

ಬೆಂಗಳೂರು: ಸಾವಯವ ಹಾಗೂ ಸಿರಿಧಾನ್ಯ ಕೃಷಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜ.23 ರಿಂದ ಮೂರು ದಿನ ಕಾಲ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ, ಸಾವಯವ ಮತ್ತು ಸಿರಿಧಾನ್ಯ-2025 (International Commercial and Organic Cereal Fair in Bangalore from 23rd Jan) ಆಯೋಜಿಸಿದೆ. ಅರಮನೆ ಮೈದಾನದ ತ್ರಿಪುರ ವಾಸಿನಿ(Tripura Vasini)ಯಲ್ಲಿ ಈ ಮೇಳ ನಡೆಯಲಿದೆ.
2017ರಿಂದ ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳ ಆಚರಿಸುತ್ತ ಬಂದಿದ್ದು, ಇದು ಆರನೇ ಆವೃತ್ತಿಯಾಗಿದೆ. ಈ ಮೇಳದಲ್ಲಿ ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ ಹಾಗೂ 25ಕ್ಕೂ ಹೆಚ್ಚು ರಾಜ್ಯದಿಂದ ಹಿರಿಯ ಅಧಿಕಾರಿಗಳು, ಆ ರಾಜ್ಯದ ರೈತರು ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳೊಂದಿಗೆ ಭಾಗವಹಿಸಲಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ(N. Chaluvarayaswamy) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಮೇಳದಲ್ಲಿ ಜರ್ಮನಿ, ಸ್ವಿಟ್ಟರ್‌ಲ್ಯಾಂಡ್, ಸ್ಪೈನ್, ಆಸ್ಟ್ರೇಲಿಯಾ, ಕೀನ್ಯಾ, ತಾಂಜೇನಿಯ, ಇಟಲಿ, ಪೆರು, ಇಂಗ್ಲೆಂಡ್ ಸೇರಿದಂತೆ 10ಕ್ಕೂ ಹೆಚ್ಚು ವಿವಿಧ ದೇಶಗಳಿಂದ ಅಂತಾರಾಷ್ಟ್ರೀಯ ಉಪನ್ಯಾಸಕರು ಭಾಗವಹಿಸಲಿದ್ದಾರೆ ಎಂದರು.
ಸಾವಯವ ಕೃಷಿ ಉತ್ತೇಜನಕ್ಕೆ ಪೂರಕವಾಗಿ ರೈತರಿಗೆ ಪ್ರೋತ್ಸಾಹ ಮತ್ತು ಗ್ರಾಹಕರಲ್ಲಿ ಅರಿವು ಮೂಡಿಸಲು ಈ ಮೇಳದ ಪೂರ್ವಭಾವಿ ಕಾರ್ಯಕ್ರಮವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ಅರಿವು ಮೂಡಿಸಲು ಸಿರಿಧಾನ್ಯ ಓಟ, ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ನಡೆಸಲಾಗಿದೆ ಎಂದು ಹೇಳಿದರು.
ತೈವಾನ್, ಹೈದರಾಬಾದ್ ಹಾಗೂ ಭುವನೇಶ್ವರ್‌ದಲ್ಲಿ ಆಯೋಜಿಲಾಗಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿಯೂ ಮೇಳದ ಬಗ್ಗೆ ಪ್ರಚಾರ ನೀಡಲಾಗಿದೆ. ದೇಶೀ ತಳಿಗಳ ಮಹತ್ವ ಪ್ರಚಾರ ಮಾಡುವ ಸಲುವಾಗಿ ಮೂರು ಬಾರಿ ಗ್ರಾಮಿ ಅವಾರ್ಡ್ ವಿಜೀತ ರಿಕಿ ಕೇಜ್ ಅವರಿಂದ ದೇಶೀ ತಳಿಗಳ ಗೀತೆಯನ್ನು ಸಂಯೋಜಿಸಲಾಗಿದ್ದು, ಮುಖ್ಯಮಂತ್ರಿಗಳು ಈ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಗೀತೆ ಬಿಡುಗಡೆಯಾದ ಕೇವಲ 3 ದಿನದಲ್ಲಿಯೇ 6 ಲಕ್ಷಕ್ಕೂ ಅಧಿಕ ಸಾರ್ವಜನಿಕ ವೀಕ್ಷಣೆ ಪಡೆದಿರುವುದು ದಾಖಲೆಯಾಗಿದೆ ಎಂದರು.
ಮರೆತುಹೋದ ಖಾದ್ಯಗಳನ್ನು ಮರಳಿ ತಟ್ಟೆಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಪಾಕಸ್ಪರ್ಧೆಯನ್ನು ಆಯೋಜನೆ ಮಾಡಿದ್ದು, ಈ ಸ್ಪರ್ಧೆಗೆ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೊದಲನೇ ವಿಜೇತರು ಭಾಗವಹಿಸಿದ್ದರು ಎಂದರು.
ಮೇಳವನ್ನು ಜ.23 ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಕೇಂದ್ರ ಸರ್ಕಾರದ ಸಚಿವರು ಆಗಮಿಸುತ್ತಾರೆ ಎಂದು ತಿಳಿಸಿದರು.
ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್, ಪುದುಚೇರಿ, ಕೇರಳ, ಮಿಜೋರಾಂ, ಬಿಹಾರ್, ಸಿಕ್ಕಿಂ ಸೇರಿದಂತೆ ಎಂಟು ರಾಜ್ಯದ ಕೃಷಿ ಸಚಿವರುಗಳು ಈ ಮೇಳದ ಉದ್ವಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಮೇಳದಲ್ಲಿ ವಿಶೇಷವಾಗಿ ದೇಶೀ ತಳಿಗಳನ್ನು ಸಂರಕ್ಷಿಸುತ್ತಿರುವ ಆಯ್ದ 15 ಜಿಲ್ಲೆಗಳಿಂದ 30 ರೈತರನ್ನು ಆಹ್ವಾನಿಸಿದ್ದು, ಅವರು ರಕ್ಷಿಸಿರುವ ವಿವಿಧ ಬೆಳೆಗಳ ಬೀಜಗಳ/ ತೆನೆಗಳ ಪ್ರದರ್ಶನಕ್ಕೆ ಪ್ರತ್ಯೇಕ ದೇಶೀ ಪೆವಿಲಿಯನ್‌ಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
20 ಕೋಟಿ ರೂ. ವೆಚ್ಚದಲ್ಲಿ ಸಾವಯವ ಮತ್ತು ಸಿರಿಧಾನ್ಯ ಹಬ್‌ಗೆ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಮೇಳದಲ್ಲಿ 300ಕ್ಕೂ ಹೆಚ್ಚು ಮಳಿಗೆಗಳು ಇದ್ದು, ರೈತರ ಕಾರ್ಯಾಗಾರ ಆಯೋಜಿಸಲಾಗುತ್ತದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.