲು ಸಿದ್ಧರಿದ್ದೇವೆ. ಅಕಾಡೆಮಿಯಲ್ಲಿ ಇರದವರನ್ನೂ ಆಯ್ಕೆಗಾರರು ಪರಿಗಣಿಸಲಿದ್ದಾರೆ ಎಂದರು.
ಮೈಸೂರಿನಲ್ಲಿ ಲೀಗ್ ಪಂದ್ಯಗಳನ್ನು ಹೆಚ್ಚು ಆಯೋಜಿಸಲು ನಿರ್ಧರಿಸಿದ್ದು, ಪ್ರತಿ ಪಂದ್ಯಕ್ಕೂ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು. ಅಂಪೈರ್‌ಗಳು ಇದನ್ನು ನಿರ್ಧರಿಸಲಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಎರಡು ಡಿವಿಜನ್‌ಗಳ ಆಟಗಾರರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಮೈಸೂರಿನಲ್ಲೂ ಗ್ಲೇಡ್ಸ್ ಮೈದಾನದಲ್ಲಿ ಡಿವಿಜನ್ ಲೀಗ್ ಹಾಗೂ ಅಭ್ಯಾಸಕ್ಕೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ವಿವಿಧ ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಹಿರಿಯ ಆಟಗಾರರಾದ ಎಸ್.ಜೆ.ನಿಕಿನ್ ಜೋಸ್, ವೇಗಿ ಎಂ. ವೆಂಕಟೇಶ್, ಮಹಿಳೆಯರ ವಿಭಾಗದಲ್ಲಿ ಸದ್ಯ ಭಾರತ ಮಹಿಳಾ ಟೆಸ್ಟ್ ತಂಡವನ್ನು ಪ್ರತಿನಿಧಿಸಿರುವ ಶುಭಾ ಸತೀಶ್ ಪರವಾಗಿ ಅವರ ಪೋಷಕರು ಹಾಗೂ ಏಕದಿನ ಆಟಗಾರ್ತಿ ರಕ್ಷಿತಾ ಕೃಷ್ಣಪ್ಪ ಅವರನ್ನು ಅಭಿನಂದಿಸಲಾಯಿತು.
25 ವರ್ಷದವರ ಒಳಗಿನ ವಿಭಾಗದಲ್ಲಿ ಎಲ್.ಆರ್.ಕುಮಾರ್, ಎಲ್.ಮನ್ವಂತ್ ಕುಮಾರ್, 19 ವರ್ಷದವರ ಒಳಗಿನ ವಿಭಾಗದಲ್ಲಿ ಎಲ್. ಮನ್ವಂತ್ ಕುಮಾರ್, ಎಂ.ಯು. ಕಾರ್ತಿಕ್, 16 ವರ್ಷ ಒಳಗಿನವರ ವಿಭಾಗದಲ್ಲಿ ಆರ್.ಹಿಮೇಶ್, ಧ್ಯಾನ್ ಮಹೇಶ್ ಹಿರೇಮಠ, ಮಹಿಳೆಯರ 19 ವರ್ಷದ ಒಳಗಿನವರ ವಿಭಾಗದಲ್ಲಿ ವಿ. ವೇದವರ್ಷಿಣಿ, ಲಿಯಾಂಕ ಶೆಟ್ಟಿ ಹಾಗೂ ಜೆ. ಜ್ಯೋತ್ಸ್ನ ಅವರಿಗೆ ಉತ್ತಮ ಆಟಗಾರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ವೇಳೆ ಕಳೆದೆರಡು ವರ್ಷದಲ್ಲಿ ನಡೆದ ಲೀಗ್‌ಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಅಂಪೈರ್‌ಗಳಾದ ಮಧುಸೂದನ್, ರಘುನಂದನ್ ಹಾಗೂ ಎ.ಎಂ. ಅನಿರುದ್ಧ ಅವರನ್ನು ಸನ್ಮಾನಿಸಲಾಯಿತು.
ಕೆಎಸ್‌ಸಿಎ ಗೌರವ ಕಾರ್ಯದರ್ಶಿ ಎ. ಶಂಕರ್, ಖಜಾಂಚಿ ಇ.ಎಸ್. ಜಯರಾಂ, ಕೆಎಸ್‌ಸಿಎ ಮೈಸೂರು ವಲಯ ಅಧ್ಯಕ್ಷ ಎಸ್. ಬಾಲಚಂದರ್, ಸಂಚಾಲಕ ಆರ್.ಕೆ. ಹರಿಕೃಷ್ಣ ಕುಮಾರ್, ಸಂಯೋಜಕ ಎಂ.ಎಸ್. ವಿನಯ್, ವಲಯ ಉಸ್ತುವಾರಿ ಇರ್ಫಾನ್ ಸೇಠ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net