10ರಿಂದ ಕುವೆಂಪು ವಿವಿಯಲ್ಲಿ ನೋನಿ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ

Kuvempu University Conference
ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಕೆ.ಶ್ರೀನಿವಾಸಮೂರ್ತಿ ಮಾತನಾಡಿದರು. ಪ್ರೊ. ವಿ.ಕೃಷ್ಣ, ಪ್ರೊ. ತಿಮ್ಮೇಸ್ವಾಮಿ ಬಸಯ್ಯ, ಡಾ. ಎಚ್.ಎಸ್.ಸಂತೋಷ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ಏ.10ರಿಂದ 12ರವರೆಗೆ ಕುವೆಂಪು ವಿವಿ, ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಮತ್ತು ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ಸಹಯೋಗದಲ್ಲಿ ನೋನಿ ಸಂಶೋಧನಾ ಪ್ರವೃತ್ತಿಗಳು ಮತ್ತು ಆರೋಗ್ಯಕರ ಬದುಕಿಗೆ ಜೀವವೈವಿಧ್ಯತೆಯ ಸುಸ್ಥಿರ ಬಳಕೆ ಕುರಿತ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.

ಯಾವುದೇ ಸಂಶೋಧನೆ ಕೇವಲ ವಿಶ್ವವಿದ್ಯಾಲಯದ ಪ್ರಯೋಗಾಲಯಗಳಿಗೆ ಸೀಮಿತವಾಗದೆ ಸಮಾಜಮುಖಿ ಆಗಿರಬೇಕು. ಸಂಶೋಧನೆಗಳ ಅನ್ವಯಿಕತೆಯ ಪ್ರಯೋಜನ ಸಾರ್ವಜನಿಕರಿಗೆ ಸಿಗಬೇಕು ಮತ್ತು ಈ ಕುರಿತು ಎಲ್ಲರಲ್ಲೂ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ. ದೇಶ-ವಿದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕುವೆಂಪು ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ, ಸಮ್ಮೇಳನದ ಸಂಯೋಜಕ ಪ್ರೊ. ವಿ.ಕೃಷ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನಕ್ಕೆ 558 ಸಂಶೋಧಕರು, ಅಧ್ಯಾಪಕರು ನೋಂದಣಿ ಮಾಡಿಕೊಂಡಿದ್ದಾರೆ. 186 ಸಂಶೋಧನಾ ಸಾರಾಂಶಗಳು ಸ್ವೀಕೃತವಾಗಿದ್ದು, ಇದರಲ್ಲಿ ಕರ್ನಾಟಕದಿಂದ 130 ಮತ್ತು ಹೊರರಾಜ್ಯ ಮತ್ತು ದೇಶಗಳಿಂದ 56 ಅಬ್‌ಸ್ಟಾಕ್‌ಗಳು ಬಂದಿವೆ. ಸಮ್ಮೇಳನದ ಮೊದಲ ದಿನ 100-150 ಸಂಶೋಧಕರು ನೋಂದಾಯಿಸಿಕೊಳ್ಳುವ ನಿರೀಕ್ಷೆಯಿದೆ. ನೋಂದಾಯಿತ ಸಂಶೋಧಕರಿಗೆ ಮೂರು ದಿನ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಮ್ಮೇಳನದ ಶ್ರೇಷ್ಠ 10 ಓರಲ್ ಪ್ರೆಸೆಂಟೇಷನ್ ಮತ್ತು 10 ಪೋಸ್ಟರ್ ಪ್ರಸೆಂಟೇಷನ್‌ಗೆ ಪ್ರಶಸ್ತಿ ನೀಡಲಾಗುತ್ತದೆ ಎಂದರು.

ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಶ್ರೇಷ್ಠ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಾರ್ವಜನಿಕರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಉತ್ತೇಜಿಸಲು ಮತ್ತು ಜಾಗೃತಿ ಮೂಡಿಸುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ಕುವೆಂಪು ವಿವಿ ಮತ್ತು ಕೃಷಿ ಮತ್ತು ತೋಟಗಾರಿಕೆ ವಿವಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂಶೋಧನೆ ಮತ್ತು ಜಾಗೃತಿಗೆ ಒತ್ತು ನೀಡುತ್ತಿದೆ ಎಂದು ಹೇಳಿದರು.

ಸಂಯೋಜಕರಾದ ಪ್ರೊ. ತಿಮ್ಮೇಸ್ವಾಮಿ ಬಸಯ್ಯ, ಡಾ. ಎಚ್.ಎಸ್.ಸಂತೋಷ್‌ಕುಮಾರ್, ಕುವೆಂಪು ವಿವಿ ಪಿಆರ್‌ಒ ಡಾ. ಎಂ.ಆರ್.ಸತ್ಯಪ್ರಕಾಶ್ ಇತರರಿದ್ದರು.

ಪ್ರೊ. ಸುಖಾಡ ದಿಕ್ಸೂಚಿ ಭಾಷಣ

ಸಮ್ಮೇಳನವನ್ನು ಹೈದರಾಬಾದ್ ವಿವಿ ವಿಶ್ರಾಂತ ಕುಲಪತಿ ಪ್ರೊ. ಅಪ್ಪಾರಾವ್ ಪೊಡಿಲೆ ಉದ್ಘಾಟಿಸುವರು. ಥಾಯ್ಲೆಂಡ್‌ನ ಚುಲಾಲೋಂಗ್‌ಕಾರ್ನ್ ವಿವಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಸುಖಾಡ ಸುಕ್ರೋಂಗ್ ದಿಕ್ಸೂಚಿ ಭಾಷಣ ಮಾಡುವರು ಎಂದು ಕುವೆಂಪು ವಿವಿ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್ ಹೇಳಿದರು. ಚೀನಾದ ವಿದ್ಯುನ್ಮಾನ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಪ್ರೊ. ಸಜೀವ ಮಹಾರಚ್ಚಿಕುಂಬುರ, ಅಮೆರಿಕದ ಅಲಾಬಾಮಾ ವಿವಿಯ ಡಾ. ಎಸ್.ಸಿ.ದರ್ಶನ್, ಕೆಳದಿ ಶಿವಪ್ಪನಾಯಕ ಕೃಷಿ ವಿವಿ ಕುಲಪತಿ ಪ್ರೊ. ಆರ್.ಸಿ.ಜಗದೀಶ, ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಎ.ಎಲ್.ಮಂಜುನಾಥ್ ಮತ್ತು ವ್ಯಾಲ್ಯೂ ಪ್ರಾಡಕ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಕೆ.ಶ್ರೀನಿವಾಸಮೂರ್ತಿ ಭಾಗವಹಿಸುವರು. ಬೆಂಗಳೂರಿನ ಕೃಷಿ ವಿವಿ ಕುಲಪತಿ ಪ್ರೊ. ಎಸ್.ವಿ.ಸುರೇಶ, ಕಲಬುರಗಿ ವಿವಿ ವಿಶ್ರಾಂತ ಕುಲಪತಿ ಪ್ರೊ. ಇ.ಟಿ.ಪುಟ್ಟಯ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net